

ಆತ್ಮಹತ್ಯೆಗೊಳಗಾಗಿದ್ದಾರೆ ಎನ್ನಲಾದ ಉದ್ಯಮಿ ಕೆ ರಘುನಾಥ್ ಅವರ ನಕಲಿ ಸಹಿ ಮಾಡಿ, ಆಸ್ತಿ ಕಬಳಿಸಿರುವ ಆರೋಪದಲ್ಲಿ ಬಂಧಿತರಾಗಿರುವ ತಿರುಪತಿ ತಿರುಮಲ ದೇವಸ್ಥಾನದ ಮಾಜಿ ಅಧ್ಯಕ್ಷ ಡಿ ಕೆ ಆದಿಕೇಶವುಲು ನಾಯ್ಡು ಪುತ್ರ ಡಿ ಎ ಶ್ರೀನಿವಾಸ್ ಅವರಿಗೆ ಕರ್ನಾಟಕ ಹೈಕೋರ್ಟ್ ಈಚೆಗೆ ಜಾಮೀನು ಮಂಜೂರು ಮಾಡಿದೆ.
ಕೇಂದ್ರೀಯ ತನಿಖಾ ದಳದ ವಿಚಾರಣೆಯಲ್ಲಿರುವ ಪ್ರಕರಣದಲ್ಲಿ ಒಂಭತ್ತನೇ ಆರೋಪಿಯಾಗಿರುವ ಶ್ರೀನಿವಾಸ್‌ಗೆ ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣವರ್ ಅವರ ಏಕಸದಸ್ಯ ಪೀಠ ಜಾಮೀನು ಮಂಜೂರು ಮಾಡಿದೆ.
ಐದು ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್ ಮತ್ತು ಇಬ್ಬರ ಭದ್ರತೆ ಒದಗಿಸಬೇಕು. ಹೆಚ್ಚಿನ ತನಿಖೆಗೆ ಕೈಜೋಡಿಸುವಂತೆ ಸೂಚಿಸಿದಾಗ ತನಿಖಾ ಸಂಸ್ಥೆಯ ಮುಂದೆ ಹಾಜರಾಗಬೇಕು. ಸಾಕ್ಷಿಗಳನ್ನು ತಿರುಚಲು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಪ್ರಯತ್ನಿಸಬಾರದು. ಜೈಲಿನಿಂದ ಬಿಡುಗಡೆಯಾದ ಒಂದು ವಾರದೊಳಗೆ ಪಾಸ್‌ಪೋರ್ಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ವಿಚಾರಣೆಗೆ ಭಾಗಿಯಾಗುವುದನ್ನು ಹೊರತುಪಡಿಸಿ ಪ್ರಕರಣದಲ್ಲಿ ಅಂತಿಮ ವರದಿ ಸಲ್ಲಿಸುವವರೆಗೆ ಕರ್ನಾಟಕ ರಾಜ್ಯ ಪ್ರವೇಶಿಸಬಾರದು. ಸಕ್ಷಮ ನ್ಯಾಯಾಲಯದ ಮುಂದೆ ವಿಚಾರಣೆಗೆ ತಪ್ಪದೇ ಹಾಜರಾಗಬೇಕು ಮತ್ತು ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗ ಕೂಡದು ಎಂಬ ಷರತ್ತುಗಳನ್ನು ಹೈಕೋರ್ಟ್ ಶ್ರೀನಿವಾಸ್‌ಗೆ ವಿಧಿಸಿದೆ.
ಪ್ರಕರಣದ ಹಿನ್ನೆಲೆ: ರಘುನಾಥ್ ಅವರ ಹಲವಾರು ದಾಖಲೆ ಮತ್ತು ರಶೀದಿಗಳನ್ನು ಶ್ರೀನಿವಾಸ್ ತಿರುಚಿ ಅವುಗಳಿಗೆ ತಾವೇ ಸಹಿ ಮಾಡಿದ್ದು, ಅದರ ಫಲಾನುಭವಿಯೂ ಅವರೇ ಆಗಿದ್ದಾರೆ. ಇತರೆ ಆರೋಪಿಗಳ ಜೊತೆ ಶ್ರೀನಿವಾಸ್ ಪಿತೂರಿ ನಡೆಸಿ, ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಸಿಬಿಐ ಅರೋಪಿಸಿದೆ.
ಆ ದಾಖಲೆಗಳಲ್ಲಿ ನಕಲಿ ಸರ್ಕಾರಿ ಸ್ಟ್ಯಾಂಪ್‌ಗಳನ್ನು ಶ್ರೀನಿವಾಸ್ ಬಳಕೆ ಮಾಡಿದ್ದಾರೆ. ಆ ಸರ್ಕಾರಿ ಸ್ಟ್ಯಾಂಪ್‌ಗಳನ್ನು ಅವರೇ ಸೃಷ್ಟಿಸಿದ್ದಾರೆ. ಒಟ್ಟಾರೆ ಅವರು 60 ದಾಖಲೆ ಸೃಷ್ಟಿಸಿದ್ದು, ಈ ಪೈಕಿ 46ರಲ್ಲಿ ಅವರ ಸಹಿ ಇದೆ ಎಂದು ಸಿಬಿಐ ತನಿಖೆಯ ವೇಳೆ ತಿಳಿದು ಬಂದಿದೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 120ಬಿ, 465, 467, 468, 471, 255, 256, 257, 258, 259 ಮತ್ತು 260 ಅಡಿ ಸಿಬಿಐ ಪ್ರಕರಣ ದಾಖಲಿಸಿದೆ.