
ವಿದ್ಯುತ್ ಬಳಕೆದಾರರಿಗೆ ಕನಿಷ್ಠ ಶುಲ್ಕದ ಮೇಲೆ ತೆರಿಗೆ ವಿಧಿಸುವ ಸಂಬಂಧ ಕರ್ನಾಟಕ ವಿದ್ಯುತ್ (ಬಳಕೆ ಮೇಲಿನ ತೆರಿಗೆ) ಕಾಯಿದೆ 1959ರ ಸೆಕ್ಷನ್ 3(1)ಗೆ ತರಲಾಗಿದ್ದ ತಿದ್ದುಪಡಿಯನ್ನು ಅಸಾಂವಿಧಾನಿಕ ಎಂದು ಘೋಷಿಸಿ ಕರ್ನಾಟಕ ಹೈಕೋರ್ಟ್ ಈಚೆಗೆ ಮಹತ್ವದ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರ 2004ರಲ್ಲಿ ಕರ್ನಾಟಕ ವಿದ್ಯುತ್ (ಬಳಕೆ ಮೇಲಿನ ತೆರಿಗೆ) ಕಾಯಿದೆ 1959ರ ಸೆಕ್ಷನ್ 3(1)ಗೆ ತಿದ್ದುಪಡಿ ತಂದು, ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಹಾಗೂ ಕೃಷಿ ಪಂಪ್ ಸೆಟ್‌ಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲ ವರ್ಗದ ವಿದ್ಯುತ್ ಬಳಕೆ ಮಾಡುವ ಗ್ರಾಹಕರಿಗೆ ಕನಿಷ್ಠ ಶುಲ್ಕದ ಮೇಲೆ ಶೇ. 5 ತೆರಿಗೆ ವಿಧಿಸಲು ಮಾಡಿದ್ದ ತೀರ್ಮಾನ ಕಾನೂನುಬಾಹಿರ ಎಂದು ನ್ಯಾಯಾಲಯ ಸಾರಿದೆ.
ಬೆಂಗಳೂರಿನ ಸೋನಾ ಸಿಂಥೆಟಿಕ್ಸ್ ಕಂಪನಿ, ಶ್ರೀ ಕೃಷ್ಣ ಸ್ಪಿನ್ನಿಂಗ್ ಮತ್ತು ವೀವಿಂಗ್ ಮಿಲ್ಸ್ ಪ್ರೈವೇಟ್ ಲಿಮಿಟೆಡ್ ಸೇರಿ ಹತ್ತು ಕಂಪನಿಗಳು 2008ರಲ್ಲಿ ಹಾಗೂ ಎಫ್‌ಕೆಸಿಸಿಐ 2009ರಲ್ಲಿ ಸಲ್ಲಿಸಿದ್ದ ಎರಡು ಪ್ರತ್ಯೇಕ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಅನಂತ ರಾಮನಾಥ್ ಹೆಗಡೆ ಅವರ ಏಕಸದಸ್ಯ ಪೀಠ ಭಾಗಶಃ ಪುರಸ್ಕರಿಸಿದೆ. ನ್ಯಾಯಾಲಯದ ಈ ಆದೇಶದಿಂದ ವಿದ್ಯುತ್ ಸರಬರಾಜು ಕಂಪನಿಗಳು ಅರ್ಜಿದಾರರ ಕಂಪೆನಿಗಳಿಗೆ ಕೋಟ್ಯಂತರ ರೂಪಾಯಿ ತೆರಿಗೆಯ ಹಣ ಮರುಪಾವತಿ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿದೆ.
