ಜಪಾನ್‌ ಸರ್ಕಾರದ ಆದರ್ಶ ನಡೆ ಪ್ರಸ್ತಾಪಿಸಿ ರಾಜ್ಯ ಸರ್ಕಾರ, ಅಧಿಕಾರಿಗಳ ಕಿವಿ ಹಿಂಡಿದ ಹೈಕೋರ್ಟ್‌

ವಿದ್ಯಾರ್ಥಿನಿಯೊಬ್ಬಳ ಕಲಿಕೆ ಸಲುವಾಗಿ ರೈಲು ಸೇವೆ ಒದಗಿಸಿದ್ದ ಜಪಾನ್ ಸರ್ಕಾರಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ, ನಮ್ಮ ಅಧಿಕಾರಿಗಳು ಶಾಲೆ ಕಟ್ಟಡ ನಿರ್ಮಿಸದೇ ಮಕ್ಕಳ ಶಿಕ್ಷಣ ಹಕ್ಕಿನ ಹರಣ ಮಾಡುತ್ತಿದ್ದಾರೆ ಎಂದ ನ್ಯಾಯಾಲಯ.
Karnataka High Court
Karnataka High Court

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿ ಯೋಜನೆಗಾಗಿ ನೆಲಸಮಗೊಳಿಸಲಾಗಿರುವ ಸರ್ಕಾರಿ ಪ್ರಾಥಮಿಕ ಶಾಲೆ ಕಟ್ಟಡವೊಂದರ ಮರು ನಿರ್ಮಾಣಕ್ಕೆ ಅನುಮತಿ ನೀಡದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವ ಕರ್ನಾಟಕ ಹೈಕೋರ್ಟ್, ಜೂನ್‌ 1ರೊಳಗೆ ಶಾಲೆಯ ಕಟ್ಟಡಕ್ಕಾಗಿ ಜಾಗ ಗುರುತಿಸಬೇಕು. ಅದಾದ ನಾಲ್ಕು ತಿಂಗಳ ಒಳಗೆ ಶಾಲಾ ಕಟ್ಟಡ ನಿರ್ಮಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದೆ.

ಶಾಲಾ ಕಟ್ಟಡದ ನಿರ್ಮಾಣಕ್ಕೆ ಜಾಗ ಗುರುತಿಸಿದ ಮತ್ತು ಅನುಮತಿ ನೀಡಲು ಮೀನಮೇಷ ಎಣಿಸುತ್ತಿರುವ ಅಧಿಕಾರಿಗಳ ಧೋರಣೆ ಆಕ್ಷೇಪಿಸಿ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಅಗರಲಿಂಗನ ದೊಡ್ಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (ಎಸ್‌ಡಿಎಂಸಿ) ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

ಈ ವೇಳೆ ನ್ಯಾಯಾಲಯವು, ಜೂನ್‌ 1ರೊಳಗೆ ಶಾಲೆಯ ಕಟ್ಟಡಕ್ಕಾಗಿ ಜಾಗ ಗುರುತಿಸಬೇಕು. ನಂತರದ ನಾಲ್ಕು ತಿಂಗಳ ಒಳಗೆ ಶಾಲಾ ಕಟ್ಟಡ ನಿರ್ಮಾಣ ಮಾಡಬೇಕು ಎಂದು ಸರ್ಕಾರಕ್ಕೆ ಹಾಗೂ ಅಧಿಕಾರಿಗಳಿಗೆ ತಾಕೀತು ಮಾಡಿತು. ಅಲ್ಲದೆ ಈ ಆದೇಶದ ಅನುಪಾಲನಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಆದೇಶಿಸಿತು.

ಜಪಾನ್ ದೇಶದ ಎರಡನೇ ಅತಿದೊಡ್ಡ ದ್ವೀಪ ಭಾಗವಾಗಿರುವ ಹೊಕ್ಕೈಡೊ ಎಂಬಲ್ಲಿನ ರೈಲು ನಿಲ್ದಾಣದ ಕಾರ್ಯಾಚರಣೆ ನಿಲ್ಲಿಸಲು ಸ್ಥಳೀಯಾಡಳಿತ ಮುಂದಾಗಿತ್ತು. ಆದರೆ, ಹಳ್ಳಿಯಿಂದ ವಿದ್ಯಾರ್ಥಿನಿಯೊಬ್ಬಳು ರೈಲಿನಲ್ಲಿ ಪ್ರಯಾಣಿಸಿ ಪ್ರೌಢಶಾಲೆಗೆ ತೆರಳಿ ವ್ಯಾಸಂಗ ಮಾಡುತ್ತಿರುವುದು ಸರ್ಕಾರಕ್ಕೆ ತಿಳಿಯಿತು. ಇದರಿಂದ ವಿದ್ಯಾರ್ಥಿನಿ ಪದವಿಯವರೆಗೆ ಶಿಕ್ಷಣ ಪೂರೈಸುವರೆಗೂ ಸರ್ಕಾರವು ರೈಲು ಕಾರ್ಯಾಚರಣೆಯನ್ನು ಮುಂದುವರೆಸಿತ್ತು. ಕೇವಲ ವಿದ್ಯಾರ್ಥಿನಿಯೊಬ್ಬಳಿಗೆ ರೈಲು ಸೇವೆ ಒದಗಿಸಿದ ವಿಷಯ ತಿಳಿದು, ಜಪಾನ್ ಸರ್ಕಾರಕ್ಕೆ ವಿಶ್ವಾದ್ಯಂತ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ, ನಮ್ಮ ಸರ್ಕಾರಿ ಅಧಿಕಾರಿಗಳು ಶಾಲೆ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡದೆ ಮಕ್ಕಳ ಶಿಕ್ಷಣ ಹಕ್ಕು ಹರಣ ಮಾಡುತ್ತಿದ್ದಾರೆ. ಪ್ರತಿ ಪ್ರಜೆಯ ಹಕ್ಕಿನ ವಿಚಾರವನ್ನು ಅಧಿಕಾರಿಗಳು ಪರಿಗಣಿಸಬೇಕು. ಯಾವೊಂದು ಮಗು ಸಹ ತನ್ನ ಹಕ್ಕಿನಿಂದ ವಂಚಿತರವಾಗಬಾರದು. ಇದನ್ನು ಸರ್ಕಾರಿ ಅಧಿಕಾರಿಗಳು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಪೀಠ ತಿಳಿ ಹೇಳಿದೆ.

