
“ಅಜ್ಞಾನದಲ್ಲಿ ಹುದುಗಿರುವ ಕರ್ತವ್ಯ ಲೋಪಕ್ಕೆ ನ್ಯಾಯಾಲಯ ಆಶ್ರಯ ನೀಡುವುದಿಲ್ಲ” ಎಂದು ಕಟುವಾಗಿ ನುಡಿದಿರುವ ಕರ್ನಾಟಕ ಹೈಕೋರ್ಟ್, ಹೆಚ್ಚುವರಿ ಸರ್ಕಾರಿ ಅಭಿಯೋಜಕಿಯಾಗಿ ನೇಮಕವಾಗಿದ್ದ ಮಹಿಳೆಯೊಬ್ಬರಿಗೆ ಜಾತಿ ಪ್ರಮಾಣ ಪತ್ರ ನೀಡುವಾಗ ಉದ್ದೇಶಪೂರ್ವಕವಾಗಿ ಕಾನೂನಿನ ಬಗ್ಗೆ ಉದಾಸೀನ ತೋರಿದ್ದಕ್ಕೆ ಹಾಸನ ಜಿಲ್ಲಾಧಿಕಾರಿಯೂ ಆಗಿರುವ ಜಿಲ್ಲಾ ಜಾತಿ ಮತ್ತು ಆದಾಯ ಪರಿಶೀಲನಾ ಸಮಿತಿ ಅಧ್ಯಕ್ಷರು ಸೇರಿ ಎಲ್ಲಾ ಸದಸ್ಯರಿಗೆ 2 ಲಕ್ಷ ದಂಡ ವಿಧಿಸಿದ್ದು, ಅದನ್ನು ತಮ್ಮದೇ ಜೇಬಿನಿಂದ ಒಂದು ತಿಂಗಳಲ್ಲಿ ಪಾವತಿಸುವಂತೆ ಆದೇಶಿಸಿದೆ.
ಜಾತಿ ಮತ್ತು ಆದಾಯ ಪ್ರಮಾಣ ಪತ್ರಯು ಯಾವಾಗಲೂ ತಂದೆಯ ಆದಾಯವನ್ನು ಆಧರಿಸಿರುತ್ತದೆಯೇ ವಿನಾ ಪತಿಯ ಆದಾಯವನ್ನಲ್ಲ ಎಂದು ಪುನರುಚ್ಚರಿಸಿರುವ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಬಿ ಎನ್ ಮುತ್ತುಲಕ್ಷ್ಮಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಇತ್ಯರ್ಥಪಡಿಸಿದೆ.
ಹೆಚ್ಚುವರಿ ಸರ್ಕಾರಿ ಅಭಿಯೋಜಕಿಯಾಗಿ ಆಯ್ಕೆಯಾಗಿರುವ ಅರ್ಜಿದಾರೆಯಾಗಿರುವ ಮುತ್ತುಲಕ್ಷ್ಮಿ ಅವರು ವೇತನ ಮತ್ತು ಹಣಕಾಸಿನ ಸೌಲಭ್ಯಗಳನ್ನು ಹೊರತುಪಡಿಸಿ ಎಲ್ಲಾ ಸೌಲಭ್ಯಗಳಿಗೂ ಅರ್ಹರಾಗಿದ್ದಾರೆ ಎಂದು ನ್ಯಾಯಾಲಯ ಆದೇಶಿಸಿದೆ.
