ಗೇಣಿಗೆ ನೀಡಲಾಗಿದ್ದ ಜಮೀನಿನ ಸ್ವಾಧೀನಕ್ಕಾಗಿ ಹಲವು ದಶಕಗಳಿಂದ ಕಾನೂನು ಹೋರಾಟ ನಡೆಸುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಒಬ್ಬರ ಹೋರಾಟವನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಹೈಕೋರ್ಟ್, ನಾಲ್ಕು ಎಕರೆ ಜಮೀನಿನ ಸ್ವಾಧೀನವನ್ನು ಎಂಟು ವಾರದಲ್ಲಿ ಅವರ ಸುಪರ್ದಿಗೆ ಕೊಡಿಸಲು ರಾಜ್ಯ ಸರ್ಕಾರಕ್ಕೆ ಈಚೆಗೆ ಕಟ್ಟುನಿಟ್ಟಿನ ಆದೇಶ ಮಾಡಿದೆ.
ವಿವಾದಿತ ಜಮೀನಿನ ಮಾಲೀಕತ್ವ ಕೋರಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ವೀರಕಂಬ ಗ್ರಾಮದ ನಫೀಜಾ ಸೇರಿ 23 ಮಂದಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ಏಕಸದಸ್ಯ ಪೀಠವು ತಿರಸ್ಕರಿಸಿದೆ.
“ಅರ್ಜಿದಾರರು ಕೂಡಲೇ ಜಮೀನಿನ ಸ್ವಾಧೀನವನ್ನು ಪುತ್ತೂರು ತಾಲ್ಲೂಕಿನ ದರ್ಬೆಯ ಗೋಪಾಲಕೃಷ್ಣ ಅವರಿಗೆ ಬಿಟ್ಟುಕೊಡಬೇಕು. ಈ ಆದೇಶವನ್ನು ಅರ್ಜಿದಾರರು ಪಾಲಿಸದಿದ್ದರೆ, ಅವರನ್ನು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಸಂಬಂಧಪಟ್ಟ ಪ್ರಾಧಿಕಾರ ಅಧಿಕಾರಿಗಳು ಜಮೀನಿನಿಂದ ಒಕ್ಕಲೆಬ್ಬಿಸಬೇಕು. ಗೋಪಾಲಕೃಷ್ಣ ಭಟ್ ಅವರಿಗೆ ಜಮೀನಿನ ಸ್ವಾಧೀನ ನೀಡಬೇಕು” ಎಂದು ಆದೇಶಿಸಿದೆ.
“ಕೈತಪ್ಪಿದ್ದ ಜಮೀನನ್ನು ಮರಳಿ ಪಡೆಯಲು ಹಲವು ದಶಕಗಳಿಂದ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಕಾನೂನು ಹೋರಾಟ ನಡೆಸುತ್ತಿದ್ದಾರೆ. ದೇಶದ ಗಡಿ ರಕ್ಷಿಸಲು ತಮ್ಮ ಪ್ರಾಣವನ್ನು ಪಣಕ್ಕಿಡುವ ಸೈನಿಕರನ್ನು ಅವರ ಬದುಕಿನ ಮುಸ್ಸಂಜೆಯಲ್ಲಿ ಹೀಗೆ ನಡೆಸಿಕೊಳ್ಳಲಾಗುತ್ತಿದೆ. ಹೀಗೆ ಮಾಡುವುದರಿಂದ ಸೇವಾ ನಿರತರಾದ ರಕ್ಷಣಾ ಸಿಬ್ಬಂದಿ ಹೇಗೆ ಯೋಚಿಸಬಹುದು ಎಂಬ ಚಿಂತನೆಯನ್ನು ಸಮಾಜದ ಯೋಚನೆಗೆ ಬಿಡಲಾಗಿದೆ. ನಿರ್ದಿಷ್ಟವಾಗಿ ಹೇಳುವುದು ಹೆಚ್ಚೇನೂ ಅಗತ್ಯವಿಲ್ಲ ಹಾಗೂ ಕಡಿಮೆ ಹೇಳುವುದು ಅಗತ್ಯವನ್ನು ಪೂರೈಸುವುದಿಲ್ಲ” ಎಂದು ಪೀಠ ಆದೇಶದಲ್ಲಿ ಹೇಳಿದೆ.
