
ಭೋವಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಎಸ್ ಜೀವಾ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬಂಧಿತರಾಗಿದ್ದ ಉಪ ಪೊಲೀಸ್ ವರಿಷ್ಠಾಧಿಕಾರಿ ಬಿ ಎಂ ಕನಕ ಲಕ್ಷ್ಮಿಗೆ ಕರ್ನಾಟಕ ಹೈಕೋರ್ಟ್ ಈಚೆಗೆ ಜಾಮೀನು ಮಂಜೂರು ಮಾಡಿದೆ.
ಸಿಐಡಿಯಲ್ಲಿ ಡಿವೈಎಸ್‌ಪಿಯಾಗಿದ್ದ ಕನಕಲಕ್ಷ್ಮಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠವು ಪುರಸ್ಕರಿಸಿದೆ.
ಕನಕ ಲಕ್ಷ್ಮಿ ಅವರು ಒಂದು ಲಕ್ಷ ಮೌಲ್ಯದ ವೈಯಕ್ತಿಕ ಬಾಂಡ್ ಮತ್ತು ಇಬ್ಬರ ಭದ್ರತೆ ಒದಗಿಸಬೇಕು. ಸೂಕ್ತ ಕಾರಣಗಳನ್ನು ನೀಡಿ ವಿಚಾರಣಾಧೀನ ನ್ಯಾಯಾಲಯ ವಿನಾಯಿತಿ ನೀಡದ ಹೊರತು ವಿಚಾರಣೆಯ ಎಲ್ಲಾ ದಿನವೂ ಕನಕ ಲಕ್ಷ್ಮಿ ನ್ಯಾಯಾಲಯದ ಮುಂದೆ ಹಾಜರಾಗಬೇಕು. ಪ್ರಾಸಿಕ್ಯೂಷನ್ ಸಾಕ್ಷಿಗಳ ಮೇಲೆ ಕನಕ ಲಕ್ಷ್ಮಿ ಪ್ರಭಾವ ಬೀರಬಾರದು ಮತ್ತು ಇಂಥದ್ದೇ ಅಪರಾಧ ಕೃತ್ಯದಲ್ಲಿ ಭಾಗಿಯಾಗಬಾರದು ಎಂದು ಆದೇಶಿಸಿದೆ.
ನ್ಯಾಯಾಲಯದ ಆದೇಶ ಪಡೆದು ಜೀವಾ ಅವರು ಭೋವಿ ಹಗರಣದ ತನಿಖೆಗೆ ಹಾಜರಾಗಿದ್ದರು. ತನಿಖೆಯ ಸಂದರ್ಭದಲ್ಲಿ ಏನೇ ಸಮಸ್ಯೆಗಳಿದ್ದರೂ ಅವರು ಅದನ್ನು ಹೈಕೋರ್ಟ್ ಗಮನಕ್ಕೆ ತರಬಹುದಿತ್ತು. ಮನೋವೈಜ್ಞಾನಿಕ ಮರಣೋತ್ತರ ಪರೀಕ್ಷೆಯಲ್ಲಿ ಜೀವಾ ಅವರು ತಮ್ಮ ಸಹೋದರಿ ಎಸ್ ಸಂಗೀತಾ ಅವರು ಭೋವಿ ನಿಗಮದ ಹಗರಣದಲ್ಲಿ ಸಿಲುಕುವ ಬಗ್ಗೆ ಹೆಚ್ಚು ಚಿಂತಿತರಾಗಿದ್ದರು ಎಂದು ಹೇಳಲಾಗಿದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.
ಅಲ್ಲದೇ, ಬಿಎನ್‌ಎಸ್ ಸೆಕ್ಷನ್ 108 ಅನ್ವಯಿಸಲು ಆರೋಪಿಯ ಕೃತ್ಯವು ಸಂತ್ರಸ್ತರು ಆತ್ಮಹತ್ಯೆ ಮಾಡಿಕೊಳ್ಳುವುದರ ಜೊತೆ ನೇರ ಸಂಬಂಧ ಹೊಂದಿದ್ದರೆ ಸಾಲದು, ಅದನ್ನು ಸಂತ್ರಸ್ತರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮಾಡಿರಬೇಕಾಗುತ್ತದೆ. ಈ ಕೃತ್ಯವು ಆತ್ಮಹತ್ಯೆಗೆ ಪ್ರಚೋದನೆಯಾಗುತ್ತದೆ ಎಂದು ನ್ಯಾಯಾಲಯ ವಿವರಿಸಿದೆ.
ಭೋವಿ ನಿಗಮದ ಹಗರಣದಲ್ಲಿ ಸಹ ಆರೋಪಿಯಾಗಿರುವ ಯಶಸ್ವಿನಿ, ಜೀವಾ ಮತ್ತು ಕನಕ ಲಕ್ಷ್ಮಿ ನಡುವಿನ ಸಂಭಾಷಣೆಯಲ್ಲಿ ಜೀವಾ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಅಂಶಗಳು ಕಂಡುಬಂದಿಲ್ಲ. ತನಿಖೆಯ ಸಂದರ್ಭದಲ್ಲಿ ಕೆಲವು ಕಡೆ ವಿಡಿಯೋ ರೆಕಾರ್ಡಿಂಗ್ ನಿಲ್ಲಿಸಿ ಜೀವಾ ಮತ್ತು ಯಶಸ್ವಿನಿ ಜೊತೆ ಕನಕ ಲಕ್ಷ್ಮಿ ಕ್ರೂರವಾಗಿ ನಡೆದುಕೊಂಡಿದ್ದಾರೆ ಎಂಬುದು ಊಹೆಯಾಗಿದ್ದು, ಈ ಹಂತದಲ್ಲಿ ಕನಕ ಲಕ್ಷ್ಮಿ ವಿರುದ್ಧ ಮಾಡಿರುವ ಆರೋಪಕ್ಕೆ ಪ್ರಬಲ ಸಾಕ್ಷಿಗಳಿಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ.