ಜಿಲ್ಲಾ ಜಾತಿ ಮತ್ತು ಆದಾಯ ಪರಿಶೀಲನಾ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಉದ್ದೇಶಪೂರ್ವಕವಾಗಿ ಕಾನೂನನ್ನು ಉಪೇಕ್ಷಿಸಿದ್ದು, ಇದರಿಂದ ಮುತ್ತುಲಕ್ಷ್ಮಿ ಅವರು ಅನಗತ್ಯವಾಗಿ ನ್ಯಾಯಾಲಯದ ಮೆಟ್ಟಿಲೇರುವಂತಾಗಿದೆ. ಇದರಿಂದ ಅವರಿಗೆ 12 ತಿಂಗಳು ಉದ್ಯೋಗ ನಷ್ಟವಾಗಿರುವುದರಿಂದ ಸಮಿತಿಯ ಸದಸ್ಯರು ಅದರ ನಷ್ಟವನ್ನು ವೈಯಕ್ತಿಕವಾಗಿ ತುಂಬಿಕೊಡಬೇಕಿದೆ. ದುಬಾರಿ ದಂಡ ವಿಧಿಸುವುದು ಅರ್ಜಿದಾರೆಗೆ ನಷ್ಟ ತುಂಬಿಕೊಡುವುದಕ್ಕೆ ಮಾತ್ರವಲ್ಲ, ಸರ್ಕಾರಿ ಕೆಲಸದಲ್ಲಿರುವವರಿಗೆ ನಿರ್ಲಕ್ಷ್ಯದಿಂದ ಉಂಟು ಮಾಡುವ ಕರ್ತವ್ಯಲೋಪಕ್ಕೆ ನ್ಯಾಯಾಲಯ ಯಾವುದೇ ಆಶ್ರಯ ಒದಗಿಸುವುದಿಲ್ಲ ಎಂಬುದನ್ನು ಎಚ್ಚರಿಸುವುದಕ್ಕಾಗಿದೆ ಎಂದು ನ್ಯಾಯಾಲಯ ಹೇಳಿದೆ.
ನ್ಯಾಯದಾನವನ್ನು ವಿಳಂಬಿಸುವುದೆಂದರೆ ಅದನ್ನು ಮುಕ್ಕುಗೊಳಿಸಿದಂತೆ ಎಂದು ಹೇಳುವುದು ಅಗತ್ಯವಾಗಿದೆ ಎಂದಿರುವ ನ್ಯಾಯಾಲಯವು ಅರ್ಜಿದಾರೆಯ ಜೊತೆಗೆ ಹೆಚ್ಚುವರಿ ಸರ್ಕಾರಿ ಅಭಿಯೋಜಕರಾಗಿ ಆಯ್ಕೆಯಾಗಿರುವವರು ಸೇವೆಗೆ ಹಾಜರಾಗಿದ್ದಾರೆ. ಅರ್ಜಿದಾರೆಯ ಕತೆ ಡೋಲಾಯಮಾನವಾಗಿದೆ. ಆಕೆಯ ಶಾಸನಬದ್ಧ ಆಕಾಂಕ್ಷೆಯು ಅಧಿಕಾರಿಗಳ ಉದಾಸೀನತೆ ಭಾರಕ್ಕೆ ಸಿಲುಕಿದವು. ಹೀಗಾಗಿ, ಈ ಪ್ರಕರಣ ಹಾಗೆ ಮುಚ್ಚಿ ಹೋಗಲು ನ್ಯಾಯಾಲಯ ಅವಕಾಶ ಕೊಡಲಾಗದು. ಕಾನೂನು ಸ್ಪಷ್ಟವಾಗಿದ್ದು, ಪೂರ್ವನಿದರ್ಶನ ಪಾಲಿಸಬೇಕಿದೆ. ಅದಾಗ್ಯೂ, ಅಧಿಕಾರಿಗಳು ವಿನಾಯಿತಿ ಪಡೆದು ವಿರುದ್ಧವಾಗಿ ನಡೆದುಕೊಂಡಿದ್ದು, ನ್ಯಾಯ ವಿರೋಧಿ ದಾಖಲೆ ಬರೆದ ಸಮಿತಿಯ ಸದಸ್ಯರು ತಮ್ಮ ಅವಿವೇಕದ ಹೊಣೆ ಹೊರಬೇಕಿದೆ” ಎಂದು ನ್ಯಾಯಾಲಯ ಆದೇಶಿಸಿದೆ.
