ಬೇಲೆಕೇರಿ ಅದಿರು ಅಕ್ರಮ ಸಾಗಣೆ: ಸತೀಶ್‌ ಸೈಲ್‌ ಮಧ್ಯಂತರ ವೈದ್ಯಕೀಯ ಜಾಮೀನು ಗುರುವಾರದವರೆಗೆ ವಿಸ್ತರಿಸಿದ ಹೈಕೋರ್ಟ್‌

ಸೈಲ್‌ ಅವರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲು ವೃತ್ತಿಪರ ವೈದ್ಯರ ಹೆಸರನ್ನು ಸೂಚಿಸುವಂತೆ ಜಾರಿ ನಿರ್ದೇಶನಾಲಯಕ್ಕೆ ನ್ಯಾಯಾಲಯ ನಿರ್ದೇಶಿಸಿದೆ.
Congress MLA Satish Sail & Karnataka HC
Congress MLA Satish Sail & Karnataka HC
Published on

ಬೇಲೆಕೇರಿ ಬಂದರಿನಿಂದ ಅಕ್ರಮವಾಗಿ ಅದಿರು ಸಾಗಣೆ ಮತ್ತು ಮಾರಾಟ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ದಾಖಲಿಸಿರುವ ಪ್ರಕರಣದಲ್ಲಿ ಗುರುವಾರದವರೆಗೆ ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ ಅವರಿಗೆ ಮಧ್ಯಂತರ ವೈದ್ಯಕೀಯ ಜಾಮೀನನ್ನು ವಿಸ್ತರಿಸಿ ಕರ್ನಾಟಕ ಹೈಕೋರ್ಟ್‌ ಸೋಮವಾರ ಆದೇಶಿಸಿದೆ. ಅಲ್ಲದೇ, ಸೈಲ್‌ ಅವರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲು ವೃತ್ತಿಪರ ವೈದ್ಯರ ಹೆಸರನ್ನು ಜಾರಿ ನಿರ್ದೇಶನಾಲಯ ಸೂಚಿಸಬೇಕು ಎಂದು ನಿರ್ದೇಶಿಸಿದೆ.

ವಿಚಾರಣೆಗೆ ಸಹಕಾರ ನೀಡುತ್ತಿಲ್ಲ ಎಂಬ ಕಾರಣಕ್ಕೆ ಈಚೆಗೆ ಹೊರಡಿಸಿರುವ ಜಾಮೀನುರಹಿತ ಬಂಧನ ವಾರೆಂಟ್‌  ಮತ್ತು ಜಾರಿ ನಿರ್ದೇಶನಾಲಯ ದಾಖಲಿಸಿದ್ದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಧ್ಯಂತರ ವೈದ್ಯಕೀಯ ಜಾಮೀನು ಮಂಜೂರು ಮಾಡಿದ್ದನ್ನು ರದ್ದುಪಡಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಆದೇಶಿಸಿದ್ದನ್ನು ಪ್ರಶ್ನಿಸಿ ಸತೀಶ್‌ ಸೈಲ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌ ಸುನೀಲ್‌ ದತ್‌ ಯಾದವ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Justice S Sunil Dutt Yadav
Justice S Sunil Dutt Yadav

“ಸತೀಶ್‌ ಸೈಲ್‌ಗೆ ಮಂಜೂರು ಮಾಡಲಾಗಿರುವ ವೈದ್ಯಕೀಯ ಮಧ್ಯಂತರ ಜಾಮೀನನ್ನು ಗುರುವಾರದವರೆಗೆ ವಿಸ್ತರಿಸಲಾಗಿದೆ. ಈ ಮಧ್ಯೆ, ಸೈಲ್‌ ಅವರ ಆರೋಗ್ಯ ಪರಿಸ್ಥತಿಗೆ ಸಂಬಂಧಿಸಿದ ದಾಖಲೆಯನ್ನು ಪರಿಶೀಲಿಸಿ ಅದನ್ನು ಖಾತರಿಪಡಿಸಲು ಯಾವ ವೈದ್ಯರನ್ನು ನೇಮಿಸಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಸಲಹೆ ನೀಡಬೇಕು” ಎಂದು ಆದೇಶಿಸಿತು.

