ಒಂಭತ್ತು ವರ್ಷಗಳ ಬಳಿಕ ಆಸ್ತಿ ಹರಾಜು ಪ್ರಶ್ನಿಸಿದ್ದ ಮಾಜಿ ಸಂಸದ ಅನಿಲ್‌ ಲಾಡ್‌ ಅರ್ಜಿ ವಜಾ ಮಾಡಿದ ಹೈಕೋರ್ಟ್‌

“ಅಮೆರಿಕದ ಕ್ರಾಂತಿ ತಪ್ಪಿಸಿಕೊಂಡ ವ್ಯಕ್ತಿಯೊಬ್ಬರು ಇಪ್ಪತ್ತು ವರ್ಷಗಳ ಕಾಲ ಸುಮ್ಮನಿದ್ದು ಒಂದು ದಿನ ಏಕಾಏಕಿ ಬದಲಾದ ಜಗತ್ತು ನೋಡಲು ಎಚ್ಚರಗೊಂಡಂತೆ” ಎಂದು ಮಾರ್ಮಿಕವಾಗಿ ನುಡಿದಿರುವ ಹೈಕೋರ್ಟ್‌.
Karnataka HC and Anil Lad
Karnataka HC and Anil Lad

ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಬ್ಯಾಂಕ್‌ ತಮ್ಮ ಆಸ್ತಿ ಹರಾಜು ಮಾಡಿದ್ದನ್ನು ಒಂಭತ್ತು ವರ್ಷಗಳ ಬಳಿಕ ಪ್ರಶ್ನಿಸಿದ್ದ ಮಾಜಿ ಸಂಸದ ಅನಿಲ್‌ ಲಾಡ್‌ ಅವರ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ವಜಾ ಮಾಡಿದೆ.

2015ರ ಸೆಪ್ಟೆಂಬರ್‌ 16ರಂದು ಮಾಡಿರುವ ಮಾರಾಟ ಸರ್ಟಿಫಿಕೇಟ್‌ ಮತ್ತು ಬೆಂಗಳೂರಿನ ಸಾಲ ವಸೂಲು ಮೇಲ್ಮನವಿ ನ್ಯಾಯಾಧಿಕರಣವು (ಡಿಆರ್‌ಎಟಿ) 2015ರ ಮೇ 13ರಂದು ಮಾಡಿರುವ ಆದೇಶವನ್ನು ಒಂಭತ್ತು ವರ್ಷಗಳ ಬಳಿಕ ಅನಿಲ್‌ ಲಾಡ್‌ ಅವರು ಪ್ರಶ್ನಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ತಿರಸ್ಕರಿಸಿದೆ.

ಅಮೆರಿಕದ ಬರಹಗಾರ ವಾಷಿಂಗ್ಟನ್‌ ಇರ್ವಿಂಗ್‌ ಅವರ ʼರಿಪ್‌ ವ್ಯಾನ್‌ ವಿಂಕಲ್‌ʼ ಸಣ್ಣ ಕತೆಯಲ್ಲಿ “ಅಮೆರಿಕದ ಕ್ರಾಂತಿ ತಪ್ಪಿಸಿಕೊಂಡ ವ್ಯಕ್ತಿಯೊಬ್ಬರು ಇಪ್ಪತ್ತು ವರ್ಷಗಳ ಕಾಲ ಸುದೀರ್ಘ ನಿದ್ದೆಯಲ್ಲಿದ್ದು ಒಂದು ದಿನ ಏಕಾಏಕಿ ಬದಲಾದ ಜಗತ್ತು ನೋಡಲು ಎಚ್ಚರಗೊಂಡಂತೆ” ಎಂದು ಮಾರ್ಮಿಕವಾಗಿ ಹೇಳಿರುವ ಪೀಠವು “ರಿಪ್‌ ವಾನ್‌ ವಿಂಕಲ್‌ ರೀತಿಯವರಿಗೆ ನ್ಯಾಯಾಲಯದ ಬಾಗಿಲು ಮುಚ್ಚಿರುತ್ತದೆ” ಎಂದು ಹೇಳಿದೆ.