ಈ ನ್ಯಾಯಾಲಯ ಕಟು ನಿರ್ದೇಶನ ನೀಡಿದ ಬಳಿಕ ನಿದ್ರಾಕೂಪದಲ್ಲಿ ಮುಳುಗಿದ್ದ ಅಧಿಕಾರಿಗಳು ಸಿಂಧುತ್ವ ಸರ್ಟಿಫಿಕೇಟ್ ನೀಡಿದ್ದು, ಆನಂತರ ಆಕೆಗೆ ನೇಮಕಾತಿ ಆದೇಶ ದೊರೆತಿದೆ. ಅದಾಗ್ಯೂ, ಅ ಉಪೇಕ್ಷೆ ನಡೆದುಕೊಂಡಿರುವ ಸರ್ಕಾರವನ್ನು ಸುಮ್ಮನೆ ಬಿಡಲಾಗದು ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣದ ಹಿನ್ನೆಲೆ: 30-09-2019ರಂದು 181 ಸಹಾಯಕ ಸರ್ಕಾರಿ ಅಭಿಯೋಜಕರ ಹುದ್ದೆ ತುಂಬಲು ಅಭಿಯೋಜನಾ ಮತ್ತು ಸರ್ಕಾರಿ ದಾವೆ ಇಲಾಖೆಯು ಅಧಿಸೂಚನೆ ಹೊರಡಿಸಿತ್ತು. 17-01-2023 ರಂದು ಮುತ್ತುಲಕ್ಷ್ಮಿ ಅವರು 3A ವಿಭಾಗದಡಿ ಹುದ್ದೆಗೆ ಆಯ್ಕೆಯಾಗಿದ್ದರು. ಆನಂತರ 25-05-2023ರಂದು ಪರಿಶೀಲನೆಗಾಗಿ ಅವರು ಎಲ್ಲಾ ದಾಖಲೆಗಳನ್ನು ಸೇವಾ ಸಿಂಧು ಪೋರ್ಟಲ್ ಮೂಲಕ ಸಲ್ಲಿಕೆ ಮಾಡಿದ್ದರು. ಇದೇ ದಾಖಲೆಗಳನ್ನು ತಾಲ್ಲೂಕು ಜಾತಿ ಮತ್ತು ಆದಾಯ ಪರಿಶೀಲನಾ ಸಮಿತಿಗೆ ನೀಡಿದ್ದರು. ಆದರೆ, ತಾಲ್ಲೂಕು ಅಧಿಕಾರಿಯು ತಾಲ್ಲೂಕು ಹಿಂದುಳಿದ ವರ್ಗಗಳ ಜಾತಿ ಮತ್ತು ಆದಾಯ ಪರಿಶೀಲನಾ ಅಧಿಕಾರಿಯನ್ನು ಮುತ್ತುಲಕ್ಷ್ಮಿ ಅವರ ಮನೆ ಪರಿಶೀಲನೆಗೆ ಕಳುಹಿಸಿ, ಪರಿಶೀಲನಾ ವರದಿ ಪಡೆದಿದ್ದರು. ವರದಿಯಲ್ಲಿ ಮುತ್ತುಲಕ್ಷ್ಮಿ ಅವರ ಪತಿಯು ಖಾಸಗಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿರುವುದರಿಂದ ಅವರ ಜಾತಿ ಮತ್ತು ಆದಾಯ ಪ್ರಮಾಣ ಪತ್ರವು ಪತ್ನಿಯ ಆದಾಯವನ್ನು ಆಧರಿಸಬೇಕು. ಹೀಗಾಗಿ, ಸಿಂಧುತ್ವ ಸರ್ಟಿಫಿಕೇಟ್ ನೀಡಬಾರದು ಎಂದು ವರದಿ ನೀಡಿದ್ದರು.
ಆದರೆ, ಮುತ್ತುಲಕ್ಷ್ಮಿ ಅವರು ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನೀಡುವಾಗ ತಂದೆಯ ಆದಾಯ ಪರಿಗಣಿಸಬೇಕೆ ವಿನಾ ಪತಿಯದ್ದಲ್ಲ ಎಂದು ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ತೀರ್ಪಿದೆ ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲು ಯತ್ನಿಸಿದ್ದರು. ಇದು ಕೈಗೂಡದೇ ಇದ್ದಾಗ ಅವರು ಹೈಕೋರ್ಟ್ ಕದತಟ್ಟಿದ್ದರು.
ಅರ್ಜಿದಾರೆಯ ಪರವಾಗಿ ಎ ಆರ್ ಶಾರದಾಂಬ, ಸರ್ಕಾರದ ಪರವಾಗಿ ಸ್ಫೂರ್ತಿ ಹೆಗಡೆ ವಾದಿಸಿದ್ದರು.