ಚಿಕಿತ್ಸೆ ನೆಪದಲ್ಲಿ ಬಂಗಾಳಕ್ಕೆ ಪುತ್ರಿ ಕರೆದೊಯ್ದಿದ್ದ ತಂದೆ: ಮಗುವನ್ನು ತಾಯಿ ವಶಕ್ಕೆ ಒಪ್ಪಿಸಲು ಹೈಕೋರ್ಟ್‌ ಆದೇಶ

ಮಗುವಿನ ಪ್ರತಿದಿನದ ಬೆಳವಣಿ ಬಗ್ಗೆ ಪತ್ನಿಯು ಪ್ರತಿ ಭಾನುವಾರ ಪತಿಗೆ ಮಾಹಿತಿ ನೀಡಬೇಕು. ಪತಿ ವಾರಂತ್ಯದಲ್ಲಿ ಬೆಂಗಳೂರಿಗೆ ಬಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಪುತ್ರಿಯ ಜೊತೆಗೆ ಸಮಯ ಕಳೆಯಬಹುದು ಎಂದು ಆದೇಶದಲ್ಲಿ ತಿಳಿಸಿರುವ ನ್ಯಾಯಾಲಯ.
Justices Alok Aradhe and Vijaykumar A. Patil
Justices Alok Aradhe and Vijaykumar A. Patil

ಚಿಕಿತ್ಸೆ ಕೊಡಿಸಲು ವೈದ್ಯರ ಬಳಿಗೆ ಕರೆದುಕೊಂಡು ಹೋಗುವುದಾಗಿ ತಿಳಿಸಿ ಅಪ್ರಾಪ್ತ ಪುತ್ರಿಯನ್ನು ಪಶ್ವಿಮ ಬಂಗಾಳಕ್ಕೆ ಕರೆದೊಯ್ದ ತಂದೆ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್ ಈಚೆಗೆ ಪುತ್ರಿಯನ್ನು ತಾಯಿ ವಶಕ್ಕೆ ನೀಡಲು ಆದೇಶಿಸಿದೆ.

ಮಹಿಳೆ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಲೋಕ್ ಅರಾಧೆ ಮತ್ತು ವಿಜಯ ಕುಮಾರ ಎ.ಪಾಟೀಲ್ ಅವರ ನೇತೃತ್ವದ ವಿಭಾಗೀಯ ಪೀಠವು ಪ್ರಕರಣದಲ್ಲಿ ತಂದೆ (ಅರ್ಜಿದಾರೆಯ ಪತಿ) ಅಕ್ರಮವಾಗಿ ಪುತ್ರಿಯನ್ನು ಪಶ್ವಿಮ ಬಂಗಾಳಕ್ಕೆ ಕರೆದೊಯ್ದಿದ್ದಾರೆ ಎಂದು ಅಭಿಪ್ರಾಯಪಟ್ಟಿದೆ.

ಪುತ್ರಿಯನ್ನು ಕೂಡಲೇ ಅರ್ಜಿದಾರೆ ಸುಪರ್ದಿಗೆ ಒಪ್ಪಿಸುವಂತೆ ಆಕೆಯ ಪತಿಗೆ ನಿರ್ದೇಶಿಸಿರುವ ಹೈಕೋರ್ಟ್, ಪುತ್ರಿಯ ಶಾಶ್ವತ ಸುಪರ್ದು ಕೋರಿ ಪತ್ನಿ ಬೆಂಗಳೂರಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಮತ್ತೊಂದೆಡೆ ತಾನು ಮಗುವಿನ ಕಾನೂನುಬದ್ಧ ಪೋಷಕ ಎಂಬುದಾಗಿ ಘೋಷಿಸಲು ಕೋರಿ ಪಶ್ಚಿಮ ಬಂಗಾಳದಲ್ಲಿ ಪತಿ ಅರ್ಜಿ ಸಲ್ಲಿಸಿದ್ದಾರೆ. ಆ ಎರಡೂ ಅರ್ಜಿಗಳು ಇತ್ಯರ್ಥವಾಗುವರೆಗೆ ಪುತ್ರಿ ತಾಯಿ ವಶದಲ್ಲಿರಬೇಕು. ತಂದೆಗೆ ಮಗಳ ಭೇಟಿ ಹಕ್ಕು ನೀಡಬೇಕು ಎಂದು ನಿರ್ದೇಶಿಸಿತು.

