ಕೇಂದ್ರಕ್ಕೆ ₹665 ಕೋಟಿ ತೆರಿಗೆ ವಂಚನೆ: ರಿತು ಮಿನೋಚಾಗೆ ಮಧ್ಯಂತರ ಜಾಮೀನು ನೀಡಿದ ಹೈಕೋರ್ಟ್‌

ಸಿಜಿಎಸ್‌ಟಿ ಕಾಯಿದೆ–2017ರ ಸೆಕ್ಷನ್‌ಗಳಾದ 132 (ಬಿ)(ಸಿ), 132 (ಎಲ್‌) (ಐ) & 132 (5) ಅನುಸಾರ ತೆರಿಗೆ ವಂಚನೆ ಆರೋಪದಡಿ 2025ರ ಜ.20ರಂದು ರಿತು ನಿತಿನ್‌ ಮಿನೋಚಾರನ್ನು ಮುಂಬೈನಲ್ಲಿ ಬಂಧಿಸಿ ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದರು.
Justice S R Krishna Kumar and Karnataka HC
Justice S R Krishna Kumar and Karnataka HC
Published on

ಹಲವು ನಕಲಿ ಕಂಪನಿಗಳ ಮೂಲಕ ವ್ಯವಹಾರ ನಡೆಸಿ ಕೇಂದ್ರಕ್ಕೆ ₹665 ಕೋಟಿ ತೆರಿಗೆ ವಂಚಿಸಿದ್ದಾರೆ ಎಂಬ ಆರೋಪದಡಿ ನ್ಯಾಯಾಂಗ ಬಂಧನದಲ್ಲಿರುವ ಮುಂಬೈನ ಝೆಕ್ರೋಮ್‌ ಎಂಟರ್‌ಪ್ರೈಸಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯ ಮಾಜಿ ನಿರ್ದೇಶಕಿ ರಿತು ನಿತಿನ್‌ ಮಿನೋಚಾ ಅವರಿಗೆ ಕರ್ನಾಟಕ ಹೈಕೋರ್ಟ್‌ ಈಚೆಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಮುಂಬೈನ ರಿತು ನಿತಿನ್‌ ಮಿನೋಚಾ ಮತ್ತು ಮಹೆಕ್‌ ಮಿನೋಚಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ಆರ್‌ ಕೃಷ್ಣಕುಮಾರ್ ಅವರ ಏಕಸದಸ್ಯ ಪೀಠ ಪುರಸ್ಕರಿಸಿದ್ದು, ಅರ್ಜಿದಾರರನ್ನು ಬಿಡುಗಡೆ ಮಾಡುವಂತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧಿಕಾರಿಗಳಿಗೆ ಆದೇಶಿಸಿದೆ.

ಆರೋಪಿ ಅರ್ಜಿದಾರರು ಮುಂದಿನ ವಿಚಾರಣೆವರೆಗೂ ಬೆಂಗಳೂರು ಮಹಾನಗರವನ್ನು ಬಿಟ್ಟು ಹೊರಗೆ ಹೋಗುವಂತಿಲ್ಲ ಎಂಬುದೂ ಸೇರಿದಂತೆ ಸಾಂಪ್ರದಾಯಿಕ ಷರತ್ತುಗಳನ್ನು ವಿಧಿಸಿದ ಪೀಠ ಜಾಮೀನು ನೀಡಿ ಆದೇಶಿಸಿತು.

ಅರ್ಜಿದಾರರ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು “ಅರ್ಜಿದಾರರಿಗೆ ಮುಂಚಿತವಾಗಿ ಸಮನ್ಸ್‌ ಜಾರಿಗೊಳಿಸದೆ, 36 ಗಂಟೆಗಳ ಕಾಲ ಮನೆಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ರಿತು ಅವರು ಇಂತಹುದೇ ಅಪರಾಧಗಳನ್ನು ಮಾಡಿದ್ದಾರೆ ಎಂಬುದನ್ನು ತೋರಿಸುವಂತಹ ಯಾವುದೇ ದಾಖಲೆಗಳನ್ನು ಹಾಜರುಪಡಿಸಿಲ್ಲ. ಅಂದು ಪತಿ ಮನೆಯಲ್ಲಿ ಇರಲಿಲ್ಲ ಎಂಬ ಕಾರಣಕ್ಕೆ ಅವರನ್ನು ಬ್ಲಾಕ್‌ಮೇಲ್‌ ಮಾಡಲು ಪತ್ನಿಯನ್ನು ಬಂಧಿಸಲಾಗಿದೆ” ಎಂದು ದೂರಿದರು.

