ಹಿಂದೂ ಉತ್ತರಾಧಿಕಾರ ಕಾಯಿದೆಯಲ್ಲಿ ಅಚಾತುರ್ಯ; ವಿಧವೆಯ ಹಕ್ಕು ಸೇರಿಸಿ ತಿದ್ದುಪಡಿ ತರಲು ಕೇಂದ್ರಕ್ಕೆ ಹೈಕೋರ್ಟ್‌ ಸಲಹೆ

ಹಿಂದೂ ಉತ್ತರಾಧಿಕಾರ ಕಾಯಿದೆಯಲ್ಲಿ ಅಚಾತುರ್ಯ; ವಿಧವೆಯ ಹಕ್ಕು ಸೇರಿಸಿ ತಿದ್ದುಪಡಿ ತರಲು ಕೇಂದ್ರಕ್ಕೆ ಹೈಕೋರ್ಟ್‌ ಸಲಹೆ

ತಿದ್ದುಪಡಿ ಮಾಡದ ಸೆಕ್ಷನ್‌ 6ರಲ್ಲಿ ಪುತ್ರ, ಪುತ್ರಿಯ ಜೊತೆಗೆ ವಿಧವಾ ಪತ್ನಿ, ತಾಯಿಗೆ ವಿಭಾಗ ಖಾತರಿಪಡಿಸಲಾಗಿತ್ತು. ಆದರೆ, ತಿದ್ದುಪಡಿಯಾಗಿರುವ ಸೆಕ್ಷನ್‌ 6ರಲ್ಲಿ ವಿಧವಾ ಪತ್ನಿ, ತಾಯಿ ಬಗ್ಗೆ ಉಲ್ಲೇಖವಿಲ್ಲ ಎಂದಿರುವ ಪೀಠ.
Published on

ಹಿಂದೂ ಉತ್ತರಾಧಿಕಾರ ಕಾಯಿದೆಗೆ 2005ರಲ್ಲಿ ತಂದಿರುವ ತಿದ್ದುಪಡಿಯಲ್ಲಿ ಸಾವನ್ನಪ್ಪಿದ ವ್ಯಕ್ತಿಯ ವಿಧವಾ ಪತ್ನಿ ಮತ್ತು ತಾಯಿಯ ಹಕ್ಕುಗಳಿಗೆ ಸಂಬಂಧಿಸಿದಂತೆ ಕೆಲವು ಗೊಂದಲಗಳಿದ್ದು, ವಿಧವೆ ಮತ್ತು ತಾಯಿಯ ಹಕ್ಕುಗಳನ್ನು ರಕ್ಷಿಸುವ ಸಂಬಂಧ ಕೇಂದ್ರ ಸರ್ಕಾರವು ಕೆಲವು ನಿಬಂಧನೆಗಳಿಗೆ ತಿದ್ದುಪಡಿ ಮಾಡಬೇಕಿದೆ ಎಂದು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ಈಚೆಗೆ ಹೇಳಿದ್ದು, ಅಚಾತುರ್ಯಗಳ ಬಗ್ಗೆ ಬೆರಳು ಮಾಡಿದೆ.

ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ವಿಚಾರಣಾಧೀನ ನ್ಯಾಯಾಲಯ ಮಾಡಿದ್ದ ಆದೇಶ ಪ್ರಶ್ನಿಸಿ ಎರಡನೇ ಪತ್ನಿ ಮತ್ತು ಆಕೆಯ ಮೂವರು ಮಕ್ಕಳು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಆರ್‌ ದೇವದಾಸ್‌ ಮತ್ತು ಬಿ ಮುರಳೀಧರ್ ಪೈ ಅವರ ವಿಭಾಗೀಯ ಪೀಠ ನಡೆಸಿತು.

Justices R Devadas & B Muralidhar Pai
Justices R Devadas & B Muralidhar Pai

“2005ರಲ್ಲಿ ಹಿಂದೂ ಉತ್ತರಾಧಿಕಾರ ಕಾಯಿದೆ ಸೆಕ್ಷನ್‌ 6ಕ್ಕೆ ತಂದಿರುವ ಜಂಟಿಯಾಗಿರುವ ಪಿತ್ರಾರ್ಜಿತ ಆಸ್ತಿಯ ವಿಭಜನೆಗೆ ಕುರಿತಾದ ವಿಚಾರದಲ್ಲಿ ವಿಧವೆ ಮತ್ತು ಆಕೆಯ ಅತ್ತೆಯ (ಪತಿಯ ತಾಯಿ) ಕುರಿತು ಕೆಲವು ಗೊಂದಲಗಳಿರುವುದನ್ನು ಈ ಸಂದರ್ಭದಲ್ಲಿ ಸಂಬಂಧಿತರ ಗಮನಕ್ಕೆ ತರುವುದು ನಮ್ಮ ಕರ್ತವ್ಯವಾಗಿದೆ. ಸೆಕ್ಷನ್‌ 6 ರಲ್ಲಿ ವಿಧವಾ ಪತ್ನಿ ಮತ್ತು ತಾಯಿಯ ಬಗ್ಗೆ ಉಲ್ಲೇಖವಿಲ್ಲ” ಎಂದು ನ್ಯಾಯಾಲಯ ಹೇಳಿದೆ.

