
ಅಂಗವಿಕಲರು, ಹಿರಿಯ ನಾಗರಿಕರಿಗೆ ತಡೆರಹಿತ ಹಾಗೂ ಸುರಕ್ಷಿತ ಸಂಚಾರಕ್ಕೆ ಅವಕಾಶ ಕಲ್ಪಿಸುವ ಪಾದಚಾರಿ ಮಾರ್ಗಗಳ ಮೂಲ ಸೌಕರ್ಯ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಾರಿಗೆ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಲಾದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಬುಧವಾರ ನೋಟಿಸ್ ಜಾರಿಗೊಳಿಸಿದೆ.
ಬೆಂಗಳೂರಿನ ಮೈಕೊ ಲೇ ಔಟ್ ನಿವಾಸಿ ದೇವರಾಯ ಸಮುದ್ರಂ ವೆಂಕಟೇಶ ವಿಜಯಕುಮಾರ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ ಕಾಮೇಶ್ವರ ರಾವ್ ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಪ್ರತಿವಾದಿಗಳಾದ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ, ನಗರ ಭೂ ಸಾರಿಗೆ ನಿರ್ದೇಶನಾಲಯದ ಆಯುಕ್ತರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತರು, ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ಆಯೋಗದ ರಾಜ್ಯ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದ ಪೀಠವು ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿ ವಿಚಾರಣೆಯನ್ನು ಸೆಪ್ಟೆಂಬರ್ 24ಕ್ಕೆ ಮುಂದೂಡಿತು.
ನಗರ ಭೂ ಸಾರಿಗೆ ನಿರ್ದೇಶಕರು 2014ರಲ್ಲಿ ಹೊರಡಿಸಿರುವ ಪಾದಚಾರಿ ಮೂಲಸೌಕರ್ಯ ಯೋಜನೆ, ಅನುಷ್ಠಾನ ಹಾಗೂ 2016ರಲ್ಲಿ ಹೊರಡಿಸಲಾದ ಪರಿಷ್ಕೃತ ಮಾರ್ಗಸೂಚಿಗಳನ್ನು ಅನುಷ್ಠಾನಕ್ಕೆ ತರಲು ನಿರ್ದೇಶಿಸಬೇಕು. ಅಂಗವಿಕಲರು ಮತ್ತು ಹಿರಿಯ ನಾಗರಿಕರಿಗೆ ಅಡಚಣೆ ರಹಿತ, ಸುರಕ್ಷಿತ ಪಾದಚಾರಿ ಮಾರ್ಗ, ರಸ್ತೆ–ಸಾರಿಗೆ ಸೌಲಭ್ಯಗಳನ್ನು ಆದ್ಯತೆಯ ಮೇರೆಗೆ ಒದಗಿಸುವ ನಿಟ್ಟಿನಲ್ಲಿ ನ್ಯಾಯಾಲಯ ನೀಡುವ ಆದೇಶಗಳನ್ನು ಜಾರಿಗೊಳಿಸಲು ವಿಶೇಷಾಧಿಕಾರ ಹೊಂದಿದ ಸಮಿತಿಯೊಂದನ್ನು ರಚಿಸಬೇಕು. ಅಂಗವಿಕಲ ಸ್ನೇಹಿ ಮೂಲಸೌಕರ್ಯಗಳನ್ನು ಒದಗಿಸಿ ಅವುಗಳ ನಿರ್ವಹಣೆಗೆ ವಾರ್ಡ್ ಮಟ್ಟದಿಂದ ಪಾಲಿಕೆ ಆಯುಕ್ತರ ಮಟ್ಟದವರಿಗೆ ಸೂಕ್ತ ಆಡಳಿತ ವ್ಯವಸ್ಥೆ ರೂಪಿಸುವಂತೆ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಗೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.