

ಬೇಲೆಕೇರಿ ಅಕ್ರಮ ಅದಿರು ಸಾಗಣೆ ಸಂಬಂಧಿತ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರಿಗೆ ಬೆಂಗಳೂರಿನ ವೈದ್ಯಕೀಯ ಆಸ್ಪತ್ರೆ ನಡೆಸಿರುವ ಆರೋಗ್ಯ ತಪಾಸಣಾ ಮೌಲ್ಯಮಾಪನ ವರದಿಯ ಜೊತೆಗಿನ ಮೆಮೊ ಕುರಿತಂತೆ ನಿಲುವು ಕೈಗೊಳ್ಳಲು ಜಾರಿ ನಿರ್ದೇಶನಾಲಯಕ್ಕೆ ಗುರುವಾರ ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದೆ. ಅಲ್ಲದೇ, ದುರ್ವರ್ತನೆ ತೋರಿರುವ ಕಮಾಂಡ್ ಆಸ್ಪತ್ರೆಯ ನಡೆಗೆ ನ್ಯಾಯಾಲಯ ಅತೃಪ್ತಿ ದಾಖಲಿಸಿದೆ.
ಜಾಮೀನುರಹಿತ ವಾರೆಂಟ್ ಹೊರಡಿಸಿರುವುದರ ಜೊತೆಗೆ ಜಾರಿ ನಿರ್ದೇಶನಾಲಯದ ಪ್ರಕರಣದಲ್ಲಿ ಮಧ್ಯಂತರ ವೈದ್ಯಕೀಯ ಜಾಮೀನು ಮಂಜೂರು ಮಾಡಿರುವುದನ್ನು ವಿಶೇಷ ನ್ಯಾಯಾಲಯ ರದ್ದುಪಡಿಸಿರುವುದನ್ನು ಪ್ರಶ್ನಿಸಿ ಸತೀಶ್ ಸೈಲ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ಸುನೀಲ್ ದತ್ ಯಾದವ್ ಅವರ ಏಕಸದಸ್ಯ ಪೀಠ ನಡೆಸಿತು.
ಬೆಂಗಳೂರು ವೈದ್ಯಕೀಯ ಆಸ್ಪತ್ರೆಯಲ್ಲಿ ಸೈಲ್ ಅವರ ಆರೋಗ್ಯ ಮೌಲ್ಯಮಾಪನೆ ನಡೆಸಿರುವುದರ ವರದಿಯ ಜೊತೆಗೆ ಮೆಮೊ ಸಲ್ಲಿಸಲಾಗಿದೆ. 13.11.2025ರಂದು ದೊಮ್ಮಲೂರಿನ ವಾಯುಸೇನೆಯ ಕಮಾಂಡ್ ಆಸ್ಪತ್ರೆಯಲ್ಲಿ ಮೌಲ್ಯಮಾಪನಕ್ಕೆ ಒಳಗಾಗುವಂತೆ ಸೈಲ್‌ಗೆ ಸೂಚಿಸಲಾಗಿತ್ತು. ಸೈಲ್ ಪರ ವಕೀಲ ಸಂದೇಶ್ ಚೌಟ ಅವರು ವೈದ್ಯಕೀಯ ವರದಿ, ಮೆಮೊ ಜೊತೆ ಕಮಾಂಡ್ ಆಸ್ಪತ್ರೆಯ ಇ ಮೇಲ್ ಪ್ರತಿ ಸಲ್ಲಿಸಿದ್ದು, ಕಮಾಂಡ್ ಆಸ್ಪತ್ರೆಯು ಸೈಲ್ ಆರೋಗ್ಯ ಮೌಲ್ಯಮಾಪನೆ ನಡೆಸಲು ನಿರಾಕರಿಸಿದೆ. ಸೂಕ್ತ ಸಿವಿಲ್ ಆಸ್ಪತ್ರೆ ಅಥವಾ ಬೆಂಗಳೂರಿನ ವೈದ್ಯಕೀಯ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಗಾಗಲು ಸೂಚಿಸಿದೆ. ಅರ್ಜಿದಾರರ ಮೆಮೊಗೆ ಸಂಬಂಧಿಸಿದಂತೆ ನಿಲುವು ಕೈಗೊಳ್ಳಲು ಜಾರಿ ನಿರ್ದೇಶನಾಲಯವು ಕಾಲಾವಕಾಶ ಕೋರಿದೆ. ಹೀಗಾಗಿ, ಸೈಲ್‌ಗೆ ಮಂಜೂರು ಮಾಡಿರುವ ಮಧ್ಯಂತರ ವೈದ್ಯಕೀಯ ಜಾಮೀನು ವಿಸ್ತರಿಸಲಾಗಿದ್ದು, ವಿಚಾರಣೆಯನ್ನು ನವೆಂಬರ್ 28ಕ್ಕೆ ಮುಂದೂಡಲಾಗಿದೆ” ಎಂದು ನ್ಯಾಯಾಲಯ ಆದೇಶಿಸಿದೆ.