2014ರ ಸೆಪ್ಟೆಂಬರ್‌ 22ರಂದು ಮಾರಾಟ ನೋಟಿಸ್‌ ನೀಡಿರುವುದು ಲಾಡ್‌ ಅವರಿಗೆ ಗೊತ್ತಿತ್ತು. ಇದನ್ನು ಅವರು ಡಿಆರ್‌ಎಟಿಯಲ್ಲಿ ಪ್ರಶ್ನಿಸಿದ್ದಾರೆ. ಆಗ ಅರ್ಜಿದಾರರು ಎತ್ತಿರುವ ಎಲ್ಲಾ ವಿಚಾರಕ್ಕೂ ನ್ಯಾಯಾಧಿಕರಣವು ಉತ್ತರಿಸಿದೆ. “ತಡವಾಗಿರುವ ಹಿನ್ನೆಲೆಯಲ್ಲಿ ಎಲ್ಲಾ ಹಂತದಲ್ಲೂ ಅರ್ಜಿದಾರರು ತಮ್ಮ ಹಕ್ಕು ಕಳೆದುಕೊಂಡಿದ್ದಾರೆ. 2015ರ ಮೇ 13ರ ಆದೇಶವನ್ನು ಅರ್ಜಿದಾರರು ಡಿಆರ್‌ಎಟಿಯಲ್ಲಿ ಪ್ರಶ್ನಿಸಬಹುದಿತ್ತು. ಒಂಭತ್ತು ವರ್ಷಗಳ ಕಾಲಹರಣದ ಬಳಿಕ ಅವರು ಈಗ ಅದನ್ನು ಪ್ರಶ್ನಿಸಲಾಗದು. ವಂಚನೆಯಾಗಿದೆ ಎಂಬ ಕಲ್ಪನೆಯ ಅರ್ಜಿಯ ಮೂಲಕ ನ್ಯಾಯಾಲಯ ಮಧ್ಯಪ್ರವೇಶಿಸಬೇಕು ಎಂದು ಕೋರುತ್ತಿದ್ದಾರೆ. ಕತ್ತಲೆಯಲ್ಲಿಡಲಾಗಿದೆ ಎಂದು ವಂಚನೆಯನ್ನು ಬಿಂಬಿಸಲು ಯತ್ನಿಸಿದ್ದಾರೆ. ಅರ್ಜಿದಾರರನ್ನು ಕತ್ತಲೆಯಲ್ಲಿಡಲಾಗಿಲ್ಲ. ಅವರ ಆಸ್ತಿಯಲ್ಲಿ ಏನಾಗುತ್ತಿದೆ ಎಂಬ ಅಜ್ಞಾನವನ್ನು ಅವರು ಪ್ರದರ್ಶಿಸಲಾಗದು” ಎಂದು ನ್ಯಾಯಾಲಯ ಹೇಳಿದೆ.

ತಮ್ಮ ಆಸ್ತಿಯ ಪ್ರಕ್ರಿಯೆ ನಡೆಯುತ್ತಿದ್ದರೂ ಅರ್ಜಿದಾರರು ಹೇಗೆ ಒಂಭತ್ತು ವರ್ಷ ಸುಮ್ಮನಿದ್ದರು ಎಂಬುದೇ ಅರ್ಥವಾಗುತ್ತಿಲ್ಲ. ಆನಂತರ ತಮ್ಮ ಆಸ್ತಿಯಲ್ಲಿ ಏನಾಗಿದೆ ಎಂಬ ಅರಿವೇ ಇಲ್ಲ ಎಂದು ನ್ಯಾಯಾಲಯದ ಕದತಟ್ಟಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ ಸುಮನ್‌ ಅವರು “ಬ್ಯಾಂಕ್‌ ಯಾವಾಗ ಆಸ್ತಿ ಮಾರಾಟ ಮಾಡಿದೆ ಮತ್ತು ಅದನ್ನು ಯಾರು ಖರೀದಿಸಿದ್ದಾರೆ ಎಂಬ ಮಾಹಿತಿ ನೀಡಿಲ್ಲ. ಮಾರಾಟ ಸರ್ಟಿಫಿಕೇಟ್‌ ನೀಡಿದ ಬಳಿಕ ಆಸ್ತಿ ಮಾರಾಟವಾಗಿದೆ ಎಂಬ ಅಂಶ ತಿಳಿದಿದೆ. ಇಂದಿಗೂ ಲಾಡ್‌ ಅವರು ಆಸ್ತಿಯ ವಶ ಹೊಂದಿದ್ದಾರೆ” ಎಂದು ವಾದಿಸಿದ್ದರು.