“ಸತೀಶ್‌ ಸೈಲ್‌ ಅವರು ಅನಾರೋಗ್ಯಪೀಡಿತರಾಗಿದ್ದರೆ ವೈದ್ಯಕೀಯ ದಾಖಲೆಯನ್ನು ಖಾತರಿಪಡಿಸಬೇಕು. ಈ ವಿಚಾರದ ಕುರಿತು ಯೋಚಿಸಿ, ತಿಳಿಸಿ” ಎಂದು ಎಎಸ್‌ಜಿ ಕಾಮತ್‌ಗೆ ಸೂಚಿಸಿದ ಪೀಠವು ವಿಚಾರಣೆಯನ್ನು ನವೆಂಬರ್‌ 13ಕ್ಕೆ ಮುಂದೂಡಿತು.

ಸೈಲ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಸಂದೇಶ್‌ ಚೌಟ ಅವರು “ಸೆಪ್ಟೆಂಬರ್‌ 11ರಂದು ಸೈಲ್‌ ಅವರಿಗೆ ಮಧ್ಯಂತರ ವೈದ್ಯಕೀಯ ಜಾಮೀನು ಮಂಜೂರು ಮಾಡಲಾಗಿತ್ತು. ಸೈಲ್‌ ಅವರು ಸ್ಥೂಲಕಾಯ, ನಿದ್ರಾಹೀನತೆಯಿಂದ ಬಳಲುತ್ತಿದ್ದು, ಅವರಿಗೆ ಯಕೃತ್‌ ಬದಲಾವಣೆ ಮಾಡಬೇಕು ಎಂದು ಇಎಸ್‌ಐ ಆಸ್ಪತ್ರೆ ವರದಿ ನೀಡಿರುವುದನ್ನು ಜಾರಿ ನಿರ್ದೇಶನಾಲಯದ ದಾಖಲೆಗಳೇ ಹೇಳುತ್ತವೆ. ತನ್ನ ಮಂದೆ ಮಂಡಿಸಿರುವ ಯಾವುದೇ ದಾಖಲೆ ಸುಳ್ಳು ಅಥವಾ ಸರಿಯಿಲ್ಲ ಎಂದು ವಿಚಾರಣಾಧೀನ ನ್ಯಾಯಾಲಯ ಹೇಳಿಲ್ಲ” ಎಂದರು.

“ಅಕ್ಟೋಬರ್‌ 4 ಮತ್ತು 5ರಂದು ಜಾರಿ ನಿರ್ದೇಶನಾಲಯವು ಸೈಲ್‌ ಹೇಳಿಕೆ ದಾಖಲಿಸಿಕೊಂಡಿದೆ. ಅಕ್ಟೋಬರ್‌ 7ರಂದು ಇ ಡಿ ದೂರನ್ನು ದಾಖಲಿಸಿದೆ. ಸೈಲ್‌ ಅವರ ಒಂದೇ ಒಂದು ವೈದ್ಯಕೀಯ ದಾಖಲೆ ಸುಳ್ಳು ಎಂದು ಹೇಳಲಾಗಿಲ್ಲ. ಆದರೆ, ನೀವು ಅನಾರೋಗ್ಯಪೀಡಿತ ವಿಭಾಗಕ್ಕೆ ಬರುವುದಿಲ್ಲ ಎಂದು ಹೇಳಲಾಗಿದ್ದು, ಎರಡು ಅಗತ್ಯತೆ ಇನ್ನೂ ನಿಮ್ಮ ಪ್ರಕರಣದಲ್ಲಿ ಬಾಕಿ ಇದೆ ಎಂದು ವಿಶೇಷ ನ್ಯಾಯಾಲಯ ಹೇಳಿದೆ” ಎಂದರು.

ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ ಅರವಿಂದ್‌ ಕಾಮತ್‌ “ಚೌಟ ಅವರು ಓದಿದು ಆದೇಶಗಳು ನನ್ನ ಬಳಿ ಇಲ್ಲ. ವಿಶೇಷ ನ್ಯಾಯಾಲಯವು ಸೈಲ್‌ ಅವರನ್ನು ಜಾರಿ ನಿರ್ದೇಶನಾಲಯದ ಕಸ್ಟಡಿಗೆ ನೀಡಿದ ಬಳಿಕ ಅವರು ಅನಾರೋಗ್ಯದ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಇಎಸ್‌ಐ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ವರದಿ ಆಧರಿಸಿ ಸೈಲ್‌ ಅವರನ್ನು ಮತ್ತೊಮ್ಮೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಆನಂತರ ವಿಶೇಷ ನ್ಯಾಯಾಲಯವು ಸೈಲ್‌ ಅವರಿಗೆ ಮಧ್ಯಂತರ ವೈದ್ಯಕೀಯ ಜಾಮೀನು ಮಂಜೂರು ಮಾಡಿತ್ತು” ಎಂದರು.