“ತಿದ್ದುಪಡಿ ಮಾಡದ ಸೆಕ್ಷನ್‌ 6ರಲ್ಲಿ ನಿರ್ದಿಷ್ಟವಾಗಿ ಮೊದಲ ಪ್ರಾವಿಸೊದಲ್ಲಿ ಪುತ್ರ ಮತ್ತು ಪುತ್ರಿಯ ಜೊತೆಗೆ ವಿಧವಾ ಪತ್ನಿ ಮತ್ತು ತಾಯಿಗೆ ವಿಭಾಗವನ್ನು (ಭಾಗ ನೀಡುವುದು) ಖಾತರಿಪಡಿಸಲಾಗಿತ್ತು. ಆದರೆ, ತಿದ್ದುಪಡಿಯಾಗಿರುವ ಸೆಕ್ಷನ್‌ 6ರಲ್ಲಿ ವಿಧವಾ ಪತ್ನಿ ಮತ್ತು ತಾಯಿ ಬಗ್ಗೆ ಉಲ್ಲೇಖವಿಲ್ಲ” ಎಂದು ನ್ಯಾಯಾಲಯ ಹೇಳಿದೆ.

“ಶಾಸನ ರೂಪಿಸುವವರು ಅದರ ಬಗ್ಗೆ ಯೋಚಿಸಿರಲಿಕ್ಕಿಲ್ಲ ಅಥವಾ ವಿಧವಾ ಪತ್ನಿ ಅಥವಾ ತಾಯಿಯ ಹಕ್ಕನ್ನು ಕಸಿದುಕೊಳ್ಳುವ ಯೋಚನೆ ಹೊಂದಿದ್ದರು ಎನ್ನಲಾಗದು” ಎಂದು ನ್ಯಾಯಾಲಯ ಹೇಳಿದೆ.

“ವರ್ಗ-1ರಲ್ಲಿ ವಿಧವಾ ಪತ್ನಿ, ತಾಯಿ, ಪುತ್ರನ ವಿಧವಾ ಪತ್ನಿ ಇತ್ಯಾದಿಗೆ ಸಂಬಂಧಿಸಿದ ವಿಷಯಗಳನ್ನು ಅಚಾತುರ್ಯದಿಂದ ತಿದ್ದುಪಡಿ ಸೆಕ್ಷನ್‌ 6ರಲ್ಲಿ ಕೈಬಿಡಲಾಗಿದೆ. ಸಾಮಾನ್ಯವಾಗಿ ತಿದ್ದುಪಡಿಯಾಗಿರುವ ಸೆಕ್ಷನ್‌ 6 ಓದಿದರೆ ವರ್ಗ-1ರ ಉಲ್ಲೇಖವಿಲ್ಲ. ಷೆಡ್ಯೂಲ್‌ನ ವರ್ಗ-1ಕ್ಕೆ ಅದನ್ನು ಸೇರ್ಪಡೆ ಮಾಡಿ ತಿದ್ದುಪಡಿ ಮಾಡುವುದು ಗೊಂದಲ ನಿವಾರಿಸುವ ದೃಷ್ಟಿಯಿಂದ ಅಗತ್ಯವಾಗಿದೆ” ಎಂದು ನ್ಯಾಯಾಲಯ ವಿವರಿಸಿದ್ದು, ಆದೇಶದ ಪ್ರತಿಯನ್ನು ಕೇಂದ್ರದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಗೆ ಪರಿಗಣನೆಗಾಗಿ ಕಳುಹಿಸಿಕೊಡುವಂತೆ ರಿಜಿಸ್ಟ್ರಿಗೆ ನಿರ್ದೇಶಿಸಿದೆ.

