[ಅಕ್ರಮ ಜಾಹೀರಾತು, ಫ್ಲೆಕ್ಸ್‌ ತೆರವು] ಬಿಬಿಎಂಪಿ ಜಾಹೀರಾತುಗಳ ಬೈಲಾ ಅಧಿಸೂಚನೆ ಪ್ರಕಟ: ಪಿಐಎಲ್‌ಗಳ ವಿಲೇವಾರಿ

ಅಕ್ರಮ ಜಾಹೀರಾತು/ಫ್ಲೆಕ್ಸ್‌ ಅವಳವಡಿಸುವವರ ವಿರುದ್ಧ ದಂಡನೀಯ ಕ್ರಮಕೈಗೊಳ್ಳಲು ಅವಕಾಶವಿರುವ ಬೈಲಾದ 15ನೇ ನಿಯಮವನ್ನು ಜಾರಿಗೊಳಿಸಲು ಬಿಬಿಎಂಪಿ ಮುಖ್ಯ ಆಯುಕ್ತರು, ಪೊಲೀಸ್‌ ಆಯುಕ್ತರಿಗೆ ನಿರ್ದೇಶಿಸಬೇಕು ಎಂದು ಕೋರಿದ ಜಿ ಆರ್‌ ಮೋಹನ್‌.
BBMP and Karnataka HC
BBMP and Karnataka HC
Published on

ರಾಜ್ಯ ಸರ್ಕಾರವು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಜಾಹೀರಾತುಗಳು) ಬೈಲಾ 2024 ಅಧಿಸೂಚನೆಯನ್ನು ಪ್ರಕಟಿಸಿರುವುದನ್ನು ಪರಿಗಣಿಸಿ ಬೆಂಗಳೂರಿನಲ್ಲಿ ಅಕ್ರಮ ಜಾಹೀರಾತು/ಹೋರ್ಡಿಂಗ್‌ ಅಳವಡಿಸುವುದಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಮೂರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್‌ ಸೋಮವಾರ ವಿಲೇವಾರಿ ಮಾಡಿದೆ.

ಕರ್ನಾಟಕ ಸಾರ್ವಜನಿಕ ಸ್ಥಳಗಳ (ವಿರೂಪಗೊಳಿಸುವುದಕ್ಕೆ ನಿಷೇಧ) ಕಾಯಿದೆ ಅಡಿ ಸೂಕ್ತ ನಿಯಮಗಳನ್ನು ರೂಪಿಸಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಜಾರಿಗೊಳಿಸಲು ಕೋರಿ ಬೆಂಗಳೂರಿನ ಮಾಯಿಗೇ ಗೌಡ, ನಗರದಲ್ಲಿ ಅಕ್ರಮ ಜಾಹೀರಾತು/ಹೋರ್ಡಿಂಗ್‌ಗಳ ಸಂಬಂಧ ಕೈಗೊಂಡಿರುವ ಕ್ರಮದ ಕುರಿತು ಹೈಕೋರ್ಟ್‌ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಅರ್ಜಿ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಅಳವಡಿಸಿರುವ ಅಕ್ರಮ ಜಾಹೀರಾತು/ಹೋರ್ಡಿಂಗ್‌, ಫ್ಲೆಕ್ಸ್‌ಗಳನ್ನು ತೆರವುಗೊಳಿಸಲು ನಿರ್ದೇಶನ ಕೋರಿ ರಾಜು ಅವರು ಸಲ್ಲಿಸಿದ್ದ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ವಿಭಾಗೀಯ ಪೀಠ ಇತ್ಯರ್ಥಪಡಿಸಿತು.

ರಾಜ್ಯ ಸರ್ಕಾರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಪ್ರತಿಮಾ ಹೊನ್ನಾಪುರ ಅವರು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಜಾಹೀರಾತುಗಳು) ಬೈಲಾ 2024ದ ಅಧಿಸೂಚನೆಗೆ ರಾಜ್ಯಪಾಲರು ಅಂಕಿತ ಹಾಕಿದ್ದು, ಆಗಸ್ಟ್‌ 28ರಂದು ಅಧಿಸೂಚನೆ ಪ್ರಕಟಿಸಲಾಗಿದೆ ಎಂದರು.

Also Read
ಅಕ್ರಮ ಫ್ಲೆಕ್ಸ್‌, ಹೋರ್ಡಿಂಗ್‌ ತೆರವಿಗೆ ಹೈಕೋರ್ಟ್‌ ಸೂಚನೆ; ನೂತನ ಜಾಹೀರಾತು ಬೈಲಾ ಕುರಿತು ಬಿಬಿಎಂಪಿ ವಿವರಣೆ

ಅರ್ಜಿದಾರರ ಪರ ವಕೀಲ ಜಿ ಆರ್‌ ಮೋಹನ್‌ ಅವರು “ಅಕ್ರಮ ಜಾಹೀರಾತು/ಹೋರ್ಡಿಂಗ್/ಫ್ಲೆಕ್ಸ್‌ ಅವಳವಡಿಸುವವರ ವಿರುದ್ಧ ದಂಡನೀಯ ಕ್ರಮಕೈಗೊಳ್ಳಲು ಅವಕಾಶವಿರುವ ಬೈಲಾದ 15ನೇ ನಿಯಮವನ್ನು ಜಾರಿಗೊಳಿಸಲು ಬಿಬಿಎಂಪಿ ಮುಖ್ಯ ಆಯುಕ್ತರು ಮತ್ತು ಬೆಂಗಳೂರು ಪೊಲೀಸ್‌ ಆಯುಕ್ತರಿಗೆ ನಿರ್ದೇಶಿಸಿ, ಅರ್ಜಿಗಳನ್ನು ವಿಲೇವಾರಿ ಮಾಡಬಹುದು” ಎಂದರು.

ಇದನ್ನು ಪರಿಗಣಿಸಿ, ಎಲ್ಲರ ವಾದಗಳನ್ನು ದಾಖಲಿಸಿದ ನ್ಯಾಯಾಲಯವು ಅರ್ಜಿಗಳನ್ನು ವಿಲೇವಾರಿ ಮಾಡಿತು.

Kannada Bar & Bench
kannada.barandbench.com