ಅಕ್ರಮ ಧಾರ್ಮಿಕ ಕಟ್ಟಡಗಳನ್ನು ಸಂರಕ್ಷಿಸುವ ಉದ್ದೇಶದಿಂದ ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಕರ್ನಾಟಕ ಧಾರ್ಮಿಕ ಕಟ್ಟಡಗಳ (ಸಂರಕ್ಷಣಾ) ಕಾಯಿದೆ 2021ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಈಚೆಗೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಬೆಂಗಳೂರಿನ ಡಿ ಕೇಶವಮೂರ್ತಿ ಎಂಬವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ಎಂ ಜಿ ಎಸ್ ಕಮಲ್ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.
ಕಾಯಿದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿರುವ ಹಿನ್ನೆಲೆಯಲ್ಲಿ ಅಡ್ವೊಕೇಟ್ ಜನರಲ್ ಅವರು ಮೂರು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಬೇಕು ಎಂದು ನ್ಯಾಯಾಲಯವು ಆದೇಶಿಸಿದೆ.
ಅಕ್ರಮ ಧಾರ್ಮಿಕ ಕಟ್ಟಡಗಳ ತೆರವಿಗೆ ಸಂಬಂಧಿಸಿದಂತೆ 2009ರಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳು ಮತ್ತು ಹೈಕೋರ್ಟ್‌ನಲ್ಲಿ ಈ ಸಂಬಂಧ ದಾಖಲಾಗಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಮಾಡಲಾಗಿರುವ ಆದೇಶಗಳನ್ನು ತಿರಸ್ಕರಿಸುವ ಉದ್ದೇಶವನ್ನು ಕಾಯಿದೆ ಸೆಕ್ಷನ್ 3 ಒಳಗೊಂಡಿದೆ ಎಂದು ವಿವರಿಸಲಾಗಿದೆ.
ಸಾರ್ವಜನಿಕ ದಾರಿ, ಉದ್ಯಾನ ಅಥವಾ ಇತರೆ ಸಾರ್ವಜನಿಕ ಪ್ರದೇಶಗಳಲ್ಲಿ ಇನ್ನು ಮುಂದೆ ದೇವಾಲಯ, ಚರ್ಚ್, ಮಸೀದಿ ಅಥವಾ ಗುರುದ್ವಾರ ಇತ್ಯಾದಿಗಳ ಹೆಸರಿನಲ್ಲಿ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು 2009ರ ಸೆಪ್ಟೆಂಬರ್ 29ರಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಆನಂತರ 2018ರ ಜನವರಿ 31ರಂದು ಪ್ರಕರಣದ ಮೇಲ್ವಿಚಾರಣೆ ಮಾಡುವಂತೆ ಎಲ್ಲಾ ಹೈಕೋರ್ಟ್‌ಗಳಿಗೆ ಸರ್ವೋಚ್ಚ ನ್ಯಾಯಾಲಯ ನಿರ್ದೇಶಿಸಿತ್ತು. ಈ ಹಿನ್ನೆಲೆಯಲ್ಲಿ 2019ರ ಅಕ್ಟೋಬರ್ 30ರಂದು ಕರ್ನಾಟಕ ಹೈಕೋರ್ಟ್ ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿಕೊಂಡು, ಅನುಪಾಲನಾ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿತ್ತು ಎಂದು ಅರ್ಜಿದಾರರು ವಿವರಿಸಿದ್ದಾರೆ.
2009ರ ಸೆಪ್ಟೆಂಬರ್ 29ರ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಅಕ್ರಮ ಧಾರ್ಮಿಕ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುವಂತಿಲ್ಲ. ಆದರೆ, ಆಕ್ಷೇಪಾರ್ಹ ಕಾಯಿದೆ ಜಾರಿಗೊಳಿಸುವ ಮೂಲಕ 2009ರ ಸೆಪ್ಟೆಂಬರ್ 29ರಿಂದ 2021ರ ಅಕ್ಟೋಬರ್ 21ರವರೆಗಿನ ಅಕ್ರಮ ಕಟ್ಟಡ ಸಂರಕ್ಷಿಸಲು ಮುಂದಾಗಲಾಗಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.
ಆಕ್ಷೇಪಾರ್ಹ ಕಾಯಿದೆಯ ಮೂಲಕ 2021ರ ಅಕ್ಟೋಬರ್ 21ಕ್ಕೂ ಮುನ್ನ ನಿರ್ಮಿಸಿರುವ ಅಕ್ರಮ ಮತ್ತು ಕಾನೂನಾತ್ಮಕ ಕಟ್ಟಡಗಳನ್ನು ಒಂದೇ ಎಂದು ಪರಿಗಣಿಸಿದ್ದು, ಇದು ಅಸಮಾನರನ್ನು ಸಮಾನರನ್ನಾಗಿ ಪರಿಗಣಿಸುವುದಕ್ಕೆ ಸಮವಾಗಿದೆ. ನಿರ್ಮಾಣ ಹಂತದಲ್ಲಿರುವ ಕಟ್ಟಡಗಳು ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ 1961, ಕರ್ನಾಟಕ ಮುನಿಸಿಪಲ್ ಕಾರ್ಪೊರೇಶನ್ ಕಾಯಿದೆ 1976, ಕರ್ನಾಟಕ ಮುನಿಸಿಪಾಲಿಟೀಸ್ ಕಾಯಿದೆ 1964, ಬೆಂಗಳೂರು ಮೆಟ್ರೊಪಾಲಿಟನ್ ವ್ಯಾಪ್ತಿ ಅಭಿವೃದ್ಧಿ ಪ್ರಾಧಿಕಾರ ಕಾಯಿದೆ 1985, ಬಿಬಿಎಂಪಿ ಕಾಯಿದೆ 2020ಕ್ಕೆ ವಿರುದ್ಧವಾಗಿದ್ದು, ಆಕ್ಷೇಪಾರ್ಹ ಕಾಯಿದೆಯ ಮೂಲಕ ರಕ್ಷಣೆ ಒದಗಿಸಲಾಗಿದೆ. ಹೀಗಾಗಿ, ಕಾಯಿದೆಯು ಕಾನೂನಿಗೆ ವಿರುದ್ಧವಾಗಿದೆ” ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ. ಅರ್ಜಿದಾರರ ಪರವಾಗಿ ವಕೀಲ ಮನು ಕುಲಕರ್ಣಿ ವಾದಿಸಿದರು.