ಹೊನ್ನೇಶ್ವರಸ್ವಾಮಿ ದೇವಾಲಯದ ಸುತ್ತ ಮಾಂಸಾಹಾರ ಸೇವನೆ ನಿಷೇಧ: ಸರ್ಕಾರ, ಜಿಲ್ಲಾಡಳಿತಕ್ಕೆ ಹೈಕೋರ್ಟ್‌ ನೋಟಿಸ್‌

ದೇವಸ್ಥಾನದ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಮಾಂಸಾಹಾರ ಸೇವನೆ ನಿಷೇಧಿಸಿ ಬಡವನಹಳ್ಳಿ ಪೊಲೀಸ್ ಠಾಣೆ ಸರ್ಕಲ್ ಇನ್‌ಸ್‌‌ಪೆಕ್ಟರ್ 2024ರ ಜುಲೈ 13ರಂದು ಹೊರಡಿಸಿರುವ ನೋಟಿಸ್ ಪ್ರಶ್ನಿಸಿ ದೇವಸ್ಥಾನದ ಟ್ರಸ್ಟ್‌ ಅರ್ಜಿ ಸಲ್ಲಿಸಿದೆ.
Karnataka High Court
Karnataka High Court
Published on

ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಶಿವನಗೆರೆ ಗ್ರಾಮದ ಶ್ರೀ ಹೊನ್ನೇಶ್ವರಸ್ವಾಮಿ ದೇವಸ್ಥಾನದ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಮಾಂಸಾಹಾರ ಸೇವನೆ ನಿಷೇಧಿಸಿ ಪೊಲೀಸರು ಹೊರಡಿಸಿರುವ ನೋಟಿಸ್ ಪ್ರಶ್ನಿಸಿ ಸಲ್ಲಿಸಿದ ಅರ್ಜಿ ಸಂಬಂಧ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಕರ್ನಾಟಕ ಹೈಕೋರ್ಟ್ ಗುರುವಾರ ನೋಟಿಸ್ ಜಾರಿಗೊಳಿಸಿದೆ.

ದೇವಸ್ಥಾನದ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಮಾಂಸಾಹಾರ ಸೇವನೆ ನಿಷೇಧಿಸಿ ಬಡವನಹಳ್ಳಿ ಪೊಲೀಸ್ ಠಾಣೆ ಸರ್ಕಲ್ ಇನ್‌ಸ್‌‌ಪೆಕ್ಟರ್ 2024ರ ಜುಲೈ 13ರಂದು ಹೊರಡಿಸಿರುವ ನೋಟಿಸ್ ಪ್ರಶ್ನಿಸಿ ಶ್ರೀ ಹೊನ್ನೇಶ್ವರಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಸೇವಾ ಸಮಿತಿ ಟ್ರಸ್ಟ್‌ (ರಿ) ಅಧ್ಯಕ್ಷ ಜೆ ಮಂಜುನಾಥ ಹಾಗೂ ದೇವಸ್ಥಾನದ ಗುರುಗಳಾದ ಜಿ ಎಸ್ ರಾಮಚಂದ್ರ ಸ್ವಾಮಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಬಿ ಎಂ ಶ್ಯಾಮ್‌ಪ್ರಸಾದ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಅರ್ಜಿದಾರರ ಪರ ಹಿರಿಯ ವಕೀಲ ಆರ್ ಎಸ್ ರವಿ ವಾದ ಮಂಡಿಸಿದರು. ಆಕರ್ಷ್ ಕುಮಾರ್ ಗೌಡ ವಕಾಲತ್ತು ವಹಿಸಿದ್ದರು.

ಅರ್ಜಿದಾರರ ಪರ ವಕೀಲರು, ಹೊನ್ನೇಶ್ವರಸ್ವಾಮಿ ದೇವಾಲಯ ಮುಜರಾಯಿ ದೇವಸ್ಥಾನ ಅಲ್ಲ. ಇದೊಂದು ಖಾಸಗಿ ದೇವಾಲಯವಾಗಿದ್ದು, ಗ್ರಾಮಸ್ಥರು ಹಾಗೂ ಭಕ್ತಾದಿಗಳು ನಿರ್ವಹಣೆ ಮಾಡುತ್ತಿದ್ದಾರೆ. ದೇವಸ್ಥಾನದ ಬಳಿ ಯಾವುದೇ ಪ್ರಾಣಿಗಳ ಬಲಿ ಅಥವಾ ವಧೆ ಮಾಡುವುದಿಲ್ಲ. ಹೊರಗಿನಿಂದ ತಂದ ಮಾಂಸವನ್ನು ಅಡುಗೆ ಮಾಡಿ ದೇವಸ್ಥಾನದ ಬಳಿ ಇರುವ ಸಮುದಾಯ ಭವನ ಹಾಗೂ ಉಪಹಾರ ಗೃಹದಲ್ಲಿ ಮಾಂಸಾಹಾರ ಸೇವನೆ ಮಾಡುತ್ತಾರೆ. ಇದು ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಪದ್ದತಿಯಾಗಿದೆ. ಆದರೆ, ಇದೀಗ ಪೊಲೀಸರು ನೋಟಿಸ್ ಕೊಟ್ಟು ಮಾಂಸಾಹಾರ ಸೇವನೆ ನಿಷೇಧಿಸಿದ್ದಾರೆ. ಇದು ಆಹಾರದ ಹಕ್ಕು ಹಾಗೂ ತಲತಲಾಂತದಿಂದ ನಡೆದುಕೊಂಡು ಬಂದಿರುವಮ ಆಚರಣಾ ಪದ್ದತಿಗೆ ವಿರುದ್ಧವಾಗಿದೆ ಎಂದರು.

