ಅಕ್ರಮ ಹಣ ವರ್ಗಾವಣೆ ಪ್ರಕರಣ: ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ಗೆ ವೈದ್ಯಕೀಯ ಜಾಮೀನು ಮಂಜೂರು ಮಾಡಿದ ಹೈಕೋರ್ಟ್‌

ಯಕೃತ್‌ ಕಸಿಗೆ ಒಳಗಾಗಿ ನಂತರ ಕಾಲಕಾಲಕ್ಕೆ ಚಿಕಿತ್ಸೆ ಪಡೆಯುವುದು ಕಷ್ಟವಾಗಲಿದೆ. ಹೀಗಾಗಿ, ಸೈಲ್‌ಗೆ ಷರತ್ತುಬದ್ಧ ವೈದ್ಯಕೀಯ ಜಾಮೀನು ಮಂಜೂರು ಮಾಡಲಾಗಿದೆ ಎಂದು ನ್ಯಾಯಾಲಯ ಹೇಳಿದೆ.
Congress MLA Satish Sail & Karnataka HC
Congress MLA Satish Sail & Karnataka HC
Published on

ಬೇಲೆಕೇರಿ ಅಕ್ರಮ ಅದಿರು ಸಾಗಣೆಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪದ ಮೇಲೆ ಜಾರಿ ನಿರ್ದೇಶನಾಲಯ ದಾಖಲಿಸಿರುವ ಪ್ರಕರಣದಲ್ಲಿ ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ ಅವರಿಗೆ ವೈದ್ಯಕೀಯ ಜಾಮೀನು ಮಂಜೂರು ಮಾಡಿ ಕರ್ನಾಟಕ ಹೈಕೋರ್ಟ್‌ ಗುರುವಾರ ಆದೇಶಿಸಿದೆ.

ಪ್ರಕರಣದ ಸಂಬಂಧ ವಿಚಾರಣೆಗೆ ಸಹಕರಿಸುತ್ತಿಲ್ಲ ಎಂಬ ಆರೋಪದ ಮೇಲೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸತೀಶ್‌ ಸೈಲ್‌ ಅವರಿಗೆ ಜಾಮೀನು ರಹಿತ ಬಂಧನ ವಾರೆಂಟ್‌ ಜಾರಿಗೊಳಿಸಿತ್ತು. ಜಾರಿ ನಿರ್ದೇಶನಾಲಯ (ಇ ಡಿ) ದಾಖಲಿಸಿದ್ದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಂಜೂರಾಗಿದ್ದ ಮಧ್ಯಂತರ ವೈದ್ಯಕೀಯ ಜಾಮೀನು ಮಂಜೂರು ರದ್ದುಪಡಿಸಿತ್ತು. ಈ ಆದೇಶ ಪ್ರಶ್ನಿಸಿ ಸತೀಶ್‌ ಸೈಲ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌ ಸುನೀಲ್‌ ದತ್‌ ಯಾದವ್‌ ಅವರ ಏಕಸದಸ್ಯ ಪೀಠ ಇತ್ಯರ್ಥಪಡಿಸಿದೆ.

ಸತೀಶ್‌ ಸೈಲ್‌ ಅವರನ್ನು ಹಲವು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ವೈದ್ಯರು, ಸೈಲ್‌ ಅವರ ಯಕೃತ್‌ಗೆ ಸಂಬಂಧಿಸಿದ ಸಮಸ್ಯೆಗಳೂ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಅವರಿಗೆ ಯಕೃತ್‌ ಕಸಿ ಮಾಡಬೇಕಿದೆ ಎಂದು ತಿಳಿಸಿ ನ್ಯಾಯಾಲಯಕ್ಕೆ ವರದಿ ಹಾಗೂ ದಾಖಲೆ ಸಲ್ಲಿಸಿದ್ದಾರೆ. ಇನ್ನೂ ಅವರು ಸೆರೆಮನೆಯಲ್ಲಿದ್ದುಕೊಂಡು ಯಕೃತ್‌ ಕಸಿಗೆ ಒಳಗಾಗಿ ನಂತರ ಕಾಲಕಾಲಕ್ಕೆ ಚಿಕಿತ್ಸೆ ಪಡೆಯುವುದು ಕಷ್ಟವಾಗಲಿದೆ. ಹೀಗಾಗಿ, ಸೈಲ್‌ಗೆ ಷರತ್ತುಬದ್ಧ ವೈದ್ಯಕೀಯ ಜಾಮೀನು ಮಂಜೂರು ಮಾಡಲಾಗುತ್ತಿದೆ ಎಂದು ತಿಳಿಸಿತು.

