ಜರ್ಮನಿಯಿಂದ ಕರೆತಂದಿರುವ ಮಗುವನ್ನು ವಾಪಸ್‌ ಕಳುಹಿಸಿಕೊಡಲು ಕೋರಿ ಪತಿ ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿ ವಜಾ

ಜರ್ಮನಿ ನ್ಯಾಯಾಲಯದಲ್ಲಿರುವ ಮಗುವಿನ ಸುಪರ್ದಿ ವ್ಯಾಜ್ಯವನ್ನು ಭಾರತದ ನ್ಯಾಯಾಲಯದಲ್ಲಿ ಮುಂದುವರಿಸುವುದಾಗಿ ಪತಿ-ಪತ್ನಿ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಆದೇಶದಲ್ಲಿ ವಿವರಣೆ.
High Court of Karnataka
High Court of Karnataka

ಯಾವುದೇ ಮಾಹಿತಿ ನೀಡದೆ ಪತ್ನಿಯು ಭಾರತಕ್ಕೆ ಕರೆತಂದಿರುವ ಮಗುವನ್ನು ಪುನಾ ಜರ್ಮನಿಗೆ ಕಳುಹಿಸಿಕೊಡಲು ನಿರ್ದೇಶಿಸುವಂತೆ ಕೋರಿ ಪತಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ವಜಾಗೊಳಿಸಿದೆ.

ಜರ್ಮನಿಯಲ್ಲಿ ನೆಲೆಸಿರುವ ಭಾರತೀಯ ಪ್ರಜೆಯಾದ ಪತಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಅಲೋಕ್ ಅರಾಧೆ ಮತ್ತು ವಿಜಯಕುಮಾರ್‌ ಎ. ಪಾಟೀಲ್‌ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಅರ್ಜಿದಾರ ಪತಿಯ ಪುತ್ರನನ್ನು ಪತ್ನಿಯ ಮಧ್ಯಂತರ ಸುಪರ್ದಿಗೆ ನೀಡಿ 2017ರ ಜೂನ್‌ 8ರಂದು ಬೆಂಗಳೂರಿನ 4ನೇ ಕೌಟುಂಬಿಕ ನ್ಯಾಯಾಲಯವು ಆದೇಶ ಮಾಡಿದೆ. ಈ ಆದೇಶ ಇನ್ನೂ ಜಾರಿಯಲ್ಲಿದೆ. ಹಾಗೆಯೇ, ಜರ್ಮನಿ ನ್ಯಾಯಾಲಯದಲ್ಲಿರುವ ಮಗುವಿನ ಸುಪರ್ದಿ ವ್ಯಾಜ್ಯವನ್ನು ಭಾರತದ ನ್ಯಾಯಾಲಯದಲ್ಲಿ ಮುಂದುವರಿಸುವುದಾಗಿ ಪತಿ-ಪತ್ನಿ ಒಪ್ಪಿದ್ದಾರೆ ಎಂದು ತಿಳಿಸಿದೆ.

ಮಗು ತಾಯಿ ಮತ್ತು ಅಜ್ಜ-ಅಜ್ಜಿಯೊಂದಿಗೆ ನೆಲೆಸಿದೆ. ಪತ್ನಿ ಮಗುವನ್ನು ನೋಡಿಕೊಳ್ಳಲು ಸೂಕ್ತರಾಗಿಲ್ಲ ಎಂಬ ಬಗ್ಗೆ ಪತಿ ಯಾವುದೇ ಆಕ್ಷೇಪ ಮಾಡಿಲ್ಲ. ತಾತ ಮತ್ತು ಅಜ್ಜಿಯ ಪ್ರೀತಿ ಮತ್ತು ವಾತ್ಸಲ್ಯವು ಮಗುವಿನ ಉತ್ತಮ ಮತ್ತು ಸಮಗ್ರ ಬೆಳವಣಿಗೆಗೆ ಅತ್ಯಗತ್ಯ. ಇದು ಜರ್ಮನಿಯಲ್ಲಿ ಕೆಲಸ ಮಾಡುತ್ತಾ, ಒಬ್ಬಂಟಿಯಾಗಿ ನೆಲೆಸಿರುವ ತಂದೆಯಿಂದ ಸಿಗುವುದಿಲ್ಲ. ಹೀಗಾಗಿ, ಈ ಹಂತದಲ್ಲಿ ಪತ್ನಿಗೆ ಜರ್ಮನಿಗೆ ತೆರಳಲು ಸೂಚಿಸಿದರೆ, ಮಗುವಿನ ಬೆಳವಣಿಗೆ ಕುಂಠಿತವಾಗಲಿದೆ. ಮಗುವಿನ ದಿನನಿತ್ಯದ ಚಟುವಟಿಕೆ ಮತ್ತು ಶಿಕ್ಷಣದ ಮೇಲೆ ಪರಿಣಾಮ ಉಂಟಾಗಲಿದೆ. ಆದ್ದರಿಂದ, ಮಗುವನ್ನು ಜರ್ಮಿನಿಗೆ ಕಳುಹಿಸಿಕೊಡಲು ಅರ್ಜಿದಾರರ ಪತ್ನಿಗೆ ನಿರ್ದೇಶಿಸಲು ಸಾಧ್ಯವಿಲ್ಲ ಎಂದು ತಿಳಿಸಿದ ಪೀಠವು ಅರ್ಜಿ ವಜಾಗೊಳಿಸಿದೆ.