ಪ್ರಕರಣದ ಹಿನ್ನೆಲೆ: 2008ರಲ್ಲಿ ಸಾವನ್ನಪ್ಪಿದ ವ್ಯಕ್ತಿಯೊಬ್ಬರ ಪಿತ್ರಾರ್ಜಿತ ಆಸ್ತಿಯಲ್ಲಿ ವಿಭಾಗದ ಮಾಲೀಕತ್ವಕ್ಕೆ ಸಂಬಂಧಿಸಿದ ವಿವಾದ ಪ್ರಕರಣ ಇದಾಗಿದ್ದು, ಸಾವನ್ನಪ್ಪಿದ ವ್ಯಕ್ತಿಯ ಎರಡನೇ ಪತ್ನಿ ಮತ್ತು ಆಕೆಯ ಮೂವರು ಮಕ್ಕಳು ಹಾಗೂ ಮೊದಲ ಪತ್ನಿ (ಸಂತಾನವಿಲ್ಲ) ಆಸ್ತಿ ವಿಭಾಗ ಮತ್ತು ಮಾಲೀಕತ್ವಕ್ಕೆ ಸಂಬಂಧಿಸಿದಂತೆ 2021ರ ವಿಚಾರಣಾಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿದ್ದರು. ಎರಡನೇ ಪತ್ನಿಯ ಮಕ್ಕಳು ತಮ್ಮ ತಂದೆಯ ಮೊದಲ ಪತ್ನಿಯ ಮದುವೆಯ ಸಿಂಧುತ್ವದ ಬಗ್ಗೆ ಅನುಮಾನ ವ್ಯಕ್ತಪಡಿಸಿ ಅದನ್ನು ಅಕ್ರಮವೆಂದಿದ್ದರು. ಅತ್ತ ಮೊದಲ ಪತ್ನಿಯ ಪರ ವಕೀಲರು ಪತಿಯ ಎರಡನೇ ವಿವಾಹವು ಕಾನೂನುಬಾಹಿರವಾಗಿದ್ದು ಅಕೆಯಿಂದ ಪಡೆದ ಮಕ್ಕಳು ಕಾನೂನುರೀತ್ಯಾ ಆಸ್ತಿ ಪಡೆಯುವ ಪ್ರಶ್ನೆ ಉದ್ಭವಿಸದು ಎಂದಿದ್ದರು.

ವಾದಗಳನ್ನು ಆಲಿಸಿದ್ದ ವಿಚಾರಣಾ ನ್ಯಾಯಾಲಯವು ಮೊದಲ ಪತ್ನಿಯು ಪತಿಯಿಂದ ಜೀವನಾಂಶವನ್ನು ಕೋರಿ ದಾವೆ ಹೂಡಿದ್ದನ್ನು, ಅದನ್ನು ಪತಿಯು ವಿರೋಧಿಸದೆ ಅಕೆಯ ಹೆಸರಿಗೆ ಕೆಲ ಆಸ್ತಿಗಳನ್ನು ವರ್ಗಾಯಿಸಿರುವುದನ್ನು ಮನಗಂಡು ಆಕೆಯನ್ನು ಅಧಿಕೃತ ಪತ್ನಿ ಎಂದು ಪರಿಗಣಿಸಿತು. ಅದೇ ರೀತಿ, ಎರಡನೇ ಹೆಂಡತಿಯಿಂದ ಪಡೆದ ಮೂವರು ಮಕ್ಕಳನ್ನು ಕಾನೂನು ರೀತ್ಯಾ ಆಸ್ತಿಯ ಪಾಲಿನಲ್ಲಿ ಹಕ್ಕುದಾರರು ಎಂದು ಪರಿಗಣಿಸಿತು. ಅಧಿಕೃತ ವಿವಾಹ ಮಾನ್ಯತೆಗೆ ಒಳಪಡದ ಎರಡನೇ ಪತ್ನಿಯನ್ನು ಪಾಲಿನಿಂದ ಹೊರಗಿರಿಸಿತು. ಉಳಿದಂತೆ ಮೊದಲ ಪತ್ನಿ ಹಾಗೂ ಎರಡನೇ ಪತ್ನಿಯ ಮೂವರು ಮಕ್ಕಳು ಸೇರಿ ನಾಲ್ವರಿಗೂ ಮೃತ ಪತಿಯ ವಿವಿಧ ಆಸ್ತಿಗಳನ್ನು ನಾಲ್ಕನೇ ಒಂದು ಭಾಗದಂತೆ ವಿಭಾಗಿಸಿ ಇತ್ಯರ್ಥಪಡಿಸಿತ್ತು.

ಇದರ ವಿರುದ್ಧ ಎರಡನೇ ಪತ್ನಿಯ ಮೂವರು ಮಕ್ಕಳು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಮೊದಲ ಪತ್ನಿಯು ತಮ್ಮ ತಂದೆಯಿಂದ ಜೀವನಾಂಶವಾಗಿ ಪಡೆದಿದ್ದ ಮೂರು ಆಸ್ತಿಗಳನ್ನು ಆಕೆಯ ತನ್ನ ಅಣ್ಣನಿಗೆ (ಪ್ರಕರಣದ ಮತ್ತೊಬ್ಬ ಪ್ರತಿವಾದಿ) ಮಾರಾಟ ಮಾಡಿ ಕ್ರಯಪತ್ರ ಮಾಡಿಕೊಟ್ಟಿರುವುದನ್ನು ರದ್ದುಪಡಿಸುವಂತೆಯೂ ಹಾಗೂ ಆಸ್ತಿಯಲ್ಲಿ ತಮಗೆ ಪಾಲನ್ನು ನೀಡುವಂತೆ ಕೋರಿದ್ದರು.

