ಕೆಪಿಟಿಸಿಎಲ್ ಸಹಾಯಕ ಲೆಕ್ಕಾಧಿಕಾರಿಗಳಿಗೆ ಬಡ್ತಿ ಸಾಮಾನ್ಯ ಜೇಷ್ಠತಾ ಪಟ್ಟಿ ರದ್ದು: ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಯಾವುದೇ ಅರ್ಹತಾ ಪರೀಕ್ಷೆ ಬರೆಯದಿದ್ದರೂ ಮತ್ತು ಬಡ್ತಿ ಹೊಂದಲು ಒಂದು ವರ್ಷ ಪರೀಕ್ಷಾರ್ಥ (ಪ್ರೊಬೇಷನರಿ) ಅವಧಿ ಪೂರ್ಣಗೊಳಿಸದೆ ಇದ್ದವರನ್ನು ಜೇಷ್ಠತಾ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಆಕ್ಷೇಪಿಸಲಾಗಿದೆ.
Karnataka High Court
Karnataka High Court
Published on

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ (ಕೆಪಿಟಿಸಿಎಲ್) ಕಾರ್ಯನಿರ್ವಹಿಸುತ್ತಿರುವ ಸಹಾಯಕ ಲೆಕ್ಕಾಧಿಕಾರಿಗಳಿಗೆ ಬಡ್ತಿ ನೀಡಲು ಸಿದ್ದಪಡಿಸಲಾಗಿರುವ ಸಾಮಾನ್ಯ ಜೇಷ್ಠತಾ ಪಟ್ಟಿಯನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಸಹಾಯಕ ಲೆಕ್ಕಾಧಿಕಾರಿಗಳಿಗೆ ಬಡ್ತಿ ನೀಡಲು 2025ರ ಮೇ 29ರಂದು ಸಿದ್ದಪಡಿಸಲಾಗಿರುವ ಸಾಮಾನ್ಯ ಜೇಷ್ಠತಾ ಪಟ್ಟಿಯನ್ನು ರದ್ದುಪಡಿಸುವಂತೆ ಕೋರಿ ಕೆಪಿಟಿಸಿಎಲ್ ಮಡಿಕೇರಿ ಉಪ ವಿಭಾಗದಲ್ಲಿ ಸಹಾಯಕ ಲೆಕ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಎನ್ ಎಂ ದರ್ಶನ್ ಸೇರಿ ಕೆಪಿಟಿಸಿಎಲ್‌ನಲ್ಲಿ ರಾಜ್ಯದ ವಿವಿಧ ಉಪವಿಭಾಗಳಲ್ಲಿ ಸಹಾಯಕ ಲೆಕ್ಕಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವ 54 ಮಂದಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಚ್ ಟಿ ನರೇಂದ್ರ ಪ್ರಸಾದ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿ ಆಲಿಸಿದ ಪೀಠವು ಅರ್ಜಿ ಸಂಬಂಧ ರಾಜ್ಯ ಸರ್ಕಾರದ ಇಂಧನ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಕೆಪಿಟಿಸಿಎಲ್ ಆಡಳಿತ ಮತ್ತು ಮಾನಸಂಪನ್ಮೂಲ ವಿಭಾಗದ ನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸಿತು. ಅದೇ ರೀತಿ ಜೇಷ್ಠತಾ ಪಟ್ಟಿಗೆ ತಡೆ ನೀಡುವ ಅರ್ಜಿದಾರರ ಮನವಿಯನ್ನು ಪರಿಗಣಿಸಿಲ್ಲ.  ಆದರೆ, 2025ರ ಮೇ 29ರ ಜೇಷ್ಠತಾ ಪಟ್ಟಿಯಂತೆ ನೀಡಲಾಗುವ ಬಡ್ತಿ ಪ್ರಕ್ರಿಯೆ, ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ಅರ್ಜಿಯಲ್ಲಿ ಹೈಕೋರ್ಟ್ ನೀಡುವ ಅಂತಿಮ ತೀರ್ಪಿಗೆ ಒಳಪಡಲಿದೆ ಎಂದು ಪೀಠ ಹೇಳಿತು.

ಯಾವುದೇ ಅರ್ಹತಾ ಪರೀಕ್ಷೆ ಬರೆಯದಿದ್ದರೂ ಮತ್ತು ಬಡ್ತಿ ಹೊಂದಲು ಒಂದು ವರ್ಷ ಪರೀಕ್ಷಾರ್ಥ (ಪ್ರೊಬೇಷನರಿ) ಅವಧಿ ಪೂರ್ಣಗೊಳಿಸದೆ ಇದ್ದವರನ್ನು ಜೇಷ್ಠತಾ ಪಟ್ಟಿಯಲ್ಲಿ ಸೇರಿಸಲಾಗಿದೆ. ಅರ್ಜಿದಾರರ ಆಕ್ಷೇಪಣೆಗಳನ್ನು ಪರಿಗಣಿಸಲಾಗಿಲ್ಲ. ಅಲ್ಲದೇ ನೇರ ನೇಮಕಾತಿ ಹಾಗೂ ಬಡ್ತಿಗೆ ಸಂಬಂಧಿಸಿದಂತೆ ವೃಂದ ಮತ್ತು ನೇಮಕಾತಿಗೆ ಮಾಡಿರುವ ತಿದ್ದುಪಡಿಗಳು ನಿಯಮಬಾಹಿರವಾಗಿದೆ. ಆದ್ದರಿಂದ ಜೇಷ್ಠತಾ ಪಟ್ಟಿ ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Kannada Bar & Bench
kannada.barandbench.com