ತಂದೆಯೊಂದಿಗೆ ಸಾಮಾಜಿಕ, ಭೌತಿಕ ಮತ್ತು ಮಾನಸಿಕ ಸಂಪರ್ಕವನ್ನು ಮಗಳು ಕಳೆದುಕೊಳ್ಳಬಾರದು. ದಂಪತಿ ಪ್ರತ್ಯೇಕವಾಗಿದ್ದರು ಸಹ ಮಗಳಿಗೆ ಪಾಲಕರ ಆರೈಕೆ ಸಿಗಬೇಕು. ಆ ದಿಸೆಯಲ್ಲಿ ನಿತ್ಯ ಶಾಲೆಯಿಂದ ಮನೆಗೆ ಬಂದ ನಂತರ ತಂದೆ, ಮಗಳಿಗೆ ಪೋನ್ ಅಥವಾ ವಿಡಿಯೊ ಕರೆ ಮಾಡಿ ಯೋಗಕ್ಷೇಮ ವಿಚಾರಿಸಬಹುದು. ಮಗುವಿನ ಪ್ರತಿದಿನದ ಬೆಳವಣಿ ಬಗ್ಗೆ ಪತ್ನಿಯು ಪ್ರತಿ ಭಾನುವಾರ ಪತಿಗೆ ಮಾಹಿತಿ ನೀಡಬೇಕು. ಪತಿ ವಾರಂತ್ಯದಲ್ಲಿ ಬೆಂಗಳೂರಿಗೆ ಬಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಪುತ್ರಿಯ ಜೊತೆಗೆ ಸಮಯ ಕಳೆಯಬಹುದು ಎಂದು ಆದೇಶದಲ್ಲಿ ಹೇಳಿದೆ.

ಪತಿಯು ತನ್ನ ವಿರುದ್ಧ ಪತ್ನಿ ಸುಳ್ಳು, ಕಪೋಲ ಕಲ್ಪಿತ ಮತ್ತು ಆಧಾರರಹಿತ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ನೆಲೆಸಿದ್ದ ಸ್ನೇಹಿತ ಕರೆ ಮಾಡಿ, ನನ್ನ ಮಗಳು ಜ್ವರ ಮತ್ತು ಕಣ್ಣಿನ ಸೋಂಕಿನಿಂದ ನರಳುತ್ತಿರುವುದಾಗಿ ತಿಳಿಸಿದರು. ಇದರಿಂದ 2016ರ ಡಿಸೆಂಬರ್‌ 16ರಂದು ನಾನು ಬೆಂಗಳೂರಿಗೆ ಬಂದಿದ್ದೆ. ನನ್ನ ನೋಡಿದ ಕೂಡಲೇ ಪುತ್ರಿ ಜೋರಾಗಿ ಅತ್ತಳಲ್ಲದೆ, ಐದಾರು ದಿನಗಳಿಂದ ಸೂಕ್ತವಾಗಿ ಉಪಾಹಾರ ಕೊಟ್ಟಿಲ್ಲ ಎಂದಳು ಎಂದು ಆಕ್ಷೇಪಣೆಯಲ್ಲಿ ವಿವರಿಸಿದ್ದರು.

