ಬೆಂಗಳೂರು ಕರಗ ಮಹೋತ್ಸವ: ನಿರ್ವಹಣಾ ಸಮಿತಿ ಅವಧಿ ಏಪ್ರಿಲ್ 15ರವರೆಗೆ ವಿಸ್ತರಿಸಿದ ಹೈಕೋರ್ಟ್
ಬೆಂಗಳೂರಿನ ಸುಪ್ರಸಿದ್ಧ ಕರಗ ಮಹೋತ್ಸವವು ಏಪ್ರಿಲ್ 4ರಿಂದ 14ರವರೆಗೆ ನಡೆಯಲಿದ್ದು, ಅಲ್ಲಿಯವರೆಗೆ ಹಾಲಿ ಧರ್ಮರಾಯ ಸ್ವಾಮಿ ದೇವಸ್ಥಾನದ ನಿರ್ವಹಣಾ ಸಮಿತಿ ಮುಂದುವರಿಯಲು ಕರ್ನಾಟಕ ಹೈಕೋರ್ಟ್ ಬುಧವಾರ ಅನುಮತಿಸಿದೆ.
ಧರ್ಮರಾಯ ಸ್ವಾಮಿ ದೇವಸ್ಥಾನ ನಿರ್ವಹಣಾ ಸಮಿತಿಯ ಕೆ ಸತೀಶ್ ಅವರು ಹೊಸ ಸಮಿತಿ ರಚಿಸುವವರೆಗೆ ಹಾಲಿ ಸಮಿತಿ ಮುಂದುವರಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಜಯಕುಮಾರ್ ಪಾಟೀಲ್ ಅವರು “ಹಾಲಿ ಸಮಿತಿಯ ಅವಧಿಯು ಮಾರ್ಚ್ 21ಕ್ಕೆ ಮುಗಿಯಲಿದೆ. ಆದರೆ, ಕರಗ ಸಿದ್ಧತೆ ಎರಡು ತಿಂಗಳ ಹಿಂದೆ ಆರಂಭವಾಗಿದೆ. ಹೀಗಾಗಿ, ಕರಗ ಮಹೋತ್ಸವ ಮುಗಿಯುವವರೆಗೆ ಹಾಲಿ ಸಮಿತಿಯನ್ನೇ ಮುಂದುವರಿಸಬೇಕು” ಎಂದರು. ಇದಕ್ಕೆ ರಾಜ್ಯ ಸರ್ಕಾರದ ವಕೀಲರು ಯಾವುದೇ ಆಕ್ಷೇಪ ವ್ಯಕ್ತಪಡಿಸಲಿಲ್ಲ.
ಇದನ್ನು ಒಪ್ಪಿದ ಪೀಠವು “ಹಾಲಿ ಸಮಿತಿಯು ಕರಗ ಮಹೋತ್ಸವ ಮುಗಿಯವವರೆಗೆ ಏಪ್ರಿಲ್ 15ರವರೆಗೆ ಅಸ್ತಿತ್ವದಲ್ಲಿರಲಿದೆ” ಎಂದು ಆದೇಶಿಸಿ, ವಿಚಾರಣೆಯನ್ನು ಏಪ್ರಿಲ್ 15ಕ್ಕೆ ಮುಂದೂಡಿತು.
ಕರಗ ಮಹೋತ್ಸವವು ಅತ್ಯಂತ ಐತಿಹಾಸಿಕ ಪ್ರಸಿದ್ಧ ಹಬ್ಬವಾಗಿದ್ದು, 300 ವರ್ಷಗಳಿಂದ ನಡೆಸಲಾಗುತ್ತಿದೆ. ಹಿಂದೂ-ಮುಸ್ಲಿಮ್ ಏಕತೆ ಮತ್ತು ಜಾನಪದ ನೃತ್ಯಕ್ಕೆ ಹೆಸರುವಾಸಿಯಾದ ಕರಗವು ಬೆಂಗಳೂರು ಸಂಸ್ಕೃತಿಯ ಹೆಮ್ಮೆಯ ಪ್ರತೀಕ. ತಿಗಳರಪೇಟೆಯ ಧರ್ಮರಾಯ ಸ್ವಾಮಿ ದೇವಸ್ಥಾನದಿಂದ ಹಬ್ಬದ ಆಚರಣೆ ಆರಂಭವಾಗುತ್ತದೆ. ಧರ್ಮರಾಯಸ್ವಾಮಿ ದೇವಸ್ಥಾನವು ದೇಶದಲ್ಲಿ ಪಾಂಡವರಿಗೆ ಮೀಸಲಾದ ಏಕೈಕ ದೇವಸ್ಥಾನವಾಗಿದೆ. ಕರಗ ಮಹೋತ್ಸವು ಪರಿಸರ ಮತ್ತು ಜಲಮೂಲಗಳ ಆಚರಣೆಯಾಗಿದೆ.
ಹಿಂದೂ ಕ್ಯಾಲೆಂಡರ್ ಪ್ರಕಾರ ಕರ್ನಾಟಕದಲ್ಲಿ ಪ್ರತಿವರ್ಷ ಚೈತ್ರ ಮಾಸದಲ್ಲಿ (ಮಾಚ್/ಏಪ್ರಿಲ್) ಕರಗ ಮಹೋತ್ಸವ ನಡೆಯುತ್ತದೆ. ಇದು ಬೆಂಗಳೂರು ಕರಗ ಮಹೋತ್ಸವವೆಂದೇ ಖ್ಯಾತಿ ಪಡೆದಿದೆ. ಮಹಾ ಭಾರತದ ಆದರ್ಶ ಮಹಿಳೆ ಮತ್ತು ಶಕ್ತಿ ದೇವತೆಯಾದ ದೌಪ್ರದಿಗೆ ಗೌರವ ಸಲ್ಲಿಸುವ ಸಲುವಾಗಿ ಈ ಹಬ್ಬ ಆಚರಣೆ ಮಾಡಲಾಗುತ್ತದೆ.