ಜಿಎಸ್‌ಟಿ ಪೂರ್ವದ ಸರ್ಕಾರಿ ಕಾಮಗಾರಿಗಳ ತೆರಿಗೆ ಪಾವತಿ ಗೊಂದಲ ಪರಿಹರಿಸಲು ಹೈಕೋರ್ಟ್‌ನಿಂದ ಮಹತ್ವದ ನಿರ್ದೇಶನ

ಕಾಮಗಾರಿಗಳ ವಿಚಾರದಲ್ಲಿ ಜಿಎಸ್‌ಟಿ ಜಾರಿಯಾದ ಮೇಲೆ 2017ರ ಜುಲೈ 1ರಿಂದ ಆಗಸ್ಟ್‌ 21ರವರೆಗೆ ಶೇ.18ರಷ್ಟು ಮತ್ತು 2017ರ ಆಗಸ್ಟ್‌ 22ರಿಂದ ಶೇ.12ರಷ್ಟು ತೆರಿಗೆ (ಜಿಎಸ್‌ಟಿ) ಪಾವತಿ ಮಾಡಲು ಪ್ರಾಧಿಕಾರಗಳು ಗುತ್ತಿಗೆದಾರರಿಗೆ ಆದೇಶಿಸಿದ್ದವು.
Justice S R Krishna Kumar and Karnataka HC
Justice S R Krishna Kumar and Karnataka HC

ಸರಕು ಮತ್ತು ಸೇವೆಗಳ ತೆರಿಗೆ ಕಾಯಿದೆ (ಜಿಎಸ್‌ಟಿ) ಜಾರಿಯಾಗುವ ಮುನ್ನ ಸರ್ಕಾರಿ ಗುತ್ತಿಗೆ ಕಾಮಗಾರಿಗಳ ಟೆಂಡರ್ ಪಡೆದು, ಜಿಎಸ್‌ಟಿ ಜಾರಿಯಾದ ನಂತರ ಕಾಮಗಾರಿ ಪೂರ್ಣಗೊಳಿಸಿದ ಪ್ರಕರಣಗಳ ಸಂಬಂಧ ತೆರಿಗೆ ಪಾವತಿಸುವ ವಿಚಾರದಲ್ಲಿ ಉದ್ಭವಿಸಿದ್ದ ಗೊಂದಲನ್ನು ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಈಚೆಗೆ ಹಲವು ನಿರ್ದೇಶನ ನೀಡಿದೆ [ಚಂದ್ರಶೇಖರಯ್ಯ ಮತ್ತು ಇತರರು ವರ್ಸಸ್‌ ಕರ್ನಾಟಕ ರಾಜ್ಯ ಮತ್ತು ಇತರರು].

ಬೆಂಗಳೂರಿನ ಸಿ ಚಂದ್ರಶೇಖರಯ್ಯ ಮತ್ತು ನಂದೀಶ್ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಸರ್ಕಾರಿ ಕಾಮಗಾರಿ ನಡೆಸಿದ ಹಲವು ಗುತ್ತಿಗೆದಾರರು ಮತ್ತು ಗುತ್ತಿಗೆ ಕಂಪೆನಿಗಳು ಸಲ್ಲಿಸಿದ್ದ 15ಕ್ಕೂ ಅಧಿಕ ಅರ್ಜಿಗಳ ವಿಚಾರಣೆ ನಡೆಸಿ ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ಅವರ ನೇತೃತ್ವದ ಏಕಸದಸ್ಯ ಪೀಠವು ಈ ಆದೇಶ ಮಾಡಿದೆ.

ಜಿಎಸ್‌ಟಿ ಜಾರಿಗೂ ಮುನ್ನ ಕರ್ನಾಟಕ ಮೌಲ್ಯವರ್ಧಿತ ತೆರಿಗೆ (ಕೆವ್ಯಾಟ್) ವ್ಯವಸ್ಥೆ ಇದ್ದಾಗ ನಡೆದಿರುವ ಸರ್ಕಾರಿ ಗುತ್ತಿಗೆ ಕೆಲಸಗಳು ಮತ್ತು ಇದಕ್ಕೆ ಗುತ್ತಿಗೆದಾರರಿಗೆ ಸಂದಾಯವಾಗಿರುವ ಹಣವನ್ನು ಲೆಕ್ಕ ಹಾಕಿ ಜಿಎಸ್‌ಟಿ ಜಾರಿಯಾಗುವ (2017ರ ಜುಲೈ 1) ಮುನ್ನ ಪಡೆದಿರುವ ಹಣವನ್ನು ವ್ಯಾಟ್ ವ್ಯವಸ್ಥೆ ಅಡಿ ಲೆಕ್ಕಹಾಕಬೇಕು ಎಂಬುದು ಸೇರಿದಂತೆ ಹಲವು ನಿರ್ದೇಶನಗಳನ್ನು ನೀಡಿದೆ.

