ಮೊರಾರ್ಜಿ ವಸತಿ ಶಾಲೆಗಳ ಕಲಾ ಶಿಕ್ಷಕರನ್ನು ಸೇವೆಯಿಂದ ಬಿಡುಗಡೆಗೊಳಿಸದಂತೆ ಸರ್ಕಾರಕ್ಕೆ ಹೈಕೋರ್ಟ್ ಆದೇಶ

ಕರ್ನಾಟಕ ಲೋಕ ಸೇವಾ ಆಯೋಗವು 2016ರ ನವೆಂಬರ್‌ 3ರಂದು ಚಿತ್ರಕಲಾ ಮತ್ತು ಕರಕುಶಲ ಶಿಕ್ಷಕರ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಿದೆ.
Karnataka High Court
Karnataka High Court

ರಾಜ್ಯದ ವಿವಿಧೆಡೆ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಚಿತ್ರಕಲಾ ಮತ್ತು ಕರಕುಶಲ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ 17 ಶಿಕ್ಷಕರನ್ನು ಸೇವೆಯಿಂದ ಬಿಡುಗಡೆಗೊಳಿಸದಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಈಚೆಗೆ ಮಧ್ಯಂತರ ಆದೇಶ ಮಾಡಿದೆ.

ವಸತಿ ಶಾಲೆಯಲ್ಲಿ ಖಾಲಿಯಿರುವ ಚಿತ್ರಕಲಾ ಮತ್ತು ಕರಕುಶಲ ವಿಭಾಗದ ಶಿಕ್ಷಕರ ನೇಮಕಾತಿಗೆ ಕೆಪಿಎಸ್‌ಸಿ ಅರ್ಜಿ ಆಹ್ವಾನಿಸಿರುವ ಹಿನ್ನೆಲೆಯಲ್ಲಿ ಉದ್ಯೋಗದಿಂದ ತಮ್ಮನ್ನು ಕೈಬಿಡಬಹುದು ಎಂಬ ಆತಂಕದಿಂದ ವಿಜಯಪುರದ ಇಂಡಿ ತಾಲ್ಲೂಕಿನ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಕರಕುಶಲ ವಿಭಾಗದ ಶಿಕ್ಷಕಿ ರೇಣುಕಾ ರವೀಂದ್ರ ಮುಂಜಣ್ಣಿ ಸೇರಿ 17 ಶಿಕ್ಷಕರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಬಿ ಎಂ ಶ್ಯಾಮಪ್ರಸಾದ್ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

ಅರ್ಜಿದಾರರನ್ನು ಸದ್ಯ ಕರ್ತವ್ಯದಿಂದ ಬಿಡುಗಡೆ ಮಾಡಬಾರದು ಎಂದು ಮಧ್ಯಂತರ ಆದೇಶ ಮಾಡಿರುವ ನ್ಯಾಯಾಲಯವು ವಿಚಾರಣೆಯನ್ನು ಫೆಬ್ರವರಿ 20ಕ್ಕೆ ಮುಂದೂಡಿದೆ.

ಅರ್ಜಿದಾರರ ಪರ ವಕೀಲರು, ಅರ್ಜಿದಾರರು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕೆಆರ್‌ಇಐಎಸ್) ವಸತಿ ಶಾಲೆಗಳಲ್ಲಿ ಚಿತ್ರಕಲೆ ಮತ್ತು ಕರಕುಶಲ ಶಿಕ್ಷಕರಾಗಿ 2001-2002ರಿಂದ ಹೊರಗುತ್ತಿಗೆ ಆಧಾರದಲ್ಲಿ ನೇಮಕಗೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಪ್ರತಿವರ್ಷ ಶೇ. 5 ಕೃಪಾಂಕದಂತೆ ಗರಿಷ್ಠ 40ರವರೆಗೆ ಕೃಪಾಂಕ ನೀಡಬೇಕು. ವೃಂದ ಮತ್ತು ನೇಮಕಾತಿ ನಿಯಮಗಳನ್ನು ಅನ್ವಯಿಸಿ ಅವರ ಸೇವೆ ಕಾಯಂಗೊಳಿಸಬೇಕು ಎಂದು ಹೈಕೋರ್ಟ್ 2012ರಲ್ಲಿ ಆದೇಶಿಸಿತ್ತು ಎಂದು ಪೀಠಕ್ಕೆ ವಿವರಿಸಿದರು.

ಅಲ್ಲದೆ, ಕರ್ನಾಟಕ ಲೋಕ ಸೇವಾ ಆಯೋಗವು 2016ರ ನವೆಂಬರ್‌ 3ರಂದು ಈ ಶಾಲೆಗಳಿಗೆ ಚಿತ್ರಕಲಾ ಮತ್ತು ಕರಕುಶಲ ಶಿಕ್ಷಕರ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಿದೆ. ಅದರಲ್ಲಿ ಗ್ರೂಪ್ ಸಿ ಹುದ್ದೆಯಲ್ಲಿ ಬರುವ ಚಿತ್ರಕಲೆ ಮತ್ತು ಕರಕುಶಲ ಶಿಕ್ಷಕರಿಗೆ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಅನ್ವಯಿಸಿಲ್ಲ. ಕೃಪಾಂಕ ನೀಡಿಕೆ ಹಾಗೂ ವಯೋಮಿತಿ ಸಡಿಲಿಕೆಯ ಅವಕಾಶವನ್ನೂ ಕಲ್ಪಿಸಿಲ್ಲ. ಇದರಿಂದ ತಮ್ಮನ್ನು ಹುದ್ದೆಯಿಂದ ಕೈಬಿಡಬಹುದು ಎಂಬ ಆತಂಕ ಅರ್ಜಿದಾರ ಶಿಕ್ಷಕರಿಗೆ ಎದುರಾಗಿದೆ. ಆದ್ದರಿಂದ, ಅರ್ಜಿದಾರರನ್ನು ನೇಮಕಾತಿ ಪ್ರಕ್ರಿಯೆಯಿಂದ ಕೈಬಿಡದಂತೆ ಸೇವೆಯಲ್ಲಿ ಮುಂದುವರಿಸಿಕೊಂಡು ಹೋಗಲು ಕೆಆರ್‌ಇಐಎಸ್‌ಗೆ ನಿರ್ದೇಶಿಸಬೇಕು ಎಂದು ಕೋರಿದರು.

Related Stories

No stories found.
Kannada Bar & Bench
kannada.barandbench.com