
ನ್ಯಾಯಾಲಯದ ಆದೇಶ, ಲೋಕಾಯುಕ್ತ ಶಿಫಾರಸ್ಸು ಹಾಗೂ ಇಲಾಖಾ ಮುಖ್ಯಸ್ಥರ ವರದಿಯ ಹೊರತಾಗಿಯೂ 2013-14ನೇ ಸಾಲಿನ ಸಹಾಯಕ ಸರ್ಕಾರಿ ಅಭಿಯೋಜಕ (ಎಪಿಪಿ) ನೇಮಕ ಅಕ್ರಮ ಹಗರಣದ ಪ್ರಮುಖ ಆರೋಪಿ ನಾರಾಯಣಸ್ವಾಮಿ ಅವರನ್ನು ಅಭಿಯೋಗ ಹಾಗೂ ಸರ್ಕಾರಿ ವ್ಯಾಜ್ಯಗಳ ಇಲಾಖೆಯ ಹಿರಿಯ ಆಡಳಿತ ಅಧಿಕಾರಿ ಹುದ್ದೆಗೆ ನೇಮಕ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಬೆಂಗಳೂರಿನ ವಕೀಲೆ ಸುಧಾ ಕಾಟ್ವ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠವು ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ, ಅಭಿಯೋಗ ನಿರ್ದೇಶಕರು ಹಾಗೂ ಹಿರಿಯ ಕಾನೂನು ಅಧಿಕಾರಿ ಹುದ್ದೆಗೆ ನೇಮಕಗೊಂಡಿರುವ ನಾರಾಯಣಸ್ವಾಮಿ ಅವರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಏಪ್ರಿಲ್ 9ಕ್ಕೆ ಮುಂದೂಡಿತು.
ಅರ್ಜಿದಾರರ ಪರ ವಕೀಲ ಎಸ್ ಉಮಾಪತಿ ಅವರು “ಎಪಿಪಿ ನೇಮಕ ಹಗರಣ ಬೆಳಕಿಗೆ ಬಂದ ಮೇಲೆ 2019ರಲ್ಲಿ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಇಲಾಖಾ ವಿಚಾರಣೆ ಹಾಗೂ ಕ್ರಿಮಿನಲ್ ಪ್ರಕರಣಗಳು ಬಾಕಿ ಇರುವ ಅಭ್ಯರ್ಥಿಗಳು ಹುದ್ದೆಗಳನ್ನು ನಿರ್ವಹಿಸದಂತೆ 2021ರಲ್ಲಿ ಹೈಕೋರ್ಟ್ ಆದೇಶ ಮಾಡಿದೆ. ಅದರಂತೆ 60 ಮಂದಿ ಈವರೆಗೆ ಯಾವುದೇ ಹುದ್ದೆ ಇಲ್ಲದೆ ಇದ್ದಾರೆ. ಆದರೆ, ನ್ಯಾಯಾಲಯದ ಆದೇಶ, ಲೋಕಾಯುಕ್ತದ ಶಿಫಾರಸ್ಸು ಹಾಗೂ ಇಲಾಖಾ ಮುಖ್ಯಸ್ಥರ ವರದಿಯ ಹೊರತಾಗಿಯೂ ಇಲಾಖಾ ವಿಚಾರಣೆ ಮತ್ತು ಕ್ರಿಮಿನಲ್ ಪ್ರಕರಣ ಬಾಕಿ ಇದ್ದರೂ ನಾರಾಯಣಸ್ವಾಮಿ ಅವರನ್ನು ಹಿರಿಯ ಆಡಳಿತ ಅಧಿಕಾರಿ ಹುದ್ದೆಗೆ 2024ರ ಡಿಸೆಂಬರ್ 7ರಂದು ನೇಮಕ ಮಾಡಲಾಗಿದೆ. ಪ್ರಶ್ನೆ ಪತ್ರಿಕೆ ತಿದ್ದಿದ ಹಾಗೂ ಹೈಕೋರ್ಟ್ ನ್ಯಾಯಮೂರ್ತಿಗಳ ಸಹಿ ನಕಲು ಮಾಡಿದ ಗಂಭೀರ ಆರೋಪ ನಾರಾಯಣಸ್ವಾಮಿ ಅವರ ಮೇಲಿದೆ” ಎಂದು ವಿವರಿಸಿದರು.