ಚಿನ್ನಸ್ವಾಮಿ ಕ್ರೀಡಾಂಗಣದ ಮುಂಭಾಗ ಕಾಲ್ತುಳಿತ: ಸ್ವಯಂಪ್ರೇರಿತ ಪಿಐಎಲ್‌ ವಿಲೇವಾರಿ ಮಾಡಿದ ಹೈಕೋರ್ಟ್‌

ಕರ್ನಾಟಕ ಜನಸಂದಣಿ ನಿಯಂತ್ರಣ (ಕಾರ್ಯಕ್ರಮ ಮತ್ತು ಗುಂಪುಗೂಡುವ ಸ್ಥಳಗಳಲ್ಲಿ ಜನಸಂದಣಿಯ ನಿಯಂತ್ರಣ) ಮಸೂದೆ ಜಾರಿಯಾಗುವವರೆಗೆ ಎಸ್‌ಒಪಿ ಜಾರಿಗೆ ಆದೇಶಿಸಿದ ನ್ಯಾಯಾಲಯ.
KSCA, RCB, DNA Entrainment Networks & Karnataka HC
KSCA, RCB, DNA Entrainment Networks & Karnataka HC
Published on

ಕರ್ನಾಟಕ ಜನಸಂದಣಿ ನಿಯಂತ್ರಣ (ಕಾರ್ಯಕ್ರಮ ಮತ್ತು ಗುಂಪುಗೂಡುವ ಸ್ಥಳಗಳಲ್ಲಿ ಜನಸಂದಣಿಯ ನಿಯಂತ್ರಣ) ಮಸೂದೆಯು ಕಾಯಿದೆ ರೂಪ ಪಡೆಯವವರೆಗೆ ಜನಸಂದಣಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಪ್ರಮಾಣೀಕೃತ ಕಾರ್ಯವಿಧಾನ (ಎಸ್‌ಒಪಿ) ಜಾರಿಗೊಳಿಸಲು ರಾಜ್ಯ ಸರ್ಕಾರಕ್ಕೆ ಸೋಮವಾರ ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದ್ದು, ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಲೇವಾರಿ ಮಾಡಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಮುಂಭಾಗ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ವಿಭಾಗೀಯ ಪೀಠ ನಡೆಸಿತು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ಸಾಕಷ್ಟು ಸಮಯ ತೆಗೆದುಕೊಂಡು ಎಸ್‌ಒಪಿ ಸಿದ್ದಪಡಿಸಿದ್ದೇವೆ” ಎಂದು ಜನವರಿ 13ರಂದು ರೂಪಿಸಿರುವ ಎಸ್‌ಒಪಿಯನ್ನು ಪೀಠಕ್ಕೆ ಸಲ್ಲಿಸಿದರು.

ಅಮಿಕಸ್‌ ಕ್ಯೂರಿ ಎಸ್‌ ಸುಶೀಲಾ ಅವರು “ಏನು ನಡೆಯಿತು ಎಂಬ ವಿಚಾರಕ್ಕೆ ನಾವು ಹೋಗುತ್ತಿಲ್ಲ. ನ್ಯಾಯಾಲಯ ಕೆಲವು ನಿರ್ದೇಶನಗಳನ್ನು ನೀಡಬೇಕು. ಈ ಅರ್ಜಿ ದಾಖಲಿಸಿಕೊಳ್ಳುವಾಗ ಒಂಭತ್ತು ಪ್ರಶ್ನೆಗಳನ್ನು ಎತ್ತಲಾಗಿತ್ತು. ಈ ಅರ್ಜಿಯ ಕುರಿತಾದ ಮಿತಿಯ ಅರಿವು ನನಗಿದೆ. ಕರ್ನಾಟಕ ಜನಸಂದಣಿ ನಿಯಂತ್ರಣ (ಕಾರ್ಯಕ್ರಮ ಮತ್ತು ಗುಂಪುಗೂಡುವ ಸ್ಥಳಗಳಲ್ಲಿ ಜನಸಂದಣಿಯ ನಿಯಂತ್ರಣ) ಮಸೂದೆಯು ಕಾಯಿದೆಯಾಗಿ ಜಾರಿಯಾಗುವವರೆಗೆ ಎಸ್‌ಒಪಿ ಜಾರಿಗೊಳಿಸಬೇಕು” ಎಂದರು.

