ಶಿವಾನಂದ ವೃತ್ತದಲ್ಲಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ಬಿಬಿಎಂಪಿಗೆ ಹೈಕೋರ್ಟ್ ಅಸ್ತು

ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕರು ಸುರಕ್ಷತೆ ದೃಷ್ಟಿಯಿಂದ ಮೇಲ್ಸೇತುವೆ ಇಳಿಜಾರಿನ ಪ್ರಮಾಣ ಹೆಚ್ಚಿಸಬಹುದು ಎಂದು ವರದಿ ಸಲ್ಲಿಸಿದ್ದಾರೆ. ಐಐಎಸ್‌ಸಿಯ ವರದಿಯನ್ನು ನ್ಯಾಯಾಲಯ ಒಪ್ಪುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
BBMP and Karnataka HC
BBMP and Karnataka HC
Published on

ಬೆಂಗಳೂರು ಶಿವಾನಂದ ವೃತ್ತದಲ್ಲಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಕರ್ನಾಟಕ ಹೈಕೋರ್ಟ್ ಈಚೆಗೆ ಅಸ್ತು ಎಂದಿದೆ.

ಮೇಲ್ಸೇತುವೆ ಯೋಜನೆ ಪ್ರಶ್ನಿಸಿ ಸ್ಥಳೀಯರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯನ್ನು ಆಲಿಸಿದ ನ್ಯಾಯಮೂರ್ತಿಗಳಾದ ಪಿ ಎಸ್ ದಿನೇಶ್ ಕುಮಾರ್ ಮತ್ತು ಅನಂತ್‌ ರಾಮನಾಥ್‌ ಹೆಗ್ಡೆ ಅವರ ನೇತೃತ್ವದ ವಿಭಾಗೀಯ ಪೀಠವು ಈ ಆದೇಶ ಮಾಡಿದೆ.

ಶಿವಾನಂದ ವೃತ್ತದ ಜಂಕ್ಷನ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆಯ ಇಳಿಜಾರು ಪ್ರಮಾಣವನ್ನು (ಶೇಷಾದ್ರಿಪುರ ರಸ್ತೆ ಕಡೆಯ) ಶೇ 6.66ರಷ್ಟು ಹೆಚ್ಚಿಸಲು ಅನುಮತಿ ಕೋರಿ ಬಿಬಿಎಂಪಿ ಸಲ್ಲಿಸಿರುವ ಮಧ್ಯಂತರ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಾಲಯವು ಬಿಬಿಎಂಪಿಗೆ ಕಾಮಗಾರಿ ಪೂರ್ಣಗೊಳಿಸಲು ಆದೇಶಿಸಿದೆ.