ಬ್ಯಾಂಕ್‌ ಪ್ರತಿನಿಧಿಸಿದ್ದ ವಕೀಲ ವಿಗ್ನೇಶ್‌ ಶೆಟ್ಟಿ ಅವರು “ಅರ್ಜಿದಾರರಿಗೆ ಆಸ್ತಿ ಮಾರಾಟ ಮಾಡುವುದು ತಿಳಿದಿತ್ತು. ಡಿಆರ್‌ಎಟಿಯಲ್ಲಿ ಮೇಲ್ಮನವಿ ಅವಧಿ ಮುಗಿದಿದೆ ಎಂಬ ಏಕೈಕ ಕಾರಣಕ್ಕೆ ಒಂಭತ್ತು ವರ್ಷಗಳ ಬಳಿಕ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ” ಎಂದು ವಾದಿಸಿದ್ದರು.

ಪ್ರಕರಣದ ಹಿನ್ನೆಲೆ: ಕಂಪೆನಿಯೊಂದು 2008ರಲ್ಲಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಿಂದ ಪಡೆದಿದ್ದ ಕ್ರೆಡಿಟ್‌ ಸೌಲಭ್ಯಕ್ಕೆ ಅನಿಲ್‌ ಲಾಡ್‌ ಅವರು ಖಾತರಿ ನೀಡಿದ್ದರು. ಸಾಲದ ಹಣಕ್ಕೆ ಲಾಡ್‌ ಅವರ ಆಸ್ತಿಯನ್ನು ಭದ್ರತೆಯನ್ನಾಗಿ ನೀಡಲಾಗಿತ್ತು. ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಬ್ಯಾಂಕ್‌ ಸರ್ಫೇಸಿ ಕಾಯಿದೆ ಅಡಿ ಪ್ರಕ್ರಿಯೆ ಆರಂಭಿಸಿತ್ತು. 2013ರಲ್ಲಿ ಆಸ್ತಿ ವಶಕ್ಕೆ ಪಡೆಯುವ ನೋಟಿಸ್‌ ನೀಡಲಾಗಿದ್ದು, 2014ರ ಮಾರ್ಚ್‌ನಲ್ಲಿ ಬ್ಯಾಂಕ್‌ ಆಸ್ತಿಯನ್ನು ಹರಾಜಿಗೆ ಇಟ್ಟಿತ್ತು. 2014ರ ಸೆಪ್ಟೆಂಬರ್‌ನಲ್ಲಿ ಬೆಂಗಳೂರಿನ ಯುನಿವರ್ಸಲ್‌ ಬಿಲ್ಡರ್ಸ್‌ಗೆ ಮಾರಾಟ ಮಾಡಲಾಗಿತ್ತು.

Also Read
ಪ್ರಜ್ವಲ್‌ ಅನರ್ಹತೆ: ಎಚ್‌ ಡಿ ರೇವಣ್ಣ, ಸೂರಜ್‌, ಎ ಮಂಜುಗೆ ನೋಟಿಸ್‌ ಜಾರಿಗೊಳಿಸಲು ಹೈಕೋರ್ಟ್‌ ಆದೇಶ

2015ರ ಮೇನಲ್ಲಿ ಲಾಡ್‌ ಅವರು ಆಸ್ತಿಯ ಹರಾಜು ಮಾರಾಟ ಮಾಡಿದ್ದನ್ನು ಪ್ರಶ್ನಿಸಿದ್ದನ್ನು ಡಿಆರ್‌ಟಿ ತಿರಸ್ಕರಿಸಿತ್ತು. ಈ ಆದೇಶವನ್ನು ಪ್ರಶ್ನಿಸಿದ ಲಾಡ್‌ ಅವರು ಹರಾಜಿನ ಕುರಿತಾದ ಮಾಹಿತಿ ಸಂಬಂಧ ಬ್ಯಾಂಕ್‌ ಜೊತೆ ಸಂವಹನ ನಡೆಸಲಾರಂಭಿಸಿದ್ದರು. ಆರು ವರ್ಷಗಳ ಬಳಿಕ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಮಾರಾಟ ಸರ್ಟಿಫಿಕೇಟ್‌ ನೀಡಿದ್ದು, ಇದನ್ನು ಅವರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಈಗ ಆ ಅರ್ಜಿಯನ್ನೂ ಹೈಕೋರ್ಟ್‌ ವಜಾ ಮಾಡಿದೆ.

Attachment
PDF
Anil Lad Vs Punjab National Bank.pdf
Preview

Related Stories

No stories found.
Kannada Bar & Bench
kannada.barandbench.com