ಜಿಎಸ್‌ಟಿ ತೆರಿಗೆ ಜಾರಿಗೆ ಬಂದ ನಂತರ ಬಾಕಿ ಉಳಿದಿರುವ ಕೆಲಸವನ್ನು ಪೂರೈಸಲು ಬಳಸಲಾಗಿರುವ ವಸ್ತುಗಳು ಅಥವಾ ಅಗತ್ಯವಿರುವ ವಸ್ತುಗಳ ಕೆವ್ಯಾಟ್‌ ಅನ್ನು ಲೆಕ್ಕ ಹಾಕಬೇಕು. ಅವುಗಳಿಂದ ಅಗತ್ಯವಾದಲ್ಲಿ ಕೆವ್ಯಾಟ್‌ ಹಣವನ್ನು ಕಡಿತಗೊಳಿಸಬೇಕು, ತದನಂತರ ಜಿಎಸ್‌ಟಿಯನ್ನು ಅವುಗಳಿಗೆ ಅನ್ವಯಿಸಬೇಕು.

2017ರ ಜುಲೈ 1ರ ಬಳಿಕ ಬಾಕಿಯಿರುವ ಕೆಲಸಗಳ ಮೇಲಿನ ತೆರಿಗೆ ವ್ಯತ್ಯಾಸವನ್ನು ಲೆಕ್ಕಹಾಕಬೇಕು. ಗುತ್ತಿಗೆ ಮೌಲ್ಯದ ಮೇಲಿನ ತೆರಿಗೆ ವ್ಯತ್ಯಾಸವನ್ನು ಲೆಕ್ಕಹಾಕಿದ ಬಳಿಕ ಸಂಬಂಧಿತ ಇಲಾಖೆಯು ಗುತ್ತಿಗೆಯ ಕರಾರನ್ನು ಬದಲಾಯಿಸಬೇಕೇ ಎಂಬುದನ್ನು ತೀರ್ಮಾನಿಸಬೇಕು. ಬಾಕಿ ಕೆಲಸಕ್ಕೆ ಪರಿಷ್ಕೃತ ಜಿಎಸ್‌ಟಿ ಸೇರಿಸಿ ಕೆಲಸದ ಮೌಲ್ಯವನ್ನು ಒಳಗೊಂಡಿರುವುದಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರರ ಜೊತೆಗೆ ಪೂರಕ ಕರಾರು ಮಾಡಿಕೊಳ್ಳಬಹುದು. ಒಂದು ವೇಳೆ ಜಿಎಸ್‌ಟಿ ಮುನ್ನ ಪೂರ್ಣಗೊಳಿಸಿರುವ ಅದಕ್ಕೆ ಜೆಎಸ್‌ಟಿ ಜಾರಿ ನಂತರ ಹಣ ಪಾವತಿಸಿದ್ದರೆ, ವ್ಯತ್ಯಾಸವಾದ ತೆರಿಗೆ ಹಣವನ್ನು ಅರ್ಜಿದಾರರಿಗೆ ಸಂಬಂಧಪಟ್ಟ ಸರ್ಕಾರಿ ಪ್ರಾಧಿಕಾರಗಳು ಹಿಂದಿರುಗಿಸಬೇಕು ಎಂದು ಪೀಠವು ನಿರ್ದೇಶಿಸಿದೆ.