ಅಂತಿಮವಾಗಿ ಪ್ರಕರಣದಲ್ಲಿ ಹೈಕೋರ್ಟ್‌, ಮೃತ ಪತಿಯು ಪಿತ್ರಾರ್ಜಿತ ಆಸ್ತಿಯನ್ನು ಹೊಂದಿದ್ದ ಹಿನ್ನೆಲೆಯಲ್ಲಿ ಹಾಗೂ ಮೊದಲ ಹೆಂಡತಿಯು ಪತಿ ಬದುಕಿರುವಾಗಲೇ ಜೀವನಾಂಶವನ್ನು ಕೋರಿದ್ದನ್ನು ಪತಿಯು ನಿರಾಕರಿಸಿದೆ ಇದ್ದ ಹಿನ್ನೆಲೆಯಲ್ಲಿ ಅಕೆಯ ವೈವಾಹಿಕ ಸ್ಥಾನಮಾನದ ಬಗ್ಗೆ ಯಾವುದೇ ಅನುಮಾನಗಳಿಲ್ಲದಿರುವ ಬಗ್ಗೆ ಬೆರಳು ಮಾಡಿತು.

ಈ ಹಿನ್ನೆಲೆಯಲ್ಲಿ ಮೃತ ಪತಿಯ ಪಿತ್ರಾರ್ಜಿತ ಆಸ್ತಿಯಲ್ಲಿ ಆತ ಬದುಕಿರುವಾಗಲೇ ಆಸ್ತಿಯನ್ನು ವಿಭಾಗಿಸಿದ ರೀತಿ ಪರಿಭಾವಿತ ವಿಭಾಗೀಕರಣ ಮಾಡಿ ಅರ್ಧ ಆಸ್ತಿಯನ್ನು ಮೊದಲ ಪತ್ನಿಗೆ ನೀಡಿತು. ಅದೇ ರೀತಿ, ಮೃತ ಪತಿಯ ಭಾಗಕ್ಕೆ ಸೇರುವ ಉಳಿದ ಅರ್ಧ ಆಸ್ತಿಯಲ್ಲಿ ಆತನ ಮೂವರು ಮುಕ್ಕಳು (ಎರಡನೇ ಮದುವೆಯಿಂದ ಪಡೆದ ಸಂತಾನ) ಹಾಗೂ ಕಾನೂನು ರೀತ್ಯಾ ಆತನ ಅವಲಂಬಿತೆಯಾದ ಮೊದಲ ಪತ್ನಿಯ ಪಾಲನ್ನು ಸೇರಿಸಿ ನಾಲ್ಕು ವಿಭಾಗವನ್ನು ಮಾಡಲು ಸೂಚಿಸಿ ಮೇಲ್ಮನವಿಯನ್ನು ಇತ್ಯರ್ಥ ಪಡಿಸಿತು.

ಉಳಿದಂತೆ ಮೊದಲ ಪತ್ನಿಯು ತಾನು ಜೀವನಾಂಶವಾಗಿ ಪಡೆದಿದ್ದ ಆಸ್ತಿಗಳನ್ನು ತನ್ನ ಅಣ್ಣನಿಗೆ ಮಾರಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಆ ಆಸ್ತಿಗಳು ಆಕೆಯ ಹೆಸರಿಗೆ ಬದಲಾವಣೆಯಷ್ಟೇ ಆಗಿವೆಯೇ ಹೊರತು ಈ ಕುರಿತು ಕಾನೂನು ರೀತ್ಯಾ ನೋಂದಣಿಯಾಗಿಲ್ಲ ಎನ್ನುವುದನ್ನು ಗಮನಿಸಿತು. ಈ ಹಿನ್ನೆಲೆಯಲ್ಲಿ ಆ ಅಸ್ತಿಗಳಲ್ಲಿ ಮೊದಲ ಪತ್ನಿಗೆ ಬರುವ ಪಾಲಿನಲ್ಲಿ ತನಗೆ ದೊರೆಯಬೇಕಾದುದನ್ನು ಪಡೆಯುವಂತೆ ಸೂಚಿಸಿತು.

Attachment
PDF
Sharanavva & others Vs Sharanagouda
Preview
Kannada Bar & Bench
kannada.barandbench.com