ಸಿಎಂ ರಾಜಕೀಯ ಕಾರ್ಯದರ್ಶಿ, ಮುಖ್ಯ ಸಲಹೆಗಾರ, ಮಾಧ್ಯಮ ಸಲಹೆಗಾರರ ನೇಮಕ ಪ್ರಶ್ನಿಸಿದ್ದ ಅರ್ಜಿ ವಜಾ ಮಾಡಿದ ಹೈಕೋರ್ಟ್‌

ಮುಖ್ಯಮಂತ್ರಿಗಳ ಸಲಹೆಗಾರರ ನೇಮಕಕ್ಕೆ ನಿಷೇಧ ಎಲ್ಲಿದೆ ಎಂಬುದನ್ನು ತೋರಿಸಿ ಎಂದು ಅರ್ಜಿದಾರರನ್ನು ಪ್ರಶ್ನಿಸಿದ ನ್ಯಾಯಾಲಯ. ಅರ್ಜಿದಾರರ ಉತ್ತರದಿಂದ ಸಂತುಷ್ಟಗೊಳ್ಳದ ನ್ಯಾಯಾಲಯವು ಅರ್ಜಿಗಳನ್ನು ವಜಾ ಮಾಡಿತು.
CM Siddaramaiah and Karnataka HC
CM Siddaramaiah and Karnataka HC

“ಸಲಹೆಗಾರರನ್ನು ನೇಮಕ ಮಾಡಿಕೊಳ್ಳಲು ನಿಷೇಧ ಎಲ್ಲಿದೆ” ಎಂದು ಪ್ರಶ್ನಿಸಿರುವ ಕರ್ನಾಟಕ ಹೈಕೋರ್ಟ್‌, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ವಿಧಾನ ಪರಿಷತ್‌ ಸದಸ್ಯರಾದ ನಜೀರ್ ಅಹಮದ್, ಕೆ ಗೋವಿಂದರಾಜ್, ಮುಖ್ಯಮಂತ್ರಿಗಳ ಮುಖ್ಯ ಸಲಹೆಗಾರ ಸುನೀಲ್ ಕನುಗೋಲು ಹಾಗೂ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್ ಅವರನ್ನು ನೇಮಕ ಮಾಡಿ ಸಂಪುಟ ದರ್ಜೆಯ ಸ್ಥಾನಮಾನ ನೀಡಿರುವ ಕ್ರಮ ಪ್ರಶ್ನಿಸಿದ್ದ ಅರ್ಜಿಯನ್ನು ಗುರುವಾರ ವಜಾಗೊಳಿಸಿದೆ.

ಬೆಂಗಳೂರಿನ ವಕೀಲ ಎಸ್ ಉಮಾಪತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠವು ಮುಖ್ಯಮಂತ್ರಿಗಳ ಸಲಹೆಗಾರರ ನೇಮಕಕ್ಕೆ ನಿಷೇಧ ಎಲ್ಲಿದೆ ಎಂಬುದನ್ನು ತೋರಿಸಿ ಎಂದು ಅರ್ಜಿದಾರರನ್ನು ಪ್ರಶ್ನಿಸಿತು. ಅರ್ಜಿದಾರರ ಉತ್ತರದಿಂದ ಸಂತುಷ್ಟಗೊಳ್ಳದ ನ್ಯಾಯಾಲಯವು ಅರ್ಜಿಗಳನ್ನು ವಜಾ ಮಾಡಲಾಗಿದೆ. ಸೂಕ್ತ ಕಾರಣಗಳನ್ನು ಒಳಗೊಂಡ ವಿಸ್ತೃತ ಆದೇಶ ಪ್ರಕಟಿಸಲಾಗುವುದು ಎಂದು ಮೌಖಿಕವಾಗಿ ಹೇಳಿತು.