ಇದಕ್ಕೂ ಮುನ್ನ, ಅರ್ಜಿದಾರರ ಪರ ಹಿರಿಯ ವಕೀಲ ಸಂದೇಶ ಚೌಟ ಅವರು “ಕಮಾಂಡ್ ಆಸ್ಪತ್ರೆಯು ಸೈಲ್ ಅವರನ್ನು ಬೆಂಗಳೂರು ವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ದು ಆರೋಗ್ಯ ತಪಾಸಣೆ ಮಾಡಲು ಸೂಚಿಸಿದೆ. ಬೆಂಗಳೂರು ವೈದ್ಯಕೀಯ ಆಸ್ಪತ್ರೆಯಲ್ಲಿ ಜಠರ-ಕರಳು ವಿಭಾಗ ಇದ್ದು, ಅಲ್ಲಿ ತಪಾಸಣೆ ನಡೆಸಿಕೊಳ್ಳಿ ಎಂದು ಕಮಾಂಡ್ ಆಸ್ಪತ್ರೆ ಹೇಳಿದೆ. ಅಂತೆಯೇ ಬೆಂಗಳೂರು ವೈದ್ಯಕೀಯ ಆಸ್ಪತ್ರೆಯ ವರದಿಯಲ್ಲಿ ಸೈಲ್‌ಗೆ ಯಕೃತ್ ಬದಲಾವಣೆ ಬೇಕು ಎಂದು ಹೇಳಲಾಗಿದೆ” ಎಂದರು.
ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಅರವಿಂದ್ ಕಾಮತ್ ಅವರು “ಬೆಂಗಳೂರು ವೈದ್ಯಕೀಯ ಆಸ್ಪತ್ರೆಗೆ ಹೋಗುವಂತೆ ಸೈಲ್‌ಗೆ ಕಮಾಂಡ್ ಆಸ್ಪತ್ರೆ ಸೂಚಿಸಿಲ್ಲ. ಅವರು ಮನವಿ ಮಾಡಿದ್ದಾರೆ. ಈಗಾಗಲೇ ಸೈಲ್ ಇಎಸ್‌ಐಗೆ ಹೋಗಿದ್ದಾರೆ. ಮತ್ತೊಮ್ಮೆ ಅಲ್ಲಿಗೆ ಅವರನ್ನು ಕಳುಹಿಸುವುದು ಸೂಕ್ತ” ಎಂದರು.
ಇದಕ್ಕೆ ಚೌಟ ಅವರು “ಈಗಾಗಲೇ ಎರಡು ಬಾರಿ ಸೈಲ್ ಅವರನ್ನು ಇಎಸ್‌ಐ ಆಸ್ಪತ್ರೆಯಲ್ಲಿ ಜಾರಿ ನಿರ್ದೇಶನಾಲಯ ತಪಾಸಣೆಗೆ ಒಳಪಡಿಸಿದೆ. ಅಲ್ಲದೇ, ಇಎಸ್‌ಐ ಆಸ್ಪತ್ರೆಯಲ್ಲಿ ಜಠರ-ಕರುಳಿನ ವಿಭಾಗ ಇಲ್ಲ ಎನ್ನಲಾಗಿದೆ” ಎಂದರು.
