ವಿಜಯಪುರ ಮಹಾನಗರ ಪಾಲಿಕೆ ವಾರ್ಡ್‌ ವಿಂಗಡಣೆ, ಮೀಸಲಾತಿ ಪ್ರಶ್ನಿಸಿದ್ದ ಅರ್ಜಿ ವಜಾ ಮಾಡಿದ ಹೈಕೋರ್ಟ್‌

2019ರಿಂದ ವಿಜಯಪುರ ನಗರಸಭೆಗೆ ಚುನಾವಣೆ ನಡೆದಿಲ್ಲ. ಹೀಗಾಗಿ, ಈ ಹಂತದಲ್ಲಿ ಆಕ್ಷೇಪಾರ್ಹ ಅಧಿಸೂಚನೆಯ ವಿಚಾರದಲ್ಲಿ ಮಧ್ಯಪ್ರವೇಶಿಸಲಾಗದು ಎಂದಿರುವ ಪೀಠ.
Karnataka HC -Kalburgi Bench and Justice R Devadas
Karnataka HC -Kalburgi Bench and Justice R Devadas
Published on

ವಿಜಯಪುರ ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ವಾರ್ಡ್‌ ಮರು ವಿಂಗಡಣೆ ಹಾಗೂ ಮೀಸಲಾತಿ ನಿಗದಿಪಡಿಸಿದ್ದ ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠವು ಶುಕ್ರವಾರ ವಜಾ ಮಾಡಿದೆ. ಹೀಗಾಗಿ, ರಾಜ್ಯ ಚುನಾವಣಾ ಆಯೋಗವು ಅಕ್ಟೋಬರ್‌ 3ರಂದು ಪ್ರಕಟಿಸಿರುವ ವೇಳಾಪಟ್ಟಿಯಂತೆ ಅಕ್ಟೋಬರ್‌ 28ರಂದು ಚುನಾವಣೆ ನಡೆಯುವ ಸಾಧ್ಯತೆ ದಟ್ಟವಾಗಿದೆ.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷೆ ವಿದ್ಯಾರಾಣಿ ರುದ್ರಪ್ಪ ತುಂಗಲ್‌ ಮತ್ತಿತರು ಮೀಸಲಾತಿ ಮತ್ತು ವಾರ್ಡ್‌ ವಿಂಗಡಣೆಗೆ ಸಂಬಂಧಿಸಿದಂತೆ ಸೆಪ್ಟೆಂಬರ್‌ 19ರಂದು ನಗರಾಭಿವೃದ್ಧಿ ಇಲಾಖೆಯು ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್‌ ದೇವದಾಸ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಈ ಆದೇಶ ಮಾಡಿದೆ.

“ಕೆಲವು ಮನವಿಗಳಲ್ಲಿ ವಿವಿಧ ವಾರ್ಡ್‌ಗಳಲ್ಲಿ ಮೀಸಲಾತಿ ವ್ಯತ್ಯಾಸದ ಬಗ್ಗೆ ಉಲ್ಲೇಖಿಸಲಾಗಿದೆ. ಇದು ವಾಸ್ತವಿಕವಾಗಿದೆ. ಆದರೆ, ಮೀಸಲಾತಿ ನಿಗದಿ ಆಯೋಗ ರಚನೆ ಮತ್ತು ವಾರ್ಡ್‌ ಮರು ವಿಂಗಡಣೆಯು ವಿಜಯಪುರ ಮಹಾನಗರ ಪಾಲಿಕೆಗೆ ಅನ್ವಯಿಸುವುದಿಲ್ಲ. ಅದರ ಜೊತೆಗೆ ಸುಪ್ರೀಂ ಕೋರ್ಟ್‌ ಚುನಾವಣೆ ವಿಚಾರದಲ್ಲಿ ಕಾಲಮಿತಿ ಪಾಲಿಸಬೇಕು ಎಂದಿದೆ. 2019ರಿಂದ ವಿಜಯಪುರ ನಗರಸಭೆಗೆ ಚುನಾವಣೆ ನಡೆದಿಲ್ಲ. ಹೀಗಾಗಿ, ಈ ಹಂತದಲ್ಲಿ ಆಕ್ಷೇಪಾರ್ಹ ಅಧಿಸೂಚನೆಯ ವಿಚಾರದಲ್ಲಿ ಮಧ್ಯಪ್ರವೇಶಿಸಲಾಗದು” ಎಂದು ಪೀಠ ಆದೇಶದಲ್ಲಿ ಹೇಳಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ ದಿವಾಕರ್‌ ಅವರು “ಸುಪ್ರೀಂ ಕೋರ್ಟ್‌ ನೀಡಿರುವ ನಿರ್ದೇಶನಗಳು ವಿಜಯಪುರ ನಗರಸಭೆ ವಿಚಾರದಲ್ಲೂ ಅನ್ವಯವಾಗುತ್ತವೆ. ಬಿಬಿಎಂಪಿ ಸೇರಿದಂತೆ ಎಲ್ಲಾ ಪಾಲಿಕೆಗಳಿಗೂ ಸುಪ್ರೀಂ ಕೋರ್ಟ್‌ ಆದೇಶ ಅನ್ವಯಿಸಲಿದೆ. ಹೀಗಾಗಿ, ವಾರ್ಡ್‌ ಮರು ವಿಂಗಡಣೆ ಮತ್ತು ಮೀಸಲಾತಿ ನಿಗದಿ ಪ್ರಕರಣವನ್ನು ನ್ಯಾ. ಭಕ್ತವತ್ಸಲ ಸಮಿತಿಯ ಮುಂದಿಡುವುದು ವಿಜಯಪುರ ನಗರಸಭೆಗೂ ಅನ್ವಯಿಸಲಿದೆ” ಎಂದು ವಾದಿಸಿದರು.

“ಕೆಲವು ವಾರ್ಡ್‌ಗಳಲ್ಲಿ ಕೇವಲ ಎರಡು ಸಾವಿರ ಮತದಾರರಿದ್ದು, ಕೆಲವು ಕಡೆ 12 ಸಾವಿರ ಮತದಾರರು ಇದ್ದಾರೆ. ನಿವೃತ್ತ ನ್ಯಾ. ಭಕ್ತವತ್ಸಲ ಸಮಿತಿಯು ಮೀಸಲಾತಿ ವಿಚಾರವನ್ನು ನಿರ್ಧರಿಸಬೇಕು” ಎಂದು ಕೋರಿದರು.

31 ವಾರ್ಡ್‌ಗಳನ್ನು ಪುನರ್‌ ವಿಂಗಡಣೆ ಮಾಡಬೇಕು. ಶೇ. 50ರಷ್ಟು ಮೀಸಲಾತಿ ಕಲ್ಪಿಸಬೇಕು. 35 ವಾರ್ಡ್‌ಗಳ ಪೈಕಿ 16 ವಾರ್ಡ್‌ಗಳಲ್ಲಿ ಮೀಸಲಾತಿ ಕಲ್ಪಿಸಲಾಗಿದೆ. ಮೀಸಲಾತಿ ನೀಡುವಾಗ ಮಹಿಳೆಯರ ಹಿತಾಸಕ್ತಿ ಕಾಪಾಡಲಾಗಿಲ್ಲ. ನ್ಯಾಯಾಲಯದ ಮೆಟ್ಟಿಲೇರಿದ ಬಳಿಕ ಆಯೋಗವು ಚುನಾವಣಾ ವೇಳಾಪಟ್ಟಿ ಪ್ರಕಟಿಸಿದೆ ಎಂದು ಆರೋಪಿಸಲಾಗಿತ್ತು.

Kannada Bar & Bench
kannada.barandbench.com