
ಚುನಾವಣಾ ಪ್ರಮಾಣ ಪತ್ರದಲ್ಲಿ ಅಭ್ಯರ್ಥಿಗಳು ಸುಳ್ಳು ಮಾಹಿತಿ ನೀಡಿದ್ದರೆ ಅಥವಾ ಮಾಹಿತಿ ಮರೆಮಾಚಿದ್ದಾರೆ ಎಂಬ ಆರೋಪ ಏನಾದರೂ ಇದ್ದರೆ ಇದಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸುವ ಹಕ್ಕು ಚುನಾವಣಾ ಆಯೋಗಕ್ಕೆ ಮಾತ್ರ ಇರುತ್ತದೆಯೇ ಹೊರತು ಖಾಸಗಿ ವ್ಯಕ್ತಿಗಳಿಗೆ ಅಲ್ಲ ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಸ್ಪಷ್ಟಪಡಿಸಿದೆ.
ಕಳೆದ ವಿಧಾನಸಭೆ ಚುನಾವಣೆಯ ವೇಳೆ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಸುಳ್ಳು ಮಾಹಿತಿ ನೀಡಲಾಗಿದೆ ಮತ್ತು ನಾಮಪತ್ರದಲ್ಲಿನ ಕೆಲ ಕಾಲಂಗಳನ್ನು ಭರ್ತಿ ಮಾಡಿಲ್ಲ ಎಂಬ ಆರೋಪದಡಿ ಖಾಸಗಿ ವ್ಯಕ್ತಿಗಳು ದಾಖಲಿಸಿರುವ ಕ್ರಿಮಿನಲ್ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿ ಮಹದೇವಪುರ ವಿಧಾನಸಭಾ ಕ್ಷೇತ್ರದ ಶಾಸಕಿ ಮಂಜುಳಾ ಲಿಂಬಾವಳಿ ಮತ್ತು ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶೈಲೇಂದ್ರ ಬೆಲ್ದಾಳೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.
“ಕ್ರಿಮಿನಲ್ ದೂರು ದಾಖಲಿಸುವ ಹಕ್ಕು ಖಾಸಗಿ ವ್ಯಕ್ತಿಗಳಿಗೆ ಇರುವುದಿಲ್ಲ. ಅವರೇನಿದ್ದರೂ ಚುನಾವಣಾ ಅರ್ಜಿ ದಾಖಲಿಸಬಹದಷ್ಟೇ” ಎಂದು ಅರ್ಜಿದಾರರ ವಿರುದ್ಧದ ಪ್ರಕರಣಗಳನ್ನು ನ್ಯಾಯಾಲಯ ರದ್ದುಪಡಿಸಿದೆ.
ಪ್ರಜಾಪ್ರತಿನಿಧಿ ಕಾಯಿದೆ–1951ರ ಸೆಕ್ಷನ್ 125ಎ ಅಡಿಯಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ಏನಾದರೂ ಸುಳ್ಳು ಮಾಹಿತಿ ಇದ್ದರೆ ಅಥವಾ ಅಭ್ಯರ್ಥಿಯು ಮಾಹಿತಿಯನ್ನು ಮರೆಮಾಚಿದ್ದರೆ, ಅಂತಹ ಸಂದರ್ಭದಲ್ಲಿ ಚುನಾವಣಾ ಆಯೋಗ ಮಾತ್ರವೇ ದೂರು ದಾಖಲಿಸಬೇಕಾಗುತ್ತದೆ. ಅದು ಆಯೋಗದ ಕರ್ತವ್ಯವೂ ಆಗಿರುತ್ತದೆ ಎಂದು ಪೀಠ ತಿಳಿಸಿದೆ.
ಅರ್ಜಿದಾರರ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ (42ನೇ ಎಸಿಎಂಎಂ ಕೋರ್ಟ್) ವಿಚಾರಣೆಯನ್ನು ರದ್ದುಪಡಿಸಿರುವ ಪೀಠವು “ಮಂಜುಳಾ ವಿರುದ್ಧ ದೂರು ನೀಡಿರುವ ನಲ್ಳೂರಳ್ಳಿ ನಾಗೇಶ್ ಮತ್ತು ಶೈಲೇಂದ್ರ ಬೆಲ್ದಾಳೆ ವಿರುದ್ಧ ದೂರು ಸಲ್ಲಿಸಿರುವ ರಾಜಕುಮಾರ್ ಮಡಕಿ ಕಾನೂನಿನಲ್ಲಿ ಲಭ್ಯವಿರುವ ಪರಿಹಾರ ಪಡೆಯಲು ಮುಕ್ತರಾಗಿದ್ದಾದೆ” ಎಂದು ಆದೇಶದಲ್ಲಿ ವಿವರಿಸಿದೆ.