ಪ್ರಾಧ್ಯಾಪಕ, ಪ್ರಾಂಶುಪಾಲರಿಗೆ 15 ತಿಂಗಳಿಂದ ವೇತನ ಬಿಡುಗಡೆ ಮಾಡದ ಮಹಾರಾಣಿ ಕ್ಲಸ್ಟರ್ ವಿವಿ ಕುಲಪತಿ ವಿರುದ್ಧ ಕಿಡಿ

ಎಚ್‌ಆರ್‌ಎಂಎಸ್‌ ಮಾದರಿ ಬಿಲ್‌ ಸಲ್ಲಿಸುವಲ್ಲಿ ತೊಂದರೆಯಾಗಿರುವ ಮತ್ತು ಕೆಲ ಪರಿಶೀಲನೆ ನಡೆಯಬೇಕಿರುವ ಕಾರಣದಿಂದ ವೇತನ ಬಿಡುಗಡೆ ಮಾಡಲಾಗುತ್ತಿಲ್ಲ ಎಂಬುದಾಗಿ ವಿವಿ ಕುಲಪತಿ ಹೇಳುತ್ತಿದ್ದಾರೆ. ಆದರೆ, ಈ ವಾದ ಒಪ್ಪಲಾಗದು ಎಂದ ನ್ಯಾಯಾಲಯ.
High Court of Karnataka
High Court of Karnataka

ರಾಜ್ಯ ಸರ್ಕಾರದ ಆದೇಶದ ಹೊರತಾಗಿಯೂ ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯ ಸಹಾಯಕ ಪ್ರಾಧ್ಯಾಪಕ ಡಾ.ಜಿ ಕೃಷ್ಣ ರೆಡ್ಡಿ ಮತ್ತು ಪ್ರಾಂಶುಪಾಲರಾಗಿದ್ದ ಡಾ.ಎಚ್‌ ಪ್ರಕಾಶ್‌ ಅವರಿಗೆ ಕಳೆದ 15 ತಿಂಗಳಿಂದ ವೇತನ ಬಿಡುಗಡೆ ಮಾಡದಿರುವುದಕ್ಕೆ ವಿಶ್ವವಿದ್ಯಾಲಯದ ಕುಲಪತಿ ವಿರುದ್ಧ ಈಚೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್‌, ಕೂಡಲೇ ವೇತನ ಬಿಡುಗಡೆ ಮಾಡದಿದ್ದರೆ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.

ಸೇವೆಯಿಂದ ನಿವೃತ್ತರಾಗುವ ಹೆಸರುಗಳನ್ನು ಸೂಚಿಸಿ 2022ರ ಜನವರಿ 14ರಂದು ಸರ್ಕಾರ ಬಿಡುಗಡೆ ಮಾಡಿದ ಪಟ್ಟಿ ಮತ್ತು ವೇತನ ತಡೆ ಹಿಡಿದಿರುವ ಕ್ರಮ ಆಕ್ಷೇಪಿಸಿ ಡಾ.ಜಿ ಕೃಷ್ಣ ರೆಡ್ಡಿ ಮತ್ತು ಡಾ.ಎಚ್‌ ಪ್ರಕಾಶ್‌ ಅವರು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎನ್‌ ಎಸ್‌ ಸಂಜಯ್‌ ಗೌಡ ಅವರ ನೇತೃತ್ವದ ಏಕಸದಸ್ಯ‌ ಪೀಠವು ವಿಚಾರಣೆ ನಡೆಸಿದೆ.

ಪ್ರಕರಣದಲ್ಲಿ ಅರ್ಜಿದಾರರಿಗೆ ವೇತನ ಪಾವತಿ ಮಾಡಲು 2023ರ ಮಾರ್ಚ್‌ 2 ಮತ್ತು ಜುಲೈ 27ರಂದು ರಾಜ್ಯ ಸರ್ಕಾರ ಆದೇಶಿಸಿದೆ. ಅರ್ಜಿದಾರರನ್ನು ಮಹಾರಾಣಿ ಕಸ್ಟರ್‌ ವಿಶ್ವವಿದ್ಯಾಲಯದ ಉದ್ಯೋಗಿಗಳಾಗಿ ವಿಲೀನ ಮಾಡಿ 2022ರ ಜೂನ್‌ 30ರಂದು ಸರ್ಕಾರ ಆದೇಶಿಸಿದೆ. ಹೀಗಿದ್ದರೂ ಅರ್ಜಿದಾರರ ವೇತನವನ್ನು ಬಿಡುಗಡೆ ಮಾಡಿಲ್ಲ. ಇನ್ನೂ ಎಚ್‌ಆರ್‌ಎಂಎಸ್‌ ಮಾದರಿಯಲ್ಲಿ ಬಿಲ್‌ಗಳನ್ನು ಸಲ್ಲಿಸುವಲ್ಲಿ ಕೆಲ ತೊಂದರೆಯಾಗಿರುವ ಮತ್ತು ಕೆಲವೊಂದು ಪರಿಶೀಲನೆ ನಡೆಯಬೇಕಿರುವ ಕಾರಣದಿಂದ ವೇತನ ಬಿಡುಗಡೆ ಮಾಡಲಾಗುತ್ತಿಲ್ಲ ಎಂಬುದಾಗಿ ವಿಶ್ವವಿದ್ಯಾಲಯ ಕುಲಪತಿ ಹೇಳುತ್ತಿದ್ದಾರೆ. ಆದರೆ, ವಾದವನ್ನು ಒಪ್ಪಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಅಲ್ಲದೆ, ಎಚ್‌ಆರ್‌ಎಂಎಸ್‌ ಮಾದರಿಯಲ್ಲಿ ಬಿಲ್‌ ಸಲ್ಲಿಸಲು ಸಾಧ್ಯವಿದೆ. ಈ ವಿಚಾರದಲ್ಲಿ ಕುಲಪತಿ ಮತ್ತು ರಿಜಿಸ್ಟ್ರಾರ್‌ ಅವರು ಯಾವುದೇ ಕ್ರಮ ಜರುಗಿಸಿಲ್ಲ ಎಂಬುದಾಗಿ 2023ರ ಅಕ್ಟೋಬರ್‌ 11ರಂದು ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ತಿಳಿಸಿದ್ದಾರೆ. ಎಚ್‌ಆರ್‌ಎಂಎಸ್‌ ಮಾದರಿಯಲ್ಲಿ ಬಿಲ್‌ ಅನ್ನು ಸಲ್ಲಿಸಲು ಅಂತಿಮ ಕ್ರಮ ಜರುಗಿಸಲು ಕುಲಪತಿ ನಿರಾಕರಿಸುತ್ತಿರುವುದು ಖಂಡನೀಯ. ಉದ್ದೇಶಪೂರ್ವಕವಾಗಿ ವೇತನ ತಡೆಹಿಡಿಯುವ ಕ್ರಮ ಎಂಬುದಾಗಿ ಇದು ತೋರುತ್ತಿದೆ. ಮೇಲಾಗಿ ಅರ್ಜಿದಾರರಿಗೆ ಕುಲಪತಿ ವೇತನ ಪಾವತಿಸುತ್ತಿಲ್ಲ. ಸರ್ಕಾರ ಹಣ ಬಿಡುಗಡೆ ಮಾಡಿದ ಪರಿಣಾಮ ವೇತನ ಪಾವತಿ ಮಾಡಲಾಗುತ್ತಿದೆ ಎಂದು ಪೀಠ ಖಾರವಾಗಿ ನುಡಿದಿದೆ.

