ಸಂತ್ರಸ್ತರಿಗೆ ಪುನರ್ವಸತಿ, ನಿರ್ಗತಿಕರ ಮಾಹಿತಿ ನೀಡಲು ಅಮಿಕಸ್‌ ಕ್ಯೂರಿಗೆ ಏ. 29ರವರೆಗೆ ಕಾಲಾವಕಾಶ ನೀಡಿದ ಹೈಕೋರ್ಟ್‌

ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡಿದ್ದು, ನಿರಾಶ್ರಿತರು ತಾವಿದ್ದ ಜಾಗ ತೊರೆದು ಪುನರ್ವಸತಿ ಕೇಂದ್ರಕ್ಕೆ ಹೋಗಲು ಇಷ್ಟಪಡುತ್ತಿಲ್ಲ. ಬಡಾವಣೆಯಲ್ಲಿಯೇ ಉಳಿದುಕೊಂಡಿದ್ದಾರೆ ಎಂದು ಪೀಠಕ್ಕೆ ತಿಳಿಸಿದ ಅಮಿಕಸ್‌ ಕ್ಯೂರಿ.
Kogilu Layout
Kogilu Layout
Published on

ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿನ ಅಕ್ರಮ ಮನೆಗಳ ತೆರವು ಕಾರ್ಯಾಚರಣೆಯಲ್ಲಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿರುವುದು ಮತ್ತು ನಿರ್ಗತಿಕರಾಗಿರುವ ಮಾಹಿತಿ ಒಳಗೊಂಡ ಅಂತಿಮ ವರದಿ ಸಲ್ಲಿಸಲು ಅಮಿಕಸ್‌ ಕ್ಯೂರಿಗೆ ಏಪ್ರಿಲ್‌ 29ರವರೆಗೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ಕಾಲಾವಕಾಶ ನೀಡಿದೆ.

ತೆರವು ಕಾರ್ಯಾಚರಣೆಯನ್ನು ಅಕ್ರಮ ಹಾಗೂ ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೋರಿ ಕೋಗಿಲು ಬಡಾವಣೆ ನಿವಾಸಿಗಳಾದ ಜೈಬಾ ತಬಸ್ಸುಮ್, ರೆಹನಾ ಮತ್ತು ಆರೀಫ್ ಬೇಗಂ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ನ್ಯಾಯಾಲಯಕ್ಕೆ ಹಾಜರಾಗಿದ್ದ ಅಮಿಕಸ್‌ ಕ್ಯೂರಿ ಬಿ ವಿ ವಿದ್ಯುಲ್ಲತಾ ಅವರು “ಕೋಗಿಲು ಬಡಾವಣೆಯಲ್ಲಿನ ಅಕ್ರಮ ಮನೆಗಳ ತೆರವು ಕಾರ್ಯಾಚರಣೆಯಲ್ಲಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿರುವುದು ಮತ್ತು ನಿರ್ಗತಿಕರಾಗಿರುವ ಮಾಹಿತಿ ಒಳಗೊಂಡ ಅಂತಿಮ ವರದಿಯನ್ನು ಎರಡು-ಮೂರು ವಾರದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡಿದ್ದು, ನಿರಾಶ್ರಿತರು ತಾವಿದ್ದ ಜಾಗ ತೊರೆದು ಪುನರ್ವಸತಿ ಕೇಂದ್ರಕ್ಕೆ ಹೋಗಲು ಇಷ್ಟಪಡುತ್ತಿಲ್ಲ. ಬಡಾವಣೆಯಲ್ಲಿಯೇ ಉಳಿದುಕೊಂಡಿದ್ದಾರೆ” ಎಂದು ತಿಳಿಸಿದರು.

ಇದರಿಂದ ಪುನರ್ವಸತಿ ವ್ಯವಸ್ಥೆ ಕುರಿತು ಅಂತಿಮ ವರದಿ ಸಲ್ಲಿಸಲು ಏಪ್ರಿಲ್‌ 29ರವರೆಗೆ ಅಮಿಕಸ್‌ ಕ್ಯೂರಿ ಅವರಿಗೆ ಕಾಲಾವಕಾಶ ನೀಡಿದ ಪೀಠ ಅರ್ಜಿ ವಿಚಾರಣೆಯನ್ನು ಮುಂದೂಡಿತು.

Kannada Bar & Bench
kannada.barandbench.com