ಸಿಎಂ, ಡಿಸಿಎಂ ಕುರಿತು ಕೆಟ್ಟ ಭಾಷೆ ಬಳಕೆಗೆ ಹೈಕೋರ್ಟ್‌ ಅತೃಪ್ತಿ: ವಿಜಯೇಂದ್ರ ವಿರುದ್ಧದ ಪ್ರಕರಣಕ್ಕೆ ತಡೆ

'ಇಂದಿರಾ ಜವಾಬ್‌ ದೋ' ಎಂಬ ಪುಸ್ತಕಕ್ಕೆ ಮುನ್ನುಡಿ ಬರೆಯಲು ಮಾಜಿ ಪ್ರಧಾನಿ ವಾಜಪೇಯಿಗೆ ಕೋರಲಾಗಿತ್ತು. ಅದಕ್ಕೆ ಅವರು, ಇಂದಿರಾ ಅಲ್ಲ, 'ಇಂದಿರಾ ಜೀ ಜವಾಬ್‌ ದೋ' ಎಂಬುದಾಗಿ ಬದಲಿಸಿ ಎಂದಿದ್ದರು ಎಂಬುದಾಗಿ ನೆನೆದ ನ್ಯಾ. ಕೃಷ್ಣ ದೀಕ್ಷಿತ್ .
ಸಿಎಂ, ಡಿಸಿಎಂ ಕುರಿತು ಕೆಟ್ಟ ಭಾಷೆ ಬಳಕೆಗೆ ಹೈಕೋರ್ಟ್‌ ಅತೃಪ್ತಿ: ವಿಜಯೇಂದ್ರ ವಿರುದ್ಧದ ಪ್ರಕರಣಕ್ಕೆ ತಡೆ

“ಚುನಾವಣೆ ಸಂದರ್ಭದಲ್ಲಿ ಮನುಷ್ಯನ ನಾಲಿಗೆ ಮತ್ತು ಮೆದುಳು ನಡುವಿನ ಸೇತುವೆ ಕುಸಿಯಬಾರದು. ದೇಶದ ಪ್ರಧಾನಿ, ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಸಚಿವರ ವಿರುದ್ಧ ಕೆಟ್ಟ ಭಾಷೆ ಬಳಸಬಾರದು” ಎಂದು ಕರ್ನಾಟಕ ಹೈಕೋರ್ಟ್‌ ಮೌಖಿಕವಾಗಿ ಶುಕ್ರವಾರ ಹೇಳಿತು.

ಪ್ರಕರಣವೊಂದರ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ರದ್ದು ಕೋರಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಮತ್ತು ಸಾಮಾಜಿಕ ಜಾಲತಾಣದ ಉಸ್ತುವಾರಿ ಪ್ರಶಾಂತ್‌ ಮಾಕನೂರು ಸಲ್ಲಿಸಿದ್ದ ಅರ್ಜಿ ವಿಚಾರಣೆನ್ನು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ಏಕಸದಸ್ಯ ಪೀಠ ನಡೆಸಿತು.

ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಮತ್ತು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್‌ ಹಂಚಿಕೊಂಡ ಪ್ರಕರಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಮತ್ತು ಪ್ರಶಾಂತ್‌ ಮಾಕನೂರು ಅವರ ನಡೆಗೆ ನ್ಯಾಯಾಲಯ ಅತೃಪ್ತಿ ವ್ಯಕ್ತಪಡಿಸಿತು.

ಅರ್ಜಿದಾರರ ವಿರುದ್ಧ ಬೆಂಗಳೂರಿನ ಮಲ್ಲೇಶ್ವರಂ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎರಡು ಪ್ರತ್ಯೇಕ ಎಫ್‌ಐಆರ್‌ಗಳಿಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಜೊತೆಗೆ ಪ್ರತಿವಾದಿಯಾಗಿರುವ ಮಲ್ಲೇಶ್ವರ ಠಾಣಾ ಪೊಲೀಸರಿಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆ ಮುಂದೂಡಿದೆ.