ಜಿಎಸ್‌ಟಿ ನಂತರ ಸ್ವೀಕರಿಸಿದ ಹಣ ಮತ್ತು ಸ್ವೀಕರಿಸಬೇಕಾದ ಹಣವನ್ನು ಲೆಕ್ಕಿಸದೇ ಹೈಕೋರ್ಟ್ ಆದೇಶ ಪ್ರತಿ ದೊರೆತ ನಾಲ್ಕು ವಾರಗಳ ಒಳಗೆ ಅರ್ಜಿದಾರರು ಸಂಬಂಧಪಟ್ಟ ಸರ್ಕಾರದ ಪ್ರಾಧಿಕಾರಕ್ಕೆ ಸಮಗ್ರ ಮನವಿಯನ್ನು ಸಲ್ಲಿಸಬೇಕು. ಆದೇಶದಲ್ಲಿ ನ್ಯಾಯಾಲಯ ಸೂಚಿಸಿರುವ ಮಾರ್ಗಸೂಚಿಗಳ ಅನ್ವಯ ಎರಡು ತಿಂಗಳಲ್ಲಿ ಸರ್ಕಾರಿ ಪ್ರಾಧಿಕಾರಗಳು ಈ ಕುರಿತಾದ ಲೆಕ್ಕಾಚಾರವನ್ನು ಇತ್ಯರ್ಥಪಡಿಸಬೇಕು. ಕಾಮಗಾರಿಗಳಿಗೆ ಜಿಎಸ್‌ಟಿ ನಂತರ ಆರು ತಿಂಗಳವರೆಗೆ ಅರ್ಜಿದಾರರ ವಿರುದ್ಧ ಜಿಎಸ್‌ಟಿ ಪ್ರಾಧಿಕಾರ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು. ಹಾಗೆಯೇ, ಸರ್ಕಾರ ತೆಗೆದುಕೊಳ್ಳುವ ಯಾವುದೇ ನಿರ್ಧಾರ/ಆದೇಶವನ್ನು ಪ್ರಶ್ನಿಸಿ ಪರಿಹಾರ ಪಡೆಯುವ ಸ್ವಾತಂತ್ರ್ಯವನ್ನು ಗುತ್ತಿಗೆದಾರರು ಹೊಂದಿದ್ದಾರೆ ಎಂದು ಆದೇಶಲ್ಲಿ ತಿಳಿಸಲಾಗಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರ ರಾಜ್ಯ ಸರ್ಕಾರ ಪ್ರಾಧಿಕಾರಿಗಳ ಗುತ್ತಿಗೆ ಕಾಮಗಾರಿಗಳನ್ನು ನಡೆಸುವ ಪ್ರಥಮ ದರ್ಜೆ ಗುತ್ತಿಗೆದಾರರಾಗಿದ್ದಾರೆ. ಮೌಲ್ಯವರ್ಧಿತ ತೆರಿಗೆ ಕಾಯಿದೆ-2003 (ವ್ಯಾಟ್) ಜಾರಿಯಲ್ಲಿದ್ದಾಗ (2017ರ ಜುಲೈ 1ರಿಂದ ಜಿಎಸ್‌ಟಿ ಜಾರಿಗೊಳ್ಳುವ ಮುನ್ನ) ಸರ್ಕಾರಿ ಪ್ರಾಧಿಕಾರಗಳ ಗುತ್ತಿಗೆ ಕಾಮಗಾರಿಗಳ ನಿರ್ವಹಣೆ ಕುರಿತು ಒಪ್ಪಂದ ಮಾಡಿಕೊಂಡಿದ್ದರು. ವ್ಯಾಟ್ ಕಾಯಿದೆಯಡಿ ನೋಂದಾಯಿಸಿಕೊಂಡು ಟಿಐಎನ್ ನಂಬರ್ ಪಡೆದುಕೊಂಡಿದ್ದರು.  2017ರ ಜುಲೈ 1ರಿಂದ ಜಿಎಸ್‌ಟಿ ಜಾರಿಯಾದ ಕಾರಣ, ಜಿಎಸ್‌ಟಿ ನಂಬರ್ ಪಡೆದುಕೊಂಡಿದ್ದಾರೆ. ಬಹತೇಕ ಅರ್ಜಿದಾರರು ವ್ಯಾಟ್ ಸೆಕ್ಷನ್ 15ರ ಅಡಿಗೆ ಬರುತ್ತಾರೆ. ಕೆಲವೇ ಅರ್ಜಿದಾರರು ಸಾಮಾನ್ಯ ವ್ಯಾಟ್ ಮೌಲ್ಯಮಾಪನದ ಅಡಿಗೆ ಬರುತ್ತಾರೆ.