“ಸೈಲ್‌ ಅವರನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಬೇಕು ಎಂದು ಇಎಸ್‌ಐ ಆಸ್ಪತ್ರೆಯ ವರದಿಯಲ್ಲಿ ಹೇಳಲಾಗಿದೆ. ಆದರೆ, ಸೈಲ್‌ ಅವರು ಅಂಕೋಲಾ, ಶಿರಸಿ ಎಲ್ಲಾ ಕಡೆ ಓಡಾಡುತ್ತಿದ್ದು, ಸ್ಥಳೀಯ ಚುನಾವಣೆಯಲ್ಲಿ ಭಾಗವಹಿಸಿದ್ದು, ಸಾರ್ವಜನಿಕವಾಗಿದೆ” ಎಂದರು.

ಆಗ ಪೀಠವು “ಇದು ನಿಮ್ಮ ರಿಸ್ಕ್‌ಗೆ ಬಿಟ್ಟ ವಿಚಾರವಾಗಿದ್ದು, ನೀವು ರಿಸ್ಕ್‌ ತೆಗೆದುಕೊಳ್ಳಲು ಮುಂದಾದರೆ ನಿಮ್ಮ ಕೋರಿಕೆಯನ್ನು ಪರಿಗಣಿಸಲಾಗುವುದು” ಎಂದಿತು.

ಅದಕ್ಕೆ ಎಎಸ್‌ಜಿ ಕಾಮತ್‌ “ವೈದ್ಯಕೀಯ ವರದಿ ಮತ್ತು ಸೈಲ್‌ ಪರಿಸ್ಥಿತಿಯನ್ನು ಪರಿಶೀಲಿಸುವ ಕುರಿತು ನ್ಯಾಯಾಲಯ ಹೇಳಿರುವುದಕ್ಕೆ ನಮ್ಮ ಒಪ್ಪಿಗೆ ಇದೆ. ಸಹಜವಾಗಿ ಹೇಳಬೇಕೆಂದರೆ ನಾವು ಆರೋಗ್ಯದ ವಿಚಾರದಲ್ಲಿ ತಜ್ಞರಲ್ಲ” ಎಂದರು.

ಇದಕ್ಕೆ ಪೀಠವು “ಸೈಲ್‌ ಅವರ ಆರೋಗ್ಯ ಪರಿಸ್ಥಿತಿಯ ಕುರಿತು ತಿಳಿದು, ಆನಂತರ ನೋಡೋಣ” ಎಂದಿತು. ಇಲ್ಲಿ ಮಧ್ಯಪ್ರವೇಶಿಸಿದ ಚೌಟ ಅವರು “ವೈದ್ಯಕೀಯ ಮಂಡಳಿಯನ್ನು ರಚಿಸಿದರೆ ಆರೋಗ್ಯ ತಪಾಸಣೆಗೆ ಒಳಗಾಗಲು ಸೈಲ್‌ ಸಿದ್ಧರಾಗಿದ್ದಾರೆ” ಎಂದರು.

