ಎರಡು ವಾರಗಳಲ್ಲಿ ಕೇಂದ್ರ ಪರಿಹಾರ ಸಮಿತಿಗೆ ಭಿಕ್ಷುಕರ ಸೆಸ್ ಹಣ ಜಮೆ ಮಾಡಲು ಬಿಬಿಎಂಪಿಗೆ ಹೈಕೋರ್ಟ್‌ ಗಡುವು

ಸಂಗ್ರಹ ಮಾಡಿರುವ ಭಿಕ್ಷುಕರ ಸೆಸ್ ಹಣವನ್ನು 3 ವಾರಗಳಲ್ಲಿ ಕೇಂದ್ರ ಪರಿಹಾರ ಸಮಿತಿಗೆ ಜಮೆ ಮಾಡುವಂತೆ ಫೆ.15ರಂದು ನೀಡಿದ್ದ ಆದೇಶವನ್ನು ಬಿಬಿಎಂಪಿ ಈವರೆಗೆ ಪಾಲಿಸದೆ ಇದ್ದದ್ದನ್ನು ಗಮನಿಸಿದ ಪೀಠವು ಪಾಲಿಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು.
BBMP and Karnataka HC
BBMP and Karnataka HC
Published on

ಭಿಕ್ಷುಕರ ಅಭ್ಯುದಯಕ್ಕಾಗಿ ಸಂಗ್ರಹಿಸಿರುವ ಭಿಕ್ಷುಕರ ಸೆಸ್ ಹಣವನ್ನು ಎರಡು ವಾರಗಳಲ್ಲಿ ಕೇಂದ್ರ ಪರಿಹಾರ ಸಮಿತಿಗೆ ಜಮೆ ಮಾಡುವಂತೆ ಕರ್ನಾಟಕ ಹೈಕೋರ್ಟ್ ಬಿಬಿಎಂಪಿಗೆ ಬುಧವಾರ ಅಂತಿಮ ಗಡುವು ವಿಧಿಸಿದೆ.

ಬೆಂಗಳೂರಿನ ರಸ್ತೆಗಳಲ್ಲಿ ಮಕ್ಕಳನ್ನು ಆಟಿಕೆ ಸಾಮಾನು ಮಾರಾಟ ಮಾಡಲು ಹಾಗೂ ಭಿಕ್ಷಾಟನೆ ಚಟುವಟಿಕೆಗೆ ಬಳಸಿಕೊಳ್ಳುತ್ತಿರುವ ವಿಚಾರವಾಗಿ ಲೆಟ್ಜ್‌ಕಿಟ್‌ ಫೌಂಡೇಷನ್ 2020ರಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ ಜಿ ಎಸ್ ಕಮಲ್ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಅರ್ಜಿದಾರರ ಪರ ವಕೀಲ ಪುತ್ತಿಗೆ ರಮೇಶ್ ವಾದ ಮಂಡಿಸಿದರು.

ಸಂಗ್ರಹ ಮಾಡಿರುವ ಭಿಕ್ಷುಕರ ಸೆಸ್ ಹಣವನ್ನು ಮೂರು ವಾರಗಳಲ್ಲಿ ಕೇಂದ್ರ ಪರಿಹಾರ ಸಮಿತಿಗೆ ಜಮೆ ಮಾಡುವಂತೆ 2023ರ ಫೆಬ್ರವರಿ 15ರಂದು ನೀಡಿದ್ದ ಆದೇಶವನ್ನು ಬಿಬಿಎಂಪಿ ಈವರೆಗೆ ಪಾಲಿಸದೆ ಇದ್ದದ್ದನ್ನು ಗಮನಿಸಿದ ಪೀಠವು ಪಾಲಿಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು.

ಇದಕ್ಕೆ ಬಿಬಿಎಂಪಿ ಪರ ವಕೀಲ ಎನ್ ಕೆ ರಮೇಶ್ ಅವರು “ಇತ್ತೀಚೆಗಷ್ಟೇ ನನ್ನನ್ನು ಬಿಬಿಎಂಪಿ ಪ್ರಕರಣಗಳಲ್ಲಿ ನಡೆಸಲು ನಿಯುಕ್ತಿ ಮಾಡಲಾಗಿದೆ. ಭಿಕ್ಷುಕರ ಸೆಸ್ ಹಣವನ್ನು ಕೇಂದ್ರ ಪರಿಹಾರ ಸಮಿತಿಗೆ ಜಮೆ ಮಾಡಬೇಕು ಎಂದು 2023ರ ಫೆಬ್ರವರಿ 15ರಂದು ನ್ಯಾಯಾಲಯ ನೀಡಿರುವ ಆದೇಶ ಪಾಲನೆ ಮಾಡಲು ಇನ್ನೂ ಸ್ವಲ್ಪ ಸಮಯ ನೀಡಬೇಕು” ಎಂದು ಕೋರಿದರು.

ಇದಕ್ಕೆ ಒಪ್ಪಿದ ಪೀಠವು ಭಿಕ್ಷಕರ ಸೆಸ್ ಬಾಕಿ ಮೊತ್ತವನ್ನು ಕೇಂದ್ರ ಪರಿಹಾರ ಸಮಿತಿಗೆ ಜಮೆ ಮಾಡಲು ನ್ಯಾಯಾಲಯ ನೀಡಿರುವ ಆದೇಶವನ್ನು ಪಾಲನೆ ಮಾಡಿದ ವರದಿಯನ್ನು ಎರಡು ವಾರಗಳಲ್ಲಿ ಸಲ್ಲಿಸಬೇಕು. ಇದು ಕೊನೆಯ ಅವಕಾಶ ಎಂದು ತಾಕೀತು ಮಾಡಿ ವಿಚಾರಣೆ ಮುಂದೂಡಿತು.

Kannada Bar & Bench
kannada.barandbench.com