ವಿಟಿಯು ಕುಲಪತಿ ಡಾ. ವಿದ್ಯಾಶಂಕರ್‌ ನೇಮಕಾತಿ ಪ್ರಶ್ನಿಸಿದ್ದ ಪಿಐಎಲ್‌ಗಳನ್ನು ವಜಾ ಮಾಡಿದ ಹೈಕೋರ್ಟ್‌

“ಹಾಲಿ ಪ್ರಕರಣಗಳ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಮಾತ್ರ ಅಭಿಪ್ರಾಯ ವ್ಯಕ್ತಪಡಿಸಲಾಗಿದ್ದು, ಇದು ಪಕ್ಷಕಾರರ ನಡುವಿನ ಇತರೆ ಯಾವುದೇ ಪ್ರಕರಣದ ಮೇಲೆ ಪರಿಣಾಮ ಬೀರುವುದಿಲ್ಲ” ಎಂದಿರುವ ನ್ಯಾಯಾಲಯ.
Dr. S. Vidyashankar VC, VTU and Karnataka HC
Dr. S. Vidyashankar VC, VTU and Karnataka HC

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ (ವಿಟಿಯು) ಕುಲಪತಿಯನ್ನಾಗಿ ಡಾ. ಎಸ್ ವಿದ್ಯಾಶಂಕರ್ ಅವರನ್ನು ನೇಮಕ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ವಜಾ ಮಾಡಿದೆ.

ಮೈಸೂರು ವಿಶ್ವವಿದ್ಯಾಲಯದ ಮಾಜಿ ಹಂಗಾಮಿ ಉಪಕುಲಪತಿ ಹಾಗೂ ನಿವೃತ್ತ ಪ್ರೊ. ಬಿ ಶಿವರಾಜ್ ಅವರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ನವೆಂಬರ್‌ 2ರಂದು ಪೂರ್ಣಗೊಳಿಸಿ, ಕಾಯ್ದಿರಿಸಿದ್ದ ಆದೇಶವನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.‌ ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠವು ಇಂದು ಪ್ರಕಟಿಸಿತು.

“ವಿಟಿಯು ಕುಲಪತಿಯಾಗಿ ಎಸ್‌ ವಿದ್ಯಾಶಂಕರ್‌ ಅವರ ನೇಮಕಾತಿಗೆ ಸಂಬಂಧಿಸಿದ ಕ್ರಮಬದ್ಧತೆ ಅಥವಾ ಇಡೀ ಪ್ರಕ್ರಿಯೆಗೆ ಸಂಬಂಧಿಸಿದಂತೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಹಾಲಿ ಪ್ರಕರಣಗಳ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಮಾತ್ರ ಅಭಿಪ್ರಾಯ ವ್ಯಕ್ತಪಡಿಸಲಾಗಿದ್ದು, ಇದು ಪಕ್ಷಕಾರರ ನಡುವಿನ ಇತರೆ ಯಾವುದೇ ಪ್ರಕರಣದ ಮೇಲೆ ಪರಿಣಾಮ ಬೀರುವುದಿಲ್ಲ” ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

“ವಿಟಿಯು ಕುಲಪತಿ ನೇಮಕಕ್ಕೆ ರಾಜ್ಯ ಸರ್ಕಾರ ಶೋಧನಾ ಸಮಿತಿ ರಚನೆಯೇ ಅಕ್ರಮ. ಅದರಲ್ಲಿ ನಿಯಮ ಪಾಲನೆಯಾಗಿಲ್ಲ. ನಿಯಮದಂತೆ ಸಮಿತಿಯಲ್ಲಿ ವಿಶ್ವವಿದ್ಯಾಲಯ ಧನ ಸಹಾಯ ಆಯೋಗದ (ಯುಜಿಸಿ) ಪ್ರತಿನಿಧಿಯನ್ನು ನಾಮನಿರ್ದೇಶನ ಮಾಡಿಲ್ಲ. ಸಮಿತಿಯಲ್ಲಿ ವಿಟಿಯುಗೆ ಸಂಬಂಧಿಸಿದವರೇ ಇಬ್ಬರು ಸದಸ್ಯರು ಇದ್ದರು. ನಿಯಮದಂತೆ ಆ ರೀತಿ ಯಾವ ವಿಶ್ವವಿದ್ಯಾಲಯಕ್ಕೆ ಕುಲಪತಿ ನೇಮಕ ಮಾಡಲಾಗುತ್ತದೆಯೋ ಅದೇ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದವರು ಸಮಿತಿಯಲ್ಲಿ ಇರುವಂತಿಲ್ಲ” ಎಂದು ಅರ್ಜಿದಾರರು ವಾದಿಸಿದ್ದರು.

Also Read
ವಿಟಿಯು ಕುಲಪತಿ ನೇಮಕಾತಿ ಪ್ರಶ್ನಿಸಿ ಪಿಐಎಲ್‌ ಸಲ್ಲಿಕೆ: ಡಿ. 2ರಂದು ವಿಚಾರಣೆ ನಡೆಸುವುದಾಗಿ ತಿಳಿಸಿದ ಹೈಕೋರ್ಟ್‌

ಯುಜಿಸಿ ನಿಯಮಗಳು ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕಾಯಿದೆಯ ಸೆಕ್ಷನ್‌ 13ಕ್ಕೆ ವಿರುದ್ಧವಾಗಿ ವಿದ್ಯಾಶಂಕರ್‌ ಅವರನ್ನು ವಿಟಿಯು ಕುಲಪತಿಯನ್ನಾಗಿ ನೇಮಕ ಮಾಡಲಾಗಿದೆ. ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಮತ್ತು ಯುಜಿಸಿಗೆ ಅರ್ಹತೆ ಮತ್ತು ಪ್ರಾಮಾಣಿಕತೆ ಹೊಂದಿರುವ ವ್ಯಕ್ತಿಯನ್ನು ವಿಟಿಯುಗೆ ಕುಲಪತಿಯನ್ನಾಗಿ ನೇಮಕ ಮಾಡುವಂತೆ ನಿರ್ದೇಶಿಸಬೇಕು ಎಂದು ಕೋರಲಾಗಿತ್ತು.

Related Stories

No stories found.
Kannada Bar & Bench
kannada.barandbench.com