“ಸಚಿವರನ್ನು ಹೊರತುಪಡಿಸಿ ಇತರರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಬಾರದು ಎಂಬುದಾಗಿ ಎಲ್ಲಿಯೂ ಹೇಳಿಲ್ಲ. ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವವರಿಗೆ ಯಾವುದೇ ಇಲಾಖೆಯ ಉಸ್ತುವಾರಿ ನೀಡಿ ಸರ್ಕಾರದ ಜವಾಬ್ದಾರಿಗಳನ್ನು ನೀಡಿಲ್ಲ” ಎಂದು ನ್ಯಾಯಾಲಯವು ಮೌಖಿಕವಾಗಿ ಹೇಳಿತು.

Also Read
ರಾಜಕೀಯ ಕಾರ್ಯದರ್ಶಿ, ಮುಖ್ಯ ಸಲಹೆಗಾರ, ಮಾಧ್ಯಮ ಸಲಹೆಗಾರ ಹುದ್ದೆ ಸೃಜನೆಗೆ ಆಕ್ಷೇಪ: ಹೈಕೋರ್ಟ್‌ಗೆ ಪಿಐಎಲ್‌ ಸಲ್ಲಿಕೆ

ನಜೀರ್ ಅಹ್ಮದ್, ಕೆ.ಗೋವಿಂದರಾಜ್, ಸುನೀಲ್ ಕನಗೋಲು ಹಾಗೂ ಕೆ ವಿ ಪ್ರಭಾಕರ್ ಅವರಿಗೆ ಈ ಹುದ್ದೆಗಳನ್ನು ಸೃಜಿಸಿ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗಿದೆ. ಇವರಿಗೆ ನೀಡಲಾಗುವ ಸಂಬಳ, ಸಾರಿಗೆ, ವಸತಿ ಭತ್ಯೆ ಇತ್ಯಾದಿ ಖರ್ಚುಗಳು ರಾಜ್ಯದ ಬೊಕ್ಕಸದಿಂದ ವಿನಾ ಕಾರಣ ಭರಿಸುವಂತಾಗಿದೆ. ಇವೆಲ್ಲ ರಾಜಕೀಯ ನೇಮಕಾತಿ ಹಾಗೂ ಏಕಪಕ್ಷೀಯ ನಿರ್ಧಾರಗಳು. ಮುಖ್ಯಮಂತ್ರಿಗಳ ಕಚೇರಿ ಎಂಬುದು ಸಾರ್ವಜನಿಕ ಕಚೇರಿ. ಆದರೆ, ಇಲ್ಲೀಗ ಮುಖ್ಯಮಂತ್ರಿಗಳ ಬಂಧುಗಳು, ಅವರ ರಾಜಕೀಯ ಬೆಂಬಲಿಗರಿಗೆ ಆಸ್ಪದ ನೀಡಲಾಗಿದೆ. ಕಾನೂನಿನಲ್ಲಿ ಇಂತಹ ಹುದ್ದೆಗಳನ್ನು ರೂಪಿಸಲು ಅವಕಾಶವಿಲ್ಲ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿತ್ತು.

ಈ ಹುದ್ದೆಗಳ ಸೃಜನೆಯು ಕಾನೂನಿನ ಗಂಭೀರ ಉಲ್ಲಂಘನೆಯಾಗಿದ್ದು, ಉತ್ತಮ ಆಡಳಿತ ನೀಡುವ ಮೂಲಭೂತ ಆಶಯಗಳಿಗೆ ವಿರುದ್ಧವಾಗಿದೆ. ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವ ಖಾಸಗಿ ವ್ಯಕ್ತಿಗಳಿಗೆ ಸಾರ್ವಜನಿಕ ಕಚೇರಿಯಲ್ಲಿ ಮುಂದುವರೆಯಲು ಅವಕಾಶ ನೀಡಬಾರದು ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು. ನ್ಯಾಯಾಲಯವು ಅಂತಿಮವಾಗಿ ಅರ್ಜಿಯನ್ನು ವಜಾಗೊಳಿಸಿದೆ.

Kannada Bar & Bench
kannada.barandbench.com