ಗ್ರಾಹಕರ ಬಳಕೆಗೆ ವಿದ್ಯುತ್ ಲಭ್ಯವಿದೆ ಎಂಬುದನ್ನು ಖಾತ್ರಿಪಡಿಸಲು ಅವರಿಗೆ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ. ಪೂರೈಸಿದ ಮಾತ್ರಕ್ಕೆ ಅದು ಬಳಕೆ ಅಥವಾ ಮಾರಾಟ ಎಂದೆನಿಸುವುದಿಲ್ಲ. ಗ್ರಾಹಕರು ವಿದ್ಯುತ್ ಬಳಸದೇ ಇದ್ದರೆ ಅದರ ಮೇಲೆ ಸಂವಿಧಾನದ ಏಳನೇ ಷೆಡ್ಯೂಲ್ ಲಿಸ್ಟ್-2, ಎಂಟ್ರಿ 53ರ ಪ್ರಕಾರ ರಾಜ್ಯ ಸರ್ಕಾರಕ್ಕೆ ಕನಿಷ್ಠ ಶುಲ್ಕದ ಮೇಲೆ ತೆರಿಗೆ ವಿಧಿಸುವ ಯಾವುದೇ ಶಾಸನಾತ್ಮಕ ಅಧಿಕಾರವಿಲ್ಲ. ಆದರೆ, 7ನೇ ಶೆಡ್ಯೂಲ್ ಲಿಸ್ಟ್ 2ರ ಎಂಟ್ರಿ 53ರ ಪ್ರಕಾರ ರಾಜ್ಯ ಸರ್ಕಾರಕ್ಕೆ, ವಿದ್ಯುತ್ ಬಳಕೆ ಮೇಲೆ ತೆರಿಗೆ ವಿಧಿಸುವ ಅಧಿಕಾರವಿದೆಯೇ ಹೊರತು, ಕನಿಷ್ಠ ಶುಲ್ಕದ ಮೇಲೆ ಅಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಮಫತ್‌ಲಾಲ್ ಇಂಡಸ್ಟ್ರೀಸ್ ಲಿಮಿಟೆಡ್ ಹಾಗೂ ಕೇಂದ್ರ ಸರ್ಕಾರದ ನಡುವಿನ ಪ್ರಕರಣದಲ್ಲಿ 1997ರಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಉಲ್ಲೇಖಿಸಿರುವ ಹೈಕೋರ್ಟ್, 2003-04ರಲ್ಲಿ ತಿದ್ದುಪಡಿ ಕಾರ್ಯರೂಪಕ್ಕೆ ಬಂದಿದೆ. ಆದರೆ, ಅರ್ಜಿದಾರರು 2008ರಲ್ಲಿ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ. ಈ ಮಧ್ಯೆ, ನ್ಯಾಯಾಲಯ ಈಗ ಅಸಾಂವಿಧಾನಿಕ ಎಂದು ಘೋಷಿಸಿರುವ ತಿದ್ದುಪಡಿಯನ್ನು ಸರ್ಕಾರ 2018ರಲ್ಲೇ ಕೈಬಿಟ್ಟಿದೆ. ಆದ್ದರಿಂದ, ಅರ್ಜಿ ಸಲ್ಲಿಸಿದ ವರ್ಷದಿಂದ ಅಂದರೆ, 2008ರಿಂದ 2018ರ ಅವಧಿಯಲ್ಲಿ ಪಾವತಿಸಿರುವ ಶುಲ್ಕದ ಮೊತ್ತ ಹಿಂಪಡೆಯಲು ಮಾತ್ರ ಅರ್ಜಿದಾರರು ಅರ್ಹರಾಗಿದ್ದಾರೆ. ಈ ಆದೇಶವು ತಿದ್ದುಪಡಿ ಪ್ರಶ್ನಿಸಿರುವ ಅರ್ಜಿದಾರರಿಗೆ ಮಾತ್ರ ಅನ್ವಯಿಸಲಿದೆಯೇ ಹೊರತು, ತಿದ್ದುಪಡಿ ಪ್ರಶ್ನಿಸದವರಿಗೆ ಈ ಆದೇಶದ ಲಾಭ ದೊರೆಯುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
ಸರ್ಕಾರ 2009ರಿಂದ 2018ರ ಅವಧಿಯಲ್ಲಿ ತಿದ್ದುಪಡಿಯ ಅನುಸಾರ ಸಂಗ್ರಹಿಸಿರುವ ತೆರಿಗೆ ಮೊತ್ತವನ್ನು ಎಫ್‌ಕೆಸಿಸಿಐಗೆ ಹಿಂದಿರುಗಿಸಬೇಕು. ಉಳಿದ ಅರ್ಜಿದಾರ ಕಂಪನಿಗಳು 2008ರಿಂದ 2018ರವರೆಗೆ ಪಾವತಿಸಿರುವ ತೆರಿಗೆ ಮೊತ್ತವನ್ನು ಹಿಂಪಡೆಯಲು ಸ್ವತಂತ್ರರಿದ್ದು (ನಷ್ಟ/ಹಾನಿಯ ಪುರಾವೆಗೆ ಒಳಪಟ್ಟಂತೆ), ಅದಕ್ಕಾಗಿ ಸೂಕ್ತ ಪ್ರಕ್ರಿಯೆ ಕೈಗೊಳ್ಳಬಹುದು ಎಂದು ನ್ಯಾಯಾಲಯ ಆದೇಶಿಸಿದೆ.
ಕನಿಷ್ಠ ಶುಲ್ಕದ ಮೇಲಿನ ತೆರಿಗೆಯನ್ನು ಅಸಾಂವಿಧಾನಿಕ ಎಂದು ಘೋಷಿಸಲಾಗಿದೆಯೇ ಹೊರತು, ಬಳಸಲ್ಪಟ್ಟ ವಿದ್ಯುತ್‌ಗೆ ವಿಧಿಸಿರುವ ತೆರಿಗೆಯನ್ನಲ್ಲ ಎಂದು ಇದೇ ವೇಳೆ ನ್ಯಾಯಾಲಯ ಸ್ಪಷ್ಟಪಡಿಸಿದೆ.