ಮೇಲ್ಸೇತುವೆ ನಿರ್ಮಾಣಕ್ಕೆ ಅನುಮೋದನೆ ನೀಡಿ ರಾಜ್ಯ ಸರ್ಕಾರ 2017ರ ಜೂನ್‌ 24ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಕುಮಾರ ಪಾರ್ಕ್ ಪೂರ್ವ ಭಾಗದ ನಿವಾಸಿ ಬಿ ಪಿ ಮಹೇಶ್ ಹಾಗೂ ಇತರರು 2017ರ ಅಕ್ಟೋಬರ್‌ನಲ್ಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಕಾಮಗಾರಿಗೆ ತಡೆ ನೀಡಲು 2018ರ ಜನವರಿ 8ರಂದು ಹೈಕೋರ್ಟ್ ನಿರಾಕರಿಸಿತ್ತು. ಅದರಂತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. 2022ರ ಜನವರಿ 13ರಂದು ಬಿಬಿಎಂಪಿ ಆಯುಕ್ತರು ಮತ್ತು ಕಾರ್ಯಕಾರಿ ಎಂಜಿನಿಯರ್ (ಪ್ರಾಜೆಕ್ಟ್ ಸೆಂಟರ್-2) ಮಧ್ಯಂತರ ಅರ್ಜಿ ಸಲ್ಲಿಸಿ, ಶೇಷಾದ್ರಿಪುರ ಕಡೆಯ ಮೇಲ್ಸೇತುವೆ ಇಳಿಜಾರಿನ ಪ್ರಮಾಣವನ್ನು ಶೇ 6.66ರಷ್ಟು ಹೆಚ್ಚಿಸಲು ಅನುಮತಿ ನೀಡುವಂತೆ ಕೋರಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ್ದ ಪೀಠವು ಸಾರ್ವಜನಿಕ ಹಿತಾಸಕ್ತಿಯಿಂದ ಮೇಲ್ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಶೇಷಾದ್ರಿಪುರ ಕಡೆಯ ಇಳಿಜಾರನ್ನು ಹೆಚ್ಚಿಸಲು ಬಿಬಿಎಂಪಿ ಅನುಮತಿ ಕೋರಿದೆ. ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಪ್ರಾಧ್ಯಾಪಕರು ಸುರಕ್ಷತೆ ದೃಷ್ಟಿಯಿಂದ ಮೇಲ್ಸೇತುವೆ ಇಳಿಜಾರಿನ ಪ್ರಮಾಣ ಹೆಚ್ಚಿಸಬಹುದು ಎಂದು ವರದಿ ಸಲ್ಲಿಸಿದ್ದಾರೆ. ಐಐಎಸ್‌ಸಿಯ ವರದಿಯನ್ನು ನ್ಯಾಯಾಲಯ ಒಪ್ಪುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಯಾವುದೇ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯು ನಿಗದಿತ ಅವಧಿಯಲ್ಲಿ ಮುಗಿಯಬೇಕು. ಇದರಿಂದ ಸಮಯ ಮತ್ತು ತೆರಿಗೆ ಹಣ ಉಳಿತಾಯವಾಗಲಿದೆ. ಈ ಮೇಲ್ಸೇತುವೆ ಯೋಜನೆಗೆ ಮುಖ್ಯಮಂತ್ರಿಗಳ ನೇತೃತ್ವದ ರಾಜ್ಯದ ಉನ್ನತ ಮಟ್ಟದ ಕಾರ್ಯಕಾರಿ ಸಮಿತಿ ಅನುಮೋದನೆ ನೀಡಿದೆ. ಹಾಗಾಗಿ, ಯೋಜನೆ ಸಂಬಂಧ ನಿರ್ಣಯ ಕೈಗೊಳ್ಳುವುದರಲ್ಲಿ ನ್ಯಾಯಾಲಯ ಪಾತ್ರ ತುಂಬಾ ಸೀಮಿತವಾಗಿರುತ್ತದೆ ಎಂದು ಆದೇಶದಲ್ಲಿ ಅಭಿಪ್ರಾಯಪಡಲಾಗಿದೆ.

2018ರಲ್ಲಿ ಮೇಲ್ಸೇತುವೆ ಕಾಮಗಾರಿ ಆರಂಭವಾಗಿದೆ. ಶೇ 90ರಷ್ಟು ಕಾರ್ಯ ಪೂರ್ಣಗೊಂಡಿದೆ. ಯೋಜನೆಗೆ ಭೂಮಿ ನೀಡಿರುವ ಭೂ ಮಾಲೀಕರು ಬಿಬಿಎಂಪಿ ಪ್ರಸ್ತಾವನೆ ಮಾಡಿರುವ ಟಿಡಿಆರ್ ಒಪ್ಪದೇ ಇರುವುದರಿಂದ ಭೂ ಸ್ವಾಧೀನ ಪೂರ್ಣಗೊಳಿಸಲು ಮತ್ತಷ್ಟು ಸಮಯ ಬೇಕಾಗುತ್ತದೆ. ನಗರದ ಹೃದಯ ಭಾಗದ ಜನ ಹಾಗೂ ವಾಹನ ದಟ್ಟಣೆಯಿರುವ ರಸ್ತೆಯಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಯೋಜನೆ ವಿಳಂಬದಿಂದ ರಸ್ತೆಯನ್ನು ಬಳಸುವ ವಾಹನ ಸವಾರರಿಗೆ ಸಮಸ್ಯೆ ಉಂಟಾಗುತ್ತದೆ ಹಾಗೂ ಯೋಜನೆಯ ವೆಚ್ಚ ಹೆಚ್ಚಾಗಲಿದೆ. ಆದ್ದರಿಂದ, ಬಿಬಿಎಂಪಿಯ ಅರ್ಜಿಯನ್ನು ಪುರಸ್ಕರಿಸಿ ಇಳಿಜಾರಿನ ಪ್ರಮಾಣವನ್ನು ಶೇ 6.66ಕ್ಕೆ ಹೆಚ್ಚಿಸುವ ಮೂಲಕ ಬಾಕಿ ಉಳಿದಿರುವ ಮೇಲ್ಸೇತುವೆಯ ಶೇ 10ರಷ್ಟು ಕಾಮಗಾರಿ ಪೂರ್ಣಗೊಳಿಸಲು ಅನುಮತಿ ನೀಡಲಾಗಿದೆ ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.

Kannada Bar & Bench
kannada.barandbench.com