ಜೊತೆಗೆ, ಜ್ವರದಿಂದ ಬಳಲುತ್ತಿದ್ದ ಕಾರಣ ಚಿಕಿತ್ಸೆ ಕೊಡಿಸಲು ಮಗಳನ್ನ ಕರೆದುಕೊಂಡು ಹೋಗಲು ಅತ್ತೆ ಅನುಮತಿ ನೀಡಿದ್ದರು. ಕೂಡಲೇ ಮಗಳಿಗೆ ಔಷಧಿ ಕೊಡಿಸಿ, ಅಲ್ಲಿಂದ ಪಶ್ಚಿಮ ಬಂಗಾಳಕ್ಕೆ ಕರೆದಕೊಂಡು ಹೋದೆ ಮರು ದಿನ ಪಶ್ಚಿಮ ಬಂಗಾಳದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದೆ. ವೈದ್ಯರ ಸಲಹೆ ಮೇರೆಗೆ ನೇತ್ರ ತಜ್ಞರಿಂದಲೂ ಚಿಕಿತ್ಸೆ ಕೊಡಿಸಿದ್ದೆ ಎಂದು ವಿವರಿಸಿದ್ದ ಪತಿ, ಆ ಕುರಿತ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ವಾದ-ಪ್ರತಿವಾದ ಆಲಿಸಿದ ಪೀಠವು ಅರ್ಜಿದಾರೆಯ ಪತಿಯ ಆಕ್ಷೇಪಣೆ ಗಮನಿಸಿದರೆ, ಕೇವಲ ಚಿಕಿತ್ಸೆ ಕೊಡಿಸಲು ಮಗಳನ್ನು ಕರೆದೊಯ್ಯಲು ಅರ್ಜಿದಾರೆಯ ತಾಯಿ ಅನುಮತಿ ನೀಡಿದ್ದರು. ಆದರೆ, ಮಗಳನ್ನು ಪಶ್ವಿಮ ಬಂಗಾಳಕ್ಕೆ ಕರೆದೊಯ್ದು, ಚಿಕಿತ್ಸೆ ಕೊಡಿಸಲಾಗಿದೆ. ಜತೆಗೆ, ಅಲ್ಲಿಯೇ ಶಾಲೆಗೂ ಸೇರಿಸಿದ್ದಾರೆ. ಆದ್ದರಿಂದ ಮಗಳನ್ನು ತಮ್ಮ ಸುಪರ್ದಿಗೆ ಅಕ್ರಮವಾಗಿ ಕರೆದುಕೊಂಡು ಹೋಗಿದ್ದಾರೆ ಎಂದು ಅರ್ಜಿದಾರೆ ದೂರು ನೀಡಿದ್ದಾರೆ. ಪರಿಸ್ಥಿತಿ ಹೀಗಿರುವುದರಿಂದ ಮಗಳನ್ನು ಅರ್ಜಿದಾರೆಯ ಸುಪರ್ದಿಗೆ ನೀಡಬೇಕು ಎಂದು ನಿರ್ದೇಶಿಸಿತು.

ಪ್ರಕರಣದ ಹಿನ್ನೆಲೆ: 2012ರ ಫೆಬ್ರವರಿ 22ಕ್ಕೆ ಅಂತರಧರ್ಮೀಯ ವಿವಾಹವಾಗಿದ್ದ ದಂಪತಿಗೆ 2016ರ ಜೂನ್‌ 25ಕ್ಕೆ ಹೆಣ್ಣು ಮಗು ಜನಿಸಿತ್ತು. ದಂಪತಿಯು 2017ರ ಜನವರಿಯಿಂದ 2018ರ ಜೂನ್‌ವರೆಗೆ ಬೆಂಗಳೂರಿನಲ್ಲಿ ನೆಲೆಸಿದ್ದರು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದಂಪತಿ ಪ್ರತ್ಯೇಕವಾಗಿದ್ದರು. ಪತ್ನಿ ಮಗಳೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದರು. ಕೆಲಸದ ನಿಮಿತ್ತ ಪತಿ ಪಶ್ವಿಮ ಬಂಗಾಳದಲ್ಲಿ ವಾಸವಾಗಿದ್ದರು.

2022ರ ಡಿಸೆಂಬರ್‌ 16ರಂದು ಬೆಂಗಳೂರಿಗೆ ಬಂದಿದ್ದ ಪತಿ, ಪುತ್ರಿಯನ್ನು ವೈದ್ಯರ ಬಳಿಗೆ ಚಿಕಿತ್ಸೆಗೆ ಕರೆದುಕೊಂಡು ಹೋಗುವುದಾಗಿ ತಿಳಿಸಿ ಪಶ್ಚಿಮ ಬಂಗಾಳಕ್ಕೆ ಕರೆದೊಯ್ದಿದ್ದರು. ಇದರಿಂದ ಪತ್ನಿ ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.

Related Stories

No stories found.
Kannada Bar & Bench
kannada.barandbench.com