ನ್ಯಾಯಮೂರ್ತಿಗಳ ನೇತೃತ್ವದ ಬಾಲ ನ್ಯಾಯ ಮಂಡಳಿಗೆ ಅಗತ್ಯ ಸಿಬ್ಬಂದಿ ಒದಗಿಸಲು ಸರ್ಕಾರಕ್ಕೆ ಹೈಕೋರ್ಟ್‌ನಿಂದ ತಿಂಗಳ ಗಡುವು
ಬಾಲ ನ್ಯಾಯ ಕಾಯಿದೆ ವ್ಯಾಪ್ತಿಗೆ ಒಳಪಡುವ ಕಾನೂನು ಜೊತೆ ಸಂಘರ್ಷಕ್ಕೆ ಒಳಗಾದ ಮಕ್ಕಳ ಪ್ರಕರಣಗಳ ನಿರ್ವಹಣೆಗೆ ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಬಾಲ ನ್ಯಾಯ ಮಂಡಳಿಗೆ (ಜೆಜೆಬಿ) ಅಗತ್ಯ ಸಿಬ್ಬಂದಿ ಒದಗಿಸಲು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಸೋಮವಾರ ನಾಲ್ಕು ವಾರಗಳ ಗಡುವು ನೀಡಿದೆ.
ರಾಜ್ಯದಲ್ಲಿ ಬಾಲ ನ್ಯಾಯ ಕಾಯಿದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವ ಹಾಗೂ ಬಚಪನ್ ಬಚಾವೊ ಆಂದೋಲನ್ ಸ್ವಯಂಸೇವಾ ಸಂಸ್ಥೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಕಾನೂನು ಸೇವಾ ಪ್ರಾಧಿಕಾರದ ಪರ ವಕೀಲೆ ಮೈತ್ರೇಯಿ ಕೃಷ್ಣನ್, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಹೈಕೋರ್ಟ್‌ನ ಹಾಲಿ ನಾಲ್ವರು ನ್ಯಾಯಮೂರ್ತಿಗಳನ್ನು ಒಳಗೊಂಡ ಬಾಲ ನ್ಯಾಯ ಮಂಡಳಿಯನ್ನು ರಚಿಸಲಾಗಿದೆ. ಈ ಮಂಡಳಿಗೆ ಪ್ರತ್ಯೇಕ ಸಚಿವಾಲಯ (ಅಧಿಕಾರಿ ಮತ್ತು ಸಿಬ್ಬಂದಿ) ಸ್ಥಾಪಿಸಬೇಕು ಎಂದು 2019ರಲ್ಲೇ ಹೈಕೋರ್ಟ್ ಆದೇಶಿಸಿದೆ. ಮಂಡಳಿಗೆ ಅಗತ್ಯವಿರುವ ಹುದ್ದೆಗಳನ್ನು ರಾಜ್ಯ ಸರ್ಕಾರ ಅನುಮೋದಿಸಬೇಕು. ಅವುಗಳನ್ನು ಹೈಕೋರ್ಟ್ ಮೂಲಕ ಭರ್ತಿ ಮಾಡಿಕೊಳ್ಳಬೇಕು. ಈವರೆಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಮಂಡಳಿಯು ಪರಿಣಾಮಕಾರಿಯಾಗಿ ಕೆಲಸ ಮಾಡಲು ಆಗುತ್ತಿಲ್ಲ ಎಂದು ಪೀಠಕ್ಕೆ ವಿವರಿಸಿದರು.
ಇದಕ್ಕೆ ಸರ್ಕಾರದ ಪರ ವಕೀಲರು ಪ್ರತಿಕ್ರಿಯಿಸಿ, ಈ ಕುರಿತು ಕ್ರಮ ಕೈಗೊಳ್ಳಲು ನಾಲ್ಕು ವಾರಗಳ ಕಾಲಾವಕಾಶ ಬೇಕು ಎಂದು ಕೋರಿದರು. ಪೀಠ ವಿಚಾರಣೆಯನ್ನು ಜೂನ್ 13ಕ್ಕೆ ಮುಂದೂಡಿದೆ.
ಹೈಕೋರ್ಟ್ ಬಾಲ ನ್ಯಾಯ ಮಂಡಳಿಗೆ ನ್ಯಾಯಮೂರ್ತಿಗಳಾದ ಕೆ ಎಸ್ ಮುದಗಲ್ ಅಧ್ಯಕ್ಷರಾಗಿದ್ದು, ಎಸ್ ಸುನಿಲ್ ದತ್ ಯಾದವ್, ಎಂ ಜಿ ಉಮಾ, ಜೆ ಎಂ ಖಾಜಿ ಸದಸ್ಯರಾಗಿದ್ದಾರೆ.