ಸೇತುವೆ, ರಸ್ತೆ ನಿರ್ಮಾಣಕ್ಕೆ ಅನರ್ಹ ಗುತ್ತಿಗೆದಾರರಿಗೆ ಟೆಂಡರ್: ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಟೆಂಡರುದಾರರು 5 ವರ್ಷಗಳಲ್ಲಿ ಕನಿಷ್ಠ ₹3.30 ಕೋಟಿ ಕಾಮಗಾರಿಯನ್ನು ಸಮಾಧಾನಕಾರ ರೀತಿಯಲ್ಲಿ ಪೂರ್ಣಗೊಳಿಸಿರಬೇಕು ಎಂದು ಟೆಂಡರ್ ನಲ್ಲಿ ಷರತ್ತು ವಿಧಿಸಲಾಗಿತ್ತು. ಆದರೆ, ಅರ್ಹತೆ ಇಲ್ಲದ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂದು ಆಕ್ಷೇಪ.
High Court of Karnataka
High Court of Karnataka
Published on

ಯಾದಗಿರಿ-ಸೈದಾಪುರ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಸೇತುವೆ ಹಾಗೂ ರಸ್ತೆ ನಿರ್ಮಾಣ ಕಾಮಗಾರಿಗೆ ಅಗತ್ಯ ತಾಂತ್ರಿಕ ಅರ್ಹತೆ ಮತ್ತು ಕಾರ್ಯಾನುಭವ ಇಲ್ಲದ ಗುತ್ತಿಗೆದಾರರಿಗೆ ಟೆಂಡರ್ ನೀಡಿರುವುದನ್ನು ಆಕ್ಷೇಪಿಸಿ ಸಲ್ಲಿಸಲಾದ ಅರ್ಜಿ ಸಂಬಂಧ ಲೋಕೋಪಯೋಗಿ ಇಲಾಖೆಗೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ನೋಟಿಸ್ ಜಾರಿಗೊಳಿಸಿದೆ.

ಸ್ಥಳೀಯ ನಿವಾಸಿ ಶರಣಪ್ಪ ಗೌಡ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ನೇತ್ವತ್ವದ ವಿಭಾಗೀಯ ಪೀಠ ವಿಚಾರಣೆಗೆ ನಡೆಸಿತು.

ಅರ್ಜಿದಾರರ ಪರ ಹಿರಿಯ ವಕೀಲ ವಿಕ್ರಂ ಹುಯಿಲಗೋಳ ಅವರ ವಾದವನ್ನು ಕೆಲಕಾಲ ಆಲಿಸಸಿದ ನ್ಯಾಯಾಲಯವು ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ, ಯಾದಗಿರಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಹಾಗೂ ಖಾಸಗಿ ನಿರ್ಮಾಣ ಸಂಸ್ಥೆಯಾಗಿರುವ ಶ್ರೀ ಬನದೇಶ್ವರ ಕನ್ಸ್ಟ್ರಕ್ಷನ್ ಕಂಪೆನಿಗೆ ನೋಟಿಸ್ ಜಾರಿಗೊಳಿಸಿತು. ಅಲ್ಲದೆ ಗುತ್ತಿಗೆದಾರ ಕಂಪೆನಿಗೆ ಇರುವ ಹಿಂದಿನ ಕಾರ್ಯಾನುಭವದ ಬಗ್ಗೆ ಮಾಹಿತಿ ನೀಡುವಂತೆ ಯಾದಗಿರಿ ವಿಭಾಗದ ಕಾರ್ಯಕಾರಿ ಅಭಿಯಂತರರಿಗೆ ನಿರ್ದೇಶನ ನೀಡಿ ವಿಚಾರಣೆಯನ್ನು 2026ರ ಜನವರಿ 9ಕ್ಕೆ ಮುಂದೂಡಿತು.

ಯಾದಗಿರಿ-ಸೈದಾಪುರ ಎಂಡಿಆರ್ ರಸ್ತೆಯಲ್ಲಿ ಸೇತುವೆ ಹಾಗೂ ರಸ್ತೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ ಯಾದಗಿರಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು 2025ರ ಮಾರ್ಚ್ 7ರಂದು ಟೆಂಡರ್ ಕರೆದಿದ್ದರು. ಯಶಸ್ವಿ ಟೆಂಡರುದಾರರು ಹಿಂದಿನ ಐದು ವರ್ಷಗಳಲ್ಲಿ ಕನಿಷ್ಟ 3.30 ಕೋಟಿ ರೂಪಾಯಿ ಮೊತ್ತದ ಕಾಮಗಾರಿಯನ್ನು ಸಮಾಧಾನಕಾರ ರೀತಿಯಲ್ಲಿ ಪೂರ್ಣಗೊಳಿಸಿರಬೇಕು ಎಂದು ಟೆಂಡರ್ ನಲ್ಲಿ ಷರತ್ತು ವಿಧಿಸಲಾಗಿತ್ತು. ಆದರೆ, ಅಂತಹ ಯಾವುದೇ ಅರ್ಹತೆ ಇಲ್ಲದೆ ಕಂಪೆನಿಗೆ ಗುತ್ತಿಗೆ ನೀಡಲಾಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ. 

Kannada Bar & Bench
kannada.barandbench.com