ಕಾಮಗಾರಿ ವಿಳಂಬ: ಸಿಂಪ್ಲೆಕ್ಸ್ ವಿರುದ್ಧ ಎಫ್‌ಐಆರ್‌ ದಾಖಲಿಸಲು ಬಿಬಿಎಂಪಿಗೆ ಹೈಕೋರ್ಟ್‌ ನಿರ್ದೇಶನ

ನ್ಯಾಯಾಲಯ ನೋಟಿಸ್ ನೀಡಿದ ಹೊರತಾಗಿಯೂ ಕಂಪೆನಿಯು ವಿಚಾರಣೆಗೆ ಹಾಜರಾಗಿಲ್ಲ ವಕೀಲರ ಮೂಲಕವೂ ಪ್ರತಿನಿಧಿಸಿಲ್ಲ ಎಂದು ಪೀಠದ ಗಮನಕ್ಕೆ ತಂದ್ದರಿಂದ ಕೆರಳಿದ ನ್ಯಾಯಮೂರ್ತಿಗಳು.
BBMP and Karnataka HC
BBMP and Karnataka HC

ಕೋರಮಂಗಲದ ಕೇಂದ್ರೀಯ ಸದನ ಮತ್ತು ಈಜಿಪುರ ನಡುವಿನ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ವಿಳಂಬ ಮಾಡಿ, ಸಾರ್ವಜನಿಕ ಹಣ ದುರುಪಯೋಗ ಪಡಿಸಿಕೊಂಡ ಆರೋಪದಲ್ಲಿ ಯೋಜನೆಯ ಗುತ್ತಿಗೆ ಪಡೆದಿದ್ದ ಸಿಂಪ್ಲೆಕ್ಸ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಕರ್ನಾಟಕ ಹೈಕೋರ್ಟ್ ಗುರುವಾರ ನಿರ್ದೇಶಿಸಿದೆ.

ಮೇಲ್ಸೇತುವೆ ಕಾಮಗಾರಿ ವಿಳಂಬ ಪ್ರಶ್ನಿಸಿ ಕೋರಮಂಗಲದ ಆದಿನಾರಾಯಣ ಶೆಟ್ಟಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಪೀಠ ನಡೆಸಿತು.

ಗುತ್ತಿಗೆದಾರ ಸಂಸ್ಥೆಯೇ ಯೋಜನೆ ವಿಳಂಬವಾಗಲು ಕಾರಣ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಯೋಜನೆಯಲ್ಲಿ ಸಾರ್ವಜನಿಕ ಹಣ ವಿನಿಯೋಗಿಸಲಾಗಿದ್ದು, ಕಾಮಗಾರಿ ವಿಳಂಬದಿಂದ ಹೆಚ್ಚಿನ ಜನರಿಗೆ ಸಮಸ್ಯೆಯಾಗಿದೆ. ಆದ್ದರಿಂದ, ಹಣ ದುರುಪಯೋಗ ಮಾಡಿಕೊಂಡ ಆರೋಪದಲ್ಲಿ ಗುತ್ತಿಗೆದಾರ ಸಂಸ್ಥೆ ವಿರುದ್ಧ ಬಿಬಿಎಂಪಿ ಎಫ್‌ಐಆರ್‌ ದಾಖಲಿಸಬೇಕು ಹಾಗೂ ಸಂಸ್ಥೆಯೊಂದಿಗೆ ಮಾಡಿಕೊಂಡಿರುವ ಗುತ್ತಿಗೆ ರದ್ದುಪಡಿಸಿ, ಅದರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಪೀಠ ನಿರ್ದೇಶಿಸಿತು.

ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲ ಎಚ್ ಸುನೀಲ್ ಕುಮಾರ್ ಅವರು “ಮೇಲ್ಸೇತುವೆ ಕಾಮಗಾರಿ ನಿರ್ಮಾಣಕ್ಕೆ ಈ ಹಿಂದೆ ಮಾಡಿಕೊಂಡಿದ್ದ ಗುತ್ತಿಗೆ ರದ್ದುಪಡಿಸಿ, ಹೊಸ ಟೆಂಡರ್ ಕರೆಯಲು ಬಿಬಿಎಂಪಿ ಸರ್ಕಾರದ ಅನುಮತಿ ಕೋರಿದೆ. ಈ ವಿಚಾರದಲ್ಲಿ ಸರ್ಕಾರ ನಿರ್ಧಾರ ಕೈಗೊಳ್ಳಬೇಕಿದೆ” ಎಂದರು.