ಅಂತಿಮವಾಗಿ, ಅರ್ಜಿದಾರರ ವೇತನ ಬಿಡುಗಡೆಗೆ ಸಂಬಂಧಿಸಿದಂತೆ ಬಿಲ್‌ಗಳನ್ನು ಪರಿಷ್ಕೃತ ಎಚ್‌ಆರ್‌ಎಂಎಸ್‌ ಮಾದರಿಯಲ್ಲಿ ವಿಶ್ವವಿದ್ಯಾಲಯ ಮತ್ತು ಮಹಾರಾಣಿ ಮಹಿಳೆಯರ ವಿಜ್ಞಾನ ಕಾಲೇಜು ಪ್ರಾಂಶುಪಾಲರು ಸಲ್ಲಿಸಬೇಕು. ವೇತನ ಬಿಡುಗಡೆಗೆ ಕ್ರಮ ಜರುಗಿಸಬೇಕು. ತಪ್ಪಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ ಪೀಠ ವಿಚಾರಣೆಯನ್ನು ಅಕ್ಟೋಬರ್‌ 27ಕ್ಕೆ ಮುಂದೂಡಿದೆ.

ಪ್ರಕರಣ ಹಿನ್ನೆಲೆ: ಮಹಾರಾಣಿ ಕಾಲೇಜು ಅನ್ನು ಕ್ಲಸ್ಟರ್‌ ವಿಶ್ವ ವಿದ್ಯಾಲಯಯನ್ನಾಗಿ ಪರಿವರ್ತಿಸಿ 2019ರಲ್ಲಿ ಆದೇಶಿಸಿದ್ದ ಸರ್ಕಾರ, ಅಲ್ಲಿನ 64 ಸಿಬ್ಬಂದಿಯನ್ನು ವಿಶ್ವವಿದ್ಯಾಲಯದ ಸಿಬ್ಬಂದಿಯಾಗಿ ವಿಲೀನಗೊಳಿಸಿ 2022ರ ಜೂನ್‌ 30ರಂದು ಆದೇಶಿಸಿದೆ. ಇದಕ್ಕೂ ಮುನ್ನ 2022ರ ಜನವರಿ 14ರಂದು ಆ ವರ್ಷ ಸೇವೆಯಿಂದ ಬಿಡುಗಡೆಯಾಗುವ ಸಿಬ್ಬಂದಿಯ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿತ್ತು. ಆ ಪಟ್ಟಿಯಲ್ಲಿ ಅರ್ಜಿದಾರರ ಹೆಸರಿತ್ತು. ಆ ಪಟ್ಟಿಯನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದ ಅರ್ಜಿದಾರರು, ಕಾಲೇಜು ಸಿಬ್ಬಂದಿಯಾಗಿದ್ದರೆ 60 ವರ್ಷಕ್ಕೆ ಸೇವೆಯಿಂದ ನಿವೃತ್ತರಾಗುತ್ತಿದ್ದೆವು. ಆದರೆ, ಕ್ಲಸ್ಟರ್‌ ವಿಶ್ವವಿದ್ಯಾಲಯ ಸಿಬ್ಬಂದಿಯಾಗಿ ವಿಲೀನವಾದ ನಂತರ ನಿವೃತ್ತಿ ವಯಸ್ಸು 62 ಆಗಿದೆ ಎಂದಿದ್ದರು. ಇದೇ ಕಾರಣ ಮುಂದಿಟ್ಟುಕೊಂಡು 2022ರ ಜುಲೈನಿಂದ ತಮಗೆ ವೇತನ ಪಾವತಿಸದೆ ತಡೆಹಿಡಿಯಲಾಗಿದೆ ಎಂದು ಆಕ್ಷೇಪಿಸಿದ್ದರು.

Related Stories

No stories found.
Kannada Bar & Bench
kannada.barandbench.com