ಇದಕ್ಕೂ ಮುನ್ನ, ಪ್ರಕರಣದಲ್ಲಿ ಬಿಜೆಪಿ ರಾಜ್ಯಘಟಕದ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ರಾಜ್ಯದ ಸಿಎಂ ಮತ್ತು ಡಿಸಿಎಂ ಹಾಗೂ ಸಂಸದ ರಾಹುಲ್‌ ಗಾಂಧಿ ವಿರುದ್ಧ ಬಳಸಿರುವ ಭಾಷೆಯ ಕುರಿತು ಅರ್ಜಿದಾರರ ವಿರುದ್ಧ ತೀವ್ರ ಬೇಸರ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಸಚಿವರ ವಿರುದ್ಧ ಕೆಟ್ಟ ಭಾಷೆ ಬಳಸಬಾರದು. ಗೌರವದ ಹಾಗೂ ಸುಂದರ ಭಾಷೆ ಬಳಸಬೇಕು. ಮಾತಿನಲ್ಲಿ ಪ್ರೀತಿ, ಜವಾಬ್ದಾರಿ, ಸೌಜನ್ಯ ಹಾಗೂ ಸಂಯಮ ಇರಬೇಕು. ಚುನಾವಣೆ ಸಂದರ್ಭದಲ್ಲಿ ಏನೇನೋ ಮಾತನಾಡಿ ಜನರನ್ನು ಉದ್ವೇಗಕ್ಕೆ ಗುರಿಪಡಿಸಬಾರದು. ಎಚ್ಚರಿಕೆಯಿಂದ ಮಾತನಾಡಬೇಕು. ನಾಲಿಗೆ ಮತ್ತು ಮೆದುಳಿನ ನಡುವಿನ ಸೇತುವೆ ಕುಸಿಯಬಾರದು ಎಂದು ಸಲಹೆ ನೀಡಿದರು.

ರಾಮಾಯಣ; ವಾಜಪೇಯಿ ಸ್ಮರಣೆ

 ‘ಇಂದಿರಾ ಜವಾಬ್‌ ದೋ‘ ಎಂಬ ಪುಸ್ತಕವನ್ನು ಬರೆಯಲಾಗಿತ್ತು. ಅದಕ್ಕೆ ಮುನ್ನಡಿ ಬರೆಯಲು ಮಾಜಿ ಪ್ರಧಾನಿ ವಾಜಪೇಯಿ ಅವರಿಗೆ ಕೋರಲಾಗಿತ್ತು. ಅದಕ್ಕೆ ಒಪ್ಪಿದ್ದ ಅವರು, 'ಇಂದಿರಾ' ಅಲ್ಲ, 'ಇಂದಿರಾ ಜೀ ಜವಾಬ್‌ದೋ' ಎಂಬುದಾಗಿ ಶೀರ್ಷಿಕೆ ಬದಲಿಸಬೇಕು ಎಂದು ಷರತ್ತು ವಿಧಿಸಿದ್ದರು. ಸುಗ್ರೀವ ಹಾಗೂ ಆತನ ಸೈನ್ಯವು ಮರೆಯಲ್ಲಿ ನಿಂತು, ಸೀತೆಯನ್ನು ಹುಡುಕುತ್ತಾ ಬಂದ ರಾಮ-ಲಕ್ಷ್ಮಣ ಅವರನ್ನು ಮಾತನಾಡಿಸಲು ಹನುಮಂತನನ್ನು ಕಳುಹಿಸಿದ ಪ್ರಸಂಗ ರಾಮಾಯಣದಲ್ಲಿ ಬರುತ್ತದೆ. ಮೊದಲಿಗೆ ಹನುಮಂತನನ್ನು ನೋಡಿದ್ದ ಲಕ್ಷ್ಮಣ, ಆತ ರಾಕ್ಷಸನೇ ಇರಬೇಕು ಎಂದು ಭಾವಿಸಿದ್ದ. ಹುನುಮಂತನ ಸೌಜನ್ಯಯುತ ಮಾತು ಕೇಳಿದ ನಂತರ ಆತ ರಾಕ್ಷಸನಾಗಿರಲು ಸಾಧ್ಯವೇ ಇಲ್ಲ ನಿರ್ಧರಿಸಿದ್ದ. ಹೀಗಾಗಿ, ಮಾತನಾಡುವಾಗ ಗೌರವದ ಭಾಷೆ ಬಳಸಬೇಕು ಎಂದು ನ್ಯಾಯಮೂರ್ತಿಗಳು ತಿಳಿಸಿದರು.