ಬಿಬಿಎಂಪಿ ಪರ ವಕೀಲರು, “ಕಾಮಗಾರಿಯನ್ನು ಯಾವ ಕಾಲಮಿತಿಯೊಳಗೆ ಪೂರ್ಣಗೊಳಿಸಲಾಗುತ್ತದೆ ಎಂಬ ಬಗ್ಗೆ ವಿವರಣೆ ಕೇಳಿ ಗುತ್ತಿಗೆದಾರ ಸಂಸ್ಥೆಗೆ ಎರಡು ಬಾರಿ ನೋಟಿಸ್ ನೀಡಲಾಗಿತ್ತು. ನಿಗಿದಿತ ಸಮಯದೊಳಗೆ ಯೋಜನೆ ಪೂರ್ಣಗೊಳಿಸದಿದ್ದರೆ ಗುತ್ತಿಗೆ ರದ್ದುಪಡಿಸುವುದಾಗಿ ಎಚ್ಚರಿಕೆಯನ್ನೂ ನೀಡಲಾಗಿತ್ತು. ಆದರೆ, ಅದ್ಯಾವುದಕ್ಕೂ ಸಂಸ್ಥೆ ಪ್ರತಿಕ್ರಿಯಿಸಿಲ್ಲ. ಆದ್ದರಿಂದ, ಸಂಸ್ಥೆಗೆ ನೀಡಿರುವ ಗುತ್ತಿಗೆ ರದ್ದುಪಡಿಸಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ” ಎಂದರು.

ಗುತ್ತಿಗೆದಾರರನ್ನು ಜೈಲಿಗೆ ಕಳುಹಿಸುವೆವು

ಆಗ ಪೀಠವು ಅರ್ಜಿಯಲ್ಲಿ ಗುತ್ತಿಗೆದಾರ ಸಂಸ್ಥೆಯನ್ನು ಪ್ರತಿವಾದಿಯನ್ನಾಗಿ ಮಾಡಲಾಗಿದೆಯೇ ಎಂದು ಪ್ರಶ್ನಿಸಿತು. ಅರ್ಜಿದಾರರು ಹಾಗೂ ಪಾಲಿಕೆ ಪರ ವಕೀಲರು, ಗುತ್ತಿಗೆದಾರ ಸಂಸ್ಥೆ ಅರ್ಜಿಯಲ್ಲಿ 4ನೇ ಪ್ರತಿವಾದಿಯಾಗಿದ್ದು, ಅರ್ಜಿ ಸಂಬಂಧ ನ್ಯಾಯಾಲಯ ನೋಟಿಸ್ ನೀಡಿದ ಹೊರತಾಗಿಯೂ ವಿಚಾರಣೆಗೆ ಹಾಜರಾಗಿಲ್ಲ ವಕೀಲರ ಮೂಲಕವೂ ಪ್ರತಿನಿಧಿಸಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ಹಾಗಿದ್ದರೆ ಸಂಸ್ಥೆಯ ವಿರುದ್ಧ ಎಫ್‌ಐಆರ್ ದಾಖಲಿಸಿ, ಜೈಲಿಗೆ ಕಳುಹಿಸಲು ಆದೇಶಿಸುತ್ತೇವೆ ಎಂದು ಆಕ್ರೋಶದಿಂದ ನುಡಿದ ಪೀಠ, ನ್ಯಾಯಾಲಯ ಏನು ಮಾಡಬಹುದು ಎನ್ನುವುದು ಅವರಿಗಿನ್ನೂ ತಿಳಿದಿಲ್ಲ. ಗುತ್ತಿಗೆದಾರರನ್ನು ಜೈಲಿಗೆ ಕಳುಹಿಸುತ್ತೇವೆ. ಕೆಲಸ ಮಾಡಲು ಸಾಧ್ಯವಿಲ್ಲ, ಬಿಟ್ಟು ಹೋಗುತ್ತೇನೆ ಎನ್ನಲು ಅವಕಾಶವಿಲ್ಲ. ಹೇಗೆ ಕೆಲಸ ಮಾಡಿಸಬೇಕು ಎನ್ನುವುದು ನಮಗೆ ಗೊತ್ತಿದೆ ಎಂದು ತೀಕ್ಷ್ಣವಾಗಿ ನುಡಿಯಿತು.

Also Read
ಬಿಬಿಎಂಪಿ ರಸ್ತೆ ಗುಂಡಿ ಪ್ರಕರಣ: ಪ್ರಧಾನ ಎಂಜಿನಿಯರ್‌ ವಿರುದ್ಧ ಜಾಮೀನು ಸಹಿತ ವಾರೆಂಟ್‌ ಹೊರಡಿಸಿದ ಹೈಕೋರ್ಟ್‌