ವಾದ ಆಲಿಸಿದ ಪೀಠವು ನೋಟಿಸ್ ಕೊಡುವ ಮೊದಲು ಸ್ಥಳೀಯ ಆಚಾರ ಸಂಪ್ರದಾಯಗಳನ್ನು ಪರಿಶೀಲಿಸಲಾಗಿದೆಯೇ? ದೇವಸ್ಥಾನದ ಬಳಿ ಮಾಂಸಾಹಾರ ಸೇವನೆ ಯಾವ ಕಾರಣಕ್ಕಾಾಗಿ ನಿಷೇಧಿಸಲಾಗಿದೆ ಎಂಬ ಬಗ್ಗೆ ಪೊಲೀಸರ ಮೂಲಕ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು. ಅಲ್ಲದೇ ಅರ್ಜಿ ಸಂಬಂಧ ರಾಜ್ಯ ಗೃಹ ಇಲಾಖೆ, ತುಮಕೂರು ಜಿಲ್ಲಾಧಿಕಾರಿ, ಮಧುಗಿರಿ ತಹಶೀಲ್ದಾರ್, ಬಡವನಹಳ್ಳಿ ಪೊಲೀಸ್ ಸರ್ಕಲ್ ಇನ್‌ಸ್ಪೆಕ್ಟರ್‌ ನೋಟಿಸ್ ಜಾರಿಗೊಳಿಸಿದ ಪೀಠ ವಿಚಾರಣೆಯನ್ನು ಸೆಪ್ಟೆಂಬರ್ 10ಕ್ಕೆ ಮುಂದೂಡಿತು.

ಶಿವನಗೆರೆ ಗ್ರಾಮದಲ್ಲಿರುವ ಕುಂಚಿಟಿಗರ ಮತದ ವನಮನವರ ಗುಡಿಕಟ್ಟಿನ ಶ್ರೀ ಹೊನ್ನೇಶ್ವರಸ್ವಾಮಿ ದೇವಸ್ಥಾನ 500 ವರ್ಷಗಳ ಹಿಂದೆ ನಿರ್ಮಾಣಗೊಂಡಿದೆ. ಅಲ್ಲಿಂದ ಇಲ್ಲಿವರೆಗೆ ಯಾವುದೇ ಗೊಂದಲಗಳಿಲ್ಲದೆ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಿಕೊಂಡು ಬರಲಾಗುತ್ತಿದೆ. ಕರ್ನಾಟಕದ ವಿವಿಧ ಜಿಲ್ಲೆಗಳು ಸೇರಿ ನೆರೆಯ ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಂದಲೂ ಇಲ್ಲಿಗೆ ಭಕ್ತಾದಿಗಳು ಬರುತ್ತಾರೆ. ಬಹಳ ಹಿಂದಿನಿಂದಲೂ ಮಾಂಸಾಹಾರ ಸೇವನೆ ಪದ್ದತಿ ಇದೆ. 2024ರ ಜೂನ್ ತಿಂಗಳಲ್ಲಿ ಹೈಕೋರ್ಟ್ ನೀಡಿದ ಆದೇಶ ಉಲ್ಲೇಖಿಸಿ ದೇವಸ್ಥಾನದ ಸುತ್ತ 220 ಮೀಟರ್ ವ್ಯಾಪ್ತಿಯಲ್ಲಿ ಪ್ರಾಣಿ ಬಲಿ ಹಾಗೂ ಮಾಂಸಾಹಾರ ಸೇವನೆ ನಿಷೇಧಿಸಿ 2004ರ ಜುಲೈ 13ರಂದು ಬಡವನಹಳ್ಳಿ ಪೊಲೀಸ್ ಸರ್ಕಲ್ ಇನ್‌ಸ್‌‌ಪೆಕ್ಟರ್ ನೋಟಿಸ್ ಜಾರಿಗೊಳಿಸಿದ್ದಾರೆ. ಇದರಿಂದ ದೇವಸ್ಥಾನದ ಬಳಿ ಅಷ್ಟೇ ಅಲ್ಲ, ಇಡೀ ಗ್ರಾಮದಲ್ಲಿ ಮಾಂಸಹಾರ ಸೇವನೆ ನಿಷೇಧವಾದಂತಾಗಿದೆ. ಇದು ಗ್ರಾಮಸ್ಥರ ಆಹಾರದ ಹಕ್ಕಿನ ಪ್ರಶ್ನೆಯಾಗಿದ್ದು, ಭಕ್ತಾದಿಗಳ ಹಲವು ವರ್ಷಗಳ ಆಚರಣಾ ಪದ್ದತಿಗೆ ವಿರುದ್ಧವಾಗಿದೆ. ಆದ್ದರಿಂದ ಪೊಲೀಸರ ನೋಟಿಸ್ ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. 

Kannada Bar & Bench
kannada.barandbench.com