ಪಿಎಫ್‌ಐ ಸದಸ್ಯನ ಮನೆಯಲ್ಲಿ ವಶಪಡಿಸಿಕೊಂಡಿದ್ದ ₹14.37 ಲಕ್ಷ ಬಿಡುಗಡೆ ಕೋರಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

ಬೆಂಗಳೂರಿನ ಕೆ ಜಿ ಹಳ್ಳಿ ಠಾಣಾ ಪೊಲೀಸರು ವಶಪಡಿಸಿಕೊಂಡಿರುವ ಒಟ್ಟು ₹14,37,060 ಅನ್ನು ಬಿಡುಗಡೆ ಮಾಡಲು ಆದೇಶಿಸುವಂತೆ ಕೋರಿ ಆರೋಪಿಯ ತಂದೆ ಸಲ್ಲಿಸಿದ್ದ ಅರ್ಜಿ ವಜಾ ಮಾಡಿದ ನ್ಯಾಯಾಲಯ.
PFI and Karnataka HC
PFI and Karnataka HC
Published on

ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್ಐ) ಸಂಘಟನೆಯ ಸದಸ್ಯ ಎನ್ನಲಾದ ವ್ಯಕ್ತಿಯ ಮನೆಯಿಂದ ಬೆಂಗಳೂರಿನ ಕೆ ಜಿ ಹಳ್ಳಿ ಠಾಣಾ ಪೊಲೀಸರು ವಶಪಡಿಸಿಕೊಂಡಿರುವ ಒಟ್ಟು ₹14,37,060 ಅನ್ನು ಬಿಡುಗಡೆ ಮಾಡಲು ಆದೇಶಿಸುವಂತೆ ಕೋರಿ ಆರೋಪಿಯ ತಂದೆ ಸಲ್ಲಿಸಿದ್ದ ಮೇಲ್ಮನವಿಯನ್ನು ಕರ್ನಾಟಕ ಹೈಕೋರ್ಟ್‌ ಸೋಮವಾರ ವಜಾಗೊಳಿಸಿದ್ದು, ಅರ್ಜಿದಾರರಿಗೆ ₹10 ಸಾವಿರ ದಂಡ ವಿಧಿಸಿದೆ. ಭಯೋತ್ಪಾದನೆ ಕೃತ್ಯದ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಆರೋಪಿಯ ಬಂಧನವಾಗಿತ್ತು.

ಮೂರನೇ ಆರೋಪಿಯಾಗಿರುವ ಶೇಖ್‌ ಇಜಾಜ್‌ ಅಲಿ ಅವರ ತಂದೆ ಕಲಬುರಗಿಯ ಶೇಖ್‌ ಸಾದಿಕ್‌ ಅಲಿ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಕೆ ಎಸ್‌ ಮುದಗಲ್‌ ಮತ್ತು ವಿಜಯ ಕುಮಾರ ಎ. ಪಾಟೀಲ ಅವರ ವಿಭಾಗೀಯ ಪೀಠ ವಜಾ ಮಾಡಿದೆ.

ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನ ಕುಮಾರ್‌ ಅವರು ಮೂರನೇ ಆರೋಪಿ ಶೇಖ್‌ ಇಜಾಜ್‌ ಅಲಿ ಭಯೋತ್ಪಾದನೆ ಕೃತ್ಯದಲ್ಲಿ ಭಾಗಿಯಾಗಿದ್ದಾನೆ. ಉಗ್ರ ಚಟುವಟಿಕೆಗೆ ಬಳಸಲು ವಿವಿಧ ಮೂಲದಿಂದ ₹14,37,060 ಹಣ ಸಂಗ್ರಹಿಸಿದ್ದಾನೆ. ಈ ಅಂಶವನ್ನು ಸಾಬೀತುಪಡಿಸಲು ತನಿಖಾಧಿಕಾರಿಗಳ ಬಳಿ ಸಾಕ್ಷ್ಯವಿದೆ. ಒಂದೊಮ್ಮೆ ಆರೋಪಿಯ ತಂದೆಯ ಅರ್ಜಿಯನ್ನು ಹೈಕೋರ್ಟ್‌ ಪುರಸ್ಕರಿಸಿದರೆ, ಆರೋಪಿಯ ಕೃತ್ಯಕ್ಕೆ ಸಂಬಂಧಿಸಿದ ಸಾಕ್ಷ್ಯಧಾರಗಳನ್ನು ವಿಚಾರಣಾಧೀನ ನ್ಯಾಯಾಲಯದ ಪ್ರಸ್ತುಪಡಿಸಲು ಅಡ್ಡಿ ಉಂಟು ಮಾಡಿದಂತಾಗುತ್ತದೆ ಎಂದು ವಾದಿಸಿದ್ದರು.