ಆಗ ಪೀಠವು “ಈಗ ಎಸ್‌ಒಪಿಯಾಗಿದೆ. ಕಾನೂನು ಸದನ ಸಮಿತಿಯ ಮುಂದಿದೆ. ಇನ್ನೇನು ಬಾಕಿ ಇದೆ. ಕಾನೂನು ಜಾರಿಯಾದ ಮೇಲೆ ಅದು ಅಸ್ತಿತ್ವಕ್ಕೆ ಬರಲಿದೆ. ಅಲ್ಲಿಯವರೆಗೆ ಎಸ್‌ಒಪಿ ಪಾಲಿಸಬೇಕು. ಕಾಯಿದೆ ಜಾರಿಯಾದ ಮೇಲೆ ಅಹವಾಲುಗಳಿದ್ದರೆ ಈ ಅರ್ಜಿಯನ್ನು ಪುನರ್‌ ತೆರೆಯಬಹುದು” ಎಂದಿತು.

ವಕೀಲ ಜಿ ಆರ್‌ ಮೋಹನ್‌ ಅವರು “ಮುಂದಿನ ತಿಂಗಳು ಐಪಿಎಲ್‌ ನಡೆಸುವುದಕ್ಕೆ ಸಂಬಂಧಿಸಿದಂತೆ ಸಮಿತಿಯು ವರದಿ ಸಲ್ಲಿಸಿದೆ. ಇದನ್ನು ಆಧರಿಸಿ ಸಂಪುಟದಲ್ಲಿ ನಿರ್ಧರಿಸಲಾಗಿದ್ದು, ಗೃಹ ಇಲಾಖೆ ಕ್ರಮಕೈಗೊಳ್ಳಲಿದೆ ಎಂದು ಹೇಳಲಾಗಿದೆ. ಈ ವರದಿಯನ್ನು ನ್ಯಾಯಾಲಯದ ಮುಂದೆ ಇಡಲು ಆದೇಶಿಸಬೇಕು” ಎಂದು ಕೋರಿದರು.

Also Read
ಜನಸಂದಣಿ ನಿಯಂತ್ರಣ ಮಸೂದೆಯಲ್ಲಿ ಎಸ್‌ಒಪಿ ಅಂಶ ಸೇರ್ಪಡೆಗೆ ಸಲಹೆ: ಸರ್ಕಾರದ ನಿಲುವು ಕೇಳಿದ ಹೈಕೋರ್ಟ್‌

ಎಲ್ಲರ ವಾದ ಆಲಿಸಿದ ಪೀಠವು “ಅಡ್ವೊಕೇಟ್‌ ಜನರಲ್‌ ಅವರು ಜನವರಿ 13ರಂದು ಜನಸಂದಣಿ ಮತ್ತು ಜನಸಮೂಹ ನಿಯಂತ್ರಣ ವ್ಯವಸ್ಥೆಗೆ ಸಂಬಂಧಿಸಿದ ಎಸ್‌ಒಪಿ ಸಲ್ಲಿಸಿದ್ದಾರೆ. ಅಮಿಕಸ್‌ ಕ್ಯೂರಿಯು ಎಸ್‌ಒಪಿಯಲ್ಲಿನ ಗಂಭೀರ ಕೊರತೆಗಳತ್ತ ಬೆರಳು ಮಾಡಿದ್ದು, ಅದನ್ನು ಪರಿಗಣಿಸಲಾಗಿದೆ. ಮಸೂದೆಯೂ ಸದನ ಸಮಿತಿಯ ಪರಿಗಣನೆಗೆ ಸಲ್ಲಿಕೆಯಾಗಿದೆ. ಅಮಿಕಸ್‌ ಕ್ಯೂರಿ ಸಲಹೆಯನ್ನು ಸದನ ಸಮಿತಿಗೆ ತಿಳಿಸಲಾಗುವುದು. ಈ ಸಂಬಂಧ ಸರ್ಕಾರವು ಮೆಮೊ ಸಲ್ಲಿಸಿದೆ. ಇದನ್ನು ಪರಿಗಣಿಸಿ, ಮಸೂದೆ ಜಾರಿಯಾಗುವವರೆಗೆ ಎಸ್‌ಒಪಿ ಜಾರಿಗೊಳಿಸಬೇಕು” ಎಂದು ನಿರ್ದೇಶಿಸಿ, ಅರ್ಜಿ ಇತ್ಯರ್ಥಪಡಿಸಿತು.

Kannada Bar & Bench
kannada.barandbench.com