ಟೈಮ್‌ಲೆಸ್‌ ಜ್ಯುವೆಲರ್ಸ್‌ ಕಟ್ಟಡ ವಿವಾದ: ದೂರು ಪರಿಶೀಲಿಸಿ ಕ್ರಮಕ್ಕೆ ಜಿಬಿಎಗೆ ಹೈಕೋರ್ಟ್‌ ನಿರ್ದೇಶನ

ಅಕ್ರಮ ಕಟ್ಟಡ ನಿರ್ಮಾಣ ಪ್ರಶ್ನಿಸಿ ಆನೇಕಲ್‌ನ ನಾರಾಯಣ ಸ್ವಾಮಿ ಲೇಔಟ್‌ ನಿವಾಸಿಯಾದ ಧನುಷ್‌ ಮತ್ತು ಸಹಕಾರ ನಗರದ ಭರತ್‌ ಕಾಮತ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ.
Karnataka High Court
Karnataka High Court
Published on

“ಬೆಂಗಳೂರಿನ ಜೆ ಪಿ ನಗರ ಐದನೇ ಹಂತದಲ್ಲಿರುವ ಆಭರಣ ಟೈಮ್‌ಲೆಸ್‌ ಜ್ಯುವೆಲರ್ಸ್‌ ಮಳಿಗೆಯ ಸ್ಥಿರಾಸ್ತಿ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಕಾನೂನು ಬಾಹಿರ ಕಟ್ಟಡ ನಿರ್ಮಾಣದ ಬಗೆಗಿನ ದೂರನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಗ್ರೇಟರ್‌ ಬೆಂಗಳೂರು ಪ್ರಾಧಿಕಾರಕ್ಕೆ (ಜಿಬಿಎ) ಕರ್ನಾಟಕ ಹೈಕೋರ್ಟ್‌ ಈಚೆಗೆ ನಿರ್ದೇಶಿಸಿದೆ.

ಅಕ್ರಮ ಕಟ್ಟಡ ನಿರ್ಮಾಣ ಪ್ರಶ್ನಿಸಿ ಆನೇಕಲ್‌ನ ನಾರಾಯಣ ಸ್ವಾಮಿ ಲೇಔಟ್‌ ನಿವಾಸಿಯಾದ ಧನುಷ್‌ ಮತ್ತು ಸಹಕಾರ ನಗರದ ಭರತ್‌ ಕಾಮತ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ಐ ಅರುಣ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲರಾದ ಎಚ್‌ ಸುನಿಲ್‌ ಕುಮಾರ್ ಮತ್ತು ನವೀದ್‌ ಅಹಮದ್‌ ಅವರ ವಾದ ಆಲಿಸಿದ ಪೀಠವು “ಕಟ್ಟಡದ ಮಾಲೀಕರು ಮತ್ತು ಇತರರಿಗೆ ವಿಚಾರಣೆಗೆ ಅವಕಾಶ ನೀಡಿದ ನಂತರ ಕಾನೂನಿನ ಪ್ರಕಾರ ಅಕ್ರಮ ಕಟ್ಟಡ ನಿರ್ಮಾಣದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಪ್ರತಿವಾದಿ ಜಿಬಿಎಗೆ ತಾಕೀತು ಮಾಡಿದೆ.

ವಿಚಾರಣೆ ವೇಳೆ ಜಿಬಿಎ ಪರ ವಕೀಲ ಕೆ ಎಸ್‌ ಮಲ್ಲಿಕಾರ್ಜುನ ರೆಡ್ಡಿ ಅವರು “ಕಳೆದ ಆಗಸ್ಟ್‌ 20ರಂದು ಪೀಠಕ್ಕೆ ಮೆಮೊ ಸಲ್ಲಿಸಿ, ಆಸ್ತಿಯಲ್ಲಿ ಕೆಲವು ಅಕ್ರಮ ನಿರ್ಮಾಣಗಳು ನಡೆದಿರುವುದು ನಿಜ” ಎಂದು ಕಂಡುಬಂದಿದೆ ಎಂದು ವಿವರಿಸಿ ಕೆಲವು ದಾಖಲೆಗಳನ್ನು ಪೀಠಕ್ಕೆ ಸಲ್ಲಿಸಿದ್ದರು.

