ಬಡವಾಣೆ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡ ಜಮೀನಿಗೆ ಬದಲಾಗಿ ಅದರ ಮಾಲೀಕರಿಗೆ ಐದು ದಶಕ ಕಳೆದರೂ ಪರಿಹಾರ ನೀಡದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವಿರುದ್ಧ ಈಚೆಗೆ ಕಿಡಿಕಾರಿರುವ ಕರ್ನಾಟಕ ಹೈಕೋರ್ಟ್, ಬಿಡಿಎಗೆ ₹25,000 ದಂಡ ವಿಧಿಸಿದೆ.
ಬೆಂಗಳೂರಿನ ಆರ್ ಟಿ ನಗರದ ಕಾವಲಬೈರಸಂದ್ರದ ನಿವಾಸಿ ಎ ಲಕ್ಷ್ಮಿಪತಿ ಸಲ್ಲಿಸಿದ್ದ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.
ಭೂಮಾಲೀಕರಿಗೆ ಪಾವತಿಸಬೇಕಾದ ₹45,150 ಪರಿಹಾರದ ಮೊತ್ತ ಹಾಗೂ ದಂಡದ ರೂಪದಲ್ಲಿ ಹೆಚ್ಚುವರಿಯಾಗಿ ₹25,000ಗಳನ್ನು ನಾಲ್ಕು ವಾರಗಳಲ್ಲಿ ಪಾವತಿಸಬೇಕು ಎಂದು ಆದೇಶಿಸಿ, ಅರ್ಜಿಯನ್ನು ಇತ್ಯರ್ಥಪಡಿಸಿತು.
ಬಡಾವಣೆ ನಿರ್ಮಾಣಕ್ಕೆ ಮಠದಹಳ್ಳಿಯಲ್ಲಿ ಅರ್ಜಿದಾರರಿಗೆ ಸೇರಿದ 3 ಎಕರೆ ಜಮೀನನ್ನು 1972-73ರಲ್ಲಿ ಬಿಡಿಎ ಸ್ವಾಧೀನಪಡಿಸಿಕೊಂಡಿತ್ತು. ಅದಕ್ಕೆ ₹45,150 ಪರಿಹಾರ ಸಹ ನಿಗದಿಯಾಗಿತ್ತು. ಆದರೆ, ಐದು ದಶಕ ಕಳೆದರೂ ಪರಿಹಾರ ಸಿಕ್ಕಿಲ್ಲ. ನ್ಯಾಯ ಪಡೆದುಕೊಳ್ಳಲು ಭೂಮಿ ಕಳೆದರುಕೊಂಡವರು ಕಚೇರಿಯಿಂದ ಕಚೇರಿಗೆ ಅಲೆದಿದ್ದಾರೆ, ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಏಕಸದಸ್ಯ ಪೀಠವು ಭೂಮಾಲೀಕರ ಪರವಾಗಿ ಆದೇಶವೂ ಮಾಡಿದೆ, ಅದನ್ನೂ ಪಾಲಿಸಿಲ್ಲ. ಅದಕ್ಕಾಗಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಬೇಕಾಯಿತು, ಕಾನೂನು ಹೋರಾಟ ನಡೆಸಲು ಆರ್ಥಿಕ ಸಮಸ್ಯೆಯನ್ನೂ ಎದುರಿಸಬೇಕಾಯಿತು. ಇದೆಲ್ಲವೂ ಆಗಿದ್ದು ಬಿಡಿಎಯ ನಿರ್ಲಕ್ಷ್ಯದಿಂದ. ಇದು ಬಿಡಿಎಗೆ ಬಿಸಿ ಮುಟ್ಟಿಸುವಂತಹ ಪ್ರಕರಣ. ಬಿಡಿಎ ಬುದ್ದಿ ಕಲಿಯಬೇಕು ಮತ್ತು ಭವಿಷ್ಯದಲ್ಲಿ ಈ ರೀತಿ ಆಗಬಾರದು ಎಂದು ಬಿಡಿಎಗೆ ₹25,000 ದಂಡ ವಿಧಿಸಲಾಗುತ್ತಿದೆ. ಆ ಹಣವನ್ನು ಬಿಡಿಎ ಜಮೀನು ಕಳೆದುಕೊಂಡವರಿಗೆ ಪಾವತಿಸಬೇಕು ಎಂದು ಪೀಠ ಹೇಳಿದೆ.
ಭೂಪರಿಹಾರ ವಿತರಿಸುವಂತೆ 2022ರ ನವೆಂಬರ್ 3ರಂದು ಏಕಸದಸ್ಯ ಪೀಠ ಆದೇಶಿಸಿತ್ತು. ಅದನ್ನು ಬಿಡಿಎ ಪಾಲಿಸಿರಲಿಲ್ಲ. ಅದಕ್ಕಾಗಿ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿತ್ತು. ಮುಖ್ಯ ಕಾರ್ಯದರ್ಶಿ ವಂದಿತ ಶರ್ಮಾ, ಬಿಡಿಎ ಆಯುಕ್ತ ಕುಮಾರ ನಾಯ್ಕ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು.