
ಸಂರಕ್ಷಿತ ಸ್ಮಾರಕಗಳ ಸುತ್ತಮತ್ತ ಹೊಸ ಕಟ್ಟಡ ನಿರ್ಮಿಸಲು ಅನುಮತಿಸದಂತೆ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಲು ರಾಜ್ಯ ನಗರಾಭಿವೃದ್ಧಿ ಇಲಾಖೆಗೆ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ಶಾಸನಕ್ಕೆ ಅನುಗುಣವಾಗಿ ಯಾವುದೇ ಅನುಮತಿ ನೀಡಬೇಕಿದ್ದರೂ ಭಾರತೀಯ ಪುರಾತತ್ವ ಇಲಾಖೆಯಿಂದ (ಎಎಸ್‌ಐ) ನಿರಾಕ್ಷೇಪಣಾ ಪತ್ರ ಪಡೆದಿರಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಸಂರಕ್ಷಿತ ಸ್ಮಾರಕ ಎಂದು ಘೋಷಿಸಲ್ಪಟ್ಟಿರುವ ಮಂಗಳೂರಿನ ಮಂಗಳ ದೇವಿ ದೇವಸ್ಥಾನದ ಈಶಾನ್ಯ ಭಾಗದ 150 ಮೀಟರ್ ಅಂತರದಲ್ಲಿ ಮನೆ ನಿರ್ಮಿಸುವುದಕ್ಕೆ ನಿರ್ಬಂಧಿಸಿ ರಾಷ್ಟ್ರೀಯ ಸ್ಮಾರಕಗಳ ಪ್ರಾಧಿಕಾರ 28-01-2025ರಂದು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಡೆನಿಸ್ ಕ್ರಾಸ್ಟಾ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನ್ಯಾಯಪೀಠ ವಜಾಗೊಳಿಸಿದೆ.
“ಅಧಿಕಾರಿಗಳು ಕಾನೂನಿಗೆ ವಿರುದ್ಧವಾಗಿ ಕಟ್ಟಡ ನಿರ್ಮಾಣಕ್ಕೆ ಅನುಮತಿಸುವುದು ಅವರನ್ನು ಅಪಾಯಕ್ಕೆ ನೂಕಲಿದೆ. ಹೀಗೆ ಮಾಡಿದಲ್ಲಿ ಇಲಾಖಾ ತನಿಖೆಗೆ ಆದೇಶಿಸಲಾಗುತ್ತದೆ ಎಂಬ ಅಂಶವನ್ನು ಸರ್ಕಾರದ ಸುತ್ತೋಲೆ ಒಳಗೊಂಡಿರಬೇಕು” ಎಂದು ನ್ಯಾಯಾಲಯ ಆದೇಶಿಸಿದೆ.
“ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳು ಮತ್ತು ಅವಶೇಷಗಳ ಕಾಯಿದೆ ಮತ್ತು ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳು ಮತ್ತು ಅವಶೇಷಗಳ (ತಿದ್ದುಪಡಿ ಮತ್ತು ಸಿಂಧುತ್ವ) ಕಾಯಿದೆ ಪ್ರಕಾರ ಸಂರಕ್ಷಿತ ಸ್ಮಾರಕಗಳ ಸುತ್ತಮುತ್ತ ಇರುವ ಕಟ್ಟಡಗಳ ಮರು ವಿನ್ಯಾಸ ಮತ್ತು ರಿಪೇರಿಗೆ ಮಾತ್ರ ಅವಕಾಶ ನೀಡಬಹುದಾಗಿದೆ. ಕ್ರಾಸ್ಟಾ ಅವರ ಕಟ್ಟಡ ನಿರ್ಮಾಣ ಪತ್ರದಲ್ಲಿ ಮೊದಲ ಮತ್ತು ಎರಡನೇ ಮಹಡಿಯ ಹೊಸ ಕಟ್ಟಡ ಎಂದು ಹೇಳಲಾಗಿದೆ. ಮಂಗಳ ದೇವಿ ದೇವಸ್ಥಾನವು ಸಂರಕ್ಷಿತ ಸ್ಮಾರಕ ಎಂದು ಘೋಷಿಸಲ್ಪಟ್ಟಿದ್ದರೂ ಪಾಲಿಕೆಯು ಹೇಗೆ ಹೊಸ ಕಟ್ಟಡ ನಿರ್ಮಿಸಲು ಎಎಸ್‌ಐ ಗಮನಕ್ಕೆ ತರದೇ ಅನುಮತಿಸಿದೆ ಎಂಬುದು ಅರ್ಥವಾಗದ ಸಂಗತಿಯಾಗಿದೆ. ಶಾಸನಬದ್ಧ ನಿರ್ಬಂಧದ ಬಗ್ಗೆ ಅಜ್ಞಾನ ಅಥವಾ ಉದಾಸೀನತೆಯ ಕಾರಣದಿಂದಾಗಿ ಅನುಮತಿ ನೀಡಲಾಗಿದೆ. ಸಾರ್ವಜನಿಕ ಸೇವಕರು ಕಾನೂನಿನ ಪಾಲಕರಾಗಬೇಕೆ ವಿನಾ ಅದರ ವಿರೋಧಿಗಳಲ್ಲ” ಎಂದು ನ್ಯಾಯಾಲಯ ಕಟುವಾಗಿ ನುಡಿದಿದೆ.
