ಸಾರ್ವಜನಿಕ ಉದ್ಯಾನದ ಜಾಗದಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣ: ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಕದಿರೇನಹಳ್ಳಿಯ ಸರ್ವೆ ನಂಬರ್ 45ರಲ್ಲಿ 10.50 ಎಕರೆ ಸರ್ಕಾರಿ ಜಾಗ ಇದ್ದು, ಅಲ್ಲಿ ಪಾರ್ಕ್ ನಿರ್ಮಿಸಲು ಆನಂದತೀರ್ಥ ಸೇವಾ ಟ್ರಸ್ಟ್‌ಗೆ ಮಂಜೂರು ಮಾಡಲಾಗಿತ್ತು. ಆದರೆ ಅಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
Karnataka High Court
Karnataka High Court
Published on

ಬೆಂಗಳೂರು ದಕ್ಷಿಣ ತಾಲ್ಲೂಕು ಉತ್ತರಹಳ್ಳಿ ಹೋಬಳಿ ಕದಿರೇನಹಳ್ಳಿಯ ರಾಜರಾಜೇಶ್ವರಿ ದೇವಸ್ಥಾನ ಹಾಗೂ ಆಂಜನೇಯ ದೇವಸ್ಥಾನದ ಬಳಿ ಉದ್ಯಾನಕ್ಕೆ ಮಂಜೂರಾದ ಜಾಗದಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡಿದ್ದನ್ನು ಆಕ್ಷೇಪಿಸಿ ಸಲ್ಲಿಸಲಾದ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಬೆಂಗಳೂರಿನ ಆರ್ ಶ್ರೀನಿವಾಸ ಸೇರಿ ಒಂಬತ್ತು ಮಂದಿ ಸ್ಥಳೀಯ ನಿವಾಸಿಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಕೆಲ ಕಾಲ ವಾದ ಆಲಿಸಿದ ಪೀಠವು ರಾಜ್ಯ ಸರ್ಕಾರ, ಕಂದಾಯ ಇಲಾಖೆ ಕಾರ್ಯದರ್ಶಿ, ಬೆಂಗಳೂರು ನಗರ ಜಿಲ್ಲಾಧಿಕಾರಿ, ಬಿಬಿಎಂಪಿ ಮುಖ್ಯ ಆಯುಕ್ತರು, ಬೆಂಗಳೂರು ದಕ್ಷಿಣ ತಹಶೀಲ್ದಾರ್ ಹಾಗೂ ಶ್ರೀಮದ್ ಆನಂದತೀರ್ಥ ಸೇವಾ ಟ್ರಸ್ಟ್‌ಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಜೂನ್ 12ಕ್ಕೆ ಮುಂದೂಡಿತು. ಅರ್ಜಿದಾರರ ಪರ ವಕೀಲ ಎ ಕೇಶವ ಭಟ್ ವಾದಿಸಿದರು.

ಕದಿರೇನಹಳ್ಳಿಯ ಸರ್ವೆ ನಂಬರ್ 45ರಲ್ಲಿ 10.50 ಎಕರೆ ಸರ್ಕಾರಿ ಜಾಗ ಇದೆ. ಈ ಜಾಗ ಪಾರ್ಕ್ ನಿರ್ಮಾಣ ಮಾಡಲು ಶ್ರೀಮದ್ ಆನಂದತೀರ್ಥ ಸೇವಾ ಟ್ರಸ್ಟ್‌ಗೆ ಮಂಜೂರು ಮಾಡಲಾಗಿತ್ತು. ಈ ಜಾಗದಲ್ಲಿ ಪಾರ್ಕ್ ಬದಲಿಗೆ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡಲಾಗಿದೆ. ಆದ್ದರಿಂದ ಟ್ರಸ್ಟ್‌ಗೆ ಜಾಗ ಮಂಜೂರು ಮಾಡಿದ್ದನ್ನು ರದ್ದುಪಡಿಸಬೇಕು. ಆ ಜಾಗದಲ್ಲಿ ಸಾರ್ವಜನಿಕರು ಹಾಗೂ ರಾಜರಾಜೇಶ್ವರಿ ದೇವಸ್ಥಾನ ಮತ್ತು ಆಂಜನೇಯ ದೇವಸ್ಥಾನದ ಉದ್ದೇಶಕ್ಕಾಗಿ ಪಾರ್ಕ್ ನಿರ್ಮಾಣ ಮಾಡುವಂತೆ ನಿರ್ದೇಶನ ನೀಡಬೇಕು. ಈ ಕುರಿತು ಅರ್ಜಿದಾರರು 2024ರ ಜೂನ್ 24ರಂದು ನೀಡಿರುವ ಮನವಿ ಪರಿಗಣಿಸುವಂತೆ ಸರ್ಕಾರ, ಜಿಲ್ಲಾಧಿಕಾರಿ, ಬಿಬಿಎಂಪಿ ಆಯುಕ್ತರಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. 

Kannada Bar & Bench
kannada.barandbench.com