ವಾರದೊಳಗೆ ಅನುಮತಿ ನೀಡಿ

ಗುತ್ತಿಗೆದಾರ ಸಂಸ್ಥೆಯೊಂದಿಗಿನ ಗುತ್ತಿಗೆ ರದ್ದುಪಡಿಸಲು ಅನುಮತಿ ನೀಡುವಂತೆ ಮನವಿ ಮಾಡಿ ಪಾಲಿಕೆ ಸರ್ಕಾರಕ್ಕೆ ಪತ್ರ ಬರೆದಿದೆ. ಆದರೆ, ಈವರೆಗೂ ಅದನ್ನು ಪರಿಗಣಿಸಲಾಗಿಲ್ಲ. ಈ ಬಗ್ಗೆ ಮಾಹಿತಿ ಪಡೆದು ತಿಳಿಸಲು ಸರ್ಕಾರದ ಪರ ವಕೀಲರು ಕಾಲಾವಕಾಶ ಕೋರಿದ್ದಾರೆ. ಆದ್ದರಿಂದ, ಒಂದು ವಾರದ ಒಳಗೆ ಪಾಲಿಕೆಯ ಮನವಿ ಪರಿಗಣಿಸಿ ಗುತ್ತಿಗೆ ರದ್ದುಪಡಿಸಲು ಸರ್ಕಾರ ಅನುಮತಿ ನೀಡಬೇಕು. ಬಳಿಕ ಪಾಲಿಕೆಯೇ ಸ್ವತಃ ಅಥವಾ ಬೇರಾವುದೇ ಸಂಸ್ಥೆಯ ಮೂಲಕ ಯೋಜನೆ ಪೂರ್ಣಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಕಾಲಮಿತಿಯೊಳಗೆ ಆದಷ್ಟು ಶೀಘ್ರ ಯೋಜನೆ ಪೂರ್ಣಗೊಳ್ಳಬೇಕು. ಈ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳ ಕುರಿತು ಮುಂದಿನ ವಿಚಾರಣೆ ವೇಳೆ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಮಾರ್ಚ್‌ 14ಕ್ಕೆ ಮುಂದೂಡಿತು.

ಪ್ರಕರಣದ ಹಿನ್ನೆಲೆ

ಈಜಿಪುರ ಜಂಕ್ಷನ್‌ನಿಂದ ಕೋರಮಂಗಲದ ಕೇಂದ್ರೀಯ ಸದನದವರೆಗಿನ 2.5 ಕಿ.ಮೀ ಉದ್ದದ ಮೇಲ್ಸೇತುವೆ ನಿರ್ಮಿಸಲು ಬಿಬಿಎಂಪಿ ಯೋಜನೆ ಹಮ್ಮಿಕೊಂಡಿತ್ತು. ಕೇಂದ್ರ ಹಾಗೂ ರಾಜ್ಯ ಸರ್ಕಾರ, ಬಿಬಿಎಂಪಿ ಸಹಭಾಗಿತ್ವದಲ್ಲಿ ಒಟ್ಟು ರೂ. 157.66 ಕೋಟಿ ವೆಚ್ಚದ ಯೋಜನೆಗೆ 2014ರಲ್ಲಿ ಟೆಂಡರ್ ಕರೆಯಲಾಗಿತ್ತು. ಗುತ್ತಿಗೆ ಪಡೆದಿರುವ ಸಿಂಪ್ಲೆಕ್ಸ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಹಾಗೂ ಬಿಬಿಎಂಪಿ ನಡುವಿನ ಒಪ್ಪಂದದ ಪ್ರಕಾರ 2019ರ ನವೆಂಬರ್‌ 4ಕ್ಕೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ, ಈವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ. ಇದರಿಂದ, ಆ ಭಾಗದಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದ್ದ ಅರ್ಜಿದಾರರು, ಬೇರೊಂದು ಟೆಂಡರ್ ಕರೆದು ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಸರ್ಕಾರ ಹಾಗೂ ಪಾಲಿಕೆಗೆ ನಿರ್ದೇಶಿಸಬೇಕು. ಕಾಮಗಾರಿ ತಡವಾಗಿರುವ ಕಾರಣ ನಿರ್ಮಾಣ ವೆಚ್ಚವೂ ಹೆಚ್ಚಾಗಲಿದ್ದು, ಸಾರ್ವಜನಿಕರು ತೆರಿಗೆ ರೂಪದಲ್ಲಿ ಪಾವತಿಸಿರುವ ಹಣ ನಷ್ಟವಾಗುತ್ತದೆ. ಈ ನಷ್ಟವನ್ನು ಗುತ್ತಿಗೆ ಪಡೆದಿರುವ ಸಂಸ್ಥೆಯಿಂದಲೇ ವಸೂಲಿ ಮಾಡಲು ಸಮಿತಿಯೊಂದನ್ನು ರಚಿಸಬೇಕು ಎಂದು ಮನವಿ ಮಾಡಿದ್ದಾರೆ.

Related Stories

No stories found.
Kannada Bar & Bench
kannada.barandbench.com