ಹೈಕೋರ್ಟ್‌ಗೆ ಸಲ್ಲಿಸಿರುವ ಕರಡು ಆರೋಪ ಪಟ್ಟಿಯಲ್ಲಿ ಕನಕ ಲಕ್ಷ್ಮಿ ಅವರ ವಿರುದ್ಧ ಭ್ರಷ್ಟಾಚಾರ ಪ್ರತಿಬಂಧ ಕಾಯಿದೆ ಸೆಕ್ಷನ್‌ಗಳ ಅಡಿ ಆರೋಪವನ್ನು ಕೈಬಿಡಲಾಗಿದ್ದು, ಬಿಎನ್‌ಎಸ್ ಸೆಕ್ಷನ್ 108ಕ್ಕೆ ಮಾತ್ರ ಆರೋಪ ಪಟ್ಟಿ ಸಿದ್ಧಗೊಳಿಸಲಾಗಿದೆ. ಹೀಗಾಗಿ, ಜಾಮೀನು ಮಂಜೂರು ಮಾಡುತ್ತಿರುವುದಾಗಿ ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ.
ಪ್ರಕರಣದ ಹಿನ್ನೆಲೆ: ಭೋವಿ ಅಭಿವೃದ್ಧಿ ನಿಗಮದ ರೂ.10 ಕೋಟಿಗೂ ಅಧಿಕ ಹಣ ದುರ್ಬಳಕೆಗೆ ಸಂಬಂಧಿಸಿದಂತೆ ಜೀವಾ, ಯಶಸ್ವಿನಿ ಮತ್ತಿತರರ ವಿರುದ್ಧ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖಾ ಹಂತದಲ್ಲಿ ಜೀವಾ ಆತ್ಮಹತ್ಯೆ ಮಾಡಿಕೊಂಡಿದ್ದರು.
ಆತ್ಮಹತ್ಯೆಗೆ ಸಿಐಡಿ ತನಿಖಾಧಿಕಾರಿ ಕನಕ ಲಕ್ಷ್ಮಿ ಕಾರಣ ಎಂದು ಜೀವಾ ಸಹೋದರಿ ಸಂಗೀತಾ ಅವರು ಬನಶಂಕರಿ ಠಾಣೆಗೆ ದೂರು ನೀಡಿದ್ದರು. ಬೆಂಗಳೂರು ವಕೀಲರ ಸಂಘವು ಪ್ರಕರಣದ ತನಿಖೆಯನ್ನು ಸ್ವತಂತ್ರ ಸಂಸ್ಥೆಗೆ ವಹಿಸಬೇಕು ಎಂದು ಕೋರಿತ್ತು.
ಇದರ ವಿಚಾರಣೆ ನಡೆಸಿದ್ದ ನ್ಯಾ. ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಸಿಬಿಐ ಪೊಲೀಸ್ ವರಿಷ್ಠಾಧಿಕಾರಿ ಮತ್ತು ರಾಜ್ಯದ ಇಬ್ಬರು ಪೊಲೀಸ್ ವರಿಷ್ಠಾಧಿಕಾರಿಗಳನ್ನು ಒಳಗೊಂಡ ಮೂವರು ಸದಸ್ಯರ ಸಮಿತಿ ರಚಿಸಿ, ತನಿಖೆಗೆ ಆದೇಶಿಸಿತ್ತು. ಈ ಮಧ್ಯೆ, ಮಾರ್ಚ್ 11ರಂದು ಹೈಕೋರ್ಟ್ ಕಟು ಪ್ರಶ್ನೆಗಳ ಹಿನ್ನೆಲೆಯಲ್ಲಿ ಕನಕ ಲಕ್ಷ್ಮಿ ಅವರನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಕನಕ ಲಕ್ಷ್ಮಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಕನಕ ಲಕ್ಷ್ಮಿ ಪರವಾಗಿ ವಕೀಲ ಎಲ್ ಸೂರ್ಯ ಮುಕುಂದರಾಜ್ ವಕಾಲತ್ತು ಹಾಕಿದ್ದರು. ಹಿರಿಯ ವಕೀಲ ಎಂ ಎಸ್ ಶ್ಯಾಮ್‌ಸುಂದರ್ ವಾದಿಸಿದ್ದರು. ಸರ್ಕಾರದ ಪರವಾಗಿ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ವಿಜಯಕುಮಾರ್ ಮಜಗೆ, ವಕೀಲ ಪಿ ಅರವಿಂದ್ ಕಾಮತ್ ವಾದಿದ್ದರು.