Also Read
ಪಿಎಫ್‌ಐ ನಿಷೇಧ: ಕೇಂದ್ರ ಸರ್ಕಾರದಿಂದ ಸಮರ್ಥನೆ, ಆದೇಶ ಕಾಯ್ದಿರಿಸಿದ ಹೈಕೋರ್ಟ್‌

ವಿಚಾರಣಾಧೀನ ನ್ಯಾಯಾಲಯವು ಪ್ರಕರಣ ತೀರ್ಮಾನ ಮಾಡುವ ಮುನ್ನವೇ ಇಡೀ ಪ್ರಕರಣದಲ್ಲಿ ಆರೋಪಿ ಭಾಗಿಯಾಗಿಲ್ಲ ಎಂಬುದನ್ನು ಹೈಕೋರ್ಟ್‌ ಈಗಲೇ ನಿರ್ಧರಿಸಿದಂತಾಗುತ್ತದೆ. ತಾನು ಹೂ-ಹಣ್ಣು ಮಾರಾಟ ಮಾಡಿ ಪೊಲೀಸರು ಜಪ್ತಿ ಮಾಡಿರುವ ಹಣ ಸಂಪಾದನೆ ಮಾಡಿರುವುದಾಗಿ ಆರೋಪಿ ತಂದೆ, ಕೆಲ ಪ್ರಮಾಣ ಪತ್ರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಆದರೆ, ಅದರಲ್ಲಿ ಹಣ ಸಂಪಾದಿಸಿರುವ ಸಮಯ ಹಾಗೂ ದಿನಾಂಕದ ವಿವರ ಒದಗಿಸಿಲ್ಲ. ಹೂ-ಹಣ್ಣು ಮಾರಾಟ ಮಾಡಿ ಇಷ್ಟು ಹಣ ಸಂಪಾದಿಸಿರುವುದನ್ನು ಸಾಬೀತುಪಡಿಸಲು ಸೂಕ್ತ ದಾಖಲೆಗಳನ್ನು ಅರ್ಜಿದಾರರು ಸಲ್ಲಿಸಿಲ್ಲ. ಆರೋಪಿ ಕೃತ್ಯವನ್ನು ವಿಚಾರಣಾಧೀನ ನ್ಯಾಯಾಲಯ ವಿಚಾರಣೆ ವೇಳೆ ಪ್ರಾಸಿಕ್ಯೂಷನ್‌ ಸಾಬೀತುಪಡಿಸಲಿದ್ದು, ಅರ್ಜಿ ವಜಾಗೊಳಿಸಬೇಕು ಎಂದು ಕೋರಿದ್ದರು.

ಈ ವಾದ ಪುರಸ್ಕರಿಸಿರುವ ಹೈಕೋರ್ಟ್‌, ಅರ್ಜಿ ವಜಾಗೊಳಿಸಿ ಆದೇಶಿಸಿದೆ. ವಿಸ್ತೃತ ಆದೇಶದ ಪ್ರತಿ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

ಪ್ರಕರಣದ ಹಿನ್ನೆಲೆ: ಆರೋಪಿ ಇಜಾಜ್‌ ಅಲಿಯ ಕಲಬುರ್ಗಿಯ ಮನೆಯ ಮೇಲೆ 2022ರ ಸೆಪ್ಟೆಂಬರ್‌ 22ರಂದು ದಾಳಿ ನಡೆಸಿದ್ದ ಕೆ ಜಿ ಹಳ್ಳಿ ಠಾಣಾ ಪೊಲೀಸರು, ಆತ ಭಯೋತ್ಪಾದನೆ ಕೃತ್ಯ ಎಸಗಲು ವಿವಿಧ ಮೂಲಗಳಿಂದ ಸಂಗ್ರಹಿಸಿದ್ದ ಎನ್ನಲಾದ ₹14,37,060 ಅನ್ನು ಜಪ್ತಿ ಮಾಡಿದ್ದರು. ನಂತರ ಇಜಾಜ್‌ ಅನ್ನು ಬಂಧಿಸಿ, ದೂರು ದಾಖಲಿಸಿದ್ದರು. ಪ್ರಕರಣವನ್ನು 49ನೇ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆ.

Kannada Bar & Bench
kannada.barandbench.com