“ಕಂಪನಿಯ ವ್ಯವಹಾರಗಳಲ್ಲಿ ಅರ್ಜಿದಾರರ ಯಾವುದೇ ಪಾತ್ರ ಇಲ್ಲ. ಅವರ ಮನೆಯ ಶೋಧಕಾರ್ಯ ಕಾನೂನುಬಾಹಿರ. ಬಂಧಿಸಲು ಆಯುಕ್ತರು ಸೂಕ್ತ ಕಾರಣಗಳನ್ನು ನೀಡಿಲ್ಲ. ಇದು ಸಂವಿಧಾನದ 21ನೇ ವಿಧಿಯ ಉಲ್ಲಂಘನೆ. ಆದ್ದರಿಂದ, ಡೈರೆಕ್ಟರ್‌ ಜನರಲ್‌ ಆಫ್‌ ಜಿಎಸ್‌ಟಿ ಇಂಟೆಲಿಜೆನ್ಸ್‌ (ಡಿಜಿಜಿಐ) ಅಧಿಕಾರಿಗಳ ಏಕಪಕ್ಷೀಯ ಕ್ರಮವನ್ನು ಕಾನೂನು ಬಾಹಿರ ಎಂದು ಘೋಷಿಸಿ ಪ್ರಕರಣ ರದ್ದುಪಡಿಸಬೇಕು. ಮಧ್ಯಂತರ ಜಾಮೀನು ಮಂಜೂರು ಮಾಡಬೇಕು” ಎಂದು ಕೋರಿದರು.

ಡಿಜಿಜಿಐ ಪರ ಕೇಂದ್ರ ಸರ್ಕಾರದ ಮಧು ಎನ್‌.ರಾವ್‌ ಅವರು “ಈ ಪ್ರಕರಣವು ಶೇರು ಮಾರುಕಟ್ಟೆಯ ಬಹುದೊಡ್ಡ ಹಗರಣದ ದಿಕ್ಸೂಚಿಯಾಗಿದೆ. ಆದ್ದರಿಂದ, ಆರೋಪಿಗೆ ಜಾಮೀನು ಮಂಜೂರು ಮಾಡಬಾರದು” ಎಂದು ಕೋರಿದರು. 

ಅರ್ಜಿದಾರರ ಪರ ಹೈಕೋರ್ಟ್ ವಕೀಲ ಮನು ಪ್ರಭಾಕರ ಕುಲಕರ್ಣಿ ವಕಾಲತ್ತು ವಹಿಸಿದ್ದರು. 

ಪ್ರಕರಣದ ಹಿನ್ನೆಲೆ: ತೆರಿಗೆ ವಂಚನೆ ಆರೋಪದಡಿ ಬೆಂಗಳೂರು ವಲಯದ ಡಿಜಿಜಿಐ ಅಧಿಕಾರಿಗಳು 2025ರ ಜನವರಿ 6 ಮತ್ತು 7ರಂದು ರಿತು ನಿತಿನ್‌ ಮಿನೋಚಾ ಅವರ ಮುಂಬೈ ನಿವಾಸಕ್ಕೆ ತೆರಳಿ ಶೋಧ ಕಾರ್ಯ ನಡೆಸಿದ್ದರು. 

ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಕಾಯಿದೆ–2017ರ ಸೆಕ್ಷನ್‌ಗಳಾದ 132 (ಬಿ)(ಸಿ), 132 (ಎಲ್‌) (ಐ) ಮತ್ತು 132 (5) ಅನುಸಾರ ತೆರಿಗೆ ವಂಚನೆ ಆರೋಪದಡಿ 2025ರ ಜನವರಿ 20ರಂದು ಅವರನ್ನು ಬಂಧಿಸಿದ್ದ  ಅಧಿಕಾರಿಗಳು ನಗರಕ್ಕೆ ಕರೆತಂದಿದ್ದರು. ಆರ್ಥಿಕ ಅಪರಾಧಗಳ ವಿಚಾರಣೆಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಶ್ವನಾಥ ಸಿ. ಗೌಡರ್‌ ಅವರ ಮುಂದೆ 20205ರ ಜನವರಿ 24ರಂದು  ಹಾಜರುಪಡಿಸಲಾಗಿತ್ತು. ನ್ಯಾಯಾಧೀಶರು ರಿತು ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ್ದರು.

Kannada Bar & Bench
kannada.barandbench.com