
ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿರುವ ಅರ್ಜಿಯಲ್ಲಿ ನ್ಯಾಯಾಲಯವು ಸ್ವಯಂಪ್ರೇರಿತವಾಗಿ ಹಲವು ಆದೇಶ ಮಾಡಿದೆ ಎಂಬ ಕಾವೇರಿದ ವಾಗ್ವಾದದ ನಡುವೆ ವಿಶೇಷ ನ್ಯಾಯಾಲಯಕ್ಕೆ ಲೋಕಾಯುಕ್ತ ಪೊಲೀಸರು ಅಂತಿಮ ವರದಿ ಸಲ್ಲಿಸುವ ಗಡುವನ್ನು ಜನವರಿ 28ರವರೆಗೆ ವಿಸ್ತರಿಸಿ ಕರ್ನಾಟಕ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ. ಹೀಗಾಗಿ, ಡಿಸೆಂಬರ್ 25ರೊಳಗೆ ತನಿಖಾ ವರದಿಯನ್ನು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಬೇಕಿದ್ದ ಲೋಕಾಯುಕ್ತ ಪೊಲೀಸರಿಗೆ ಮತ್ತೊಂದು ತಿಂಗಳು ಕಾಲಾವಕಾಶ ದೊರೆತಂತಾಗಿದೆ.
ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ತನಿಖೆಗೆ ಕೋರಿ ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
“ವಿಶೇಷ ನ್ಯಾಯಾಲಯವು ಮುಡಾ ಪ್ರಕರಣದ ತನಿಖಾ ವರದಿಯನ್ನು ಡಿಸೆಂಬರ್ 25ರೊಳಗೆ ಸಲ್ಲಿಸುವಂತೆ ಆದೇಶಿಸಿದೆ. ಸಿಬಿಐ ತನಿಖೆಗೆ ಕೋರಿರುವ ಅರ್ಜಿಯು ಹೈಕೋರ್ಟ್‌ನಲ್ಲಿ ವಿಚಾರಣೆಗೆ ಒಳಪಟ್ಟಿದೆ. ಹೀಗಾಗಿ, ಅಡ್ಡಿತಪ್ಪಿಸುವ ಉದ್ದೇಶದಿಂದ ಲೋಕಾಯುಕ್ತ ಪೊಲೀಸರು ವಿಶೇಷ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸುವ ಗಡುವನ್ನು ಡಿಸೆಂಬರ್ 25ರ ಬದಲಿಗೆ ಜನವರಿ 28ಕ್ಕೆ ವಿಸ್ತರಿಸಲಾಗಿದೆ” ಎಂದು ಹೈಕೋರ್ಟ್ ಆದೇಶಿಸಿತು.
“ಎಲ್ಲಾ ಪ್ರತಿವಾದಿಗಳು ಸಿಬಿಐ ತನಿಖೆಗೆ ಕೋರಿರುವ ಪ್ರಮುಖ ಅರ್ಜಿ ಮತ್ತು ಜಾರಿ ನಿರ್ದೇಶನಾಲಯವನ್ನು ಪ್ರತಿವಾದಿಯನ್ನಾಗಿಸುವ ಮಧ್ಯಂತರ ಅರ್ಜಿಗೆ ಮುಂದಿನ ವಿಚಾರಣೆಯ ವೇಳೆಗೆ ಆಕ್ಷೇಪಣೆ ಸಲ್ಲಿಸಬೇಕು. ಮುಂದಿನ ವಿಚಾರಣೆಯಲ್ಲಿ ಆಕ್ಷೇಪಣೆ ಸಲ್ಲಿಸಲು ಮತ್ತೆ ಕಾಲಾವಾಶ ನೀಡುವುದಿಲ್ಲ” ಎಂದು ಸ್ಪಷ್ಟಪಡಿಸಿ, ವಿಚಾರಣೆಯನ್ನು, ನ್ಯಾಯಾಲಯ ಜನವರಿ 15ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ, ಸಿದ್ದರಾಮಯ್ಯ ಅವರ ಪತ್ನಿ ಬಿ ಎಂ ಪಾರ್ವತಿ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ಅವರು “ಪಾರ್ವತಿ ಅವರಿಗೆ ನವೆಂಬರ್ 11ರಂದು ನೋಟಿಸ್ ನೀಡಲಾಗಿದೆ. ಆನಂತರ ಲೋಕಾಯುಕ್ತ ತನಿಖಾ ವರದಿಯನ್ನು ಮುಂದಿನ ವಿಚಾರಣೆಗೆ ನ್ಯಾಯಾಲಯದ ಮುಂದೆ ಇಡಬೇಕು ಎಂದು ಆದೇಶಿಸಿತ್ತು. ನವೆಂಬರ್ 26ರಂದು ಪೀಠವು ನಿಗದಿತ ದಿನದಂದು ಅರ್ಜಿಯ ವಿಚಾರಣೆ ನಡೆಸಲಾಗುವುದು ಎಂದು ಹೇಳಿದೆ. ನಮಗೆ ನೋಟಿಸ್ ತಲುಪೇ ಇಲ್ಲ. ಅದಾಗ್ಯೂ, ಇಷ್ಟು ಆತುರದ ಆದೇಶ ಏಕೆ ಮಾಡಲಾಗಿದೆ? ನೋಟಿಸ್ ಜಾರಿ ಮಾಡಿ, ಅದು ನಮಗೆ ತಲುಪುವ ಮುನ್ನವೇ ನಮ್ಮ ಬೆನ್ನ ಹಿಂದೆ ಇಂಥ ಆದೇಶಗಳನ್ನು ಹೇಗೆ ಮಾಡಲಾಗುತ್ತದೆ?" ಎಂದು ಆಕ್ಷೇಪಿಸಿದರು.
ಮುಂದುವರೆದು, "ಡಿಸೆಂಬರ್ 10ರಂದು ಅರ್ಜಿಯು ವಿಚಾರಣೆಗೆ ಬಂದಾಗಲೂ ಸಿದ್ದರಾಮಯ್ಯ, ಪಾರ್ವತಿ ಮತ್ತು ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ನೋಟಿಸ್ ತಲುಪಿಲ್ಲದಿರುವುದರಿಂದ ವಿಚಾರಣೆ ನಡೆಸಲಾಗದು ಎಂಬ ಹಿರಿಯ ವಕೀಲರ ವಾದ ಆದೇಶದಲ್ಲಿ ದಾಖಲಾಗಿದೆ. ಅಂದು ನಮಗೆ ಹ್ಯಾಂಡ್ ಸಮನ್ಸ್ ತಲುಪಿಸುವಂತೆ ನ್ಯಾಯಾಲಯ ಆದೇಶಿಸಿದೆ. ಮೇಲ್ಮನವಿಗಳಲ್ಲಿ ನಾನು ಪಕ್ಷಕಾರಳಾಗಿಲ್ಲ. ಹೀಗಿರುವಾಗ ಇಂಥ ಆದೇಶವನ್ನು ಹೇಗೆ ಮಾಡಲಾಗುತ್ತದೆ? ನ್ಯಾಯಾಲಯವನ್ನು ದಾರಿತಪ್ಪಿಸಿ ಇಂಥ ಆದೇಶಗಳನ್ನು ಪಡೆಯಲಾಗಿದೆ. ನಮಗೆ ನೋಟಿಸ್ ಜಾರಿಯಾಗಿದೆ ನಿಜ. ಆದರೆ, ಅದೇ ದಿನ ಮುಂದಿನ ವಿಚಾರಣೆಗೆ (ಫರ್ದರ್ ಹಿಯರಿಂಗ್) ಪಟ್ಟಿ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ. ಇದು ಹೇಗೆ ಮುಂದಿನ ವಿಚಾರಣೆಯಾಗುತ್ತದೆ? ಈ ನ್ಯಾಯಾಲಯದಲ್ಲಿ ಏನಾಗುತ್ತಿದೆ? ನನಗೆ ನೋಟಿಸ್ ತಲುಪುದಕ್ಕೂ ಮುನ್ನ ಇಂಥ ಆದೇಶ ಹೇಗೆ ಮಾಡಲಾಗುತ್ತದೆ ಎಂಬುದನ್ನು ನಾನು ತಿಳಿಯಲು ಪ್ರಯತ್ನಿಸುತ್ತಿದ್ದೇನೆ” ಎಂದು ತೀವ್ರ ಆಕ್ಷೇಪ ದಾಖಲಿಸಿದರು.
