ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ: ಕೇಂದ್ರ, ರಾಜ್ಯ ಸರ್ಕಾರ, ಹಿಂದುಳಿದ ವರ್ಗಗಳ ಆಯೋಗಕ್ಕೆ ಹೈಕೋರ್ಟ್‌ ನೋಟಿಸ್‌

ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕಾಯಿದೆ 2014ರ ಸೆಕ್ಷನ್‌ 9(1) ಅನ್ನು ಕಾನೂನುಬಾಹಿರ ಎಂದು ಘೋಷಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ. ಅಲ್ಲಿಯವರೆಗೆ ಸಮೀಕ್ಷೆಗೆ ತಡೆ ನೀಡಬೇಕು ಎಂಬುದು ಅರ್ಜಿದಾರರ ಮಧ್ಯಂತರ ಕೋರಿಕೆಯಾಗಿದೆ.
ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ: ಕೇಂದ್ರ, ರಾಜ್ಯ ಸರ್ಕಾರ, ಹಿಂದುಳಿದ ವರ್ಗಗಳ ಆಯೋಗಕ್ಕೆ ಹೈಕೋರ್ಟ್‌ ನೋಟಿಸ್‌
Published on

ರಾಜ್ಯದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿರುವ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಸಮೀಕ್ಷೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಕುರಿತು ಕೇಂದ್ರ, ರಾಜ್ಯ ಸರ್ಕಾರಗಳಿಗೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ನೋಟಿಸ್ ಜಾರಿಗೊಳಿಸಿದೆ.

ಸಮೀಕ್ಷೆಗಾಗಿ ಆಗಸ್ಟ್‌ 13ರಂದು ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ರಾಜ್ಯ ಒಕ್ಕಲಿಗರ ಸಂಘ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಮಾಜಿ ಶಾಸಕರೂ ಆದ ಹಿರಿಯ ವಕೀಲ ಕೆ ಎನ್‌ ಸುಬ್ಬಾರೆಡ್ಡಿ ಮತ್ತಿತರರು ಸಲ್ಲಿಸಿರುವ ಪ್ರತ್ಯೇಕ ಪಿಐಎಲ್‌ಗಳನ್ನು ನ್ಯಾಯಮೂರ್ತಿಗಳಾದ ಅನು ಶಿವರಾಮನ್‌ ಮತ್ತು ನ್ಯಾಯಮೂರ್ತಿ ಕೆ ರಾಜೇಶ್‌ ರೈ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

Justices Anu Sivaraman, Justice K Rajesh Rai
Justices Anu Sivaraman, Justice K Rajesh Rai

ಪ್ರಕರಣದ ಕುರಿತು ಅಲ್ಪಕಾಲ ವಾದ ಆಲಿಸಿದ ಪೀಠವು ಕೇಂದ್ರ, ರಾಜ್ಯ ಸರ್ಕಾರಗಳು, ರಾಜ್ಯ ಹಿಂದುಳಿದ ವರ್ಗಗಳ ಆಯೋಗ, ಕೇಂದ್ರ ಸರ್ಕಾರ ಜಾತಿ ಗಣತಿ ಪ್ರಾಧಿಕಾರ, ಗಣತಿ ರಿಜಿಸ್ಟ್ರಾರ್‌ ಸೇರಿದಂತೆ ಎಲ್ಲಾ ಸಂಬಂಧಿತ ಪ್ರತಿವಾದಿಗಳಿಗೆ ನೋಟಿಸ್‌ ಜಾರಿಗೊಳಿಸಿದ್ದು, ಸಮೀಕ್ಷೆಗೆ ತಡೆ ಕೋರಿರುವ ಮಧ್ಯಂತರ ಕೋರಿಕೆಯ ಸಂಬಂಧ ಸೋಮವಾರ ವಿಚಾರಣೆ ನಡೆಸುವುದಾಗಿ ತಿಳಿಸಿ, ವಿಚಾರಣೆ ಮುಂದೂಡಿತು.

ಇದಕ್ಕೂ ಮುನ್ನ, ಅರ್ಜಿದಾರರ ಪೈಕಿ ಒಬ್ಬರಾದ ಉದಯ್‌ಶಂಕರ್‌ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು “ಸಮೀಕ್ಷೆಯನ್ನು ನಾವು ಈಗಾಗಲೇ ಆರಂಭಿಸಿದ್ದೇವೆ ಎಂಬ ಹೇಳಿಕೆಯನ್ನು ಆಯೋಗ ನೀಡಬಾರದು. ಏಕೆಂದರೆ ಅದನ್ನು ಹಿಂದಕ್ಕೆ ಸರಿಯುವಂತೆ ಮಾಡಲಾಗದು” ಎಂದರು.

ಇದಕ್ಕೆ ಆಯೋಗ ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌ ಅವರು “ಈಗಾಗಲೇ ಎರಡು ಕೋಟಿ ಕುಟುಂಬಗಳಿಗೆ ಸಮೀಕ್ಷೆಯ ಪ್ರತಿಯನ್ನು ಪೂರೈಸಲಾಗಿದೆ. ಅರ್ಜಿದಾರರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ” ಎಂದರು.

ಆಗ ಸುಬ್ಬಾರೆಡ್ಡಿ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ವಿವೇಕ್‌ ಅವರು “ಸೆಪ್ಟೆಂಬರ್‌ 22ಕ್ಕೆ ಸಮೀಕ್ಷೆ ಆರಂಭವಾಗುತ್ತದೆ ಎಂದು ಹೇಳಲಾಗಿದೆ. ವಿಭಾಗೀಯ ಪೀಠ ಅರ್ಜಿ ವಿಚಾರಣೆ ನಡೆಸುವವರೆಗೆ ಸಮೀಕ್ಷೆ ಮುಂದುವರಿಸದಂತೆ ಅವರು ಹಿಂದೆ ಸರಿಯಬೇಕು. ಸರ್ಕಾರ ನಡೆಸುತ್ತಿರುವ ವಿಧಾನಕ್ಕೆ ಆಕ್ಷೇಪಿಸಿದ್ದೇವೆ” ಎಂದರು.

ಆಗ ಪ್ರೊ. ರವಿವರ್ಮ ಕುಮಾರ್‌ ಅವರು “ಚಿನ್ನಪ್ಪ ರೆಡ್ಡಿ ಆಯೋಗದ ಪ್ರಕಾರ ಮುಂದುವರಿದ ಜಾತಿಗಳು ಎನಿಸಿಕೊಂಡಿರುವವರು ಅರ್ಜಿದಾರರ ರೂಪದಲ್ಲಿ ಸಮೀಕ್ಷೆಯನ್ನು ತಡೆಯಲು ಮುಂದಾಗಿದ್ದಾರೆ” ಎಂದು ಆರೋಪಿಸಿದರು.

ಹಿರಿಯ ವಕೀಲ ಶ್ರೀರಂಗ ಅವರು “ಜಾತಿ ಸಮೀಕ್ಷೆಯಲ್ಲಿ ದತ್ತಾಂಶ ಸಂಗ್ರಹಿಸಲು ಇಂಧನ ಇಲಾಖೆಯಲ್ಲಿ ಮೀಟರ್‌ ರೀಡರ್‌ಗಳಾಗಿರುವವರ ಸೇವೆ ಪಡೆಯಲು ಮುಂದಾಗಲಾಗಿದೆ. ಖಾಸಗಿ ಕಂಪನಿಗಳು ಮೀಟರ್‌ ರೀಡಿಂಗ್‌ ಕೆಲಸ ಮಾಡುತ್ತಿವೆ. ದತ್ತಾಂಶವು ಖಾಸಗಿ ಸಂಸ್ಥೆಗಳ ಕೈವಶವಾಗಲಿದ್ದು, ಅದಕ್ಕೆ ಯಾವುದೇ ಭದ್ರತೆ ಇಲ್ಲ” ಎಂದರು.

ಈ ಮಧ್ಯೆ ಪೀಠವು, ಇಂದು ಅಡ್ವೊಕೇಟ್‌ ಜನರಲ್‌ ಅವರು ಲಭ್ಯವಿಲ್ಲದ ಕಾರಣ ಅರ್ಜಿಯನ್ನು ಸೋಮವಾರ ವಿಚಾರಣೆಗೆ ನಿಗದಿಪಡಿಸಲಾಗುವುದು ಎಂದಿತು.‌ ಅಂತೆಯೇ, ವಿಚಾರಣೆಯನ್ನು ಸೆಪ್ಟೆಂಬರ್ 22ಕ್ಕೆ ಮುಂದೂಡಿತು.

ರಾಜ್ಯ ಹಿಂದುಳಿದ ವರ್ಗಗಳ ಕಾಯಿದೆ-1995 ಸಂವಿಧಾನದ 340ನೇ ವಿಧಿಗೆ ವಿರುದ್ಧವಾಗಿರುವುದರಿಂದ ಅದನ್ನು ವಜಾಗೊಳಿಸಬೇಕು. ಇಲ್ಲವಾದಲ್ಲಿ ಅದಕ್ಕೆ ಪರ್ಯಾಯವಾಗಿ ಹಿಂದುಳಿದ ವರ್ಗಗಳ ಆಯೋಗ ಕಾಯಿದೆ 2014ರ ಸೆಕ್ಷನ್‌ 9(1) ಅನ್ನು ಕಾನೂನುಬಾಹಿರ ಎಂದು ಘೋಷಿಸಬೇಕು ಎಂಬುದು ಅರ್ಜಿದಾರರ ಕೋರಿಕೆಯಾಗಿದೆ. ಈ ಮಧ್ಯೆ, ಅರ್ಜಿಗಳನ್ನು ಪೂರ್ಣ ಪ್ರಮಾಣದಲ್ಲಿ ನಿರ್ಧರಿಸುವವರೆಗೆ ಜಾತಿ ಸಮೀಕ್ಷೆಗೆ ತಡೆ ನೀಡಬೇಕು ಎಂಬುದು ಎಲ್ಲಾ ಅರ್ಜಿದಾರರ ಕೋರಿಕೆಯಾಗಿದೆ.

Kannada Bar & Bench
kannada.barandbench.com