

ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲ್ಲೂಕು ಸಾತನೂರು ಹೋಬಳಿ ಕಬ್ಬಾಳು ಗ್ರಾಮದ ಸರ್ಕಾರಿ ಕೆರೆ ಜಾಗದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡುತ್ತಿರುವುದನ್ನು ಆಕ್ಷೇಪಿಸಿ ಸಲ್ಲಿಸಲಾದ ಅರ್ಜಿಯ ಸಂಬಂಧ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಕರ್ನಾಟಕ ಹೈಕೋರ್ಟ್ ಸೋಮವಾರ ನೋಟಿಸ್ ಜಾರಿಗೊಳಿಸಿದೆ.
ಕಬ್ಬಾಳು ನಿವಾಸಿ ಶಿಲ್ಪ ಕಲಾವಿದ ರವಿಕುಮಾರ್ ಕಂಚನಹಳ್ಳಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ವಿಭಾಗೀಯ ಪೀಠ ನಡೆಸಿತು.
ಅರ್ಜಿದಾರರ ವಾದ ಆಲಿಸಿದ ಪೀಠವು ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ, ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿ, ಕನಕಪುರ ತಹಶೀಲ್ದಾರ್, ಬಿಡದಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಮಾರ್ಚ್ 11ಕ್ಕೆ ಮುಂದೂಡಿತು.
ಕಬ್ಬಾಳು ಗ್ರಾಮದ ಸರ್ವೆ ನಂಬರ್ ಎರಡರ 1 ಎಕರೆ 15 ಗುಂಟೆ ‘ಸರ್ಕಾರಿ ಕಟ್ಟೆ‘ (ಸರ್ಕಾರಿ ಕೆರೆ) ಜಾಗ ಎಂದು ಎಲ್ಲಾ ಕಂದಾಯ ದಾಖಲೆಗಳಲ್ಲಿ ನಮೂದು ಇದೆ. ಗ್ರಾಮದ ಕೃಷಿ ಮತ್ತು ಜನ-ಜಾನುವಾರಗಳ ಬಳಕೆಗೆ ಇದೊಂದೆ ಮೂಲಾಧಾರವಾಗಿದೆ. ಆದರೆ, ಈ ಜಾಗದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಲಾಗುತ್ತಿದೆ. ಶೌಚಾಲಯ ನಿರ್ಮಾಣದಿಂದ ಕೆರೆ, ನೀರಿನ ಮೂಲ ಹಾಗೂ ಪರಿಸರಕ್ಕೆ ದೊಡ್ಡ ಹಾನಿ ಆಗಲಿದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ. ಆದ್ದರಿಂದ, ಕೆರೆ ನಿರ್ಮಾಣ ಮಾಡದಂತೆ ನಿರ್ಮಿತಿ ಕೇಂದ್ರಕ್ಕೆ ನಿರ್ದೇಶನ ನೀಡಬೇಕು. ಕೆರೆ ಜಾಗದಲ್ಲಿ ನಿರ್ಮಿಸಲಾಗಿರುವ ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸುವಂತೆ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.