“ಶಾಸನದ ಪಾವಿತ್ರ್ಯತೆಯನ್ನು ಉಲ್ಲಂಘಿಸಿ ಪಾಲಿಕೆಯ ಅಧಿಕಾರಿಗಳು ಹೊಸ ಕಟ್ಟಡ ನಿರ್ಮಿಸಲು ಅನುಮತಿಸಿರುವುದು ನಿಸ್ಸಂಶಯವಾಗಿ ಕಾನೂನಿನ ಉಲ್ಲಂಘನೆಯಾಗಿದೆ. ಇದಕ್ಕೆ ಅನುಮತಿಸಿದ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆಗೆ ಆದೇಶಿಸಬೇಕು ಮತ್ತು ಸೂಕ್ತ ಕ್ರಮಕೈಗೊಳ್ಳಬೇಕು. ಸಹಜ ನ್ಯಾಯ ತತ್ವಕ್ಕೆ ಅನುಗುಣವಾಗಿ ಇಲಾಖಾ ತನಿಖೆ ನಡೆಯಬೇಕು ಮತ್ತು ತಪ್ಪಿತಸ್ಥ ಅಧಿಕಾರಿಗಳಿಗೆ ಸೂಕ್ತ ಅವಕಾಶ ಕಲ್ಪಿಸಬೇಕು” ಎಂದು ನ್ಯಾಯಾಲಯ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ಕೌಟುಂಬಿಕ ಆಸ್ತಿ ವಿಭಜನೆಯ ನಂತರ ಕ್ರಾಸ್ಟಾ ಅವರಿಗೆ ನಿವೇಶನ ವರ್ಗಾವಣೆಯಾಗಿದ್ದು, ಮನೆ ನಿರ್ಮಿಸಲು ಅವರು ಭೂ ಪರಿವರ್ತನೆಗೆ ಅರ್ಜಿ ಸಲ್ಲಿಸಿದ್ದಕ್ಕೆ 27-09-2023ರಂದು ಜಿಲ್ಲಾಧಿಕಾರಿ ಅನುಮತಿಸಿದ್ದರು. 21-12-2023ರಂದು ಮನೆ ನಿರ್ಮಿಸಲು ಮಂಗಳೂರು ಮಹಾನಗರ ಪಾಲಿಕೆಯು ಪರವಾನಗಿ ನೀಡಿತ್ತು. ಕಟ್ಟಡ ಯೋಜನೆಗೆ ಪಾಲಿಕೆಯು ಒಪ್ಪಿಗೆ ಸೂಚಿಸಿದ್ದರಿಂದ ಕ್ರಾಸ್ಟಾ ಮನೆ ನಿರ್ಮಾಣ ಆರಂಭಿಸಿದ್ದರು.