ಮುಂದುವರಿದು, “ಮುಡಾ ಪ್ರಕರಣದಲ್ಲಿ ತನಿಖೆ ಮುಗಿದರೂ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬಾರದು ಎಂಬ ನಿರ್ಬಂಧ ಈ ನ್ಯಾಯಾಲಯಕ್ಕೆ ಇಲ್ಲ. ಲೋಕಾಯುಕ್ತ ತನಿಖೆಗೆ ಪ್ರತಿ ಹಂತದಲ್ಲೂ ಅಡ್ಡಿ ಮಾಡಲಾಗುತ್ತಿದೆ. ಮೂರನೇ ಬಾರಿ ಇಂಥ ಮಧ್ಯಪ್ರವೇಶ ಈ ನ್ಯಾಯಾಲಯದಿಂದ ಆಗುತ್ತಿದೆ. ಇದಕ್ಕೆ ನಮ್ಮ ತೀವ್ರ ಆಕ್ಷೇಪವಿದೆ. ಪ್ರಕರಣದಲ್ಲಿ ಸಿಬಿಐ ವಿಚಾರಣೆ ಅಗತ್ಯವಿದೆ ಎನಿಸಿದರೆ ಈ ಘನ ನ್ಯಾಯಾಲಯವು ಪ್ರಕರಣವನ್ನು ಸಿಬಿಐಗೆ ನೀಡಬಹುದಾಗಿದೆ. ಲೋಕಾಯುಕ್ತ ತನಿಖೆಯನ್ನು ಪ್ರಶ್ನಿಸಲಾಗಿಲ್ಲ. ನಮಗೆ ನೋಟಿಸ್ ನೀಡಲಾಗಿಲ್ಲ. ಈ ನ್ಯಾಯಾಲಯವು ಸ್ವಯಂಪ್ರೇರಿತವಾಗಿ ಆದೇಶ ಮಾಡುತ್ತಿದೆ. ಲೋಕಾಯುಕ್ತ ತನಿಖೆಗೆ ತಡೆ ನೀಡಬಾರದು. ಕಾನೂನು ತನ್ನ ಕೆಲಸ ಮಾಡಲಿ. ಆನಂತರ ಈ ನ್ಯಾಯಾಲಯ ಸಿಬಿಐಗೆ ನೀಡುವ ವಿಚಾರದ ಕುರಿತು ನಿರ್ಧರಿಸಬಹುದು” ಎಂದರು.
ಆಗ ಪೀಠವು “ಈ ಪ್ರಕರಣದಲ್ಲಿ ಆತುರದ ಆದೇಶವನ್ನು ಮಾಡಿಲ್ಲ. ಪಾರ್ವತಿ ಅವರ ಬೆನ್ನ ಹಿಂದೆ ಯಾವುದೇ ಆದೇಶ ಮಾಡಿಲ್ಲ. ಈಗ ನಿಮ್ಮ ವಾದ ಪರಿಗಣಿಸಿ, ಆದೇಶ ಮಾಡಲಾಗುವುದು. ಮೇಲ್ಮನವಿಯಲ್ಲಿ ಪಾರ್ವತಿ ಅವರು ಪಕ್ಷಕಾರರಲ್ಲದಿದ್ದರೆ ಹ್ಯಾಂಡ್ ಸಮನ್ಸ್ ನೀಡಿ ಎಂದು ಆದೇಶಿಸಲಾಗಿತ್ತು. ಈಗ ನಿಮಗೆ ನೋಟಿಸ್ ಸಿಕ್ಕಿದೆ. ಇಲ್ಲಿ ವಿಚಾರಣೆ ಹೊರತುಪಡಿಸಿ ಬೇರೇನೂ ನಡೆಯುತ್ತಿಲ್ಲ. ಕಾನೂನು ಬೆದರಿಕೆಯ ವಾದ ಸಹಾಯಕ್ಕೆ ಬರುವುದಿಲ್ಲ. ಮುಂದಿನ ವಿಚಾರಣೆ ಎಂಬುದಕ್ಕೆ ನಿಮ್ಮ ಆಕ್ಷೇಪವಿದ್ದರೆ ಅದನ್ನು ಭಾಗಶಃ ವಿಚಾರಣೆ ಪಟ್ಟಿಯಿಂದ ಬಿಡುಗಡೆ ಮಾಡಲಾಗುವುದು. ಅದು ಬೇಕಾದರೆ ಬೇರೆ ಪೀಠದ ಮುಂದೆ ವಿಚಾರಣೆಗೆ ಬರಲಿ. ಈ ಅರ್ಜಿಯನ್ನು ವಿಚಾರಣೆಯಿಂದ ಬಿಡುಗಡೆ ಮಾಡಬೇಕು ಎಂದು ನಿಮಗೆ ಅನಿಸಿದರೆ ಅದನ್ನು ಬಿಡುಗಡೆ ಮಾಡುತ್ತೇನೆ. ಇಲ್ಲಿ ಲೋಕಾಯುಕ್ತ ತನಿಖೆಗೆ ಅಡ್ಡಿ ಮಾಡಲಾಗುತ್ತಿಲ್ಲ. ಹೈಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಅಂತಿಮ ವರದಿಯನ್ನು ಲೋಕಾಯುಕ್ತರು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದರೆ ವಿಶೇಷ ನ್ಯಾಯಾಲಯ ಮುಂದುವರಿಯುವಂತಿಲ್ಲ. ಹೈಕೋರ್ಟ್‌ನಲ್ಲಿ ವಿಚಾರಣೆ ಇಟ್ಟುಕೊಂಡು ವಿಶೇಷ ನ್ಯಾಯಾಲಯದಲ್ಲಿನ ವಿಚಾರಣೆಯನ್ನು ಒತ್ತಡಕ್ಕೆ ಒಳಪಡಿಸುವುದಕ್ಕೆ ಅನುಮತಿಸುವುದಿಲ್ಲ” ಎಂದು ಸ್ಪಷ್ಟವಾಗಿ ಹೇಳಿತು.
ಈ ಮಧ್ಯೆ, ಅರ್ಜಿದಾರರ ಪರ ಹಿರಿಯ ವಕೀಲ ಕೆ ಜಿ ರಾಘವನ್ ಅವರು “ಪ್ರತಿವಾದಿಗಳ ಕೋರಿಕೆಯ ಹಿನ್ನೆಲೆಯಲ್ಲಿ ಪೀಠವು ವಿಚಾರಣೆ ಮುಂದೂಡುತ್ತಾ ಬಂದಿದೆ. ನ್ಯಾಯಾಲಯದಲ್ಲಿನ ಪ್ರಕ್ರಿಯೆಗೆ ಹಾನಿ ಮಾಡುವುದು ಮತ್ತು ವ್ಯಕ್ತಿಗತ ಸ್ವಾತಂತ್ರ್ಯ ಹರಣವಾಗಬಾರದು ಎಂದು ನ್ಯಾಯಾಲಯ ರಕ್ಷಣೆ ನೀಡಿದೆ. ನ್ಯಾಯಾಲಯವು ಸ್ವಯಂಪ್ರೇರಿತವಾಗಿ ಆದೇಶ ಮಾಡಿದೆ ಎಂಬ ವಾದವು ಅನಗತ್ಯ ಮತ್ತು ಸರಿಯಲ್ಲ” ಎಂದು ಆಕ್ಷೇಪಿಸಿದರು.
11ನೇ ಪ್ರತಿವಾದಿ ಸಿದ್ದರಾಮಯ್ಯ ಅವರ ಭಾವ-ಮೈದುನ ಬಿ ಎಂ ಮಲ್ಲಿಕಾರ್ಜುನ ಸ್ವಾಮಿ ಅವರ ಪರವಾಗಿ ಆಕ್ಷೇಪಣೆ ಸಲ್ಲಿಸಲಾಗುವುದು ಎಂದು ಹಿರಿಯ ವಕೀಲ ಆದಿತ್ಯ ಸೋಂಧಿ ತಿಳಿಸಿದರು. ವಕೀಲೆ ಬೆಳ್ಳಿ ಅವರು ಪಾರ್ವತಿ ಅವರನ್ನು ಪ್ರತಿನಿಧಿಸಲಿದ್ದಾರೆ.