ಕೇಂದ್ರದಿಂದ ತಂಬಾಕು ಉತ್ಪನ್ನಗಳ ಮೇಲೆ ಅಬಕಾರಿ ಮತ್ತು ವಿಪತ್ತು ತೆರಿಗೆ ಪ್ರಶ್ನಿಸಿದ್ದ ಅರ್ಜಿ ವಜಾ ಮಾಡಿದ ಹೈಕೋರ್ಟ್‌

ತಂಬಾಕು ಮತ್ತು ಅದರ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕ ವಿಧಿಸುವುದು ಸಾರ್ವಜನಿಕ ನೀತಿಯ ಭಾಗವಾಗಿದ್ದು, ಇದರಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಲಾಗದು ಎಂದಿರುವ ನ್ಯಾಯಾಲಯ.
Justice M I Arun and Karnataka HC-Dharwad Bench
Justice M I Arun and Karnataka HC-Dharwad Bench
Published on

ತಂಬಾಕು ಮತ್ತು ಅದರ ಉತ್ಪನ್ನಗಳ ಉತ್ಪಾದನೆ ಮತ್ತು ಮಾರಾಟದ ಮೇಲೆ ಪ್ರತ್ಯೇಕ ಅಬಕಾರಿ ಸುಂಕ ಮತ್ತು ರಾಷ್ಟ್ರೀಯ ವಿಪತ್ತು ಆಕಸ್ಮಿಕ ತೆರಿಗೆ (ಎನ್‌ಸಿಸಿಡಿ) ವಿಧಿಸುತ್ತಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಈಚೆಗೆ ಎತ್ತಿ ಹಿಡಿದಿದೆ.

ಹುಬ್ಬಳ್ಳಿಯ ಅದರಗುಂಚಿಯಲ್ಲಿರುವ ಘೋಡಾವತ್‌ ಪ್ಯಾಕರ್ಸ್‌ ಎಲ್‌ಎಲ್‌ಪಿ ಸೇರಿಂದತೆ ಆರು ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಎಂ ಐ ಅರುಣ್‌ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.

“ತಂಬಾಕು ಮತ್ತು ಅದರ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕ ವಿಧಿಸುವುದು ಸಾರ್ವಜನಿಕ ನೀತಿಯ ಭಾಗವಾಗಿದ್ದು, ಇದರಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಲಾಗದು. ತಂಬಾಕು ಮತ್ತು ಅದರ ಉತ್ಪನ್ನಗಳಿಗೆ ಕೇಂದ್ರೀಯ ಸರಕು ಮತ್ತು ಸೇವಾ ತೆರಿಗೆ (ಸಿಜಿಎಸ್‌ಟಿ) ನಿಬಂಧನೆಗಳ ಅಡಿ ತೆರಿಗೆ ವಿಧಿಸುವುದಲ್ಲದೇ ಅಬಕಾರಿ ಸುಂಕ ವಿಧಿಸಲು ಸಿಜಿಎಸ್‌ಟಿಯಲ್ಲಿ ಅವಕಾಶವಿದೆ. ಹೀಗಾಗಿ, ಇಲ್ಲಿ ಯಾವುದೇ ತಪ್ಪಾಗಿಲ್ಲ. ಪ್ರತಿವಾದಿಗಳು ಸಿಜಿಎಸ್‌ಟಿ ಹಾಗೂ ಅಬಕಾರಿ ಸುಂಕ ವಿಧಿಸಲು ಅರ್ಹರಾಗಿದ್ದಾರೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

“ಹಣಕಾಸು ಕಾಯಿದೆ 2001ರ ಸೆಕ್ಷನ್‌ 136ರ ಅಡಿ ಎನ್‌ಸಿಸಿಡಿ ವಿಧಿಸಲು ಮತ್ತು ಸಂಗ್ರಹಿಸಲು ಉತ್ತೇಜಿಸಿದ್ದು, ಅದನ್ನು ಹೆಚ್ಚುವರಿ ಶುಲ್ಕ, ಅಬಕಾರಿ ಸುಂಕ ಎಂದು ಪರಿಗಣಿಸಲಾಗಿದೆ. ಹೀಗಾಗಿ, ಎನ್‌ಸಿಸಿಡಿಯನ್ನು ಸೆಕ್ಷನ್‌ 136ರ ಅಡಿ ಕೇಂದ್ರೀಯ ಅಬಕಾರಿ ಕಾಯಿದೆಯ ಅಡಿಯಲ್ಲಿನ ಅಬಕಾರಿ ಸುಂಕ ಎಂದು ಪರಿಗಣಿಸಿಲ್ಲ. ಬದಲಿಗೆ, ಉತ್ಪಾದಿಸಿದ ವಸ್ತುವಿನ ಮೌಲ್ಯದ ಮೇಲಿನ ಪ್ರತ್ಯೇಕ ಸುಂಕ ಎಂದು ವಿಧಿಸಲಾಗುತ್ತಿದ್ದು, ಇದು ಒಂದು ರೀತಿಯಲ್ಲಿ ಅಬಕಾರಿ ಸುಂಕವಾಗಿದೆ” ಎಂದು ಆದೇಶದಲ್ಲಿ ಹೇಳಲಾಗಿದೆ.

Also Read
ಸರ್ಕಾರದ ಅಧಿಸೂಚನೆಗೂ ಮುನ್ನದ ಪಾಕ್‌ನ ಆಮದುಗಳಿಗೆ ಶೇ.200 ಸೀಮಾ ಸುಂಕ ಹೆಚ್ಚಳ ಅನ್ವಯಿಸುವುದಿಲ್ಲ: ಸುಪ್ರೀಂ ಕೋರ್ಟ್

“ಕೇಂದ್ರೀಯ ಅಬಕಾರಿ ಕಾಯಿದೆಯನ್ನು ಹಿಂಪಡೆಯಲಾಗಿದೆ ಎಂದ ಮಾತ್ರಕ್ಕೆ ಏಳನೇ ಷೆಡ್ಯೂಲ್‌ನಲ್ಲಿ ಉಲ್ಲೇಖಿಸಿರುವಂತೆ ಅರ್ಜಿದಾರರಿಗೆ ಎನ್‌ಸಿಸಿಡಿ ವಿನಾಯಿತಿ ಸಿಗುವುದಿಲ್ಲ. ಎನ್‌ಸಿಸಿಡಿಯು ಹೆಚ್ಚುವರಿ ಶುಲ್ಕವಾಗಿದ್ದು, ಅದೊಂದು ರೀತಿಯಲ್ಲಿ ಅಬಕಾರಿ ಸುಂಕವಾಗಿದೆ. ಇದನ್ನು ಕೇಂದ್ರೀಯ ಅಬಕಾರಿ ಕಾಯಿದೆಯ ನಾಲ್ಕನೇ ಷೆಡ್ಯೂಲ್‌ನಲ್ಲಿನ ನಿಬಂಧನೆಗಳ ಅಡಿ ಪ್ರತ್ಯೇಕವಾಗಿ ಅಬಕಾರಿ ಸುಂಕವಾಗಿ ವಿಧಿಸಬಹುದಾಗಿದೆ. ಹೀಗಾಗಿ, ಅಬಕಾರಿ ಸುಂಕದ ಅನುಪಸ್ಥಿತಿಯಲ್ಲಿ ಎನ್‌ಸಿಸಿಡಿಯನ್ನು ಕಾನೂನಿನ ಅಡಿ ತಪ್ಪು ಎನ್ನಲಾಗದು” ಎಂದು ಪೀಠ ಹೇಳಿದೆ.

ಕೇಂದ್ರೀಯ ಅಬಕಾರಿ ಟಾರಿಫ್‌ ಕಾಯಿದೆಯನ್ನು ಹಿಂಪಡೆಯಲಾಗಿರುವುದರಿಂದ ತಿದ್ದುಪಡಿ ಮಾಡದೇ ಹಣಕಾಸು ಕಾಯಿದೆಯ ಏಳನೇ ಷೆಡ್ಯೂಲ್‌ಗೆ ಚಾಲನೆ ನೀಡಲಾಗದು ಎಂದು ಅರ್ಜಿದಾರರು ವಾದಿಸಿದ್ದರು.

Kannada Bar & Bench
kannada.barandbench.com