ವ್ಯಾಟ್ ವ್ಯಾಪ್ತಿಯ ಗುತ್ತಿಗೆದಾರರು ಗುತ್ತಿಗೆ ಮೌಲ್ಯಕ್ಕೆ ಶೇ.4ರಷ್ಟು ತೆರಿಗೆ ಪಾವತಿಮಾಡುತ್ತಿದ್ದರು. ಸಾಮಾನ್ಯ ವ್ಯಾಟ್ ಮೌಲ್ಯಮಾಪನದ ವ್ಯಾಪ್ತಿಗೆ ಬರುವಂತಹವರು ಶೇ.5 ಅಥವಾ ಶೇ.12ರಷ್ಟು ತೆರಿಗೆ ಪಾವತಿಸುತ್ತಿದ್ದರು. ಆದರೆ, ಸರ್ಕಾರಿಗೆ ಗುತ್ತಿಗೆಗಳಿಗೆ ಸೇವಾ ತೆರಿಗೆ ಪಾವತಿಯಿಂದ ವಿನಾಯ್ತಿ ನೀಡಲಾಗುತ್ತಿತ್ತು. ಆದರೆ, 2017ರ ಜುಲೈ 1ರಿಂದ ಜಿಎಸ್‌ಟಿ ಜಾರಿಯಾದ ಮೇಲೆ 2017ರ ಜುಲೈ 1ರಿಂದ ಆಗಸ್ಟ್‌ 21ರವರೆಗೆ ಶೇ.18ರಷ್ಟು ಮತ್ತು 2017ರ ಆಗಸ್ಟ್‌ 22ರಿಂದ ಶೇ.12ರಷ್ಟು ತೆರಿಗೆ (ಜಿಎಸ್‌ಟಿ) ಪಾವತಿ ಮಾಡಲು ಸರ್ಕಾರದ ಪ್ರಾಧಿಕಾರಗಳು ಆದೇಶಿಸಿದ್ದವು.

ಈ ಆದೇಶ ಪ್ರಶ್ನಿಸಿದ್ದ ಗುತ್ತಿಗೆದಾರರು, ಸರ್ಕಾರಿ ಪ್ರಾಧಿಕಾರಗಳ ಆದೇಶದಿಂದ ತಮ್ಮ ಮೇಲೆ ದೊಡ್ಡ ಮೊತ್ತದ ತೆರಿಗೆ ಭಾರ ಬೀಳಲಿದೆ. ಜಿಎಸ್‌ಟಿ ಜಾರಿಗೂ ಮುನ್ನ ಕಾಮಗಾರಿ ಪೂರ್ಣಗೊಳಿಸಿದ ಹಲವು ಪ್ರಕರಣಗಳಿವೆ. ಆದರೆ, ಸರ್ಕಾರಿ ಪ್ರಾಧಿಕಾರಗಳು ಕಾಮಗಾರಿ ಪರಿಶೀಲನೆ ನಡೆಸಿ ಬಿಲ್ ನೀಡುವುದು ಬಾಕಿಯಿತ್ತು. ತಾವು ಗುತ್ತಿಗೆ ಹಣ ಪಡೆಯುವುದು ಬಾಕಿಯಿತ್ತು. ಇನ್ನೂ ಕೆಲ ಗುತ್ತಿಗೆದಾರರು ವ್ಯಾಟ್ ಜಾರಿಯಲ್ಲಿದ್ದ ಅವಧಿಯಲ್ಲಿ ಗುತ್ತಿಗೆ ಪಡೆದು, ಜಿಎಸ್‌ಟಿ ಜಾರಿಯಾದ ನಂತರ ಕಾಮಗಾರಿ ಮುಂದುವರಿಸಿದ್ದಾರೆ. ಹಾಗಾಗಿ, ವ್ಯಾಟ್ ಅಡಿಯಲ್ಲಿ ತೆರಿಗೆ ಪಡೆಯಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿದ್ದರು.

Attachment
PDF
Chandrashekaraiah and others Vs State of Karnataka and others.pdf
Preview

Related Stories

No stories found.
Kannada Bar & Bench
kannada.barandbench.com