ಎಸ್‌ಟಿಯಿಂದ ನಾಯಕ, ನಾಯ್ಕ್‌, ಬೇಡ, ಬೇಡರ, ವಾಲ್ಮೀಕಿ, ತಳವಾರ ಸಮುದಾಯ ಕೈಬಿಡುವಂತೆ ಕೋರಿದ್ದ ಪಿಐಎಲ್‌ ವಜಾ

ಪಿಐಎಲ್‌ ವ್ಯಾಪ್ತಿಯು ಸಮುದ್ರದಷ್ಟು ವ್ಯಾಪಕ ಎಂಬುದು ಸತ್ಯವಾಗಿರುವಷ್ಟೇ ಕಡಲಿಗೊಂದು ದಂಡೆಯಿದೆ ಎನ್ನುವುದನ್ನು ಮರೆಯಲಾಗದು ಎಂದ ಪೀಠ.
Chief Justice P B Varale and Justice Krishna S. Dixit
Chief Justice P B Varale and Justice Krishna S. Dixit

ಪರಿಶಿಷ್ಟ ಪಂಗಡಗಳ ಅಡಿ ನಾಯಕ, ನಾಯ್ಕ್‌, ಬೇಡ, ಬೇಡರ, ವಾಲ್ಮೀಕಿ ಮತ್ತು ತಳವಾರ ಸಮುದಾಯಗಳನ್ನು ಸಂವಿಧಾನದ (ಪರಿಶಿಷ್ಟ ಪಂಗಡ) ಆದೇಶ (ತಿದ್ದುಪಡಿ) ಕಾಯಿದೆ 1991 ಮತ್ತು ಸಂವಿಧಾನದ (ಪರಿಶಿಷ್ಟ ಪಂಗಡ) ಆದೇಶ (ತಿದ್ದುಪಡಿ) ಕಾಯಿದೆ 2020ರ ಅಡಿ ಸೇರ್ಪಡೆ ಮಾಡಿರುವುದನ್ನು ವಜಾ ಮಾಡುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ತಿರಸ್ಕಿರಿಸಿದೆ.

ಬೆಂಗಳೂರಿನ ಡಾ. ಅಂಬೇಡ್ಕರ್‌ ಪರಿಶಿಷ್ಟ ಜಾತಿಗಳ ಒಕ್ಕೂಟದ ಪರವಾಗಿ ಮಹೇಂದ್ರ ಕುಮಾರ್‌ ಮಿತ್ರಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.‌ ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿದೆ.

“ಯಾವ ಸಮುದಾಯನ್ನು ಪರಿಶಿಷ್ಟ ಜಾತಿ/ಪಂಗಡವನ್ನಾಗಿ ಸೇರ್ಪಡೆ ಮಾಡಬೇಕು ಎಂಬುದು ಶಾಸನಸಭೆಯ ನೀತಿಯ ಭಾಗವಾಗಿದ್ದು, ಸಾಂವಿಧಾನಿಕ ನಿಬಂಧನೆ ಉಲ್ಲಂಘನೆಯಾಗಿರುವುದನ್ನು ಸಾಬೀತುಪಡಿಸದಿದ್ದರೆ ನ್ಯಾಯಾಲಯವು ಸಾಮಾನ್ಯವಾಗಿ ಈ ವಿಚಾರದಲ್ಲಿ ಮಧ್ಯಪ್ರವೇಶಿಸುವುದಿಲ್ಲ. ಹಲವು ವಿಚಾರಗಳು ಶಾಸನ ನೀತಿಯ ಭಾಗವಾಗಲಿದ್ದು, ನ್ಯಾಯಾಲಯ ಮೌಲ್ಯಮಾಪನ ಕೈಗೆತ್ತಿಗೊಳ್ಳಲಾಗದು. ಹೀಗಾಗಿ, ಈ ವಿಚಾರದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಲು ಬಯಸುವುದಿಲ್ಲ” ಎಂದಿದೆ.

“ಅಸಹಾಯಕ ಸಮುದಾಯಗಳನ್ನು ಮೇಲೆತ್ತಲು ಸಾಂವಿಧಾನಿಕ ನಿಬಂಧನೆಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಸಾಂವಿಧಾನಿಕ (ಪರಿಶಿಷ್ಟ ಪಂಗಡಗಳು) ಆದೇಶ ಕಾಯಿದೆಯಲ್ಲಿ ಯಾವೆಲ್ಲಾ ಸಮುದಾಯಗಳನ್ನು ಸೇರ್ಪಡೆ ಮಾಡಬೇಕು ಮತ್ತು ಕೈಬಿಡಬೇಕು ಎಂಬುದಕ್ಕೆ ಶಾಸನ ರೂಪಿಸುವುದು ಸಂಸತ್‌ನ ವಿಶೇಷಾಧಿಕಾರವಾಗಿದೆ. ಈ ವಿಚಾರದಲ್ಲಿ ನ್ಯಾಯಾಲಯಗಳು ಸಂಸತ್‌/ವಿಧಾನ ಮಂಡಲದ ಜೊತೆ ಅಭಿಪ್ರಾಯಗಳ ಸ್ಪರ್ಧೆ ನಡೆಸಲಾಗದು” ಎಂದು ನ್ಯಾಯಾಲಯ ಹೇಳಿದೆ.

ಮೇಲೆ ಉಲ್ಲೇಖಿಸಿದ ಸಂಸದೀಯ ಶಾಸನಗಳನ್ನು ಅಸಿಂಧುಗೊಳಿಸದಿರುವುದರಿಂದ ನಾಯಕ, ನಾಯ್ಕ್‌, ಬೇಡ, ಬೇಡರ, ವಾಲ್ಮೀಕಿ ಮತ್ತು ತಳವಾರ ಸಮುದಾಯಗಳಿಗೆ ನೀಡಲಾದ ಪರಿಶಿಷ್ಟ ಪಂಗಡಗಳ ಸರ್ಟಿಫಿಕೇಟ್‌ಗಳನ್ನು ಅಸಿಂಧುಗೊಳಿಸುವುದನ್ನು ಸಗಟಿನ ರೂಪದಲ್ಲಿ ನೀಡಲಾಗದು. ಎಲ್ಲಿಯವರೆಗೆ ಈ ಸಮುದಾಯಗಳು ಶಾಸನದಲ್ಲಿ ಮುಂದುವರಿಯಲಿವೆಯೋ ಅಲ್ಲಿಯವರೆಗೆ ಆ ಸಮುದಾಯಗಳ ಸದಸ್ಯರು ಸಕ್ಷಮ ಪ್ರಾಧಿಕಾರದಿಂದ ಸಾಮಾಜಿಕ ಸ್ಥಿತಿಗತಿ ಸರ್ಟಿಫಿಕೇಟ್‌ ಪಡೆಯಲು ಅರ್ಹರು. ಇದು ಶಿಕ್ಷಣ, ಉದ್ಯೋಗ, ಚುನಾವಣೆ ಮತ್ತು ಇತ್ಯಾದಿ ಮೀಸಲಾತಿಗೂ ಅನ್ವಯಿಸುತ್ತದೆ. ಇದೇ ಕಾರಣಕ್ಕಾಗಿಯೇ ಅವರು 1989ರ ಕಾಯಿದೆ ಅಡಿ ದೌರ್ಜನ್ಯದಿಂದ ರಕ್ಷಣೆ ಪಡೆಯಲು ಅರ್ಹರಾಗಿದ್ದಾರೆ. ಹಾಗಾಗಿ, ಅವರು ನೀಡುವ ದೂರಿನ ಆಧಾರದಲ್ಲಿ ಯಾವುದೇ ಪ್ರಕರಣ ದಾಖಲಿಸದಂತೆ ನಿರ್ದೇಶಿಸಲಾಗದು ಎಂದು ನ್ಯಾಯಾಲಯ ಹೇಳಿದೆ.

ಪಿಐಎಲ್‌ ವ್ಯಾಪ್ತಿಯು ಸಮುದ್ರದಷ್ಟು ವ್ಯಾಪಕವಾಗಿದೆ ಎಂಬುದು ಸತ್ಯವಾಗಿರುವಷ್ಟೇ ಕಡಲಿಗೊಂದು ದಂಡೆಯಿದೆ ಎನ್ನುವುದನ್ನು ಮರೆಯಲಾಗದು. ನಿರ್ದಿಷ್ಟವಾಗಿ ತಿಳಿಸಲು ಹೆಚ್ಚು ಹೇಳುವ ಅಗತ್ಯವಿಲ್ಲವಾದರೂ, ಕಡಿಮೆ ಹೇಳುವುದು ಹೇಳಬೇಕಾದ ಅಗತ್ಯವನ್ನು ಪೂರೈಸುವುದಿಲ್ಲ ಎಂದು ನ್ಯಾಯಾಲಯ ನುಡಿಯಿತು.

ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯಿದೆ ಅಡಿ ಪರಿಶಿಷ್ಟ ಜಾತಿಗಳ ಸದಸ್ಯರು ನೀಡಿದ ದೂರಿನ ಮೇರೆಗೆ ಪರಿಶಿಷ್ಟ ಪಂಗಡಗಳಿಂದ ಹೊರತಾದ ನಾಯಕ, ನಾಯ್ಕ್‌, ಬೇಡ, ಬೇಡರ, ವಾಲ್ಮೀಕಿ ಮತ್ತು ತಳವಾರ ಸಮುದಾಯಗಳ ವಿರುದ್ಧ ಪ್ರಕರಣ ದಾಖಲಿಸದಂತೆ ನಿರ್ದೇಶಿಸಬೇಕು. ಈ ಸಮುದಾಯಗಳಿಗೆ ಪರಿಶಿಷ್ಟ ಪಂಗಡ ಸರ್ಟಿಫಿಕೇಟ್‌ ನೀಡದಂತೆ, ಅವರಿಗೆ ಶಿಕ್ಷಣ, ಉದ್ಯೋಗ, ಚುನಾವಣೆ ಅಥವಾ ಇತ್ಯಾದಿಗಳಲ್ಲಿ ಮೀಸಲಾತಿ ಸೌಕರ್ಯ ಕಲ್ಪಿಸಬಾರದು. ಭಾರತೀಯ ಮತ್ತು ರಾಜ್ಯ ಚುನಾವಣಾ ಆಯೋಗಗಳು ಈ ಸಮುದಾಯಗಳಿಗೆ ನೀಡಿದ ಪರಿಶಿಷ್ಟ ಪಂಗಡ ಸರ್ಟಿಫಿಕೇಟ್‌ ಸ್ವೀಕರಿಸದಂತೆ ನಿರ್ದೇಶಿಸಬೇಕು, ಅಲ್ಲದೆ, ಎಸ್‌ಸಿ/ಎಸ್‌ಟಿ ದೌರ್ಜನ್ಯ ನಿಷೇಧ ಕಾಯಿದೆ ಅಡಿ ಇವರು ಪ್ರಕರಣ ದಾಖಲಿಸಲು ಮುಂದಾದರೆ ಅದನ್ನು ತಡೆಯಬೇಕು ಹಾಗೂ ಈ ಸಮುದಾಯಗಳನ್ನು ಪರಿಶಿಷ್ಟ ಪಂಗಡಗಳ ಸಮುದಾಯಗಳಿಂದ ಹೊರಗಿಡಬೇಕು ಎಂದು ಅರ್ಜಿದಾರರು ಕೋರಿದ್ದರು. 

Attachment
PDF
Ambedkar SC Federation Vs UoI.pdf
Preview

Related Stories

No stories found.
Kannada Bar & Bench
kannada.barandbench.com