ಕರ್ನಾಟಕ ಭೂ ಸುಧಾರಣಾ ಕಾಯಿದೆ-1961ರ 15 (5)ರ ಅನುಸಾರ ಸೈನಿಕರು ನಿವೃತ್ತಿಯಾದ ಮೇಲೆ ತಮ್ಮ ಮಾಲೀಕತ್ವದ ಹಿಡುವಳಿ ಜಮೀನನ್ನು ಪುನಾ ಪಡೆಯಬಹುದು ಎಂದೂ ಪೀಠವು ಆದೇಶದಲ್ಲಿ ಹೇಳಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರರ ಪೂರ್ವಜರಾದ ಉಮರ್ ಬ್ಯಾರಿ ಎಂಬುವವರು ಗೋಪಾಲಕೃಷ್ಣ ಅವರ ತಂದೆಯ ಮಾಲೀಕತ್ವದ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ವೀರಕಂಬ ಗ್ರಾಮದಲ್ಲಿ ನಾಲ್ಕು ಎಕರೆ ಜಮೀನಿನಲ್ಲಿ 1940ರಿಂದ ಗೇಣಿ ಮಾಡುತ್ತಿದ್ದರು. ಗೋಪಾಲಕೃಷ್ಣ ಭಟ್ ಅವರು 1993ರಲ್ಲಿ ಸೇನೆಯ ಸೇವೆಯಿಂದ ನಿವೃತ್ತರಾಗಿದ್ದರು. 1994ರಲ್ಲಿ ಕರ್ನಾಟಕ ಭೂ ಸುಧಾರಣಾ ಕಾಯಿದೆಯ ಸೆಕ್ಷನ್ 15(4) ಅಡಿಯಲ್ಲಿ ಜಮೀನಿನ ಮರು ಸ್ವಾಧೀನಕ್ಕೆ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಅರ್ಜಿದಾರರಿಗೆ ನೋಟಿಸ್ ನೀಡಿದ್ದರೂ ಅವರು ಪೂರಕವಾಗಿ ಸ್ಪಂದಿಸಿರಲಿಲ್ಲ.
ನಂತರ ಭೂ ನ್ಯಾಯ ಮಂಡಳಿಯು ಜಮೀನಿನ ಹಕ್ಕುಪತ್ರವನ್ನು ಅರ್ಜಿದಾರರ ಹೆಸರಿಗೆ ನೋಂದಣಿ ಮಾಡಿಸಲು ಆದೇಶಿಸಿತ್ತು. ಆ ಆದೇಶವನ್ನು ವಜಾಗೊಳಿಸಿ 2000ನೇ ಇಸವಿಯಲ್ಲಿ ಹೈಕೋರ್ಟ್ ಆದೇಶಿಸಿತ್ತು. ಅಲ್ಲದೆ, ಗೋಪಾಲಕೃಷ್ಣ ಭಟ್ ಅವರ ಅರ್ಜಿಯ ಮೇಲೆ ವಿಚಾರಣೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಸ್ಥಳೀಯ ತಹಶೀಲ್ದಾರ್‌ಗೆ ನಿರ್ದೇಶಿಸಿತ್ತು. ನಂತರ ತಹಶೀಲ್ದಾರ್ ಅವರು ಗೋಪಾಕೃಷ್ಣ ಭಟ್ ಪರವಾಗಿ ಆದೇಶಿಸಿದ್ದರು.
ಈ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ಸಲ್ಲಿಸಿದ್ದ ಮೇಲ್ಮನವಿಯನ್ನು 2016ರಲ್ಲಿ ಉಪ ವಿಭಾಗಾಧಿಕಾರಿ ವಜಾಗೊಳಿಸಿ, ತಹಶೀಲ್ದಾರ್ ಆದೇಶವನ್ನು ಎತ್ತಿಹಿಡಿದಿದ್ದರು. ಈ ಆದೇಶ ರದ್ದು ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿದಾರರ ಪರವಾಗಿ ವಕೀಲ ಟಿ ಐ ಅಬ್ದುಲ್ಲಾ, ನಿವೃತ್ತ ಯೋಧ ಗೋಪಾಲಕೃಷ್ಣ ಭಟ್ ಅವರನ್ನು ವಕೀಲ ಶ್ರೀಧರ್ ಪ್ರಭು, ಸರ್ಕಾರದ ಪರವಾಗಿ ವಕೀಲ ಸೇಶು ವಾದಿಸಿದ್ದರು.