ಸತೀಶ್‌ ಸೈಲ್‌ ಅವರು ಐದು ಲಕ್ಷ ರೂಪಾಯಿ ಮೊತ್ತದ ವೈಯಕ್ತಿ ಬಾಂಡ್‌ ಒದಗಿಸಬೇಕು. ಅದಕ್ಕೆ ಒಬ್ಬರ ಭದ್ರತಾ ಖಾತರಿ ಒದಗಿಸಬೇಕು. ವಿಚಾರಣಾ ನ್ಯಾಯಾಲಯದ ವ್ಯಾಪ್ತಿ ಬಿಟ್ಟು ತೆರಳುವ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು. ವೈದ್ಯಕೀಯ ಸ್ಥಿತಿಗತಿ ಕುರಿತು ಎಂಟು ವಾರಕ್ಕೊಮ್ಮೆ ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು. ಯಕೃತ್‌ ಕಸಿ ಬಗ್ಗೆ ಎರಡು ವಾರದಲ್ಲಿ ಮಾಹಿತಿ ನೀಡಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್‌ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು. ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ಅಡ್ಡಿಪಡಿಸುವಂತಹ ಯಾವುದೇ ಕೃತ್ಯದಲ್ಲಿ ಭಾಗಿಯಾಗಬಾರದು ಎಂದು ಷರತ್ತು ವಿಧಿಸಿದೆ.

ಇದೇ ವೇಳೆ, ಈ ಆದೇಶ ಪ್ರತಿ ಲಭ್ಯವಾಗುವವರೆಗೆ ಸತೀಶ್‌ ಸೈಲ್‌ ಅವರಿಗೆ ಹೈಕೋರ್ಟ್‌ ಈಗಾಗಲೇ ಮಂಜೂರು ಮಾಡಿರುವ ಮಧ್ಯಂತರ ವೈದ್ಯಕೀಯ ಜಾಮೀನು ಮುಂದುವರಿಯಲಿದೆ ಎಂದು ಪೀಠ ಇದೇ ವೇಳೆ ಸ್ಪಷ್ಟಪಡಿಸಿದೆ.

Also Read
ಶಾಸಕ ಸತೀಶ್‌ ಸೈಲ್‌ ವೈದ್ಯಕೀಯ ಜಾಮೀನಿಗೆ ಆಕ್ಷೇಪ: ಅಫಿಡವಿಟ್‌ ಸಲ್ಲಿಸಲು ಇ ಡಿಗೆ ಹೈಕೋರ್ಟ್‌ ನಿರ್ದೇಶನ

ಅಕ್ರಮ ಹಣ ವರ್ಗಾವಣೆ ಕುರಿತಂತೆ 2025ರ ಸೆಪ್ಟೆಂಬರ್‌ 10ರಂದು ಸತೀಶ್‌ ಸೈಲ್‌ ಅವರನ್ನು ಇ ಡಿ ಕಸ್ಟಡಿಗೆ ಪಡೆದಿತ್ತು. ಇ ಡಿ ಕಸ್ಟಡಿಯಲ್ಲಿದ್ದಾಗಲೇ ಸೈಲ್‌ ಅವರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿತ್ತು. 2025ರ ಸೆಪ್ಟೆಂಬರ್‌ 12ರಂದು ಸೈಲ್‌ ಆರೋಗ್ಯ ಪರಿಸ್ಥಿತಿ ವಿಷಮಿಸಿತ್ತು. ಆಗ ಅವರನ್ನು ಇ ಡಿಯು ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿತ್ತು. ನ್ಯಾಯಾಲಯವು ವೈದ್ಯಕೀಯ ಮಧ್ಯಂತರ ಜಾಮೀನು ನೀಡಿತ್ತು. ಆನಂತರ 2025ರ ನವೆಂಬರ್‌ 7ರಂದು ವಿಶೇಷ ನ್ಯಾಯಾಲಯ ವೈದ್ಯಕೀಯ ಜಾಮೀನು ರದ್ದುಪಡಿಸಿತ್ತು. ಆ ಆದೇಶ ಪ್ರಶ್ನಿಸಿ ಸೈಲ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.  ಸತೀಶ್‌ ಸೈಲ್‌ ಅವರಿಗೆ ಮಂಜೂರಾಗಿದ್ದ ಮಧ್ಯಂತರ ವೈದ್ಯಕೀಯ ಜಾಮೀನನ್ನು ಹೈಕೋರ್ಟ್‌ ಮುಂದುವರಿಸಿತ್ತು. ಆ ಜಾಮೀನನ್ನು ಗುರುವಾರ ಕಾಯಂಗೊಳಿಸಲಾಗಿದೆ.

ಇದಕ್ಕೂ ಮುನ್ನ, ಸೈಲ್‌ ಅವರು ಇಎಸ್‌ಐ ಆಸ್ಪತ್ರೆ, ಬೆಂಗಳೂರು ವೈದ್ಯಕೀಯ ಸಂಸ್ಥೆ ಹಾಗೂ ಆನಂತರ ದೆಹಲಿಯ ಏಮ್ಸ್‌ನಲ್ಲಿ ಆರೋಗ್ಯ ತಪಾಸಣೆಗೆ ಒಳಪಟ್ಟಿದ್ದರು. ಜಾರಿ ನಿರ್ದೇಶನಾಲಯದ ಕೋರಿಕೆಯಂತೆ ದೆಹಲಿಯ ಏಮ್ಸ್‌ ವೈದ್ಯರಿಂದ ಸತೀಶ್‌ ಸೈಲ್‌ ಆರೋಗ್ಯ ತಪಾಸಣೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

Kannada Bar & Bench
kannada.barandbench.com