ʼಹರ್ ಘರ್ ತಿರಂಗಾʼ ಅಭಿಯಾನ: ನ್ಯಾಯಾಲಯ, ನ್ಯಾಯಾಂಗ ಅಧಿಕಾರಿಗಳು ತಮ್ಮ ಮನೆಯಲ್ಲಿ ಧ್ವಜ ಹಾರಿಸಲು ಹೈಕೋರ್ಟ್‌ ಸುತ್ತೋಲೆ

ರಾಜ್ಯದ ಎಲ್ಲಾ ಜಿಲ್ಲಾ ನ್ಯಾಯಾಲಯಗಳಲ್ಲಿ ಹಾಗೂ ನ್ಯಾಯಾಂಗ ಅಧಿಕಾರಿಗಳು ತಮ್ಮ ತಮ್ಮ ಮನೆಯಲ್ಲಿ ಆಗಸ್ಟ್‌ 13ರಿಂದ 15ರ ನಡುವೆ ರಾಷ್ಟ್ರ ಧ್ವಜ ಹಾಜರಿಸಬೇಕು ಎಂದು ಸುತ್ತೋಲೆಯಲ್ಲಿ ನಿರ್ದೇಶಿಸಲಾಗಿದೆ.
ʼಹರ್ ಘರ್ ತಿರಂಗಾʼ ಅಭಿಯಾನ: ನ್ಯಾಯಾಲಯ, ನ್ಯಾಯಾಂಗ ಅಧಿಕಾರಿಗಳು ತಮ್ಮ ಮನೆಯಲ್ಲಿ ಧ್ವಜ ಹಾರಿಸಲು ಹೈಕೋರ್ಟ್‌ ಸುತ್ತೋಲೆ
Published on

ʼಹರ್ ಘರ್ ತಿರಂಗಾʼ ಅಭಿಯಾನದ ಭಾಗವಾಗಿ ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ ಮತ್ತು ನ್ಯಾಯಾಂಗ ಅಧಿಕಾರಿಗಳು ಆಗಸ್ಟ್ 13ರಿಂದ 15ರ ನಡುವೆ ತಮ್ಮ ತಮ್ಮ ಮನೆಗಳಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಸುತ್ತೋಲೆ ಹೊರಡಿಸಿದೆ. ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಅವರ ಆದೇಶಾನುಸಾರ ರಿಜಿಸ್ಟ್ರಾರ್ ಜನರಲ್ ಟಿ ಜಿ ಶಿವಶಂಕರೇ ಗೌಡ ಸುತ್ತೋಲೆ ಹೊರಡಿಸಿದ್ದಾರೆ.

ಕೇಂದ್ರ ಕಾನೂನು ಸಚಿವರು ಸ್ವಾತಂತ್ರ್ಯ ಅಮೃತ ಮಹೋತ್ಸವದ ಭಾಗವಾಗಿ ಮನೆ ಮನೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಅಭಿಯಾನದ ಮಾಹಿತಿ ನೀಡಿದ್ದಾರೆ. ಭಾರತದ ತ್ರಿವರ್ಣ ಧ್ವಜವು ರಾಷ್ಟ್ರೀಯ ಹೆಮ್ಮೆಯ ಸಂಕೇತವಾಗಿದೆ. ಧ್ವಜಕ್ಕೆ ಗೌರವ ಸೂಚಿಸುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಅನುಷ್ಠಾನ ಸಮಿತಿಯು ಪ್ರತಿ ಭಾರತೀಯ ಪ್ರಜೆ ತನ್ನ ಮನೆಯಲ್ಲಿ ತ್ರಿವರ್ಣ ಧ್ವಜ ಹಾರಿಸುವುದಕ್ಕೆ ಪ್ರೋತ್ಸಾಹ ನೀಡಲು ಅಮೃತ ಮಹೋತ್ಸವದ ಅಡಿ ‘ಹರ್ ಘರ್ ತಿರಂಗಾ’ ಕಾರ್ಯಕ್ರಮಕ್ಕೆ ಅನುಮೋದನೆ ನೀಡಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಜನರಲ್ಲಿ ರಾಷ್ಟ್ರಭಕ್ತಿ ಹುಟ್ಟುಹಾಕುವ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಅವಿರತವಾಗಿ ಕೊಡುಗೆ ನೀಡಿದವರರನ್ನು ಸ್ಮರಿಸಿಕೊಳ್ಳುವ ಆಲೋಚನೆ ಈ ಅಭಿಯಾನದ ಹಿಂದಿದೆ. ಹೀಗಾಗಿ, ಆಗಸ್ಟ್ 13ರಿಂದ 15ರ ನಡುವೆ ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ರಾಷ್ಟ್ರ ಧ್ವಜ ಹಾರಿಸಲು ಉತ್ತೇಜಿಸಲಾಗಿದೆ. ಈ ಅಭಿಯಾನದಲ್ಲಿ ನ್ಯಾಯಾಂಗವು ಸಕ್ರಿಯವಾಗಿ ಪಾಲ್ಗೊಂಡರೆ ಜನಮಾನಸದ ಮೇಲೆ ಖಂಡಿತವಾಗಿಯೂ ಪ್ರಭಾವ ಬೀರುತ್ತದೆ ಹಾಗೂ ಅಭಿಯಾನವು ದೊಡ್ಡ ಮಟ್ಟದ ಯಶಸ್ವಿಯಾಗಲು ಸಾಧ್ಯವಾಗುತ್ತದೆ. ಆದ್ದರಿಂದ ಹೈಕೋರ್ಟ್ ಹಾಗೂ ಎಲ್ಲಾ ವಿಚಾರಣಾ ನ್ಯಾಯಾಲಯಗಳಲ್ಲಿ, ನ್ಯಾಯಾಂಗ ಅಧಿಕಾರಿಗಳು ಮತ್ತು ಸಿಬ್ಬಂದಿ ಮನೆಯಲ್ಲಿ ಧ್ವಜ ಹಾರಿಸುವ ಮೂಲಕ ಅಭಿಯಾನಕ್ಕೆ ಬೆಂಬಲ ನೀಡುವಂತೆ ಕೇಂದ್ರ ಕಾನೂನು ಸಚಿವರು ಕೋರಿದ್ದಾರೆ ಎಂದು ವಿವರಿಸಲಾಗಿದೆ.

ಹೀಗಾಗಿ, ರಾಜ್ಯದ ಎಲ್ಲಾ ಜಿಲ್ಲಾ ನ್ಯಾಯಾಲಯಗಳಲ್ಲಿ ಹಾಗೂ ನ್ಯಾಯಾಂಗ ಅಧಿಕಾರಿಗಳು ತಮ್ಮ ತಮ್ಮ ಮನೆಗಳಲ್ಲಿ ಆಗಸ್ಟ್‌ 13ರಿಂದ 15ರ ನಡುವೆ ರಾಷ್ಟ್ರ ಧ್ವಜ ಹಾರಿಸಬೇಕು ಎಂದು ಸುತ್ತೋಲೆಯಲ್ಲಿ ನಿರ್ದೇಶಿಸಲಾಗಿದೆ.

Kannada Bar & Bench
kannada.barandbench.com