ಆಗ ಎಎಸ್‌ಜಿ ಅವರು “ಜಾಮೀನು ರದ್ದತಿ ವಿಚಾರ ಏಕೆ ಬಂದಿತು ಎಂಬುದನ್ನು ನ್ಯಾಯಾಲಯ ಪರಿಶೀಲಿಸಬೇಕು. ಸೈಲ್‌ ಆಸ್ಪತ್ರೆಯಲ್ಲಿರಬೇಕು ಎಂದು ವರದಿ ಹೇಳಿದ್ದರೂ ಅದನ್ನು ಪಾಲಿಸಲಾಗುತ್ತಿಲ್ಲ. ಇಎಸ್‌ಐ ಆಸ್ಪತ್ರೆಯ ವರದಿಯ ಅನುಪಾಲನೆಯನ್ನು ಸೈಲ್‌ ಮಾಡಬೇಕು. ಸೈಲ್‌ ಸಹಜವಾಗಿ ಓಡಾಟ ನಡೆಸುವಂತಿಲ್ಲ. ಒಂದು ಕಡೆ ಅನಾರೋಗ್ಯಪೀಡಿತ ಎಂದು ದಾಖಲೆ ತೋರಿಸುತ್ತಾರೆ. ಇನ್ನೊಂದು ಕಡೆ ಮುಕ್ತವಾಗಿ ಓಡಾಟ ನಡೆಸುತ್ತಿದ್ದಾರೆ. ಸಮೀಪದ ಒಳ್ಳೆಯ ಆಸ್ಪತ್ರೆಯಿಂದ ನೂರಾರು ಕಿ ಮೀ ದೂರ ಓಡಾಡುತ್ತಿದ್ದಾರೆ. ಈ ರಿಸ್ಕ್‌ ಅನ್ನು ಸೈಲ್‌ ತೆಗೆದುಕೊಳ್ಳುತ್ತಿದ್ದಾರೆ ಎಂದರೆ ನ್ಯಾಯಾಲಯದ ಮುಂದೆ ಸುಳ್ಳನ್ನು ಬಿಂಬಿಸುತ್ತಿದ್ದಾರೆ ಎಂದರ್ಥ” ಎಂದರು.

Also Read
ಬೇಲೆಕೇರಿ ಅದಿರು ಅಕ್ರಮ ಸಾಗಣೆ: ಶಾಸಕ ಸತೀಶ್‌ ಸೈಲ್‌ ವಿರುದ್ಧ ಜಾಮೀನುರಹಿತ ಬಂಧನ ವಾರೆಂಟ್‌ ಹೊರಡಿಸಿದ ನ್ಯಾಯಾಲಯ

ಇದಕ್ಕೆ ಪೀಠವು “ಎಲ್ಲಿ ಸೈಲ್‌ ಅವರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಬೇಕು ಎಂಬುದನ್ನು ತಿಳಿಸಿ. ಆರೋಗ್ಯ ಪರಿಸ್ಥಿತಿಯ ಸುರಕ್ಷಿತ ಪರಿಶೀಲನೆ ಬಗ್ಗೆ ತಿಳಿಸಿ” ಎಂದಿತು. ಅದಕ್ಕೆ ಕಾಮತ್‌ ಅವರು “ಒಂದೆರಡು ದಿನ ಕಾಲಾವಕಾಶ ನೀಡಿದರೆ ತಿಳಿಸಲಾಗುವುದು” ಎಂದರು. ಇದನ್ನು ಆಧರಿಸಿ, ಸೈಲ್‌ ಅವರಿಗೆ ರಕ್ಷಣೆ ಅಗತ್ಯವಾಗಿದೆ ಎಂದು ನ್ಯಾಯಾಲಯವು ಮಧ್ಯಂತರ ವೈದ್ಯಕೀಯ ಜಾಮೀನನ್ನು ವಿಸ್ತರಿಸಿ, ಜಾರಿ ನಿರ್ದೇಶನಾಲಯಕ್ಕೆ ನೋಟಿಸ್‌ ಜಾರಿ ಮಾಡಿ ವಿಚಾರಣೆ ಮುಂದೂಡಿತು.

ನವೆಂಬರ್‌ 7ರಂದು ಪ್ರಕರಣದಲ್ಲಿ ಸಾಕ್ಷಿ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ಎಲ್ಲಾ ಆರೋಪಿಗಳೂ ಹಾಜರಿರುವಾಗ ಮೊದಲ ಆರೋಪಿಯಾದ ಸೈಲ್‌ ಗೈರನ್ನು ಮನ್ನಿಸಲಾಗದು. ಹೀಗಾಗಿ, ಸತೀಶ್ ಸೈಲ್ ವಿರುದ್ಧ ಬಲವಂತದ ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದಿದ್ದ ವಿಶೇಷ ನ್ಯಾಯಾಲಯವು ಜಾಮೀನುರಹಿತ ವಾರೆಂಟ್‌ ಹೊರಡಿಸಿತ್ತು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಂಜೂರು ಮಾಡಿದ್ದ ಮಧಂತರ ವೈದ್ಯಕೀಯ ಜಾಮೀನನ್ನು ರದ್ದುಪಡಿಸಿತ್ತು. ಹೀಗಾಗಿ, ಸೈಲ್‌ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

Kannada Bar & Bench
kannada.barandbench.com