ಉಮಿಕಲ್ ಬೆಟ್ಟದಲ್ಲಿ ಪರಶುರಾಮನ ಕಂಚಿನ ಪ್ರತಿಮೆ ನಿರ್ಮಾಣದಲ್ಲಿ ಅಕ್ರಮ: ತನಿಖೆಗೆ ಕೋರಿದ್ದ ಪಿಐಎಲ್ ವಜಾ
ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಉಮಿಕಲ್ ಬೆಟ್ಟದ ಮೇಲೆ ಪರಶುರಾಮನ ಕಂಚಿನ ಪ್ರತಿಮೆ ಸ್ಥಾಪನೆಯಲ್ಲಿ ಕಳಪೆ ಕಾಮಗಾರಿ ನಡೆಸಿದ ಮತ್ತು ಕಾರ್ಯಾದೇಶವಿಲ್ಲದೆ ಗುತ್ತಿಗೆದಾರನಿಗೆ ಸರ್ಕಾರದ ಬೊಕ್ಕಸದಿಂದ ಹಣವನ್ನು ಅನಧಿಕೃತವಾಗಿ ವರ್ಗಾಯಿಸಿದ ಪ್ರಕರಣದ ವಿಚಾರಣೆಗೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.
ಕಾರ್ಕಳ ತಾಲ್ಲೂಕಿನ ನಲ್ಲೂರು ಗ್ರಾಮದ ನಿವಾಸಿ ಕೃಷ್ಣ ಎ. ಶೆಟ್ಟಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.
ಕೆಲ ಕಾಲ ಅರ್ಜಿದಾರರ ವಾದ ಆಲಿಸಿದ ಪೀಠವು ಪ್ರಕರಣದ ಕುರಿತು ಈಗಾಗಲೇ ಸಿಐಡಿ ತನಿಖೆ ನಡೆಸುತ್ತಿದೆ. ಈ ಹಂತದಲ್ಲಿ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡಲಾಗದು ಎಂದು ಅರ್ಜಿ ವಜಾಗೊಳಿಸಿದೆ.
ಉಮಿಕಲ್ ಬೆಟ್ಟದ ಮೇಲ್ಭಾಗದಲ್ಲಿ ಪರಶುರಾಮನ ಕಂಚಿನ ಪ್ರತಿಮೆ ಸ್ಥಾಪನೆ ಮಾಡಲು ಯಾವುದೇ ಕಾರ್ಯಾದೇಶವಿಲ್ಲದೇ ಗುತ್ತಿಗೆದಾರರಿಗೆ ರೂ.1.21 ಕೋಟಿ ಹಣವನ್ನು ಅಧಿಕಾರಿಗಳು ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ. ಆದರೆ, ಪರಶುರಾಮ ಪ್ರತಿಮೆ ಅನಾವರಣ ನಂತರದ ಕೆಲವೇ ದಿನಗಳಲ್ಲಿ ಪ್ರತಿಮೆಯನ್ನು ಫೈಬರ್‌ನಿಂದ ಮಾಡಿರುವ ವಿಚಾರ ಬಹಿರಂಗವಾಗಿತ್ತು ಎಂದು ಅರ್ಜಿದಾರರು ತಿಳಿಸಿದ್ದರು.
ಅಲ್ಲದೇ, ಪರಶುರಾಮ ಥೀಮ್ ಪಾರ್ಕ್ ನಿರ್ಮಾಣದಲ್ಲೂ ಕಳಪೆ ಕಾಮಗಾರಿ ನಡೆದಿರುವುದು ಬೆಳಕಿಗೆ ಬಂದಿತ್ತು. ಗುತ್ತಿಗೆದಾರ ಜಿಎಸ್‌ಟಿ ಪಾವತಿಯಲ್ಲೂ ವಂಚಿಸಿರುವುದು ಅನಾವರಣಗೊಂಡಿತ್ತು. ಆದ್ದರಿಂದ ಪ್ರಕರಣ ಕುರಿತು ವಿಚಾರಣೆ ನಡೆಸಲು ರಾಜ್ಯ ಸರ್ಕಾರಕ್ಕೆ ಆದೇಶಿಸಬೇಕು. ಜಿಎಸ್‌ಟಿ ಅಕ್ರಮದ ತನಿಖೆಗಾಗಿ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು.