ಕರ್ನಾಟಕ ನಾಗರಿಕ ಸೇವೆಗಳ ಕಾಯಿದೆ-2022ರ ಸಿಂಧುತ್ವ ಪ್ರಶ್ನಿಸಿದ್ದ ಪಿಐಎಲ್‌ ವಜಾ ಮಾಡಿದ ಹೈಕೋರ್ಟ್‌

“ಕಾನೂನು ಹೇಗೆ ಅಸಾಂವಿಧಾನಿಕ ಎಂದು ನೀವು ಹೇಳಬೇಕು. ಕಾನೂನಿನ ನಿಬಂಧನೆಗಳನ್ನು ಕಾಯಿದೆ ಹೇಗೆ ಉಲ್ಲಂಘಿಸುತ್ತದೆ ಎಂಬುದನ್ನು ನೀವು ತೋರಿಸಬೇಕು” ಎಂದ ನ್ಯಾ. ಕೃಷ್ಣ ಕುಮಾರ್‌. ಪ್ರತ್ಯುತ್ತರ ಮನವಿ ಸಲ್ಲಿಸುವ ಅರ್ಜಿದಾರರ ಕೋರಿಕೆ ಒಪ್ಪದ ಪೀಠ.
Karnataka HC and KPSC
Karnataka HC and KPSC
Published on

ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಗೆಜೆಟೆಡ್ ಪ್ರೊಬೇಷನರ್ ಹುದ್ದೆಗೆ 2011ರಲ್ಲಿ ನಡೆಸಿದ್ದ ಪರೀಕ್ಷೆಯಲ್ಲಿ ಅಂತಿಮ ಪಟ್ಟಿಯಲ್ಲಿದ್ದ 362 ಅಭ್ಯರ್ಥಿಗಳ ಆಯ್ಕೆ ಸಿಂಧುಗೊಳಿಸಿ ನೇಮಕಾತಿ ಆದೇಶ ನೀಡುವ ಸಂಬಂಧ ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಕರ್ನಾಟಕ ನಾಗರಿಕ ಸೇವೆಗಳ (2011ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರ್‌ಗಳ ಆಯ್ಕೆ ಮತ್ತು ನೇಮಕಾತಿ ಸಿಂಧುಗೊಳಿಸುವಿಕೆ) ಕಾಯಿದೆ-2022ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿದ್ದ ಮನವಿಯನ್ನು ಕರ್ನಾಟಕ ಹೈಕೋರ್ಟ್‌ ಗುರುವಾರ ವಜಾ ಮಾಡಿದೆ.

ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್‌ ಆರೀಫ್‌ ಜಮೀಲ್‌ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರಿದ್ದ ವಿಭಾಗೀಯ ಪೀಠವು ಅರ್ಜಿಯು ಪರಿಗಣನೆಯ ಅರ್ಹತೆ ಹೊಂದಿಲ್ಲ ಎಂದು ಹೇಳಿತು.

“ಕೆಪಿಎಸ್‌ಸಿಯ ಆಯ್ಕೆ ಪಟ್ಟಿಯನ್ನು ಹಿಂದೆ ಹೈಕೋರ್ಟ್‌ ರದ್ದುಪಡಿಸಿತ್ತು. ಇದನ್ನು ಸುಪ್ರೀಂ ಕೋರ್ಟ್‌ ಸಹ ಎತ್ತಿ ಹಿಡಿದಿದೆ. ಆ ಬಳಿಕ 362 ಅಭ್ಯರ್ಥಿಗಳ ಆಯ್ಕೆ ಸಿಂಧುಗೊಳಿಸಿ ನೇಮಕಾತಿ ಆದೇಶ ನೀಡುವ ಸಂಬಂಧ ರಾಜ್ಯ ಸರ್ಕಾರವು ಕರ್ನಾಟಕ ನಾಗರಿಕ ಸೇವೆಗಳ (2011ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರ್‌ಗಳ ಆಯ್ಕೆ ಮತ್ತು ನೇಮಕಾತಿ ಸಿಂಧುಗೊಳಿಸುವಿಕೆ) ಕಾಯಿದೆ-2022 ಜಾರಿಗೆ ತಂದಿದೆ. ಈ ಮಧ್ಯೆ, 362 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವುದನ್ನು ಪ್ರಶ್ನಿಸಿರುವ ಪ್ರಕರಣವು ಕರ್ನಾಟಕ ರಾಜ್ಯ ಆಡಳಿತ ನ್ಯಾಯಾಧಿಕರಣದಲ್ಲಿ (ಕೆಎಸ್‌ಎಟಿ) ಬಾಕಿ ಇದೆ. ಅರ್ಜಿದಾರರು ‘ಕರ್ನಾಟಕ ನಾಗರಿಕ ಸೇವೆಗಳ (2011ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರ್‌ಗಳ ಆಯ್ಕೆ ಮತ್ತು ನೇಮಕಾತಿ ಸಿಂಧುಗೊಳಿಸುವಿಕೆ) ಕಾಯಿದೆ-2022 ಸಂವಿಧಾನ ಬಾಹಿರವಾಗಿದೆ ಎಂಬುದನ್ನು ತೋರಿಸಲು ವಿಫಲವಾಗಿದ್ದಾರೆ. ಹೀಗಾಗಿ, ಮನವಿಗೆ ಯಾವುದೇ ಅರ್ಹತೆ ಇಲ್ಲ” ಎಂದು ಪೀಠವು ಆದೇಶದಲ್ಲಿ ಹೇಳಿದ್ದು, ಅರ್ಜಿ ವಜಾ ಮಾಡಿದೆ.

ಇದಕ್ಕೂ ಮುನ್ನ ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ರೆಹಮತ್‌ ಉಲ್ಲಾ ಕೊತ್ವಾಲ್‌ ಅವರು “ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಕೆಪಿಎಸ್‌ಸಿಯು ಕಾನೂನುಬಾಹಿರ ಚಟುವಟಿಕೆ ನಡೆಸಿರುವುದು ಸಿಐಡಿ ವರದಿಯಿಂದ ಬಹಿರಂಗವಾಗಿದೆ. ಕೆಪಿಎಸ್‌ಸಿ ಅಧಿಸೂಚನೆಯನ್ನು ಹೈಕೋರ್ಟ್‌ ವಜಾ ಮಾಡಿದೆ. ಇದನ್ನು ಸುಪ್ರೀಂ ಕೋರ್ಟ್‌ ಸಹ ಎತ್ತಿ ಹಿಡಿದಿದೆ. ಅದಾಗ್ಯೂ, ಆಕ್ಷೇಪಾರ್ಹವಾದ ಕಾಯಿದೆಯನ್ನು ಕಾನೂನುಬಾಹಿರವಾಗಿ ರೂಪಿಸಲಾಗಿದೆ. ಹೀಗಾಗಿ, ಇದಕ್ಕೆ ಕಾನೂನಿನ ಮಾನ್ಯತೆ ಇಲ್ಲ” ಎಂದು ವಾದಿಸಿದರು.

ಇದಕ್ಕೆ ಸಿಜೆ ಅವಸ್ಥಿ ಅವರು ನೇಮಕಾತಿಗೆ ಸಂಬಂಧಿಸಿದಂತೆ ನ್ಯಾಯಾಲಯ ಆದೇಶ ಮಾಡಿರಬಹುದು. ಹಾಗೆಂದು ಕಾನೂನು ಸರಿ ಇಲ್ಲ ಎಂದು ಹೇಗೆ ಹೇಳುತ್ತೀರಿ? ಕಾಯಿದೆ ರೂಪಿಸಲು ಕಾರಣಗಳು ಏನಾದರೂ ಇರಬಹುದು. ಒಮ್ಮೆ ಕಾನೂನು ಜಾರಿಗೊಳಿಸದ ಮೇಲೆ ಅದು ಹೇಗೆ ಅಕ್ರಮ ಎಂದು ತೋರಿಸಬೇಕು. ನೀವು ನಿರ್ದಿಷ್ಟ ನಿಬಂಧನೆಯನ್ನು ಪ್ರಶ್ನಿಸಿಲ್ಲ. ಬದಲಿಗೆ ಇಡೀ ಕಾಯಿದೆಯ ಸಿಂಧುತ್ವ ಪ್ರಶ್ನೆ ಮಾಡಿದ್ದೀರಿ” ಎಂದರು.

ನ್ಯಾ. ಕೃಷ್ಣ ಕುಮಾರ್‌ “ಕಾನೂನು ಹೇಗೆ ಅಸಾಂವಿಧಾನಿಕ ಎಂದು ನೀವು ಹೇಳಬೇಕು. ಕಾನೂನಿನ ನಿಬಂಧನೆಗಳನ್ನು ಕಾಯಿದೆ ಹೇಗೆ ಉಲ್ಲಂಘಿಸುತ್ತದೆ ಎಂಬುದನ್ನು ನೀವು ತೋರಿಸಬೇಕು” ಎಂದರು.

ಆಗ ಪ್ರತ್ಯುತ್ತರ ಮನವಿ ಸಲ್ಲಿಸಲಾಗುವುದು ಎಂದು ವಕೀಲ ಕೊತ್ವಾಲ್‌ ಹೇಳಿದರಾದರೂ ಅದನ್ನು ನ್ಯಾಯಾಲಯ ಪುರಸ್ಕರಿಸಲಿಲ್ಲ.

Also Read
ಕರ್ನಾಟಕ ನಾಗರಿಕ ಸೇವೆಗಳ ಕಾಯಿದೆ-2022ರ ಸಿಂಧುತ್ವ ಪ್ರಶ್ನೆ: ಕೆಎಸ್‌ಎಟಿ ಮೊದಲು ಪ್ರಕರಣ ನಿರ್ಧರಿಸಲಿ ಎಂದ ಹೈಕೋರ್ಟ್‌

ಕಳೆದ ತಿಂಗಳು ಶ್ರೀನಿವಾಸ್‌ ಟಿ ಸೇರಿದಂತೆ ಒಂಭತ್ತು ಮಂದಿ ಸಲ್ಲಿಸಿರುವ ರಿಟ್‌ ಮನವಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಜಿ ನರೇಂದರ್‌ ಮತ್ತು ನ್ಯಾ. ಎಂ ಜಿ ಎಸ್‌ ಕಮಲ್‌ ಅವರಿದ್ದ ವಿಭಾಗೀಯ ಪೀಠವು ಕರ್ನಾಟಕ ರಾಜ್ಯ ಆಡಳಿತ ನ್ಯಾಯಾಧಿಕರಣದ ಮುಂದೆ ಗೆಜೆಟೆಡ್ ಪ್ರೊಬೇಷನರ್‌ ಅಭ್ಯರ್ಥಿಗಳ ನೇಮಕಾತಿ ಪ್ರಕರಣವು ವಿಚಾರಣೆಗೆ ಬರಲಿದ್ದು, ಅಲ್ಲಿ ನಿರ್ಧಾರವಾದ ಬಳಿಕ ಪ್ರಕರಣವನ್ನು ಆಲಿಸುವುದಾಗಿ ಹೇಳಿ ವಿಚಾರಣೆ ಮುಂದೂಡಿದ್ದನ್ನು ಇಲ್ಲಿ ನೆನೆಯಬಹುದಾಗಿದೆ.

ಹೈಕೋರ್ಟ್‌ ಆಯ್ಕೆ ಪಟ್ಟಿ ರದ್ದುಪಡಿಸಿದ್ದರಿಂದ ಆಗ ಆಯ್ಕೆಯಾಗಿದ್ದ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಅವರಿಗೆ ನ್ಯಾಯ ಒದಗಿಸಬೇಕು ಎಂಬ ಬೇಡಿಕೆ ಉಭಯ ಸದನಗಳಲ್ಲಿ ಹಾಗೂ ಸಾರ್ವಜನಿಕವಾಗಿ ಕೇಳಿಬಂದಿತ್ತು. ಈ ಆಯ್ಕೆ ಪಟ್ಟಿಯನ್ನು ಸಿಂಧುಗೊಳಿಸುವುದಕ್ಕೆ ಸಂಬಂಧಿಸಿದಂತೆ ವಿವಿಧ ಮಠಾಧೀಶರು, ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಪಕ್ಷಾತೀತವಾಗಿ ಹಲವು ನಾಯಕರು ಸರ್ಕಾರದ ಮೇಲೆ ಒತ್ತಡ ಹಾಕಿದ್ದ ಹಿನ್ನೆಲೆಯಲ್ಲಿ ‘ಕರ್ನಾಟಕ ನಾಗರಿಕ ಸೇವೆಗಳ (2011ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರ್‌ಗಳ ಆಯ್ಕೆ ಮತ್ತು ನೇಮಕಾತಿ ಸಿಂಧುಗೊಳಿಸುವಿಕೆ) ಕಾಯಿದೆ- 2022 ಜಾರಿಗೆ ತರಲಾಗಿದೆ.

Kannada Bar & Bench
kannada.barandbench.com