

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹಾಗೂ ಅದರ ಅಧೀನದಲ್ಲಿ ಬರುವ ಕಾಲೇಜು ಮತ್ತು ಸಂಸ್ಥೆಗಳಲ್ಲಿ ‘ವಿದ್ಯಾರ್ಥಿಗಳ ಕುಂದುಕೊರತೆ ಪರಿಹಾರ ಸಮಿತಿ‘ಗಳನ್ನು ರಚಿಸಲು ಕಾನೂನು ವಿವಿಗೆ ಕರ್ನಾಟಕ ಹೈಕೋರ್ಟ್ ಒಂದು ವಾರದ ಗಡುವು ನೀಡಿದೆ.
ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) (ವಿದ್ಯಾರ್ಥಿಗಳ ಕುಂದುಕೊರತೆ ಪರಿಹಾರ ನಿಯಮಗಳು) 2023ರ ಪ್ರಕಾರ ಕರ್ನಾಟಕ ಕಾನೂನು ವಿಶ್ವವಿದ್ಯಾಲಯ ಹಾಗೂ ರಾಜ್ಯಾದ್ಯಂತ ಇರುವ ಅದರ ಅಧೀನದ ಕಾಲೇಜು ಮತ್ತು ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಕುಂದುಕೊತೆ ಪರಿಹಾರ ಸಮಿತಿಗಳನ್ನು ರಚಿಸಲು ಕಾನೂನು ವಿಶ್ವವಿದ್ಯಾಲಯಕ್ಕೆ ನಿರ್ದೇಶನ ನೀಡಬೇಕು ಎಂದು ಬೆಂಗಳೂರಿನ ಬಿಎಂಎಸ್ ಕಾನೂನು ಕಾಲೇಜಿನ ಮೂರನೇ ವರ್ಷದ ಕಾನೂನು ಪದವಿ ವಿದ್ಯಾರ್ಥಿ 25 ವರ್ಷದ ಕೆ ಎನ್ ಪ್ರಣವ ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಕಾನೂನು ವಿಶ್ವವಿದ್ಯಾಲಯದ ಪರ ವಕೀಲರು “ವಿದ್ಯಾರ್ಥಿಗಳ ಕುಂದುಕೊರತೆ ಸಮಿತಿ ರಚನೆ ಬಗ್ಗೆ ಅರ್ಜಿದಾರರು ಕೇಳಿದ್ದಾರೆ” ಎಂದರು.
ಆಗ ಪೀಠವು “ಹೌದು, ಸಮಿತಿಗಳನ್ನು ರಚಿಸಿದ್ದೀರಾ?” ಎಂದು ಪ್ರಶ್ನಿಸಿತು. ಅದಕ್ಕೆ ಮಾಹಿತಿ ಪಡೆದು ತಿಳಿಸುತ್ತೇವೆ ಸ್ವಲ್ಪ ಸಮಯ ಕೊಡಿ" ಎಂದು ಮನವಿ ಮಾಡಿದರು.
ಮಧ್ಯಾಹ್ನದ ಬಳಿಕ ಮತ್ತೇ ಅರ್ಜಿ ವಿಚಾರಣೆಗೆ ಕರೆದಾಗ, ಕಾನೂನು ವಿಶ್ವವಿದ್ಯಾಲಯದ ಪರ ವಕೀಲರು 2024ರ ಅಧಿಸೂಚನೆಯೊಂದನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಅದಕ್ಕೆ ಅರ್ಜಿದಾರರು ಆಕ್ಷೇಪಿಸಿ, ಕಾನೂನು ವಿಶ್ವವಿದ್ಯಾಲಯದ ಪರ ವಕೀಲರು ಹಾಜರುಪಡಿಸಿರುವುದು ವಿದ್ಯಾರ್ಥಿಗಳ ಕಲ್ಯಾಣ ಸಮಿತಿಗೆ ಸಂಬಂಧಿಸಿದ ಅಧಿಸೂಚನೆ, ಯುಜಿಸಿ ನಿರ್ದೇಶನ ಪ್ರಕಾರ ವಿದ್ಯಾರ್ಥಿಗಳ ಕುಂದುಕೊರತೆ ಸಮಿತಿ ರಚಿಸಲು ಮನವಿ ಮಾಡಲಾಗಿದೆ ಎಂದರು.
ಕಾನೂನು ವಿಶ್ವವಿದ್ಯಾಲಯದ ಪರ ವಕೀಲರು ಹಳೆಯ ಅಧಿಸೂಚನೆ ಹಾಜರುಪಡಿಸಿರುವುದಕ್ಕೆ ಅಸಮಧಾನಗೊಂಡ ಪೀಠವು, "ನ್ಯಾಯಾಲಯದ ಹಾದಿ ತಪ್ಪಿಸುತ್ತಿದ್ದೀರಾ? ರಿಜಿಸ್ಟ್ರಾರ್ ಅವರನ್ನು ಕೋರ್ಟ್‌ಗೆ ಕರೆಸಬೇಕಾಗುತ್ತದೆ. ರಿಜಿಸ್ಟ್ರಾರ್ ಅವರ ಈ ನಡವಳಿಕೆ ದಾಖಲಿಸಬೇಕಾ?" ಎಂದು ಕಾನೂನು ವಿಶ್ವವಿದ್ಯಾಲಯದ ಪರ ವಕೀಲರನ್ನು ಪ್ರಶ್ನಿಸಿತು. ಮತ್ತೆ ಸಮಯ ಕೇಳಿದ ವಕೀಲರು, ಸಂಜೆ ವೇಳೆಗೆ ಹಾಜರಾಗಿ, ಯುಜಿಸಿ ನಿರ್ದೇಶನ ಪ್ರಕಾರ ಸಮಿತಿ ರಚಿಸಲಾಗಿಲ್ಲ, ಅದಕ್ಕಾಗಿ ಒಂದು ವಾರ ಕಾಲಾವಕಾಶಬೇಕು ಎಂದು ಕೋರಿದರು.
ವಿಶ್ವವಿದ್ಯಾಲಯ ಮಟ್ಟದಲ್ಲಿ ವಿದ್ಯಾರ್ಥಿಗಳ ಕುಂದುಕೊರತೆ ಸಮಿತಿ ರಚಿಸಲಾಗಿಲ್ಲ ಎಂದರೆ ಏನರ್ಥ. ಒಂದು ವಾರದಲ್ಲಿ ಸಮಿತಿಗಳನ್ನು ರಚಿಸಿ, ಮತ್ತೆ ಸಮಯ ಕೊಡಲ್ಲ. ಇಲ್ಲವೆಂದರೆ ರಿಜಿಸ್ಟ್ರಾರ್ ಅವರನ್ನು ನ್ಯಾಯಾಲಯಕ್ಕೆ ಕರೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಪೀಠವು ವಿಚಾರಣೆಯನ್ನು ಮುಂದೂಡಿತು.