ಎಸ್‌ಡಿಎಂಸಿ ಮನವಿ ಪರಿಗಣಿಸದೆ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕುನ್ನು ಅಧಿಕಾರಿಗಳು ಉಲ್ಲಂಘಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳನ್ನು ಅಧಿಕಾರಿಗಳು ಕೆಟ್ಟದಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಶಿಕ್ಷಣ ಪಡೆಯುವುದು ಮಕ್ಕಳ ಮೂಲಭೂತ ಹಕ್ಕು ಎಂದು ಪೀಠವು ನೆನಪಿಸಿದೆ.

ಪ್ರಕರಣದ ಹಿನ್ನೆಲೆ: ಬೆಂಗಳೂರು-ಮೈಸೂರು ಹೆದ್ದಾರಿಗೆ ಹೊಂದಿಕೊಂಡಿರುವ ಅಗರಲಿಂಗನ ದೊಡ್ಡಿಯಲ್ಲಿ ಸರ್ಕಾರಿ ಶಾಲೆ ನಡೆಯುತ್ತಿತ್ತು. ಹೆದ್ದಾರಿ ಮಾರ್ಗವನ್ನು ಎಕ್ಸ್‌ಪ್ರೆಸ್ ಹೈವೆಯನ್ನಾಗಿ ಮೇಲ್ದರ್ಜೆಗೇರಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಶಾಲೆಯ ಜಾಗ ಮತ್ತು ಕಟ್ಟಡವನ್ನು ವಶಕ್ಕೆ ಪಡೆದಿತ್ತು. ಆ ಜಾಗಕ್ಕೆ 66.75 ಲಕ್ಷ ರೂಪಾಯಿ ಪರಿಹಾರವನ್ನೂ ನೀಡಿತ್ತು. ಶಾಲೆಯಲ್ಲಿ 1ರಿಂದ 5ನೇ ತರಗತಿಯವರೆಗಿನ 25 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸದ್ಯ ಶೌಚಾಲಯ ಸೇರಿ ಅಗತ್ಯ ಸೌಲಭ್ಯಗಳಿಲ್ಲದ ಪುಟ್ಟದಾದ ಖಾಸಗಿ ಕಟ್ಟಡದಲ್ಲಿ ಶಾಲೆ ನಡೆಯುತ್ತಿದೆ.

ಆದರೆ, ಸುಮಾರು ಮೂರು ವರ್ಷ ಕಳೆದರೂ ಸರ್ಕಾರ ಮತ್ತು ಅಧಿಕಾರಿಗಳು ಶಾಲಾ ಕಟ್ಟಡ ನಿರ್ಮಾಣಕ್ಕೆ ಮುಂದಾಗಿಲ್ಲ. ಇದರಿಂದ ಶಾಲೆಗೆ ಬಂದಿದ್ದ ಪರಿಹಾರ ಮೊತ್ತದಲ್ಲಿ ಶಾಲೆಗೆ ಜಾಗ ಮತ್ತು ಕಟ್ಟಡ ನಿರ್ಮಾಣಕ್ಕಾಗಿ ಅನುಮತಿ ನೀಡುವಂತೆ ಕೋರಿ ಎಸ್‌ಡಿಎಂಸಿ ಸದಸ್ಯರು ಸಲ್ಲಿಸಿದ್ದ ಮನವಿ ಬಗ್ಗೆ ಮಂಡ್ಯ ಜಿಲ್ಲಾಧಿಕಾರಿ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಪೂರಕವಾಗಿ ಸ್ಪಂದಿಸದಿರುವುದಕ್ಕೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.

Kannada Bar & Bench
kannada.barandbench.com