ಹಿನ್ನೆಲೆ: ಪ್ರಸಕ್ತ ಪ್ರಕರಣದ ಪತಿ ಮತ್ತು ಪತ್ನಿ 2013ರಲ್ಲಿ ಬೆಂಗಳೂರಿನಲ್ಲಿ ನೆಲೆಸಿದ್ದರು. ಮದುವೆಯ ನಂತರ ಪತ್ನಿಯು ಪತಿಯೊಂದಿಗೆ ಜರ್ಮನಿಗೆ ತೆರಳಿ ನೆಲೆಸಿದ್ದರು. 2016ರ ಅಕ್ಟೋಬರ್‌ 21ರಂದು ದಂಪತಿಗೆ ಜರ್ಮನಿಯಲ್ಲೇ ಗಂಡು ಮಗು ಜನಿಸಿತ್ತು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ 2017ರ ಮೇ 16ರಂದು ಮಗನೊಂದಿಗೆ ಪತ್ನಿಯು ಬೆಂಗಳೂರಿಗೆ ಮರಳಿದ್ದರು. ಅತ್ತ ಪತಿಯು 2017ರ ಮೇ 17ರಂದು ಜರ್ಮನಿಯ ವಿಚಾರಣಾಧೀನ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ಮಗುವನ್ನು ತನ್ನ ಸುಪರ್ದಿಗೆ ನೀಡಲು ಪತ್ನಿಗೆ ಆದೇಶಿಸುವಂತೆ ಕೋರಿದ್ದರು. ಇದಾದ ನಂತರ ಜರ್ಮನಿ ನ್ಯಾಯಾಲಯವು ಮಗುವನ್ನು ಪತಿಯ ಸುಪರ್ದಿಗೆ ನೀಡಿ ಆದೇಶಿಸಿತ್ತು. ಜತೆಗೆ, ಮಗನನ್ನು ಜರ್ಮನಿ ದೇಶದ ಗಡಿಯಿಂದ ಹೊರಗಡೆ ಕರೆದೊಯ್ಯಬಾರದು ಎಂದು ನಿರ್ದೇಶಿಸಿ 2017ರ ಮೇ 17ರಂದು ಆದೇಶಿಸಿತ್ತು. ಆದರೆ, ಅಷ್ಟೊತ್ತಿಗಾಗಲೇ ಪತ್ನಿಯು ಮಗನನ್ನು ಕರೆದುಕೊಂಡು ಭಾರತಕ್ಕೆ ಬಂದಿದ್ದರು.

ಈ ನಡುವೆ ಜರ್ಮನಿ ನ್ಯಾಯಾಲಯಕ್ಕೆ ಮತ್ತೊಂದು ಅರ್ಜಿ ಸಲ್ಲಿಸಿದ ಪತಿಯು ತನ್ನ ಪತ್ನಿ ಭಾರತದಲ್ಲಿ ನೆಲೆಸಿದ್ದಾರೆ. ಆ ಮೂಲಕ 2017ರ ಮೇ 17ರಂದು ಹೊರಡಿಸಿದ ಆದೇಶವನ್ನು ಉಲ್ಲಂಘಿಸಲಾಗಿದೆ. ಮಗನ ವೀಸಾ ಅವಧಿ ಸಹ ಎರಡು ತಿಂಗಳಲ್ಲಿ ಮುಕ್ತಾಯವಾಗಲಿದೆ. ಹಾಗಾಗಿ, ಮಗುವನ್ನು ಜರ್ಮನಿಗೆ ಕರೆತರಲು ಪತ್ನಿಗೆ ಆದೇಶಿಸುವಂತೆ ಕೋರಿದ್ದರು. ಪತ್ನಿಯು ಮಗನ ವೀಸಾವನ್ನು ಭಾರತದಲ್ಲಿ ನೆಲೆಸುವುದಕ್ಕಾಗಿ 2016ರ ಜೂನ್‌ 1ರಂದು ವಿದೇಶಿಯರ ಪ್ರಾದೇಶಿಕ ನೋಂದಣಿ ಅಧಿಕಾರಿಯಿಂದ ಪರಿವರ್ತಿಸಿಕೊಂಡಿದ್ದರು. ಇದಾದ ಬಳಿಕ 2017ರ ಜೂನ್‌ 7ರಂದು ವಿವಾಹ ವಿಚ್ಛೇದನ ಮಂಜೂರಾತಿಗೆ ಮತ್ತು ಶಾಶ್ವತ ಜೀವನಾಂಶವಾಗಿ 4 ಕೋಟಿ ರೂಪಾಯಿ ನೀಡಲು ಪತಿಗೆ ಆದೇಶಿಸುವಂತೆ ಕೋರಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅಲ್ಲದೆ, ಪೋಷಕರು ಮತ್ತು ಪಾಲಕರ ಕಾಯಿದೆ ಅಡಿ 2017ರ ಜೂನ್‌ 13ರಂದು ಮತ್ತೊಂದು ಅರ್ಜಿ ಸಲ್ಲಿಸಿ, ತಾಯಿಯೇ ಮಗುವಿನ ನೈಸರ್ಗಿಕ ಪೋಷಕರು ಎಂಬುದಾಗಿ ಘೊಷಿಸಬೇಕು. ಮಗನನ್ನು ತನ್ನ ಸುಪರ್ದಿಯಲ್ಲಿಯೇ ಇರಿಸಿಕೊಳ್ಳಲು ಅನುಮತಿ ನೀಡುವಂತೆ ಕೋರಿದ್ದರು.