ಈ ಮಧ್ಯೆ, ಭಾರತೀಯ ಪ್ರಾಚ್ಯವಸ್ತು ಪ್ರಾಧಿಕಾರವು (ಎಎಸ್‌ಐ) ಕ್ರಾಸ್ಟಾ ಅವರಿಗೆ ನೋಟಿಸ್ ಜಾರಿಗೊಳಿಸಿ, ಕಟ್ಟಡ ನಿರ್ಮಾಣ ತಡೆದು, ಎಎಸ್‌ಐನಿಂದ ನಿರಾಕ್ಷೇಪಣಾ ಪತ್ರ ಪಡೆಯಲು ಸೂಚಿಸಿತ್ತು. 28-01-2025ರಂದು ಎಎಸ್‌ಐ ಅನುಮತಿ ನಿರಾಕರಿಸಿದ್ದನ್ನು ಪ್ರಶ್ನಿಸಿ ಕ್ರಾಸ್ಟಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಕ್ರಾಸ್ಟಾ ಪ್ರತಿನಿಧಿಸಿದ್ದ ವಕೀಲ ಪುಂಡಿಕೈ ಈಶ್ವರ್ ಭಟ್ ಅವರು “ಕ್ರಾಸ್ಟಾ ಅವರು ಮನೆ ನಿರ್ಮಿಸುತ್ತಿರುವ ಜಾಗವು ಸಂರಕ್ಷಿತ ಅಥವಾ ನಿಷೇಧಿತ ಪ್ರದೇಶವಲ್ಲ. ಇದು ನಿಯಂತ್ರಿತ ಪ್ರದೇಶದಲ್ಲಿದೆ. ಹೀಗಾಗಿ, ಅವರು ನಿರಾಕ್ಷೇಪಣಾ ಪತ್ರ ಪಡೆಯುವ ಅಗತ್ಯವಿಲ್ಲ. ನಿವೇಶನ ನಿಯಂತ್ರಿತ ಪ್ರದೇಶದಲ್ಲಿದ್ದರೆ ಅದನ್ನು ನಿಯಂತ್ರಿಸಬಹುದು ಅಷ್ಟೇ. ಗೂಗಲ್ ಅರ್ಥ್ ಇಮೇಜ್ ಪ್ರಕಾರ ನಿವೇಶನ ಮತ್ತು ದೇವಸ್ಥಾನದ ನಡುವಿನ ಅಂತರ 151.1 ಮೀಟರ್ ಇದೆ. ಆದರೆ, ಪ್ರತಿವಾದಿಗಳು ಕೇವಲ 64 ಮೀಟರ್ ಅಂತರವಿದೆ ಎಂದು ತೋರಿಸಿದ್ದಾರೆ. ಕ್ರಾಸ್ಟಾ ಅವರು ಹಾಲಿ ಇದ್ದ ಮನೆಯನ್ನು ಮರು ವಿನ್ಯಾಸ ಮಾಡುತ್ತಿದ್ದಾರೆಯಷ್ಟೆ. ಹೊಸ ಮನೆ ನಿರ್ಮಿಸುತ್ತಿಲ್ಲ. ಇರುವ ಮನೆಗೆ ಹೊಸ ಸ್ಪರ್ಶ ನೀಡುತ್ತಿದ್ದಾರೆ. ಇದಕ್ಕೆ ಕಾನೂನಿನಲ್ಲಿ ಅವಕಾಶವಿದೆ” ಎಂದು ವಾದಿಸಿದ್ದರು.
ಕೇಂದ್ರ ಸರ್ಕಾರದ ವಕೀಲ ಅಜಯ್ ಪ್ರಭು ಅವರು “ದೇವಾಲಯದಿಂದ ಕೇವಲ 64 ಮೀಟರ್ ಅಂತರದಲ್ಲಿ ಹೊಸ ಮನೆಯನ್ನು ಕ್ರಾಸ್ಟಾ ನಿರ್ಮಿಸುತ್ತಿರುವುದು ಪರಿಶೀಲನೆಯ ವೇಳೆ ಸಾಬೀತಾಗಿದೆ. ಇಲ್ಲಿ ಹೊಸ ಕಟ್ಟಡ ನಿರ್ಮಾಣವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹೊಸ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಿದರೆ ಸ್ಮಾರಕಕ್ಕೆ ಹಾನಿಯಾಗುತ್ತದೆ. ಎಎಸ್‌ಐನಿಂದ ನಿರಾಕ್ಷೇಪಣಾ ಪತ್ರವಿಲ್ಲದೇ ಪಾಲಿಕೆಯು ನಿರಾಕ್ಷೇಪಣಾ ಪತ್ರ ಮತ್ತು ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಬಾರದಿತ್ತು” ಎಂದು ವಾದಿಸಿದ್ದರು.