ಅದಕ್ಕೆ ಪೀಠವು “ಜಾರಿ ನಿರ್ದೇಶನಾಲಯ ಇನ್ನೊಂದು ಅಭಿಪ್ರಾಯ ಪಡೆಯುವುದಾದರೆ ಪಡೆಯಲಿ. ಆನಂತರ ಏನು ಆಗುತ್ತೆ ಅದು ಮಾಡೋಣ” ಎಂದಿತು.
ಸೈಲ್ ಆರೋಗ್ಯ ತಪಾಸಣೆ ನಡೆಸಲು ನಿರಾಕರಿಸಿ, ನ್ಯಾಯಾಲಯಕ್ಕೆ ಅಗೌರವ ಸೂಚಿಸುವ ರೀತಿಯಲ್ಲಿ ಇಮೇಲ್ ಬರೆದಿರುವ ಕಮಾಂಡ್ ಆಸ್ಪತ್ರೆಯ ನಡೆಗೆ ಹೈಕೋರ್ಟ್ ತೀವ್ರ ಅತೃಪ್ತಿ ದಾಖಲಿಸಿತು.
“ಕಮಾಂಡ್ ಆಸ್ಪತ್ರೆ ಕಳುಹಿಸಿರುವ ಇಮೇಲ್ ಏನಿದು? ನ್ಯಾಯಾಲಯ ಮನವಿ ಮಾಡಿದಾಗ, ಇದು ಉತ್ತರಿಸುವ ರೀತಿಯೇ? ಕಮಾಂಡ್ ಆಸ್ಪತ್ರೆಯು ಅಖಿಲ ಭಾರತ ಸಂಸ್ಥೆಯಾಗಿರಬಹುದು. ಆದರೆ, ಈ ರೀತಿ ನ್ಯಾಯಾಲಯವನ್ನು ಅಗೌರವಿಸಲಾಗದು. ಸೌಜನ್ಯವೇ ಇಲ್ಲ. ನ್ಯಾಯಾಲಯ ಮನವಿ ಮಾಡಿದಾಗ ಅದು ನನಗೆ ಷರತ್ತಲ್ಲ (ಮ್ಯಾಂಡೇಟ್) ಎಂದು ಹೇಗೆ ಹೇಳಲಾಗುತ್ತದೆ? ಇದು ಉತ್ತರಿಸುವ ರೀತಿಯಲ್ಲ. ಪ್ರತಿಕ್ರಿಯೆ ನೀಡಲು ಬೇರೆ ದಾರಿಯಿದೆ. ಬೇರೆಯವರಿಗೆ ನಾವು ರೆಫರ್ ಮಾಡಲಾಗುತ್ತಿರಲಿಲ್ಲ ಎಂದಲ್ಲ. ಇದರಲ್ಲಿ ಯಾರನ್ನೂ ಎಲ್ಲಿಗೆ ಕಳುಹಿಸಬೇಕು ಎಂಬುದರಲ್ಲಿ ವೈಯಕ್ತಿಕ ಆಸಕ್ತಿ ಏನಿಲ್ಲ” ಎಂದು ಕಿಡಿಕಾರಿತು.
ಆಗ ಕಾಮತ್ ಅವರು “ಕಮಾಂಡ್ ಆಸ್ಪತ್ರೆಯಲ್ಲಿ ಜಠರ-ಕರುಳಿನ ವಿಭಾಗ ಇರಲಿಲ್ಲ. ಅದು ಬೇರೆ ವಿಚಾರ. ಇಮೇಲ್ ಬರೆಯುವುದಕ್ಕೂ ಮುನ್ನ ಕಮಾಂಡ್ ಆಸ್ಪತ್ರೆ ನಮ್ಮನ್ನು ಸಂಪರ್ಕಿಸಬೇಕಿತ್ತು. ನ್ಯಾಯಾಲಯದೊಡನೆ ಈ ರೀತಿ ನಡೆದುಕೊಳ್ಳಬಾರದು. ಅಧಿಕಾರಿಗಳಿಗೆ ಸಲಹೆ ನೀಡಲಾಗುವುದು” ಎಂದರು.