ಇದಲ್ಲದೆ 2017ರ ನವೆಂಬರ್‌ 7ರಂದು ಪತ್ನಿಯು ಜರ್ಮನಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿದ್ದರು. ಮಗುವಿನ ಸುಪರ್ದಿ ವ್ಯಾಜ್ಯವನ್ನು ಭಾರತದಲ್ಲಿ ಮುಂದುವರಿಸಲು ಈ ವೇಳೆ ಪತಿ, ಪತ್ನಿಯರು ಒಪ್ಪಿದ್ದರು. ತದನಂತರ 2017ರ ನವೆಂಬರ್‌ 13ರಿಂದ 2019ರ ಜನವರಿ 28ರವರೆಗೆ ಅರ್ಜಿದಾರರು ಮಗನ ಭೇಟಿ ಹಕ್ಕು ಕೋರಿ ಅರ್ಜಿ ಸಲ್ಲಿಸಿದ್ದರು. 2022ರ ಮೇ 27ರಂದು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿ, ತನ್ನ ಅನುಮತಿ ಹಾಗೂ ಒಪ್ಪಿಗೆ ಪಡೆಯದೇ ಪತ್ನಿಯು ಮಗನನ್ನು ಭಾರತಕ್ಕೆ ಕರೆತಂದಿದ್ದಾರೆ. ಮಗನು ಜರ್ಮನಿ ಪ್ರಜೆಯಾಗಿರುವುದರಿಂದ ಆತನ ಬೆಳವಣಿಗೆ ಜರ್ಮನಿ ವ್ಯವಸ್ಥೆಯಲ್ಲಿ ಉತ್ತಮವಾಗಿರುತ್ತದೆ. ಹೀಗಾಗಿ, ಮಗನನ್ನು ಜರ್ಮನಿಗೆ ಕಳುಹಿಸಿಕೊಡಲು ಪತ್ನಿಗೆ ಆದೇಶಿಸುವಂತೆ ಕೋರಿದ್ದರು.

ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದ್ದ ಪತ್ನಿಯು ಮಗುವನ್ನು ತಾನು ಅಕ್ರಮವಾಗಿ ವಶದಲ್ಲಿ ಇಟ್ಟುಕೊಂಡಿಲ್ಲ. ಬೆಂಗಳೂರಿನ 4ನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯವು 2017ರ ಜೂನ್‌ 8ರಂದು ಮಗುವನ್ನು ತನ್ನ ಸುಪರ್ದಿಗೆ ನೀಡಿ ಮಧ್ಯಂತರ ಆದೇಶ ಮಾಡಿದೆ. ಅಲ್ಲದೆ, ಮಗುವಿನ ತಂದೆ ಅಥವಾ ಅವರ ಏಜೆಂಟ್ ಮಗುವಿನ 500 ಮೀಟರ್ ಸಮೀಪಕ್ಕೆ ಬರಬಾರದು ಎಂದು ನಿರ್ಬಂಧ ಹೇರಿದೆ. ಮಗುವಿನ ಸುಪರ್ದಿಗಾಗಿ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮುಂದುವರಿಸಲಾಗುವುದು. ಕಳೆದ ಐದು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸ ಮಾಡಲಾಗಿದೆ. ಮಗುವಿನ ಸುಪರ್ದಿ ವಿಚಾರಣೆಯನ್ನು ನಿರ್ಧರಿಸಲು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯವೇ ಸೂಕ್ತ ವೇದಿಕೆಯಾಗಿದೆ ಎಂದು ತಿಳಿಸಿದ್ದರು.

Related Stories

No stories found.
Kannada Bar & Bench
kannada.barandbench.com