ಅಲ್ಲದೇ, ವಿರೋಧ ಪಕ್ಷದವರು ಎಂದರೆ ಶತ್ರುಗಳಲ್ಲ. ಈಗ ಅವರ ಪಕ್ಷ ಅಧಿಕಾರದಲ್ಲಿ ಇರಬಹುದು. ಮುಂದಿನ ಬಾರಿ ಮತ್ತೊಂದು ಪಕ್ಷದವರು ಅಧಿಕಾರಕ್ಕೆ ಬರಬಹುದು. ಆದರೆ, ಸಾಂವಿಧಾನಿಕ ಹುದ್ದೆಯಲ್ಲಿರುವ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು. ವಿಶೇಷವಾಗಿ ಟ್ವೀಟ್‌ಗಳು ಸ್ವೀಟ್‌ ಆಗಿರಬೇಕು ಹೊರತು ಅಸಿಡಿಟಿಯಿಂದ ಕೂಡಿರಬಾರದು. ಕೆಟ್ಟ ಭಾಷೆ ಬಳಸಿದರೆ ನಾಗರಿಕತೆಯ ಮೌಲ್ಯಗಳು ಏನಾಗಬೇಕು? ಶತ್ರುಗಳನ್ನೂ ಗೌರವದಿಂದ ಕಾಣುವ ದೇಶ ನಮ್ಮದು ಎನ್ನುವುದನ್ನು ಯಾರೂ ಮರೆಯಬಾರದು ಎಂದು ನ್ಯಾಯಮೂರ್ತಿ ಬುದ್ಧಿಮಾತು ಹೇಳಿದರು.

ಎಲ್ಲರನ್ನೂ ಜೈಲಿನಲ್ಲಿ ಕೂರಿಸುತ್ತೀರಾ?

ಚುನಾವಣೆ ವೇಳೆ ಕೆಲವೊಂದು ಅಹಿತಕರ ಘಟನೆ ನಡೆದಿರುವುದು ನಿಜ. ಅವುಗಳನ್ನು ಸರ್ಕಾರ ಸಹ ಖಂಡಿಸುತ್ತದೆ. ಆದರೆ, ಸಾರ್ವಜನಿಕವಾಗಿ ಸಿಎಂ ಹಾಗೂ ಡಿಸಿಎಂ ಅವರನ್ನು ನಿಂದಿಸುವುದು ಸರಿಯಲ್ಲ. ಹಾಗಾಗಿ, ವಿಚಾರಣೆಗೆ ಹಾಜರಾಗಲು ಅರ್ಜಿದಾರರಿಗೆ ಸೂಚಿಸುವುದಿಲ್ಲ. ಆದರೆ, ತನಿಖೆ ಮುಂದುವರಿಯಲು ಅನುಮತಿ ನೀಡಬೇಕು ಎಂದು ಸರ್ಕಾರದ ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಕೋರಿದರು.

ಅದಕ್ಕೆ ಒಪ್ಪದ ಪೀಠವು ಚುನಾವಣೆ ಈಗಾಗಲೇ ಮುಗಿದಿದೆ. ಎಲ್ಲರ ಮೇಲೆ ತನಿಖೆ ನಡೆಸಬೇಕು ಎಂದಾದರೆ ಹೇಗೆ? ಎಲ್ಲರನ್ನೂ ಜೈಲಿನಲ್ಲಿ ಕೂರಿಸೋದು ಹಾಗೂ ಎಲ್ಲರನ್ನೂ ಕಸ್ಟಡಿಗೆ ಕೇಳುವುದು ಸರಿಯಾದ ದಾರಿಯಲ್ಲ. ಹೀಗೆ ಮಾಡುತ್ತಾ ಹೋದರೆ ನಾಳೆ ಹೊರಗಡೆ ಇರುವವರಿಗಿಂತ ಜೈಲು ಹಾಗೂ ಕಸ್ಟಡಿಯಲ್ಲಿ ಇರುವವರ ಸಂಖ್ಯೆಯೇ ಹೆಚ್ಚಿರುತ್ತದೆ. ಅವರನ್ನು ಪೋಷಿಸಲು ಖರ್ಚು ಯಾರು ಕೊಡುತ್ತಾರೆ? ಹೀನ ಅಪರಾಧ ಕೃತ್ಯಗಳನ್ನು ಎಸಗಿದ್ದವರನ್ನು ಕಸ್ಟಡಿಗೆ ಕೇಳುವುದು ಸಮಂಜಸ ಎಂದು ಪೀಠ ಕಟುವಾಗಿಯೇ ಹೇಳಿತು.

ವಿಜಯೇಂದ್ರ ಪರವಾಗಿ ಹಿರಿಯ ವಕೀಲ ಅರುಣ್‌ ಶ್ಯಾಮ್‌ ವಾದಿಸಿದರು.

Kannada Bar & Bench
kannada.barandbench.com