ಇದನ್ನು ಪರಿಗಣಿಸಿರುವ ಪೀಠವು “ಅರ್ಜಿಗೆ ಸಂಬಂಧಿಸಿದಂತೆ ವಿವಾದಿತ ಕಟ್ಟಡದ ಜಾಗದಲ್ಲಿ ಯಾವುದಾದರೂ ಅಕ್ರಮ ನಿರ್ಮಾಣ ನಡೆದಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ” ಎಂದು ಇದೇ ವೇಳೆ ಸ್ಪಷ್ಟಪಡಿಸಿದ್ದು, “ಈ ಕುರಿತಂತೆ ಮುಂದಿನ ಯಾವುದೇ ಕಾನೂನು ಕ್ರಮ ಕೈಗೊಳ್ಳುವುದನ್ನು ಜಿಬಿಎ ವಿವೇಚನೆಗೆ ಬಿಡಲಾಗಿದೆ” ಎಂದಿದೆ.

ಪ್ರಕರಣದ ಹಿನ್ನೆಲೆ: ಜೆ ಪಿ ನಗರದ ಐದನೇ ಹಂತದ 15ನೇ ತಿರುವಿನ ಪಿಐಡಿ (ಗುರುತಿಸಲಾದ ಆಸ್ತಿ) ಸಂಖ್ಯೆ:57/1909ರಲ್ಲಿ ಇರುವ ಸುಮಾರು 3,500 ಚದರ ಅಡಿ ನೆಲ ಅಂತಸ್ತಿನ ಜಾಗವನ್ನು, ಅದರ ಮಾಲೀಕ ಭರತ್‌ ಕಾಮತ್‌ ತಮ್ಮ ಸಂಬಂಧಿಯೂ ಆದ ಪ್ರತಾಪ್‌ ಕಾಮತ್‌ ಅವರಿಗೆ 2021ರಲ್ಲಿ 21 ವರ್ಷಗಳ ಅವಧಿಗೆ ಕರಾರಿನ ಅಡಿಯಲ್ಲಿ ಗುತ್ತಿಗೆ ನೀಡಿದ್ದರು.

ಈ ಜಾಗದಲ್ಲಿ ಇತ್ತೀಚೆಗೆ ಪ್ರತಾಪ್‌ ಕಾಮತ್‌, ನನ್ನ ಮತ್ತು ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯದೆ ಕಾನೂನು ಬಾಹಿರವಾಗಿ ನೆಲ ಅಂತಸ್ತು ಹೊರತುಪಡಿಸಿ ಮೊದಲ ಮತ್ತು ಎರಡನೇ ಅಂತಸ್ತನ್ನು ನಿರ್ಮಾಣ ಮಾಡಿದ್ದಾರೆ. ಅಕ್ರಮ ಕಟ್ಟಡದ ನಿರ್ಮಾಣದ ಆರಂಭದಲ್ಲೇ ಜಿಬಿಎಗೆ ದೂರು ನೀಡಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದರು.

ನಂತರ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ವೇಳೆ ಏಕಸದಸ್ಯ ಪೀಠವು ಸ್ಥಳದ ಮಹಜರು ವರದಿ ಕೇಳಿತ್ತು. ಇದರ ಅನುಸಾರ ಜಿಬಿಎ ಅಧಿಕಾರಿಗಳು ವರದಿ ಸಲ್ಲಿಸಿದ್ದರು. ಇದನ್ನು ಉಲ್ಲೇಖಿಸಿದ್ದ ಅರ್ಜಿದಾರರು ಹೈಕೋರ್ಟ್‌ ನಿರ್ದೇಶನದ ಅನುಸಾರ ಈ ಜಾಗದ ಮಹಜರು ನಡೆಸಲಾಗಿದ್ದು ಸ್ಥಳದಲ್ಲಿ ಶೇ 100ರಷ್ಟು ಅತಿಕ್ರಮ ಇರುವುದು ಕಂಡು ಬಂದಿದೆ. ಸದ್ಯ ಈ ಕಟ್ಟಡದಲ್ಲಿ ಆಭರಣ ಜ್ಯುವೆಲರ್ಸ್‌ ಮಳಿಗೆಯನ್ನು ಆರಂಭಿಸಲಾಗಿದೆ ಎಂದು ವಿವರಿಸಿದ್ದರು. ಸಾಮಾಜಿಕ ಕಾರ್ಯಕರ್ತ ಧನುಷ್‌ ಮತ್ತು ಭರತ್‌ ಕಾಮತ್‌ ಸಲ್ಲಿಸಿದ್ದ ಪೀಠವು ಅರ್ಜಿಯನ್ನು ವಿಲೇವಾರಿ ಮಾಡಿದೆ.

Kannada Bar & Bench
kannada.barandbench.com